ADVERTISEMENT

ಅರಕಲಗೂಡು | ಹಳೆ ಬಸ್ ನಿಲ್ದಾಣದಲ್ಲಿ ವಾಣಿಜ್ಯ ಸಂಕೀರ್ಣಕ್ಕೆ ಚಿಂತನೆ: ಶಾಸಕ ಮಂಜು

​ಪ್ರಜಾವಾಣಿ ವಾರ್ತೆ
Published 13 ಜುಲೈ 2024, 13:43 IST
Last Updated 13 ಜುಲೈ 2024, 13:43 IST
ಅರಕಲಗೂಡಿನಲ್ಲಿ ಶುಕ್ರವಾರ ಶಾಸಕ ಎ. ಮಂಜು ಆರಾಧನಾ ಸಮಿತಿ ಸಭೆ ನಡೆಸಿದರು.
ಅರಕಲಗೂಡಿನಲ್ಲಿ ಶುಕ್ರವಾರ ಶಾಸಕ ಎ. ಮಂಜು ಆರಾಧನಾ ಸಮಿತಿ ಸಭೆ ನಡೆಸಿದರು.   

ಅರಕಲಗೂಡು: ಪಟ್ಟಣದ ಹಳೇ ಬಸ್ ನಿಲ್ದಾಣದಲ್ಲಿ ಸುಸಜ್ಜಿತ ವಾಣಿಜ್ಯ ಸಂಕೀರ್ಣ ನಿರ್ಮಿಸಲು ಹಾಗೂ ಹಳ್ಳಿ ಮೈಸೂರು ಮತ್ತು ಕೇರಳಾಪುರ ಬಸ್ ನಿಲ್ದಾಣ ಆಧುನೀಕರಣಗೊಳಿಸಲು ಸಾರಿಗೆ ಹಾಗೂ ಮುಜರಾಯಿ ಇಲಾಖೆ ಸಚಿವ ರಾಮಲಿಂಗಾರೆಡ್ಡಿ ಸೂಚನೆ ನೀಡಿದ್ದಾರೆ ಎಂದು ಶಾಸಕ ಎ. ಮಂಜು ತಿಳಿಸಿದರು.

ಶುಕ್ರವಾರ ಆರಾಧನಾ ಸಮಿತಿ ಸಭೆ ನಡೆಸಿ ಮಾತನಾಡಿದ ಅವರು, ‘ಪಟ್ಟಣದ ಹಳೆಯ ಬಸ್ ನಿಲ್ದಾಣ ತ್ಯಾಜ್ಯದಿಂದ ತುಂಬಿ ಸೊಳ್ಳೆ ಉತ್ಪಾದನಾ ಕೇಂದ್ರವಾಗಿದೆ. ಈ ಹಿಂದೆ ತಾವು ಸಚಿವರಾಗಿದ್ದ ವೇಳೆ ತಮ್ಮ ತಾಯಿಯ ಹೆಸರಿನಲ್ಲಿ ಬಸ್ ನಿಲ್ದಾಣಕ್ಕೆ ಹೊಂದಿಕೊಂಡಂತಿದ್ದ ಜಾಗವನ್ನು ಬಸ್ ನಿಲ್ದಾಣದ ಅಭಿವೃದ್ಧಿಗೆ ಕೊಡಿಸಿದ್ದೆ, ಹೀಗಾಗಿ ವಿಶಾಲವಾದ ಜಾಗದಲ್ಲಿ ವಾಣಿಜ್ಯ ಸಂಕೀರ್ಣ ನಿರ್ಮಾಣವಾಗಲಿದ್ದು ಪಟ್ಟಣದ ಅಂದ ಹೆಚ್ಚಿಸಲಿದೆ’ ಎಂದರು.

ಇದೇ ವೇಳೆ ತಾವು ಸಲ್ಲಿಸಿದ್ದ ಮನವಿಗೆ ಸ್ಪಂದಿಸಿ ದೇವಾಲಯಗಳ ದುರಸ್ತಿ ಕಾರ್ಯಕ್ಕೆ  ₹25 ಲಕ್ಷ ಅನುದಾನ ಬಿಡುಗಡೆಯಾಗಿದೆ. ಇದನ್ನು 10 ದೇವಾಲಯಗಳ ಅಭಿವೃದ್ಧಿಗೆ ಬಳಸಲು ನಿರ್ಧರಿಸಲಾಗಿದೆ. 2024-25ನೇ ಸಾಲಿಗೆ ಆರಾಧನಾ ಯೋಜನೆಗೆ ₹10.48 ಲಕ್ಷ ಬಿಡುಗಡೆಯಾಗಿದೆ. ಸಾಮಾನ್ಯ ವರ್ಗಕ್ಕೆ ₹2.23 ಲಕ್ಷ, ಪರಿಶಿಷ್ಟ ಜಾತಿಗೆ ₹4.54 ಲಕ್ಷ, ಗಿರಿಜನ ಅಭಿವೃದ್ಧಿ ಯೋಜನೆಯಲ್ಲಿ ₹3.17 ಲಕ್ಷ ಹಣ ನೀಡಲಾಗಿದೆ. ಇದರ ವಿತರಣೆಗೆ ಕ್ರಮ ಕೈಗೊಳ್ಳುವುದಾಗಿ ಹೇಳಿದರು.

ADVERTISEMENT

ಹೊಸದಾಗಿ ನಿರ್ಮಾಣವಾಗುವ ದೇವಾಲಯಗಳಿಗೆ ಈ ಅನುದಾನ ನೀಡದೆ, ಈಗಾಗಲೆ ಪ್ರಾರಂಭವಾಗಿ ಆರ್ಥಿಕ ಸಂಕಷ್ಟದಿಂದ ನಿಂತು ಹೋಗಿರುವ ದೇವಾಲಯಗಳನ್ನು ಗುರುತಿಸಿ ಆದ್ಯತೆ ಮೇರೆಗೆ ವಿತರಿಸುವಂತೆ ಅಧಿಕಾರಿಗಳಿಗೆ ಸೂಚಿಸಿರುವುದಾಗಿ ಹೇಳಿದರು.

‘ಈ ಹಿಂದಿನ ಸಾಲಿನ ಅನುದಾನ ಕುರಿತು ಪರಿಶೀಲಿಸಿ ಯಾರಿಗೆ ವಿತರಿಸಲಾಗಿದೆ. ಕಾಮಗಾರಿ ಪೂರ್ಣಗೊಂಡಿದೆಯೇ ಎಂಬುದನ್ನು ಪರಿಶೀಲಿಸಿದ ಬಳಿಕ ಅನುಮೋದನೆ ನೀಡಲಾಗುವುದು’ ಎಂದರು.

ಆರಾಧನಾ ಸಮಿತಿ ಸದಸ್ಯರಾದ ಪ್ರದೀಪ್ ನಾಯಕ್, ನೀಲಮ್ಮ, ತಹಶೀಲ್ದಾರ್ ಬಸವರೆಡ್ಡಪ್ಪ ರೋಣದ್, ತಾಪಂ ಇಒ ಪ್ರಕಾಶ್, ಶಿರಸ್ತೆದಾರ್ ಸಿ. ಸ್ವಾಮಿ, ಮುಜರಾಯಿ ಇಲಾಖೆಯ ಪ್ರಮೀಳಾ ಇದ್ದರು.

ದೇಗುಲಗಳ ಅಭಿವೃದ್ಧಿಗೆ ಸರ್ಕಾರದಿಂದ ₹25 ಲಕ್ಷ ಬಿಡುಗಡೆ ಅರ್ಧದಲ್ಲಿ ನಿಂತಿರುವ ದೇಗುಲಗಳ ನಿರ್ಮಾಣಕ್ಕೆ ಈ ಹಣ ಬಳಕೆ ಮುಜರಾಯಿ ಇಲಾಖೆಯ ಅಧಿಕಾರಿಗಳು ಭಾಗಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.