ಅರಸೀಕೆರೆ: ‘ಇಂದಿನ ದಿನಗಳಲ್ಲಿ ಧಾರ್ಮಿಕ ಪ್ರಜ್ಞೆ ಹಾಗೂ ಸಾಮಾಜಿಕ ಪ್ರಜ್ಞೆ ಅವಶ್ಯಕವಾಗಿದ್ದು ಧರ್ಮವಿಲ್ಲದ ದೇಶ, ನಿಷ್ಠೆ ಇಲ್ಲದ ಕಾರ್ಯ ಹಾಗೂ ಪ್ರಾಮಾಣಿಕತೆ ಇಲ್ಲದ ಜೀವನ ಎಂದಿಗೂ ಉಜ್ವಲವಾಗದು’ ಎಂದು ಪ್ರವಚನಕಾರ ಕಲ್ಲಿನಾಥ ಶಾಸ್ತ್ರಿಗಳು ಅಭಿಮತ ವ್ಯಕ್ತಪಡಿಸಿದರು.
ತಾಲ್ಲೂಕಿನ ಮಾಡಾಳು ಗ್ರಾಮದ ಮೂಲಸ್ಥಾನ ಸ್ವರ್ಣಗೌರಮ್ಮ ದೇವಿ ದೇವಾಲಯದ ಆವರಣದಲ್ಲಿ ಹಾರನಹಳ್ಳಿ ಕ್ಷೇತ್ರ ಕೋಡಿಮಠದ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಸಾನ್ನಿಧ್ಯದಲ್ಲಿ ನಡೆದ ಲಿಂಗೈಕ್ಯ ಶಿವಲಿಂಗ ಸ್ವಾಮೀಜಿ 138ನೇ ವರ್ಷದ ಪುಣ್ಯ ಸಂಸ್ಮರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ವ್ಯಕ್ತಿ ಎಷ್ಟು ವರ್ಷ ಬದುಕಿದ್ದನು ಎನ್ನುವುದಕ್ಕಿಂತ ಹೇಗೆ ಬದುಕಿದ ಎನ್ನುವುದು ಗಮನಾರ್ಹವಾಗಿದೆ. ಜಾತಿ ಮತ ಭೇದ ಎನ್ನದೇ ಎಲ್ಲರಲ್ಲೂ ಪ್ರೀತಿ, ವಿಶ್ವಾಸ ಗಳಿಸಿಕೊಂಡು 87ವರ್ಷದವರೆಗೂ ಎಲ್ಲರಿಗೂ ಆದರ್ಶಪ್ರಾಯವಾಗಿ ಬದುಕಿ ಯೋಗ ಸಮಾಧಿಯಲ್ಲಿ ಲೀನವಾಗಿ ಈಗಲೂ ಅವರ ಕಷ್ಟ ಕಾರ್ಪಣ್ಯಗಳನ್ನು ಪರಿಹರಿಸುತ್ತಿರುವ ಮಹಾಯೋಗಿಗಳು ಶಿವಲಿಂಗ ಸ್ವಾಮಿಗಳು’ ಎಂದು ಬಣ್ಣಿಸಿದರು.
ಧಾರ್ಮಿಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಶಿವಾನಂದ ಶಿವಯೋಗಿ ರಾಜೇಂದ್ರ, ‘ಮನುಷ್ಯ ಜನ್ಮ ಅರ್ಥಪೂರ್ಣವಾಗಿದೆ. ಅದನ್ನು ಎಲ್ಲರೂ ಅರ್ಥೈಸಿಕೊಂಡು ಆದರ್ಶವಾಗಿ ಬದುಕಿ ತಮ್ಮಗಳ ನಡಿಗೆಯನ್ನು ಇತರರಿಗೆ ದಾರಿದೀಪವಾಗಬೇಕು ಅಂತಹ ಮಹತ್ವಪೂರ್ಣವಾದ ಗುಣಗಳನ್ನು ಭಕ್ತರು ಪಾಲಿಸಬೇಕು’ ಎಂದು ಹೇಳಿದರು.
ಕಾರ್ಯಕ್ರಮಕ್ಕೂ ಮುನ್ನ ಹಾರನಹಳ್ಳಿಯಿಂದ ಆಗಮಿಸಿದ ಶ್ರೀಗಳನ್ನು ನೂರಾರು ಮಹಿಳೆಯರು ಆರತಿ ಬೆಳಗಿ ವೇದಿಕೆಗೆ ಕರೆತಂದರು. ರಾಂಪುರ ನಿರ್ವಾಣ ಸಿದ್ಧೇಶ್ವರ ಭಜನಾ ಮಂಡಳಿಯವರು ಕೀರ್ತನೆ ಭಕ್ತರ ಮನಸ್ಸಿಗೆ ಮುದ ನೀಡಿತು.
ಶರಣೆ ಶಿವಾನಿ, ಗೌರಮ್ಮ, ಸೇವಾ ಸಮಿತಿ ಅಧ್ಯಕ್ಷ ಎಂ.ಎಸ್. ನಟರಾಜ್, ಗೌರವಾಧ್ಯಕ್ಷ ಮಲ್ಲಿಕಾರ್ಜುನಪ್ಪ ಮುಖಂಡರಾದ ಎಚ್.ಪಿ.ಬಸವಲಿಂಗಪ್ಪ, ಕೋಡಿಮಠ ಏಜೆಂಟ್ ಮಹದೇವಯ್ಯ, ಮಹಾದೇವಪ್ಪ, ಪತ್ರಕರ್ತ ಶಿವಲಿಂಗಪ್ಪ, ಎಂ.ಡಿ. ಸೋಮಶೇಖರ್, ಕೊಡ್ಲಿ ಬಸವರಾಜ್, ಎಂ.ಸಿ. ನಟರಾಜ್, ಶಂಕರಪ್ಪ, ಅಶೋಕ್, ಮಾಡಾಳು ಚಂದ್ರಪ್ಪ ದಾಸಪ್ಪ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.