
ಹಾಸನ: ಕೇಂದ್ರ ಸರ್ಕಾರ ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯದ ಮೂಲಕ ಶ್ರಮ ಶಕ್ತಿ ನೀತಿ 2025ರ ಕರಡು ಪ್ರತಿಯನ್ನು ಪರಿಚಯಿಸಿದ್ದು, ಇದು ಕಾರ್ಮಿಕ ಹಕ್ಕುಗಳ ಮೇಲೆ ಕ್ರೂರ ದಾಳಿ ಎಂದು ಆರೋಪಿಸಿ ಸಿಐಟಿಯು ನೇತೃತ್ವದಲ್ಲಿ ಬುಧವಾರ ಕರಡು ಪ್ರತಿಯನ್ನು ದಹಿಸಿ ಪ್ರತಿಭಟನೆ ನಡೆಸಲಾಯಿತು.
ಈ ವೇಳೆ ಮಾತನಾಡಿದ ಸಿಐಟಿಯು ಜಿಲ್ಲಾ ಘಟಕದ ಅಧ್ಯಕ್ಷ ಧರ್ಮೇಶ್, ದುಡಿಯುವ ಜನರ ಮೇಲೆ ಗುಲಾಮಗಿರಿ ಹೇರುವ ವಿನ್ಯಾಸವನ್ನು ಈ ನೀತಿ ಹೊಂದಿದೆ. ಈ ಕರಡು ನೀತಿಯು ಸರ್ಕಾರವು ಇದುವರೆಗೂ ರೂಪಿಸಿದ ಅತ್ಯಂತ ಪ್ರತಿಗಾಮಿ ಮತ್ತು ಕಾರ್ಮಿಕ ವಿರೋಧಿ ದಾಖಲೆ. ಈ ನೀತಿಯು ಕಾನೂನಿನ ನಿಯಂತ್ರಣ ಮೇಲ್ವಿಚಾರಣೆಯನ್ನು ಸಂಪೂರ್ಣವಾಗಿ ಕಿತ್ತು ಹಾಕಲು ಮತ್ತು ರಾಷ್ಟ್ರದಾದ್ಯಂತ ದುಡಿಯುವ ಜನರ ನ್ಯಾಯಯುತ ಆರ್ಥಿಕ ಮತ್ತು ಸಾಮಾಜಿಕ ಭದ್ರತಾ ಹಕ್ಕುಗಳನ್ನು ದುರ್ಬಲಗೊಳಿಸಲು ವಿನ್ಯಾಸಗೊಳಿಸಲಾದ ಸಂಘಟಿತ ದಾಳಿಯಾಗಿದೆ ಎಂದು ದೂರಿದರು.
ಸರ್ಕಾರವು 10 ವರ್ಷಗಳಿಂದ ಅತ್ಯುನ್ನತ ತ್ರಿಪಕ್ಷೀಯ ಸಮಾಲೋಚನಾ ವೇದಿಕೆಯಾದ 'ಭಾರತೀಯ ಕಾರ್ಮಿಕ ಸಮ್ಮೇಳನ'ವನ್ನು ನಡೆಸಿಲ್ಲ. ಪ್ರಮುಖ ನೀತಿ ಸಂಬಂಧಿತ ವಿಷಯಗಳ ಬಗ್ಗೆ ಟ್ರೇಡ್ ಯೂನಿಯನ್‌ಗಳೊಂದಿಗೆ ಅರ್ಥಪೂರ್ಣ ಸಮಾಲೋಚನೆ ನಡೆಸುವ ಪದ್ಧತಿಯನ್ನು ಪ್ರಾಯೋಗಿಕವಾಗಿ ತೆಗೆದುಹಾಕಿದೆ ಎಂದು ಆರೋಪಿಸಿದರು.
ಅಸ್ತಿತ್ವದಲ್ಲಿರುವ ಹಕ್ಕು ಮತ್ತು ಸುರಕ್ಷತಾ ಜಾಲಗಳನ್ನು ನಾಶ ಮಾಡಲು ವಿನ್ಯಾಸಗೊಳಿಸಲಾದ ನಾಲ್ಕು ಕಾರ್ಮಿಕ ವಿರೋಧಿ ಸಂಹಿತೆಗಳನ್ನು ಕಳ್ಳದಾರಿಯಲ್ಲಿ ಹೇರಲು ನಡೆಸುತ್ತಿರುವ ಹತಾಶ ಪ್ರಯತ್ನವಾಗಿದೆ. ಇದು ಕೇವಲ ನವ-ಉದಾರವಾದಿ ಕಾರ್ಪೊರೇಟ್ ಹಿತಾಸಕ್ತಿಗಳನ್ನು ಪೂರೈಸುತ್ತದೆ. ದುಡಿಯುವ ಜನರ ಶಾಸನಬದ್ಧ ಅರ್ಹತೆಗಳು ಮತ್ತು ಹಕ್ಕುಗಳ ವ್ಯಾಪ್ತಿಯಿಂದ ಕಾರ್ಮಿಕರನ್ನು ಹೊರಗಿಡುವುದನ್ನು ಉತ್ತೇಜಿಸುತ್ತದೆ ಎಂದು ಆಪಾದಿಸಿದರು.
ಈ ಶ್ರಮ ಶಕ್ತಿ ನೀತಿಯು ಪ್ರಜಾಪ್ರಭುತ್ವ, ಹಕ್ಕು ಆಧಾರಿತ ಆಡಳಿತವನ್ನು ಮನುಸ್ಮೃತಿ ಮತ್ತು ಇತರ ಧರ್ಮಶಾಸ್ತ್ರಗಳ ಪುರಾತನ, ಅಸಮಾನತೆಯ ನೀತಿಗಳೊಂದಿಗೆ ಬದಲಾಯಿಸಲು ಪ್ರಯತ್ನಿಸುತ್ತದೆ. ಮನು ಸ್ಮೃತಿ, ನಾರದ ಸ್ಮೃತಿ, ಯಾಜ್ಞವಲ್ಕ್ಯ ಸ್ಮೃತಿ, ಕೌಟಿಲ್ಯ ಅರ್ಥಶಾಸ್ತ್ರ ಆಧಾರಿತ, ಶ್ರಮ ಧರ್ಮ ಮತ್ತು ಅವುಗಳಿಂದ ಸ್ಫೂರ್ತಿ ಪಡೆಯುವುದು ಅತ್ಯಂತ ಪ್ರತಿಗಾಮಿ ಮತ್ತು ಕಾರ್ಮಿಕ ವಿರೋಧಿ ಪರಿಕಲ್ಪನೆಯಾಗಿದೆ ಎಂದು ಹೇಳಿದರು.
ಇದು ಭಾರತೀಯ ಸಂವಿಧಾನದ ತ್ರಿವಳಿಗಳಾದ ಪೀಠಿಕೆ, ಮೂಲಭೂತ ಹಕ್ಕುಗಳು ಮತ್ತು ರಾಜ್ಯ ನೀತಿಯ ನಿರ್ದೇಶನ ತತ್ವಗಳು ಹಾಗೂ ಆಧುನಿಕ ಪ್ರಜಾಸತ್ತಾತ್ಮಕ ಕಾರ್ಮಿಕ ಕಾನೂನು ಆಡಳಿತಕ್ಕೆ ವಿರುದ್ಧವಾಗಿದೆ. ಪುರಾತನ ಸ್ಮೃತಿ ಗ್ರಂಥಗಳನ್ನು ಈಗ ಆರ್‌ಎಸ್‌ಎಸ್‌ನಂತಹ ಬಲಪಂಥೀಯ ಶಕ್ತಿಗಳು ನವ-ಉದಾರವಾದಿ ಬಂಡವಾಳಶಾಹಿ ವ್ಯವಸ್ಥೆಯ ಬಿಕ್ಕಟ್ಟಿನ ಹಂತದಲ್ಲಿ, ಕಾರ್ಪೊರೇಟ್ ಸೇವೆಯ ಕಾರ್ಮಿಕ ಆಡಳಿತ ಮಾದರಿಯನ್ನು ಸಮರ್ಥಿಸಿಕೊಳ್ಳಲು ತಾತ್ವಿಕ ಪರ್ಯಾಯವಾಗಿ ಬಳಸಿಕೊಳ್ಳಲು ಪ್ರಯತ್ನಿಸುತ್ತಿವೆ ಎಂದು ದೂರಿದರು.
ಸಿಐಟಿಯು ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಎಂ.ಬಿ. ಪುಷ್ಪಾ, ಖಜಾಂಚಿ ಅರವಿಂದ್, ಬ್ಯಾಂಕ್ ನೌಕರರ ನಾಯಕ ಎಚ್.ಎನ್. ಪರಮಶಿವಯ್ಯ, ಕೆಪಿಆರ್‌ಎಸ್ ಜಿಲ್ಲಾ ಘಟಕದ ಅಧ್ಯಕ್ಷ ಎಚ್.ಆರ್. ನವೀನ್‌ಕುಮಾರ್, ಡಿವೈಎಫ್‌ಐ ಜಿಲ್ಲಾ ಕಾರ್ಯದರ್ಶಿ ಎಂ.ಜಿ. ಪೃಥ್ವಿ, ಪ್ಲಾಂಟೇಷನ್ ವರ್ಕರ್ಸ್ ಯೂನಿಯನ್ ಕಾರ್ಯದರ್ಶಿ ಸೌಮ್ಯ, ಪ್ಲಾಂಟೇಷನ್, ಅಂಗನವಾಡಿ, ಗ್ರಾಮ ಪಂಚಾಯಿತಿ ಮತ್ತಿತರೆ ಕಾರ್ಮಿಕ ಸಂಘಗಳ ಪದಾಧಿಕಾರಿಗಳು ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.