
ಹಾಸನ: ಮಲ್ನಾಡ್ ಮೆಹಬೂಬ್ ರಚಿಸಿದ ‘ಮೂಲನಿವಾಸಿ ಮುಕ್ತ ಭಾರತ’ ಪುಸ್ತಕ ಬಿಡುಗಡೆ ಕಾರ್ಯಕ್ರಮ ನಗರದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಭವನದಲ್ಲಿ ಭಾನುವಾರ ನಡೆಯಿತು.
ಕಾರ್ಯಕ್ರಮ ಉದ್ಘಾಟಿಸಿದ ಸರ್ಕಾರಿ ಕಲಾ ಮತ್ತು ವಾಣಿಜ್ಯ ಸ್ನಾತಕೋತ್ತರ ಸ್ವಾಯತ್ತ ಕಾಲೇಜಿನ ಪ್ರಾಂಶುಪಾಲ ಎಂ.ಬಿ. ಇರ್ಷಾದ್ ಮಾತನಾಡಿ, ಕೃತಿಯು ಇತಿಹಾಸ, ಸಂಸ್ಕೃತಿ ಮತ್ತು ಸಾಮಾಜಿಕ ಚರ್ಚೆಗಳ ನಡುವೆ ಉದ್ಭವಿಸಿರುವ ಗೊಂದಲಗಳನ್ನು ತಾರ್ಕಿಕವಾಗಿ ವಿಶ್ಲೇಷಿಸುವ ಪ್ರಯತ್ನವಾಗಿದೆ. ಭಾರತೀಯ ಇತಿಹಾಸವನ್ನು ಏಕಪಕ್ಷೀಯವಾಗಿ ಅರ್ಥೈಸುವ ಪ್ರವೃತ್ತಿಗೆ ಪ್ರಶ್ನೆ ಎತ್ತುವ ಈ ಕೃತಿ, 'ಮೂಲ ನಿವಾಸಿ' ಎಂಬ ಪರಿಕಲ್ಪನೆಯನ್ನು ಭಾವನಾತ್ಮಕ ಘೋಷಣೆಯ ಮಟ್ಟಕ್ಕೆ ಇಳಿಸದೇ, ಅದರ ಹಿಂದೆ ಇರುವ ಇತಿಹಾಸಾತ್ಮಕ ಹಾಗೂ ರಾಜಕೀಯ ವಾದಗಳನ್ನು ವಿಶ್ಲೇಷಣಾತ್ಮಕವಾಗಿ ಪರಿಶೀಲಿಸಿದೆ ಎಂದು ಹೇಳಿದರು.
ಆಲೂರಿನ ಕನ್ನಡ ಉಪನ್ಯಾಸಕ ರೋಹಿತ್ ಅಗಸರಹಳ್ಳಿ ಮಾತನಾಡಿ, ಚರಿತ್ರೆಯ ದ್ವಂದ್ವಗಳನ್ನು ನಿವಾರಿಸುವ ಒಂದು ಪ್ರಯತ್ನ ಈ ಕೃತಿಯಲ್ಲಿ ಅಡಗಿದೆ. ಚರಿತ್ರೆಯನ್ನು, ಚರಿತ್ರೆಯಾಗಿ ಮಾತ್ರ ನಾವು ನೋಡಬೇಕು ಎಂದು ಹೇಳಿದರು.
ಸಾಹಿತಿ ಶಾಂತಾ ಅತ್ನಿ ಮಾತನಾಡಿ, ಮೂಲ ನಿವಾಸಿ ಮುಕ್ತ ಭಾರತ ಕೃತಿ ಬಹುತ್ವ, ಸೌಹಾರ್ದವನ್ನು ಸಾರುತ್ತದೆ. ಈ ದೇಶದಲ್ಲಿ ಪರಸ್ಪರ ನಂಬಿಕೆಗಳಿಂದ ಬದುಕಬೇಕು. ಕೆಡುಕುಗಳಿಂದ ದೂರ ಇರಬೇಕು. ಏಕತೆಯೇ ನಮ್ಮ ಶಕ್ತಿ ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಸಿಐಟಿಯು ಜಿಲ್ಲಾ ಘಟಕದ ಅಧ್ಯಕ್ಷ ಧರ್ಮೇಶ್, ದೇಶ ಆಳುವ ಜನರಿಗೆ ಸೌಹಾರ್ದದ ಭಾರತ ಬೇಕಾಗಿಲ್ಲ. ಅಧಿಕಾರ ಮತ್ತು ಸಂಪತ್ತು ಕ್ರೋಡೀಕರಿಸಲು ಇಲ್ಲ ಸಲ್ಲದ ವಿಷಯಗಳನ್ನು ಚಾಲನೆಗೆ ಬಿಡುತ್ತಿದ್ದಾರೆ ಎಂದು ಹೇಳಿದರು.
ಲೇಖಕ ಮಲ್ನಾಡ್ ಮೆಹಬೂಬ್ ಮಾತನಾಡಿ, ಕೆಲವು ವ್ಯಕ್ತಿಗಳು, ಸಂಘಟನೆಗಳು ಮುಸ್ಲಿಮರನ್ನು ಗುರಿ ಮಾಡಿ, ದೇಶದ ಎಲ್ಲ ಕೇಡುಕುಗಳಿಗೆ ಮುಸ್ಲಿಮರೇ ಕಾರಣ ಎಂದು ವಾದಿಸುತ್ತಾರೆ. ಈ ಮೂಲಕ ಮುಸ್ಲಿಂ ಮುಕ್ತ ಭಾರತ ಎಂಬ ವಿಷಯವನ್ನು ಆಗಾಗ ಕೆಣಕುತ್ತಾರೆ. ಇಂತಹ ವಿಕೃತ ವಿಚಾರಧಾರೆ ಅಂತ್ಯವಾಗಬೇಕು ಎಂಬ ಉದ್ದೇಶದಿಂದ ಈ ಪುಸ್ತಕ ರಚಿಸಲಾಯಿತು ಎಂದು ಹೇಳಿದರು.
ತೌಫಿಕ್ ಅಹಮದ್, ಪ್ರಕಾಶಕ ಮಹಮದ್ ಅಜರುದ್ದೀನ್ ಉಪಸ್ಥಿತರಿದ್ದರು. ನಾಗರಾಜು ಹೆತ್ತೂರ್ ಸ್ವಾಗತಿಸಿದರು, ಚಾಂದಿನಿ ನಿರೂಪಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.