ADVERTISEMENT

ಶ್ರವಣಬೆಳಗೊಳ: ಮುನಿ ಪರಂಪರೆಯ ಪುನರುದ್ಧಾರಕ

ಶಾಂತಿಸಾಗರ ಮಹಾರಾಜರ ಶ್ರವಣಬೆಳಗೊಳ ಭೇಟಿಗೆ ಶತಮಾನ: ಅದ್ದೂರಿ ಕಾರ್ಯಕ್ರಮಕ್ಕೆ ಸಿದ್ಧತೆ

​ಪ್ರಜಾವಾಣಿ ವಾರ್ತೆ
Published 8 ನವೆಂಬರ್ 2025, 3:01 IST
Last Updated 8 ನವೆಂಬರ್ 2025, 3:01 IST
ನ.9 ರಂದು ಆಚಾರ್ಯ ಶಾಂತಿಸಾಗರ ಮಹಾರಾಜರ ಲೋಹದ ಪ್ರತಿಮೆ ಪ್ರತಿಷ್ಠಾಪನೆಯಾಗಲಿರುವ ಶ್ರವಣಬೆಳಗೊಳದ 4ನೇ ಬೆಟ್ಟ
ನ.9 ರಂದು ಆಚಾರ್ಯ ಶಾಂತಿಸಾಗರ ಮಹಾರಾಜರ ಲೋಹದ ಪ್ರತಿಮೆ ಪ್ರತಿಷ್ಠಾಪನೆಯಾಗಲಿರುವ ಶ್ರವಣಬೆಳಗೊಳದ 4ನೇ ಬೆಟ್ಟ    

ಶ್ರವಣಬೆಳಗೊಳ: ದಿಗಂಬರ ಜೈನ ಮುನಿ ಪರಂಪರೆಯ ಪುನರುದ್ಧಾರ ಮಾಡಿದ 20ನೇ ಶತಮಾನದ ಪ್ರಥಮಾಚಾರ್ಯರಾದ ಆಚಾರ್ಯ ಶಾಂತಿಸಾಗರ ಮಹಾರಾಜರು ಶ್ರವಣಬೆಳಗೊಳ ಕ್ಷೇತ್ರಕ್ಕೆ ಭೇಟಿ ನೀಡಿ 100 ವರ್ಷಗಳು ಕಳೆಯುತ್ತಿವೆ.

ಈ ಸಂದರ್ಭವನ್ನು ಸ್ಮರಣೀಯವಾಗಿ ಮಾಡಲು 4ನೇ ಬೆಟ್ಟದ ಪದನಾಮದೊಂದಿಗೆ ಆಚಾರ್ಯ ಶಾಂತಿಸಾಗರ ಮುನಿ ಮಹಾರಾಜರ ನೂತನ ಲೋಹದ ಪ್ರತಿಮೆ ಪ್ರತಿಷ್ಠಾಪನಾ ಮಹೋತ್ಸವ ನವೆಂಬರ್‌ 9ರಂದು ಜರುಗಲಿದ್ದು, ಉಪ ರಾಷ್ಟ್ರಪತಿ ಸಿ.ಪಿ. ರಾಧಾಕೃಷ್ಣನ್ ಮತ್ತು ರಾಜ್ಯಪಾಲ ಥಾವರಚಂದ್ ಗೆಹಲೋತ್‌ ಸೇರಿದಂತೆ ಗಣ್ಯಾತಿಗಣ್ಯರೊಂದಿಗೆ ಸಾಕ್ಷಿಯಾಗಲಿದ್ದಾರೆ.

ವಿಂಧ್ಯಗಿರಿಯ ದೊಡ್ಡ ಬೆಟ್ಟದಲ್ಲಿ ಬಾಹುಬಲಿ ರಾರಾಜಿಸಿದರೆ, ಚಂದ್ರಗಿರಿಯ ಚಿಕ್ಕಬೆಟ್ಟದಲ್ಲಿ ಚಂದ್ರಗುಪ್ತ ಮೌರ್ಯ ಮತ್ತು ಆಚಾರ್ಯ ಭದ್ರಬಾಹುಗಳ ಪಾದುಕೆಯ ಆಕರ್ಷಣೆ. ಬೆಳಗೊಳದ ಬೆಳಕಾಗಿದ್ದ ಕರ್ಮಯೋಗಿ ಚಾರುಕೀರ್ತಿಗಳ ನಿಷಿಧಿ ಮಂಟಪವಿರುವ ಚಾರುಗಿರಿ 3ನೇ ಬೆಟ್ಟ. ಇದೀಗ 4ನೇ ಗಿರಿ ಲೋಕಾರ್ಪಣೆಗೊಳ್ಳುತ್ತಿದೆ.

ADVERTISEMENT

ಆಚಾರ್ಯ ಶಾಂತಿಸಾಗರರು ಸರಳತೆಯೊಂದಿಗೆ ಎಲ್ಲರೊಂದಿಗೂ ಉತ್ತಮ ಬಾಂಧವ್ಯ ಮೈಗೂಡಿಸಿಕೊಂಡು, ಪ್ರಾಣಿ– ಪಕ್ಷಿಗಳಲ್ಲಿ ದಯೆ, ಮೃದುತ್ವ ಹೊಂದಿದ್ದರು. ಬಾಲ್ಯದಿಂದಲೇ ಧರ್ಮದ ಬಗ್ಗೆ ಅಪಾರ ಚಿಂತನೆ ಮಾಡುತ್ತಿದ್ದು, ರತ್ನತ್ರಯ ಧರ್ಮ ಪಾಲಿಸುತ್ತ, ದೇವ ಗುರು ಶಾಸ್ತ್ರಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಭಕ್ತಿ ಮಾರ್ಗದಲ್ಲಿ ಸಾಗುತ್ತಿದ್ದರು.

ಶಾಂತಿಸಾಗರರು 1920ರಲ್ಲಿ ಮುನಿ ದೀಕ್ಷೆ ಪಡೆದು ಮಹಾ ತಪಸ್ವಿಗಳಾಗಿದ್ದರು. ದಿಗಂಬರ ಮುನಿಗಳು ದೇಶವ್ಯಾಪಿ ವಿಹಾರ ಮಾಡಲಾಗದಂತಹ ಸಂದರ್ಭದಲ್ಲಿ ಇವರು ಹಳ್ಳಿಯಿಂದ ದಿಲ್ಲಿಯವರೆಗೆ ನಿರ್ಭೀತರಾಗಿ ವಿಹರಿಸಿ, ಮುನಿ ಪರಂಪರೆಯನ್ನು ಎತ್ತಿ ಹಿಡಿಯುವುದರ ಜೊತೆಗೆ ಭಕ್ತರಲ್ಲಿ ಜಿನ ಸಂಸ್ಕೃತಿ ಶಾಶ್ವತವಾಗಿ ಉಳಿಯುವಂತೆ ಮಾಡಿದವರು ಎಂದು ಭಕ್ತರು ಹೇಳುತ್ತಾರೆ.

‘ಆಗಮಗಳ ಅಧ್ಯಯನವನ್ನು ನಿರಂತರವಾಗಿ ಮಾಡುತ್ತಿದ್ದು, ಷಟ್ ಖಂಡಾಗಮ ಗ್ರಂಥವನ್ನು ತಾಮ್ರ ಪತ್ರದ ಮೇಲೆ ಬರೆಸಿ, ಜಿನವಾಣಿ ಸಂರಕ್ಷಕರಾಗುತ್ತಾ ಜಿನಧರ್ಮ ಪ್ರಭಾವನೆ ಮಾಡಿದ 20ನೇ ಶತಮಾನದ ಪ್ರಥಮಾಚಾರ್ಯರು ಎನಿಸಿದ್ದರು’ ಎಂದು ಪ್ರೊ.ಜೀವಂಧರ್ ಕುಮಾರ್ ಹೊತಪೇಟೆ ಹೇಳುತ್ತಾರೆ.

ಹಿಂದಿನ ಮುನಿಗಳು ಆಹಾರ ಸೇವಿಸುವಾಗ ಮಾತ್ರ ನಗ್ನರಾಗಿರುತ್ತಿದ್ದರು. ಆದರೆ ಶಾಂತಿಸಾಗರರು ಮಾತ್ರ ಪೂರ್ಣವಾಗಿ ನಿಗ್ರಂಥ ಮುನಿಯಾಗಿ ಪಾಲನೆ ಮಾಡಿದ್ದರಿಂದ ದೇಶದಲ್ಲಿಯೇ ಪ್ರಥಮಚಾರ್ಯರ ಗೌರವಕ್ಕೆ ಪಾತ್ರರಾದರು. ದಿನಕ್ಕೆ ಒಂದೇ ಬಾರಿ ಆಹಾರ ಸೇವನೆ, ಸ್ವಾಧ್ಯಾಯ ಆಗಮ ಶಾಸ್ತ್ರಗಳ ಅಧ್ಯಯನದೊಂದಿಗೆ ಜನರ ಸಮಸ್ಯೆಗಳನ್ನು ಸುಲಭವಾಗಿ ಪರಿಹರಿಸುವ ಸರಳ ಸಲಹೆ ನೀಡುತ್ತಿದ್ದರು.

ದೇಶ ಸುತ್ತಾಡಿ ದೆಹಲಿ ಕೆಂಪುಕೋಟೆಯ ಮೇಲೆ ನಿಂತು, ನಾನೊಬ್ಬ ದಿಗಂಬರ ಜೈನ ಮುನಿ ಎಂದು ಘೋಷಿಸಿದ ಮಹಾನ್ ತ್ಯಾಗಿ. 20ನೇ ಶತಮಾನದಲ್ಲಿ ದೋಷಯುಕ್ತವಾಗಿದ್ದ ಮುನಿ ಧರ್ಮವನ್ನು ತಮ್ಮ ಶುದ್ಧಾಚರಣೆಯಿಂದ ನಿರ್ದೋಷಗೊಳಿಸಿ, ನಿಂತ ನೀರಿನಂತಾಗಿದ್ದ ಜೈನಧರ್ಮ ಪರಂಪರೆಯನ್ನು ಹರಿಯುವಂತೆ ಮಾಡಿದರು ಎಂದು ಹೊತಪೇಟೆ ತಿಳಿಸಿದರು.

ಒಬ್ಬ ಮಹಾ ತಪಸ್ವಿಯ ನಿರ್ಭಯ ವ್ಯಕ್ತಿತ್ವದ ಸಂತನನ್ನು ಭಾರತ ಕಳೆದುಕೊಂಡಿದೆ ಎಂದು ಎಸ್. ರಾಧಾಕೃಷ್ಣನ್ ಅವರು, ಮಹಾರಾಜರನ್ನು ಕುರಿತು ದಾಖಲಿಸಿರುವುದನ್ನು ನೋಡಬಹುದು. ಅಮೆರಿಕ, ಆಸ್ಟ್ರೇಲಿಯ ಇನ್ನಿತರೆ ದೇಶದ ರಾಯಭಾರಿಗಳು, ಗಣ್ಯ ವ್ಯಕ್ತಿಗಳು, ರಾಜ್ಯಪಾಲರು ಸಹ ಶಾಂತಿಸಾಗರರ ತ್ಯಾಗ ಜೀವನದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿರುವ ಸಂದೇಶ ಭಾವಚಿತ್ರಗಳು ಮಹಾರಾಷ್ಟ್ರದ ಕುಂಥಲಗಿರಿ ಮತ್ತು ಶ್ರವಣಬೆಳಗೊಳದ ಶಾಂತಿಸಾಗರ ಸ್ಮಾರಕ ಭವನದಲ್ಲಿ ಕಾಣಬಹುದಾಗಿದೆ.

ಶ್ರವಣಬೆಳಗೊಳ ಕ್ಷೇತ್ರದಲ್ಲಿ ಆಚಾರ್ಯ ಶಾಂತಿಸಾಗರ ಮಹಾರಾಜರ 10 ಅಡಿಯ ಲೋಹದ ಪ್ರತಿಮೆ 

ಮುನಿ ಕುಲ ಪಿತಾಮಹ

ಭಾರತದಲ್ಲಿ ಬ್ರಿಟಿಷರ ಆಳ್ವಿಕೆಯಿದ್ದಾಗ ದಿಗಂಬರ ಮುನಿಗಳ ವಿಹಾರಕ್ಕೆ ಸಾಕಷ್ಟು ಅಡಚಣೆಗಳಿದ್ದವು. ಅವುಗಳನ್ನು ಮೆಟ್ಟಿ ನಿಂತು ಅಹಿಂಸಾ ಮಾರ್ಗದಲ್ಲಿ ಹೋರಾಡಿ ಜಯಿಸಿದ ಕೀರ್ತಿ ಶಾಂತಿಸಾಗರ ಮಹಾರಾಜರಿಗೆ ಸಲ್ಲುವುದರಿಂದ ವರ್ತಮಾನದ ಸಾಧುಗಳು ಅವರನ್ನು ಮುನಿ ಕುಲ ಪಿತಾಮಹ ಎಂದು ಕರೆಯುತ್ತಾರೆ’ ಎಂದು ಕ್ಷೇತ್ರದ ಪೀಠಾಧಿಪತಿ ಸ್ವಸ್ತಿಶ್ರೀ ಅಭಿನವ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಹೇಳುತ್ತಾರೆ. ‘ಅವರ ಸ್ಮರಣೆಗಾಗಿ ಕ್ಷೇತ್ರದಲ್ಲಿ ಪ್ರತಿಮೆ ಶಿಲೆಯಲ್ಲಿ ಜೀವನ ಚರಿತ್ರೆ ಮತ್ತು 7 ಇಂಚಿನ ಲೋಹದ 100 ಪ್ರತಿಮೆಗಳನ್ನು ರಾಜ್ಯದ ಜಿನಾಲಯಗಳಲ್ಲಿ ಪೂಜಿಸುವಂತೆ ಜನತೆಗೆ ವಿತರಿಸಲಾಗುವುದು’ ಎಂದರು.

ಶಾಂತಿಸಾಗರ ಮುನಿಗಳ ಪರಿಚಯ

ಶಾಂತಿಸಾಗರ ಮಹಾರಾಜರು ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲ್ಲೂಕಿನ ಭೋಜ ಗ್ರಾಮದಲ್ಲಿ ಕೃಷಿಕರಾಗಿದ್ದ ಭೀಮಗೌಡ ಪಾಟೀಲ ಮತ್ತು ಸತ್ಯವತಿ ಪಾಟೀಲರ ಸುಪುತ್ರರಾಗಿ 1872ರ ಜುಲೈ 25 ರಂದು ಜನಿಸಿದರು. ದೂದಗಂಗಾ ಮತ್ತು ವೇದಗಂಗಾ ಎಂಬ 2 ಪವಿತ್ರ ನದಿಗಳ ಸಂಗಮದ ಭೂಮಿಯಲ್ಲಿದೆ ಭೋಜ ಗ್ರಾಮ. ಶಾಂತಿಸಾಗರರ ಜೀವನವೂ ಈ ಎರಡೂ ನದಿಗಳ ಸಂಗಮದಂತೆ ಜ್ಞಾನ ಮತ್ತು ಚಾರಿತ್ರ್ಯಗಳ ಸಂಗಮವಾಗಿದೆ. ಒಮ್ಮೆ ಇವರು ಧ್ಯಾನಾಸಕ್ತರಾಗಿದ್ದಾಗ 9 ಅಡಿ ಉದ್ದದ ಸರ್ಪ ಮಹಾರಾಜರ ಶರೀರ ಸುತ್ತಿಕೊಂಡಿದ್ದರೂ ಸ್ವಲ್ಪವೂ ಅಂಜದೇ ಸಹನೆಯಿಂದ ಎದುರಿಸಿ ಸುತ್ತಲಿದ್ದವರನ್ನು ಬೆರಗಾಗುವಂತೆ ಮಾಡಿದ್ದರು. 1925ರಲ್ಲಿ ಶ್ರವಣಬೆಳಗೊಳದಲ್ಲಿ ನಡೆದ ಭಗವಾನ್ ಬಾಹುಬಲಿ ಮಹಾಮಸ್ತಕಾಭಿಷೇಕದ ಸಾನ್ನಿಧ್ಯ ವಹಿಸಿದ್ದರು. 1955ರ ಸೆಪ್ಟೆಂಬರ್‌ನಲ್ಲಿ ಮಹಾರಾಷ್ಟ್ರದ ಕುಂಥಲಗಿರಿಯಲ್ಲಿ ಯಮಸಲ್ಲೇಖನ ವ್ರತ ಸ್ವೀಕರಿಸಿ ವಿಧಿ ಪೂರ್ವಕ ಸಮಾಧಿ ಮರಣ ಹೊಂದಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.