
ಅರಕಲಗೂಡು: ತಾಲ್ಲೂಕು ಪಂಚಾಯಿತಿ ಸಾಮಾನ್ಯ ಸಭೆಗೆ ಅಧಿಕಾರಿಗಳು ಗೈರಾಗುವ ಮೂಲಕ ಅಗೌರವ ತೋರುತ್ತಿದ್ದು ಇಂತಹ ಅಧಿಕಾರಿಗಳಿಗೆ ನೋಟಿಸ್ ನೀಡಿ ಕ್ರಮ ಕೈಗೊಳ್ಳಿ ಎಂದು ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಹಾಗೂ ತಾ.ಪಂ. ಆಡಳಿತಾಧಿಕಾರಿ ಎಂ. ಬಾಬು ಸೂಚಿಸಿದರು.
ಪಟ್ಟಣದ ತಾ.ಪಂ. ಸಭಾಂಗಣದಲ್ಲಿ ಮಂಗಳವಾರ ನಡೆದ ತಾ.ಪಂ. ಸಾಮಾನ್ಯ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ವಿವಿಧ ಇಲಾಖೆಗಳ ಪ್ರಗತಿ ಕಾರ್ಯ ಕುಂಠಿತಗೊಂಡಿದೆ. ಇಂತಹ ಅಧಿಕಾರಿಗಳಿಗೆ ನೋಟಿಸ್ ನೀಡಿ ಶಿಸ್ತು ಕ್ರಮ ಜರುಗಿಸುವಂತೆ ತಾಪಂ ಇಒ ಶ್ರೀನಿವಾಸ್ ಅವರಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.
‘ತಾ.ಪಂ. ಅನುದಾನದಡಿ ಸರ್ಕಾರಿ ಶಾಲೆಗಳು, ಅಂಗನವಾಡಿ ಕೇಂದ್ರಗಳ ದುರಸ್ತಿಗಾಗಿ ನವೆಂಬರ್ ತಿಂಗಳಲ್ಲಿ ಕ್ರಿಯಾ ಯೋಜನೆ ತಯಾರಿಸಿದ್ದು 81 ಕಾಮಗಾರಿಗಳ ಪಟ್ಟಿ ಸಿದ್ದಪಡಿಸಲಾಗಿದೆ. 22 ಕಾಮಗಾರಿಗಳು ಬಾಕಿ ಇವೆ’ ಎಂದು ಜಿ.ಪಂ. ಎಂಜಿನಿಯರ್ ಶರತ್ ಸಭೆಗೆ ಮಾಹಿತಿ ನೀಡಿದರು. ಮಾರ್ಚ ತಿಂಗಳ ವೇಳೆಗೆ ಎಲ್ಲ ಕಾಮಗಾರಿಗಳನ್ನು ಪೂರ್ಣಗೊಳಿಸಬೇಕು ಎಂದು ಎಂ. ಬಾಬು ತಾಕೀತು ಮಾಡಿದರು.
ಕೋಳಿಮೊಟ್ಟೆ ಸೇವಿಸಿದರೆ ಕ್ಯಾನ್ಸರ್ ಬರಲಿದೆ ಎನ್ನುವ ಸುದ್ದಿ ಹಬ್ಬಿಸಲಾಗಿದೆ. ಈ ಬಗ್ಗೆ ಜನರಿಗೆ ಅರಿವು ಮೂಡಿಸುವ ಕಾರ್ಯ ನಡೆದಿಲ್ಲ, ಪಶುಪಾಲನಾ ಇಲಾಖೆ ನಿರ್ದೇಶಕರೇ ಸಭೆಗೆ ಗೈರಾಗಿದ್ದಾರೆ ಎಂದು ಕಿಡಿಕಾರಿದರು.
ತಾಲ್ಲೂಕು ಆರೋಗ್ಯಾಧಿಕಾರಿ ಡಾ. ಪುಷ್ಪಲತಾ ಮಾತನಾಡಿ, ಆಸ್ಪತ್ರೆಗಳ ಆವರಣದಲ್ಲಿ ಬೀದಿ ನಾಯಿಗಳ ಹಾವಳಿಗೆ ಕಡಿವಾಣ ಹಾಕಲು ಕ್ರಮ ವಹಿಸಲಾಗಿದೆ ಎಂದರು.
ಅಬಕಾರಿ ಇನ್‌ಸ್ಪೆಕ್ಟರ್ ವೀರೇಶ್ ಕುಮಾರ್ ಮಾತನಾಡಿ, ಗಾಂಜಾ ಮಾರಾಟದ ಐದು ಪ್ರಕರಣಗಳನ್ನು ದಾಖಲಿಸಲಾಗಿದೆ ಎಂದರು. ಇದಕ್ಕೆ ಪ್ರತಿಕ್ರಿಯಿಸಿದ ಬಾಬು ಅವರು, ‘ಅಸ್ಸಾಂ ರಾಜ್ಯದಿಂದ ವಲಸೆ ಬಂದಿರುವ ಕೂಲಿ ಕಾರ್ಮಿಕರಿಂದ ಗಾಂಜಾ ದಂದೆ ಹೆಚ್ಚುತ್ತಿದೆ. ಇದಕ್ಕೆ ಕಾನೂನು ರೀತಿ ಕಡಿವಾಣ ಹಾಕಬೇಕು. ಈ ಕುರಿತು ಜಾಗೃತ ದಳ ಮಾದರಿ ಕಾರ್ಯ ನಿರ್ವಹಿಸಬೇಕು. ಅಕ್ರಮ ಮದ್ಯ ಮಾರಾಟ ನಿಷೇಧಿಸಬೇಕು’ ಎಂದು ಸೂಚಿಸಿದರು.
ಗ್ರಾಮೀಣ ಕುಡಿಯುವ ನೀರು ಮತ್ತು ಸರಬರಾಜು ಇಲಾಖೆ ಸಹಾಯಕ ಎಂಜಿನಿಯರ್ ನವೀನ್ ಮಾತನಾಡಿ, ಜಲ ಜೀವನ ಮಿಷನ್ 309 ಕಾಮಗಾರಿಗಳಲ್ಲಿ 80 ಕಾಮಗಾರಿಗಳನ್ನು ಪೂರ್ಣಗೊಳಿಸಲಾಗಿದ್ದು ಮಾರ್ಚ ವೇಳೆಗೆ ಶೇ. 75ರಷ್ಟು ಕಾಮಗಾರಿ ಮುಗಿಯಲಿದೆ. ಎಂದರು. ಕಾಮಗಾರಿ ನಡೆಸಿರುವ ಕುರಿತು ಸಂಬಂಧಿಸಿದ ಬಿಲಾಖೆ ಅಧಿಕಾರಿಗಳಿಂದ ಧೃಢೀಕರಣ ಪತ್ರ ಪಡೆದುಕೊಳ್ಳಬೇಕು.
ಬಿಇಒ ಕೆ.ಪಿ. ನಾರಾಯಣ, ರೇಷ್ಮೆ ಇಲಾಖೆ, ತೋಟಗಾರಿಕೆ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ನರೇಗಾ ಅಧಿಕಾರಿಗಳು ಸಭೆಗೆ ಮಾಹಿತಿ ನೀಡಿದರು. ತಾಪಂ ಇಒ ಶ್ರೀನಿವಾಸ್ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.