ADVERTISEMENT

ಅಧ್ಯಯನ ವರದಿ ಸಲ್ಲಿಕೆ

ಹಾಸನ ನಗರಸಭೆಯನ್ನು ನಗರಪಾಲಿಕೆಯಾಗಿ ಮೇಲ್ದರ್ಜೆಗೇರಿಸಲು ಕ್ರಮ

​ಪ್ರಜಾವಾಣಿ ವಾರ್ತೆ
Published 6 ಜುಲೈ 2019, 14:29 IST
Last Updated 6 ಜುಲೈ 2019, 14:29 IST
ಮೈಸೂರು ಎಂಜಿನಿಯರ್‌ಗಳ ಸಂಸ್ಥೆಯ ತಜ್ಞರ ತಂಡ ಅಧ್ಯಯನ ವರದಿಯನ್ನು ಹೆಚ್ಚುವರಿ ಜಿಲ್ಲಾಧಿಕಾರಿ ವೈಶಾಲಿ ಅವರಿಗೆ ಸಲ್ಲಿಸಿತು.
ಮೈಸೂರು ಎಂಜಿನಿಯರ್‌ಗಳ ಸಂಸ್ಥೆಯ ತಜ್ಞರ ತಂಡ ಅಧ್ಯಯನ ವರದಿಯನ್ನು ಹೆಚ್ಚುವರಿ ಜಿಲ್ಲಾಧಿಕಾರಿ ವೈಶಾಲಿ ಅವರಿಗೆ ಸಲ್ಲಿಸಿತು.   

ಹಾಸನ: ಹಾಸನ ನಗರಸಭೆಯನ್ನು ನಗರಪಾಲಿಕೆಯಾಗಿ ಮೇಲ್ದರ್ಜೆಗೇರಿಸುವ ನಿಟ್ಟಿನಲ್ಲಿ ಮೈಸೂರು ಎಂಜಿನಿಯರ್‌ಗಳ ಸಂಸ್ಥೆಯ ತಜ್ಞರ ತಂಡ ಅಧ್ಯಯನ ವರದಿಯನ್ನು ಜಿಲ್ಲಾಡಳಿತಕ್ಕೆ ಸಲ್ಲಿಸಿತು.

ಸಂಸ್ಥೆಯ ಸಂಚಾಲಕ ಎಂ. ಲಕ್ಷ್ಮಣ ನೇತೃತ್ವದ ಎಂಜಿನಿಯರ್‌ಗಳ ತಂಡ ಶನಿವಾರ ಜಿಲ್ಲಾಧಿಕಾರಿ ಕಚೇರಿ ವರದಿಯನ್ನು ಹೆಚ್ಚುವರಿ ಜಿಲ್ಲಾಧಿಕಾರಿ ಎಂ.ಎಲ್. ವೈಶಾಲಿ ಅವರಿಗೆ ಹಸ್ತಾಂತರಿಸಿ, ಶೀಘ್ರ ಈ ವರದಿಯನ್ನು ಸರ್ಕಾರಕ್ಕೆ ಸಲ್ಲಿಸುವಂತೆ ಮನವಿ ಮಾಡಿದರು,

ವೈಶಾಲಿ ಮಾತನಾಡಿ, ‘ಆರು ತಿಂಗಳ ಹಿಂದೆಯೇ ಹಾಸನ ನಗರ ಸಭೆಯಿಂದಲೂ ನಗರಪಾಲಿಕೆಯನ್ನಾಗಿ ಮೇಲ್ದರ್ಜೆಗೇರಿಸುವ ಕುರಿತು ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಕೆಯಾಗಿದೆ. ಈಗ ಈ ವರದಿಯನ್ನು ಕಳುಹಿಸಿಕೊಡಲಾಗುವುದು. ಇದರಿಂದ ಹಿಂದಿನ ಪ್ರಸ್ತಾವಕ್ಕೆ ಇನ್ನಷ್ಟು ಶಕ್ತಿ ಬಂದಂತಾಗುತ್ತದೆ ಎಂದು ಅಭಿಪ್ರಾಯಪಟ್ಟರು.

ADVERTISEMENT

ನಗರಸಭೆ ಆಯುಕ್ತ ಪರಮೇಶ್ ಅವರು ಈ ಹಿಂದೆ ಸಲ್ಲಿಸಿರುವ ವರದಿಯ ಬಗ್ಗೆ ವಿವರ ಒದಗಿಸಿದರು.

ಲಕ್ಷ್ಮಣ್ ಮಾತನಾಡಿ, ‘ರಾಜ್ಯ ಸರ್ಕಾರದ ಕೋರಿಕೆ ಮೇರೆಗೆ ಎಂಜಿನಿಯರ್‌ಗಳ ಸಂಸ್ಥೆಯ ಪರಿಣತರ ತಂಡ ಜಿಲ್ಲೆಗೆ ಭೇಟಿ ನೀಡಿ ಅಧ್ಯಯನ ವರದಿ ತಯಾರಿಸಿದೆ. ಅದರಂತೆ ನಗರಪಾಲಿಕೆಯನ್ನಾಗಿ ಮೇಲ್ದರ್ಜೆಗೇರಿಸಲು ಕರ್ನಾಟಕ ಮುನಿಸಿಪಲ್ ಕಾರ್ಪೋರೇಷನ್ ಕಾಯ್ದೆ 1976 ಅನ್ವಯ ವಿಧಿಸಲಾಗಿರುವ ಎಲ್ಲಾ ಮಾನದಂಡಗಳನ್ನು ಹಾಸನ ನಗರಸಭೆ ತೃಪ್ತಿಕರವಾಗಿ ಪೂರೈಸಿದೆ’ ಎಂದು ವಿವರಿಸಿದರು.

ದೇಶದಲ್ಲಿ 60 ಮಹಾನಗರಪಾಲಿಕೆಗಳಿವೆ. ರಾಜ್ಯದಲ್ಲೂ 10 ನಗರಪಾಲಿಕೆ ಇದೆ ಎಂದರು.

ನಗರಪಾಲಿಕೆಯಾಗಿ ಘೋಷಣೆ ಆಗುವಂತಹ ನಗರದ ಜನಸಂಖ್ಯೆ 3 ಲಕ್ಷಕ್ಕೂ ಕಡಿಮೆ ಇರಬಾರದು. ಈ ಮಾನದಂಡದ ಪ್ರಕಾರ ಹಾಸನ ನಗರದ ವ್ಯಾಪ್ತಿಯನ್ನು 80 ಚದರ ಕಿ.ಮೀ. ವಿಸ್ತರಿಸಿ ಘೋಷಿಸಿದರೆ, 3 ಲಕ್ಷಕ್ಕಿಂತ ಅಧಿಕ ಜನಸಂಖ್ಯೆ ಈ ವ್ಯಾಪ್ತಿಗೆ ಬರುತ್ತದೆ.
ನಗರಪಾಲಿಕೆಗೆ ಒಬ್ಬ ಮನುಷ್ಯನ ವಾರ್ಷಿಕ ಆದಾಯ ₹ 200 ನಂತೆ ನಗರದ ಒಟ್ಟು ಜನಸಂಖ್ಯೆಯಿಂದ ಬಾಕಿ ಬರಬೇಕಾಗಿರುವ ಬಾಕಿ ವಾರ್ಷಿಕ ಆದಾಯ ₹ 6 ಕೋಟಿಗಿಂತ ಕಡಿಮೆ ಇರಬಾರದು. ಈ ಮಾನದಂಡದ ಪ್ರಕಾರ ಹಾಸನ ನಗರ ವ್ಯಾಪ್ತಿಗೆ ಬರುವಂತಹ ಒಟ್ಟಿನ ಆದಾಯ ₹ 6 ಕೋಟಿಗಿಂತ ಹೆಚ್ಚಿನದಾಗಿದೆ ಎಂದರು.

ಒಂದು ಚದರ ಕಿ.ಮೀ ನಲ್ಲಿ ವಾಸಿಸುವ ಜನಸಂಖ್ಯೆ 3000ಕ್ಕಿಂತ ಕಡಿಮೆ ಇರಬಾರದೆಂಬ ನಿಯಮ ಇದೆ. ಈ ಮಾನದಂಡದ ಪ್ರಕಾರ ಹಾಸನದಲ್ಲಿ ಒಂದು ಚದರ ಕಿ.ಮೀ ವ್ಯಾಪ್ತಿಯಲ್ಲಿ 3000 ಜನಸಂಖ್ಯೆಗಿಂತ ಅಧಿಕವಿರುತ್ತದೆ. ಕೃಷಿಯೇತರ ಚಟುವಟಿಕೆಯಲ್ಲಿ ಇರುವವರ ಸಂಖ್ಯೆ ಉದ್ಯೋಗದಲ್ಲಿ ಇರುವವರ ಸಂಖ್ಯೆಗಿಂತ ಶೇಕಡಾ 50 ರಷ್ಟು ಮೀರಬಾರದು. ಇದು ಸಹ ಶೇಕಡಾ 50 ರಷ್ಟು ಮೀರುತ್ತಿಲ್ಲ ಎಂದು ಹೇಳಿದರು.

ಈ ಮೇಲ್ಕಂಡ ಎಲ್ಲಾ ಮಾನದಂಡಗಳನ್ನು ನಗರಸಭೆ ಪೂರೈಸುವುದರಿಂದ ಪ್ರಸ್ತಾವವನ್ನು ನಗರಾಭಿವೃದ್ಧಿ ಸಚಿವಾಲಯಕ್ಕೆ ರವಾನಿಸಿ, ಸಂಪುಟ ಸಭೆಯಲ್ಲಿ ಹಾಸನ ನಗರಪಾಲಿಕೆ ಎಂದು ಘೋಷಿಸಿ, ಕೇಂದ್ರ ಸರ್ಕಾರಕ್ಕೆ ಕಳುಹಿಸಿಕೊಡಬೇಕು ಎಂದು ಮನವಿ ಮಾಡಿದರು.

ತಜ್ಞರ ತಂಡದಲ್ಲಿ ಎಂಜಿನಿಯರ್‌ಗಳ ಸಂಸ್ಥೆ ಅಧ್ಯಕ್ಷ ಡಾ. ಆರ್. ಸುರೇಶ್, ಕಾರ್ಯದರ್ಶಿ ಡಾ. ದಿನೇಶ್ ಕುಮಾರ್, ಪ್ರಮುಖರಾದ ರವೀಂದ್ರನಾಥ್, ಕೆ.ಬಿ. ವಾಸುದೇವ, ಸುರೇಶ್ ಬಾಬು, ಜಸೈಲ್ ಸಿಂಗ್, ಡಾ. ರಾಜೇಂದ್ರ, ಸಂಪತ್, ರಾಜ್ ಶೇಖರ್‌ ಗೌಡ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.