ADVERTISEMENT

ನೈತಿಕತೆಯಿದ್ದರೆ ಅಡ್ವೊಕೇಟ್‌ ಜನರಲ್‌ ರಾಜೀನಾಮೆ ನೀಡಲಿ: ರೇವಣ್ಣ ಆಗ್ರಹ

ನ್ಯಾಯಾಲಯದ ಮೊರೆ ಹೋಗಲು ನಿರ್ಧಾರ : ಶಾಸಕ ಎಚ್.ಡಿ.ರೇವಣ್ಣ

​ಪ್ರಜಾವಾಣಿ ವಾರ್ತೆ
Published 9 ಅಕ್ಟೋಬರ್ 2020, 13:14 IST
Last Updated 9 ಅಕ್ಟೋಬರ್ 2020, 13:14 IST
ಎಚ್.ಡಿ.ರೇವಣ್ಣ
ಎಚ್.ಡಿ.ರೇವಣ್ಣ   

ಹಾಸನ: ಸ್ಥಳೀಯ ಸಂಸ್ಥೆಗಳ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಗಳಿಗೆ ಮೀಸಲು ನಿಗದಿ ವಿಚಾರಕ್ಕೆ ಸಂಬಂಧಿಸಿದಂತೆ ಸತ್ಯಾಂಶ ಮುಚ್ಚಿಟ್ಟು ನ್ಯಾಯಾಲಯಕ್ಕೆ ಸುಳ್ಳು ಮಾಹಿತಿ ನೀಡಿರುವ ರಾಜ್ಯ ಅಡ್ವೊಕೇಟ್‌ ಜನರಲ್‌ ನೈತಿಕತೆಯಿದ್ದರೆ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಶಾಸಕ ಎಚ್.ಡಿ.ರೇವಣ್ಣ ಆಗ್ರಹಿಸಿದರು.‌

ಮೀಸಲಾತಿ ಪಟ್ಟಿ ಪ‍್ರಕಟವಾಗದ ಕಾರಣ ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿ ಚುನಾವಣೆ ನಡೆದು ಎರಡು ವರ್ಷವಾದರೂ ಅಧ್ಯಕ್ಷ, ಉಪಾಧ್ಯಕ್ಷರ ಚುನಾವಣೆ ಮಾಡಲಿಲ್ಲ. ಆದರೆ ಈಗ ಕೋರ್ಟ್‌ಗೆ ಸುಳ್ಳು ಮಾಹಿತಿ ನೀಡಲಾಗಿದೆ. ಮೀಸಲಾತಿ ನಿಗದಿ ಪ್ರಶ್ನಿಸಿ ನಗರಸಭೆ ಜೆಡಿಎಸ್‌ ಸದಸ್ಯರು ಸಭೆ ನಡೆಸಿ, ನ್ಯಾಯಾಲಯ ಮೊರೆ ಹೋಗಲು ನಿರ್ಧರಿಸಿದ್ದಾರೆ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಹರಿಹರ ನಗರಸಭೆ ಅಧ್ಯಕ್ಷ ಸ್ಥಾನ ಪರಿಶಿಷ್ಟ ಪಂಗಡಕ್ಕೆ ಮೀಸಲಿರಿಸಿದ್ದನ್ನು ಹಾಸನ ನಗರಸಭೆಗೆ ಹಾಕಲಾಗಿದೆ. ರಾಜ್ಯದಲ್ಲಿ ಕೊಪ್ಪಳ ಮತ್ತು ಹರಿಹರಕ್ಕೆ ಮಾತ್ರ ಎಸ್‌ಟಿಗೆ ಮೀಸಲು ಇರುವುದು. ಮಾರ್ಚ್‌ 3ರಂದು ಅಡ್ವೊಕೇಟ್ ಜನರಲ್ ಹೈಕೋರ್ಟ್ ಪ್ರಮಾಣಪತ್ರ ಸಲ್ಲಿಸಿದ್ದರು. ಆದರೆ, ರಾತ್ರೋರಾತ್ರಿ ಮೀಸಲು ಬದಲು ಮಾಡಲಾಗಿದೆ. ನ್ಯಾಯಾಲಯ ಇದನ್ನು ಗಮನಿಸಿ ಸ್ವಯಂ ಪ್ರೇರಿತವಾಗಿ ಪ್ರಕರಣ ದಾಖಲಿಸಿಕೊಳ್ಳಬೇಕು ಎಂದು ಮನವಿ ಮಾಡಿದರು.

ADVERTISEMENT

ಹಾಸನ ಜಿಲ್ಲಾ ಪಂಚಾಯಿತಿಯಲ್ಲಿ ಜೆಡಿಎಸ್‌ ಬಹುಮತ ಹೊಂದಿದ್ದರೂ ಅಧ್ಯಕ್ಷ ಸ್ಥಾನವನ್ನು ಎಸ್‌ಟಿಗೆ ಮೀಸಲಾದ ಪರಿಣಾಮ ಅಧಿಕಾರ ಸಿಗಲಿಲ್ಲ. ಹಿಂದೆ ಕಾಂಗ್ರೆಸ್‌ ಮಾಡಿದ ತಪ್ಪನ್ನು ಈಗ ಬಿಜೆಪಿ ಮಾಡಿದೆ. ಎರಡು ರಾಷ್ಟ್ರೀಯ ಪಕ್ಷಗಳಿಗೆ ಜೆಡಿಎಸ್ ಪ್ರಬಲವಾಗಿ ಬೆಳೆಯುತ್ತಿದೆ ಎಂಬ ಭಯದಿಂದ ಈ ರೀತಿ ಮಾಡಿರಬಹುದು. ಅರಸೀಕೆರೆ ಮತ್ತು ಹಾಸನ ನಗರಸಭೆಯಲ್ಲಿ ಬಹುಮತ ಇರುವ ಜೆಡಿಎಸ್‌ಗೆ ಬೇಕೆಂತಲೇ ಅಧಿಕಾರ ತಪ್ಪಿಸಿದ್ದಾರೆ. ಇದಕ್ಕಾಗಿ ಏಳು ತಿಂಗಳಿಂದ ಸರ್ಕಸ್ ಮಾಡಿದ್ದಾರೆ. ಮುಖ್ಯಮಂತ್ರಿ ಯಡಿಯೂರಪ್ಪ ಗೆ ಸಾಮಾಜಿಕ ನ್ಯಾಯದ ಮೇಲೆ ನಂಬಿಕೆ ಇದೆಯೇ ಎಂದು ಪ್ರಶ್ನಿಸಿದರು.

ಅಧ್ಯಕ್ಷ ಸ್ಥಾನ ಎಸ್‌ಟಿ ಗೆ ಮೀಸಲು ಮಾಡಿದ ತಕ್ಷಣ ಓಡಿ ಹೋಗುತ್ತೇವೆ ಅಂದುಕೊಂಡಿದ್ದರೆ ಅದು ಅವರ ಭ್ರಮೆ. ರಾಜಕಾರಣದಲ್ಲಿ ಇದೆಲ್ಲಾ ನೋಡಿದ್ದೇನೆ. ‌ಒಂದೇ ಜಿಲ್ಲೆಗೆ ಎರಡು ಅಧ್ಯಕ್ಷ ಸ್ಥಾನ ಎಸ್‌ಟಿಗೆ ಮೀಸಲಾಗಿದೆ. ಎಲ್ಲ ಮಾನದಂಡಗಳನ್ನು ಗಾಳಿಗೆ ತೂರಲಾಗಿದೆ. ನಿಯಮದ ಪ್ರಕಾರ ಹಾಸನ ನಗರಸಭೆ ಎಸ್‌ಟಿ ಮೀಸಲು ನಿಗದಿ 52 ಸ್ಥಾನದಲ್ಲಿದೆ ಎಂದು ವಿವರಿಸಿದರು.

‘ನನ್ನ ಅಧಿಕಾರವಧಿಯಲ್ಲಿ ಕಟ್ಟಿಸಿದ ಕಟ್ಟಡಗಳಿಗೆ ಎಲ್ಲೂ ಹೆಸರು ಹೆಸರು ಹಾಕಿಸಿಕೊಂಡಿಲ್ಲ. ಬಿಜೆಪಿ, ಕಾಂಗ್ರೆಸ್‌ ಅಧಿಕಾರದಲ್ಲಿದ್ದರೂ ರೈಲ್ವೆ ಮೇಲ್ಸೇತುವೆ ಕಾಮಗಾರಿ ಸೇರಿದಂತೆ ಹಲವು ಕಾಮಗಾರಿ ಆರಂಭಗೊಳ್ಳಲಿಲ್ಲ. ಎಚ್.ಡಿ.ಕುಮಾರಸ್ವಾಮಿ ಅವರು ಸಿ.ಎಂ. ಆಗಿದ್ದಾಗ ರೈಲ್ವೆ ಮೇಲ್ಸೇತುವೆ, ಹಬೀಬಿಯಾ ಸಾಮಿಲ್ ರಸ್ತೆ, ದುದ್ದ ರಸ್ತೆಗೆ ಅನುದಾನ ಬಿಡುಗಡೆ ಮಾಡಿದರು’ ಎಂದು ಸ್ಪಷ್ಟಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.