ಎಚ್.ಎಸ್.ಅನಿಲ್ ಕುಮಾರ್
ಹಳೇಬೀಡು: ಸಾಮಾಜಿಕ ಜಾಲತಾಣಗಳನ್ನು ಜಾಲಾಡುವ ಇಂದಿನ ಕೆಲವು ರೈತರು, ವಿಶ್ವದ ವಿವಿಧೆಡೆ ಚಾಲ್ತಿಯಲ್ಲಿರುವ ಕೃಷಿ ಪದ್ದತಿ ಅನುಸರಿಸಿ ಗುಣಮಟ್ಟದ ಇಳುವರಿ ಪಡೆಯುತ್ತಿದ್ದಾರೆ. ಬೆಂಗಳೂರಿನಲ್ಲಿ ಮೆಕ್ಯಾನಿಕಲ್ ಎಂಜಿನಿಯರ್ ಆಗಿರುವ ಶಶಿಕುಮಾರ್, ಸಮೀಪದ ಸಿದ್ದಾಪುರದ ತಮ್ಮ ಹೊಲದಲ್ಲಿ ಏರು ಮಡಿ ವಿಧಾನದಲ್ಲಿ ಎಲೆಕೋಸು ಬೆಳೆದು ಉತ್ತಮ ಇಳುವರಿಯ ನಿರೀಕ್ಷೆಯಲ್ಲಿದ್ದಾರೆ.
ಎಂಜಿನಿಯರ್ ವೃತ್ತಿಯಲ್ಲಿರುವ ಶಶಿಕುಮಾರ್ ಅವರಿಗೆ ಬಾಲ್ಯದಿಂದಲೂ ಕೃಷಿ ಎಂದರೆ ಎಲ್ಲಿಲ್ಲದ ಆಸಕ್ತಿ. ಕೃಷಿ ಕುಟುಂಬದಲ್ಲಿ ಜನಿಸಿರುವ ಅವರು ಬಾಲ್ಯದಿಂದಲೂ ಕೃಷಿ ಹೊಸ ಪದ್ಧತಿಗಳನ್ನು ಕಲೆ ಹಾಕುತ್ತಿದ್ದರು. ನೀರಿನ ಸಮರ್ಪಕ ಬಳಕೆ, ಕಡಿಮೆ ಪ್ರಮಾಣದ ರಾಸಾಯನಿಕ ಬಳಕೆ ಹಾಗೂ ಗುಣಮಟ್ಟದ ಉತ್ತಮ ಇಳುವರಿ ಪಡೆಯಬೇಕು. ಹೆಚ್ಚಿನ ಆದಾಯದಿಂದ ರೈತ ಸಮೃದ್ಧನಾಗಿರಬೇಕು ಎಂಬುದು ಅವರ ಕನಸಾಗಿತ್ತು. ಈ ನಿಟ್ಟಿನಲ್ಲಿ ಹೆಜ್ಜೆ ಇಟ್ಟಿರುವ ಶಶಿಕುಮಾರ್, ರಜೆ ದಿನದಲ್ಲಿ ಅತ್ಯಾಧುನಿಕ ವಿಧಾನದ ಕೃಷಿ ಕಾಯಕ ನಡೆಸುತ್ತಿದ್ದಾರೆ.
ಸಾಲಿನಲ್ಲಿ ಎಲೆಕೋಸು ನಾಟಿ ಮಾಡುವ ಪದ್ದತಿ ಅನಾದಿ ಕಾಲದಿಂದ ಹಳೇಬೀಡು ಭಾಗದಲ್ಲಿ ಚಾಲ್ತಿಯಲ್ಲಿದೆ. ವಿಭಿನ್ನ ಕೃಷಿಗೆ ಕೈ ಹಾಕಿರುವ ಶಶಿಕುಮಾರ್, ವಿಶಿಷ್ಟ ವಿಧಾನದ ಎಲೆಕೋಸು ಬೆಳೆದಿದ್ದಾರೆ. ಗಡ್ಡೆ ಕಟ್ಟುತ್ತಿರುವ ಕೋಸಿನ ಬೆಳೆ, ಮಾಮೂಲಿ ವಿಧಾನದ ಬೆಳೆಗಿಂತ ವಿಭಿನ್ನವಾಗಿ ಕಂಗೊಳಿಸುತ್ತಿದೆ.
ಮಣ್ಣಿನ ಬೆಡ್ ಮಾಡಿಕೊಂಡು ಹನಿ ನೀರಾವರಿ ಪದ್ಧತಿಯ ಪೈಪ್‌ಲೈನ್ ಮಾಡಲಾಗಿದೆ. ನಂತರ ಬೆಡ್ಡಿಗೆ ಮಲ್ಚಿಂಗ್ ಶೀಟ್ (ಪ್ಲಾಸ್ಟಿಕ್ ಹಾಳೆ) ಹಾಸಲಾಗಿದೆ. ಶೀಟ್‌ನಲ್ಲಿ 1ಅಡಿ ಅಂತರದಲ್ಲಿ 3 ರಂಧ್ರ ಮಾಡಿಕೊಂಡು ಸಸಿ ನಾಟಿ ಮಾಡಲಾಗಿದೆ.
ಬೆಡ್ ಮೇಲೆ ನೆಟ್ಟ ಸಸಿಗಳಿಗೆ ಮಾಮೂಲಿ ಪದ್ದತಿಗಿಂತ ಮಣ್ಣಿನ ಸಾರ ಹೆಚ್ಚಾಗಿ ದೊರಕುತ್ತಿದೆ. ಅಲ್ಲದೆ ಬೆಡ್‌ಗೆ ಸಾವಯವ ಗೊಬ್ಬರ ಸಹ ಹಾಕಲಾಗಿದೆ. ಜಮೀನಿನ ಸುತ್ತ ವಾಲ್‌ನೆಟ್ ಹಾಕಿರುವುದರಿಂದ ರಸ್ತೆಯ ದೂಳು ಬೆಳೆಗೆ ಪಸರಿಸುತ್ತಿಲ್ಲ. ಕಾಡು ಪ್ರಾಣಿಗಳ ಕಾಟ ಇಲ್ಲದಂತಾಗಿದೆ. ಬೇರೆ ಬೆಳೆಗಳಿಂದಲೂ ರೋಗ ಪಸರಿಸುತ್ತಿಲ್ಲ. ಹೀಗಾಗಿ ಬೆಳೆ ಸೊಗಸಾಗಿ ಬರುತ್ತಿದೆ ಎನ್ನುತ್ತಾರೆ ಶಶಿಕುಮಾರ್.
ಬೆಳೆಯ ಬೆಳೆವಣಿಗೆ ಬಳಸುವ ಸಾವಯವ ಗೊಬ್ಬರವನ್ನು ಹನಿ ನೀರಾವರಿ ಪೈಪ್ ಮೂಲಕ ದ್ರವ ರೂಪದಲ್ಲಿ ಕೊಡಲಾಗುತ್ತಿದೆ. ಗಿಡದ ಬೇರಿಗೆ ಸಮರ್ಪಕವಾಗಿ ಪೌಷ್ಟಿಕಾಂಶ ತಲುಪುತ್ತಿದೆ. ಹೀಗಾಗಿ ಆರೋಗ್ಯಕರವಾಗಿ ಗಡ್ಡೆ ಕಟ್ಟುತ್ತಿದೆ.
ಈ ವಿಧಾನದಿಂದ ಹೊಲದಲ್ಲಿ ಹೆಚ್ಚಾಗಿ ಕಳೆ ಬೆಳೆಯುವುದಿಲ್ಲ. ಅಲ್ಪ ಸ್ವಲ್ಪ ಬರುವ ಕಳೆಯನ್ನು ಸುಲಭವಾಗಿ ನಿಯಂತ್ರಿಸಬಹುದು. ರೋಗ ಬಾಧೆಯೂ ಅಷ್ಟಾಗಿ ಬರುವುದಿಲ್ಲ. ಹೀಗಾಗಿ ಕಾರ್ಮಿಕರ ಅವಲಂಬನೆ ಕಡಿಮೆ ಎಂದು ಶಶಿಕುಮಾರ್ ಹೇಳಿದರು.
1ಎಕರೆ 10 ಗುಂಟೆ ಜಮೀನಿನಲ್ಲಿ ಹೊಸ ಮಾದರಿಯಲ್ಲಿ ಎಲೆಕೋಸು ಬೆಳೆದಿದ್ದೇವೆ. ಈ ಜಮೀನಿನಲ್ಲಿ ಸಾಮಾನ್ಯವಾಗಿ ಎರಡು ಲಾರಿ ಲೋಡ್ ಎಲೆಕೋಸು ಬೆಳೆಯಬಹುದು. ಹೆಚ್ಚುವರಿ 1 ಲೋಡ್ ಫಸಲು ಬರಬಹುದು ಎಂಬ ನಿರೀಕ್ಷೆಯಲ್ಲಿದ್ದೇವೆ. ಹೊಸ ವಿಧಾನ ತುಂಬಾ ಚೆನ್ನಾಗಿದೆ. ಕೊಯ್ಲು ಸಂದರ್ಭದಲ್ಲಿ ನಿರ್ದಿಷ್ಟ ಬೆಲೆ ದೊರಕಬೇಕು ಎಂದು ಶಶಿಕುಮಾರ್ ಹೇಳಿದರು.
ಈ ವಿಧಾನದಿಂದ ಅಧಿಕ ಸಾಂದ್ರತೆಯಲ್ಲಿ ಗಿಡ ಬೆಳೆಯುತ್ತದೆ. ಗುಣಮಟ್ಟದ ಫಸಲು ಬರುತ್ತದೆ. ಹೆಚ್ಚಾಗಿ ರೋಗ ಬಾಧೆ ಕಂಡು ಬರುವುದಿಲ್ಲ.ಕೆ.ಎಂ.ಸತೀಶ್ ಕುಮಾರ್ ಹಿರಿಯ ಸಹಾಯಕ ತೋಟಗಾರಿಕಾ ನಿರ್ದೇಶಕ
ಶಶಿಕುಮಾರ್ ನಡೆಸುತ್ತಿರುವ ಹೊಸ ವಿಧಾನದ ಕೃಷಿ ಎಲ್ಲ ರೈತರು ಅನುಸರಿಸಬಹುದಾದ ಉತ್ತಮ ಪದ್ದತಿಯಾಗಿದೆ.ಜಿ.ಎನ್.ರಾಜಶೇಖರ್ ಸಿದ್ದಾಪುರ ರೈತ
ಕುಟುಂಬದ ಪ್ರೋತ್ಸಾಹ
ಏರು ಮಡಿ ಕೃಷಿ ವಿಧಾನ ನಮಗೆ ಇದೇ ಮೊದಲಲ್ಲ. ಯೂಟ್ಯೂಬ್‌ನಲ್ಲಿ ನೋಡಿಕೊಂಡು ಇದೇ ಹೊಲದಲ್ಲಿ ಈ ವಿಧಾನದಿಂದ ಸೇವಂತಿಗೆ ಬೆಳೆದು ಯಶಸ್ವಿಯಾಗಿದ್ದೇವೆ. ಈಗ ಬೇರೆ ಹೊಲದಲ್ಲಿ ಏರು ಮಡಿ ವಿಧಾನದಲ್ಲಿ ಸೇವಂತಿಗೆ ಬೆಳೆಯುತ್ತಿದ್ದೇವೆ ಎಂದು ಶಶಿಕುಮಾರ್ ಹೇಳಿದರು. ಹೊಸ ವಿಧಾನದ ಕೃಷಿ ನಡೆಸಲು ಮುಂದಾದಾಗ ತಾಯಿ ಶಕುಂತಲಾ ತಂದೆ ಮಂಜಪ್ಪ ಹಾಗೂ ಕುಟುಂಬದವರೆಲ್ಲರೂ ಪ್ರೋತ್ಸಾಹಿಸಿದರು. ಸೋದರ ಮಾವ ರಾಜಶೇಖರ್ ಬೆನ್ನೆಲುಬಾಗಿ ನಿಂತಿದ್ದಾರೆ. ವಾರಾಂತ್ಯದ ರಜೆಯಲ್ಲಿ ಕೃಷಿ ನಡೆಸುತ್ತಿದ್ದೇನೆ. ಕಂಪನಿಗೆ ತೆರಳಿದ್ದಾಗ ಕೋಸಿನ ಹೊಲದಲ್ಲಿ ತುರ್ತು ಕೆಲಸ ಬಂದರೆ ಮನೆಯವರೆಲ್ಲ ನಿಭಾಯಿಸುತ್ತಾರೆ ಎಂದು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.