ADVERTISEMENT

ಕೃಷಿ ಚಟುವಟಿಕೆ ಪುನರಾರಂಭ

ಮೋಡ ಕವಿದ ವಾತಾವರಣ, ಹಲವೆಡೆ ಅಲ್ಪ ಪ್ರಮಾಣದ ಮಳೆ

​ಪ್ರಜಾವಾಣಿ ವಾರ್ತೆ
Published 17 ಜುಲೈ 2021, 13:12 IST
Last Updated 17 ಜುಲೈ 2021, 13:12 IST
ಹಾಸನದಲ್ಲಿ ಮಳೆ ಸುರಿದ ವೇಳೆ ಕೊಡೆ ಹಿಡಿದು ಸಾಗಿದ ಸಾರ್ವಜನಿಕರು.
ಹಾಸನದಲ್ಲಿ ಮಳೆ ಸುರಿದ ವೇಳೆ ಕೊಡೆ ಹಿಡಿದು ಸಾಗಿದ ಸಾರ್ವಜನಿಕರು.   

ಹಾಸನ: ನಾಲ್ಕು ದಿನಗಳಿಂದ ಮಲೆನಾಡು ಭಾಗದಲ್ಲಿ ಆರ್ಭಟ ನಡೆಸಿದ್ದ ಮಳೆ ಶನಿವಾರ ಬಿಡುವು ನೀಡಿದ್ದು, ಹಲವೆಡೆ ಅಲ್ಪ ಪ್ರಮಾಣದ ಮಳೆಯಾಗಿದೆ.

ಹೇಮಾವತಿ ಸೇರಿದಂತೆ ಪ್ರಮುಖ ನದಿಗಳಲ್ಲಿ ನೀರಿನ ಹರಿವಿನ ಪ್ರಮಾಣ ಇಳಿಕೆಯಾಗಿದೆ.ಮೋಡ ಕವಿದ ವಾತಾವರಣ ಮುಂದುವರಿದಿದ್ದು, ಪಶ್ಚಿಮಘಟಕ್ಕೆ ಹೊಂದಿರುವ ಪ್ರದೇಶಗಳಲ್ಲಿ ಆಗಾಗ್ಗೆ ಅಲ್ಪ ಪ್ರಮಾಣದ ಮಳೆಯಾಗುತ್ತಿದೆ. ಹಾಸನ, ಹೆತ್ತೂರು, ನುಗ್ಗೇಹಳ್ಳಿಯಲ್ಲಿ ಜಿಟಿಜಿಟಿ ಮಳೆಯಾಗಿದೆ.

ಜಿಲ್ಲಾಯಾದ್ಯಂತ ಮಳೆ ಪ್ರಮಾಣ ತಗ್ಗಿರುವುದರಿಂದ ಜಲಾಶಯಗಳ ಒಳ ಹರಿವು ಪ್ರಮಾಣ ಇಳಿಕೆಯಾಗಿದೆ. ಹೇಮಾವತಿ ಜಲಾಶಯದ ಒಳ ಹರಿವು 12,828 ಕ್ಯುಸೆಕ್‌ಗೆ ಇಳಿಕೆಯಾಗಿದೆ. ಜಲಾಶಯದ ನೀರಿನ ಮಟ್ಟ 2903.06 ಅಡಿಗಳಿಷ್ಟಿದೆ. ಇನ್ನು ಯಗಚಿ ಜಲಾಶಯಕ್ಕೆ 796 ಕ್ಯುಸೆಕ್‌ ನೀರು ಹರಿದು ಬರುತ್ತಿದೆ. ನೀರಿನ ಮಟ್ಟ 3163.98 ಅಡಿಯಷ್ಟಿದೆ. ವಾಟೆಹೊಳೆ ಜಲಾಶಯಕ್ಕೆ 123 ಕ್ಯುಸೆಕ್‌ ಒಳ ಹರಿವು ಇದ್ದು, ನೀರಿನ ಮಟ್ಟ 3165.08 ಅಡಿ ಇದೆ.

ADVERTISEMENT

ಸ್ಥಗಿತಗೊಂಡಿದ್ದ ಕೃಷಿ ಚಟುವಟಿಕೆಗಳನ್ನು ರೈತರು ಪುನರಾರಂಭಿಸಿದ್ದು, ಭತ್ತದ ಗದ್ದೆ ನಾಟಿ ಕಾರ್ಯ ಚುರುಕುಗೊಂಡಿದೆ. ಕಳೆದ ಮೂರು ದಿನಗಳಿಂದ ಸುರಿದ ಗಾಳಿ, ಮಳೆಗೆ ಸಕಲೇಶಪುರ ತಾಲ್ಲೂಕಿನ ಕಾಫಿ ತೋಟಗಳಲ್ಲಿ ಮರಗಳು ಉರುಳಿ ಬಿದ್ದಿದ್ದವು. ಮಳೆ ಕಡಿಮೆಯಾಗಿದ್ದ ಮರಗಳ ತೆರವು ಕಾರ್ಯದಲ್ಲಿ ಬೆಳೆಗಾರರು ನಿರತರಾಗಿದ್ದಾರೆ.

ಹಳ್ಳಗಳ ನೀರು ಕೆಲವೆಡೆ ಭತ್ತದ ಗದ್ದೆಗಳಿಗೆ ಹರಿದಿದ್ದು, ಹಳ್ಳಗಳ ಸರಿಪಡಿಸುವಿಕೆ ಸೇರಿದಂತೆ ಭತ್ತದ ನಾಟಿ ಮಾಡುವ ಕಾರ್ಯಕ್ಕೆ ಸಿದ್ಧತೆ ಮಾಡಲಾಗುತ್ತಿದೆ.

ಸಾರ್ವಜನಿಕರಿಗೆ ಸೂಚನೆ:
ಭಾರಿ ಮಳೆಯಿಂದ ಯಗಚಿ ಜಲಾಶಯ ಭರ್ತಿಯಾಗಿದೆ. ಜಲಾಶಯದಿಂದ ಹೆಚ್ಚುವರಿ ನೀರನ್ನು ಯಗಚಿ ನದಿಗೆ ಹರಿಸಲಾಗಿದೆ. ಆದ್ದರಿಂದ ಯಗಚಿ ಅಣೆಕಟ್ಟು ಕೆಳಭಾಗದ ಹಾಗೂ ನದಿ ಪಾತ್ರದ ಪ್ರದೇಶದಲ್ಲಿ ಬರುವ ಹಳ್ಳಿಗಳ ಸಾರ್ವಜನಿಕರು ಜಾನುವಾರು ಹಾಗೂ ಆಸ್ತಿಪಾಸ್ತಿಗಳನ್ನು ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರ ಮಾಡಿಕೊಳ್ಳಬೇಕು ಎಂದು ಆಲೂರು ತಹಶೀಲ್ದಾರ್ ಶಿರೀನ್‌ ತಾಜ್‌ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.