ADVERTISEMENT

ಕೃಷಿ ಕಾಲೇಜು ಬೆಂಗಳೂರು ವಿವಿಯಲ್ಲೇ ಉಳಿಯಲಿ: ಶಾಸಕ ಎಚ್‌.ಡಿ. ರೇವಣ್ಣ

​ಪ್ರಜಾವಾಣಿ ವಾರ್ತೆ
Published 24 ಮಾರ್ಚ್ 2025, 11:43 IST
Last Updated 24 ಮಾರ್ಚ್ 2025, 11:43 IST
ಎಚ್‌.ಡಿ. ರೇವಣ್ಣ
ಎಚ್‌.ಡಿ. ರೇವಣ್ಣ   

ಹಾಸನ: ಇಲ್ಲಿನ ಕೃಷಿ ಕಾಲೇಜು ಬೆಂಗಳೂರಿನ ಕೃಷಿ ವಿಶ್ವವಿದ್ಯಾಲಯದ ವ್ಯಾಪ್ತಿಯಲ್ಲಿಯೇ ಇರಬೇಕು. ಇಲ್ಲವಾದರೆ ವಿದ್ಯಾರ್ಥಿಗಳು, ರೈತರೆಲ್ಲಾ ಸೇರಿ ಸರ್ಕಾರದ ವಿರುದ್ಧ ಬೃಹತ್ ಹೋರಾಟ ನಡೆಸಲಾಗುವುದು ಎಂದು ಶಾಸಕ ಎಚ್.ಡಿ. ರೇವಣ್ಣ ಹೇಳಿದರು.

ನಗರದ ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 20 ವರ್ಷಗಳ ಹಿಂದೆ ಹಾಸನದಲ್ಲಿ ಕೃಷಿ ಕಾಲೇಜು ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ವ್ಯಾಪ್ತಿಯಲ್ಲಿ ಉತ್ತಮವಾಗಿ ನಡೆಯುತ್ತಿದೆ. 400ಕ್ಕೂ ಹೆಚ್ಚು ವಿದ್ಯಾರ್ಥಿಗಳು ಓದುತ್ತಿದ್ದಾರೆ. ಸರ್ಕಾರ ದುರುದ್ದೇಶದಿಂದ ಇದನ್ನು ಮಂಡ್ಯ ವಿಶ್ವವಿದ್ಯಾಲಯಕ್ಕೆ ಸೇರಿಸುವ ಹುನ್ನಾರ ನಡೆಸುತ್ತಿದೆ ಎಂದು ಆರೋಪಿಸಿದರು.

ಕೃಷಿ ಕಾಲೇಜು ಬೆಂಗಳೂರು ವಿಶ್ವವಿದ್ಯಾಲಯದ ವ್ಯಾಪ್ತಿಯಲ್ಲಿಯೇ ಉಳಿಯಬೇಕು ಎಂದು ಸದನದಲ್ಲಿ ಶಾಸಕರು, ಮುಖ್ಯಮಂತ್ರಿ ಗಮನ ಸೆಳೆದಿದ್ದೇವೆ. ಆಗ ಪ್ರಸ್ತಾವನೆ ಪರಿಶೀಲನೆಯಲ್ಲಿದೆ ಎಂದು ಉತ್ತರ ಕೊಟ್ಟಿದ್ದಾರೆ. ಆದರೆ ರಾತೋರಾತ್ರಿ ಮಂಡ್ಯ ವಿಶ್ವವಿದ್ಯಾಲಯಕ್ಕೆ ಸೇರಿಸಿ ಬಿಲ್ ಪಾಸ್ ಮಾಡಿದ್ದಾರೆ ಎಂದು ದೂರಿದರು.

ADVERTISEMENT

ಈ ಸಂಬಂಧ ರಾಜ್ಯಪಾಲರಿಗೆ ಸಹಿ ಹಾಕಲು ಕಳುಹಿಸಿದ್ದಾರೆ. ಈ ಪ್ರಸ್ತಾವಕ್ಕೆ ಸಹಿ ಹಾಕದಂತೆ ರಾಜ್ಯಪಾಲರಿಗೆ ಈಗಾಗಲೇ ಮನವಿ ನೀಡಲಾಗಿದೆ. ರಾಜ್ಯಪಾಲರಿಗೆ ಮತ್ತೊಂದು ಮನವಿ ಸಲ್ಲಿಸಲಾಗುವುದು ಎಂದು ತಿಳಿಸಿದರು.

ಹಾಸನ ಕೃಷಿ ಕಾಲೇಜಿನ ಬೆಳವಣಿಗೆಗೆ ಹಾಗೂ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಹೊಸ ಕೋರ್ಸ್‌ಗಳನ್ನು ತರಲು ಕೇಂದ್ರ ಕೃಷಿ ಸಚಿವ ಶಿವರಾಜ್‌ ಸಿಂಗ್‌ ಅವರಿಗೆ, ಎಚ್.ಡಿ. ದೇವೇಗೌಡರು ಪತ್ರ ಬರೆದಿದ್ದಾರೆ. ಕೃಷಿ ಕಾಲೇಜಿನ ಅಭಿವೃದ್ಧಿಗೆ ನಾವು ಪ್ರಯತ್ನಿಸುತ್ತಿರುವ ನಡುವೆ ರಾಜ್ಯ ಸರ್ಕಾರದ ಈ ರೀತಿಯ ಕ್ರಮಗಳು ಸರಿಯಲ್ಲ’ ಎಂದು ಹೇಳಿದರು.

‘20 ವರ್ಷಗಳಿಂದ ಕೃಷಿ ಕಾಲೇಜು, ಬೆಂಗಳೂರಿನ ಜಿಕೆವಿಕೆಯಲ್ಲಿಯೇ ಇದೆ. ಇದನ್ನು ಮಂಡ್ಯ ವಿಶ್ವವಿದ್ಯಾಲಯಕ್ಕೆ ಸೇರಿಸಲು ನಾವು ಬಿಡುವುದಿಲ್ಲ. ಬಿಜೆಪಿ ಶಾಸಕರು ನಾವು ಸೇರಿ ಸದನದಲ್ಲಿ ಹೋರಾಟ ಮಾಡುತ್ತೇವೆ’ ಎಂದು ರೇವಣ್ಣ ಎಚ್ಚರಿಸಿದರು‌.

ಬಿಜೆಪಿಯ 18 ಶಾಸಕರನ್ನು ವಿಧಾನಸಭೆಯಿಂದ ಅಮಾನತು ಮಾಡಿರುವುದು ಸರಿಯಲ್ಲ. ಸಣ್ಣಪುಟ್ಟ ವಿಚಾರಕ್ಕೆ ಈ ರೀತಿ ಮಾಡುವುದು ಬೇಡ. ಅಮಾನತು ಕೂಡಲೇ ರದ್ದು ಮಾಡಬೇಕು.
ಎಚ್.ಡಿ. ರೇವಣ್ಣ ಶಾಸಕ

ಹಾಲಿನ ದರ ಏರಿಕೆ: ಸರ್ಕಾರಕ್ಕೆ ಬಿಟ್ಟಿದ್ದು

‘ಹಾಲಿನ ದರ ಏರಿಕೆಗೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಹಾಗೂ ಸಂಬಂಧಿಸಿದ ಸಚಿವರಿಗೆ ಅಗತ್ಯ ಮಾಹಿತಿ ನೀಡಿದ್ದೇವೆ. ಏನು ಮಾಡಬೇಕು ಎಂಬುದು ಸರ್ಕಾರಕ್ಕೆ ಬಿಟ್ಟಿದ್ದು’ ಎಂದು ಹಾಸನ ಹಾಲು ಉತ್ಪಾದಕರ ಸಹಕಾರ ಸಂಘಗಳ ಒಕ್ಕೂಟದ ಅಧ್ಯಕ್ಷರೂ ಆದ ಎಚ್‌.ಡಿ. ರೇವಣ್ಣ ತಿಳಿಸಿದರು.

‘ಜಿಲ್ಲೆಯಲ್ಲಿ 14 ಲಕ್ಷ ಲೀಟರ್ ಹಾಲು ಸಂಗ್ರಹವಾಗುತ್ತಿದೆ. ಅದರಲ್ಲಿ ಎರಡೂವರೆ ಲಕ್ಷ ಲೀಟರ್‌ ಮಾರಾಟ ಮಾಡಲಾಗುತ್ತಿದೆ. 12 ಲಕ್ಷ ಲೀಟರ್ ಪರಿವರ್ತನೆಗೆ ಕಳುಹಿಸಲಾಗುತ್ತಿದೆ. ಒಂದು ಲೀಟರ್‌ ಹಾಲು ಪರಿವರ್ತನೆಗೆ ಕಳುಹಿಸಿದರೆ ₹2.50 ರಿಂದ ₹3 ನಷ್ಟ ಆಗುತ್ತದೆ. ಈ ಎಲ್ಲ ಮಾಹಿತಿಯನ್ನು ಸರ್ಕಾರಕ್ಕೆ ಕೊಡಲಾಗಿದೆ’ ಎಂದರು. ‘ಹಾಲಿನ ದರ ಎಷ್ಟು ಹೆಚ್ಚಳ ಮಾಡಬೇಕು? ರೈತರಿಗೆ ಎಷ್ಟು ದರ ಕೊಡಬೇಕು? ಸಹಾಯಧನ ವಿತರಣೆ ಕುರಿತಂತೆ ಸರ್ಕಾರವೇ ಅಗತ್ಯ ಕ್ರಮ ಕೈಗೊಳ್ಳಬೇಕಿದೆ. ಮುಖ್ಯಮಂತ್ರಿ ನಿರ್ದೇಶನದಂತೆ ಕ್ರಮ ಕೈಗೊಳ್ಳುತ್ತೇವೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.