ಹಳೇಬೀಡು: ಮೂಡಿಗೆರೆ ತೋಟಗಾರಿಕಾ ಮಹಾವಿದ್ಯಾಲಯದ ಅಂತಿಮ ವರ್ಷದ ಪದವಿ ವಿದ್ಯಾರ್ಥಿಗಳಿಗಾಗಿ ಹಳೇಬೀಡು ಭಾಗದ 6 ಗ್ರಾಮಗಳಲ್ಲಿ ಆಯೋಜಿಸಿರುವ ಗ್ರಾಮೀಣ ಕಾರ್ಯಾನುಭವ ಶಿಬಿರಗಳಲ್ಲಿ ಕೃಷಿ ಮಾಹಿತಿ ಕೇಂದ್ರಗಳು ರೈತರ ಗಮನ ಸೆಳೆಯುತ್ತಿವೆ.
ಮೂರು ವರ್ಷದ ಪದವಿಯಲ್ಲಿ ಕಲಿತಿರುವ ಕೃಷಿ ಸಂಬಂಧಿಸಿದ ಮಾಹಿತಿ, ಹೊಸ ತಂತ್ರಜ್ಞಾನವನ್ನು ತಿಳಿಸುವ ಉದ್ದೇಶದಿಂದ ವಿದ್ಯಾರ್ಥಿಗಳು ಮಾಹಿತಿ ಕೇಂದ್ರಗಳನ್ನು ಸ್ಥಾಪಿಸಿದ್ದಾರೆ. ಕೃಷಿ ಕ್ಷೇತ್ರ ವಿಸ್ತಾರವಾಗಿ ಬೆಳೆದಿದೆ. ಹಳೆಯ ಪದ್ದತಿಯನ್ನು ಉಳಿಸಿಕೊಂಡು, ಸುಧಾರಿತ ಹಾಗೂ ಹೈಟೆಕ್ ಪದ್ದತಿಗಳು ಕೃಷಿಯಲ್ಲಿ ಹಾಸು ಹೊಕ್ಕಾಗಿವೆ ಎಂಬುದನ್ನು ಮಾಹಿತಿ ಕೇಂದ್ರಗಳಲ್ಲಿ ರೂಪಿಸಲಾಗಿದೆ.
ವಿದ್ಯಾರ್ಥಿಗಳಿಗಾಗಿ ಅಲೆಮಾಚೇನಹಳ್ಳಿ, ಕೋಡಿಕೊಪ್ಪಲು, ಲಿಂಗಪ್ಪನಕೊಪ್ಪಲು, ದ್ಯಾವಪ್ಪನಹಳ್ಳಿ, ಚಟಚಟ್ಟಿಹಳ್ಳಿ ಹಾಗೂ ಮಾಯಗೊಂಡನಹಳ್ಳಿ ಗ್ರಾಮಗಳಲ್ಲಿ ಎರಡು ತಿಂಗಳ ಕಾರ್ಯಾನುಭವ ಶಿಬಿರ ನಡೆಯುತ್ತಿದೆ. ವಿದ್ಯಾರ್ಥಿಗಳು ಪ್ರಾಧ್ಯಾಪಕರ ಸಲಹೆ ಸಹಕಾರದೊಂದಿಗೆ ಪ್ರತಿದಿನ ಗುಂಪು ಚರ್ಚೆ, ರೈತರ ಜಮೀನಿನಲ್ಲಿ ಕಾರ್ಯಾಗಾರ, ವಿಚಾರ ಸಂಕಿರಣಗಳ ಮೂಲಕ ಕೃಷಿಯ ವಿವಿಧ ಆಯಾಮಗಳನ್ನು ರೈತರಿಗೆ ಮನವರಿಕೆ ಮಾಡುತ್ತಿದ್ದಾರೆ.
ಕೃಷಿ ಮಾಹಿತಿಯ ಮಾದರಿ, ಚಾರ್ಟ್ ಹಾಗೂ ಮಾಹಿತಿ ಫಲಕಗಳನ್ನು ಕೇಂದ್ರದಲ್ಲಿ ಅಳವಡಿಸಲಾಗಿದೆ. ಕೇಂದ್ರದ ಕೊಠಡಿ ಶುಚಿಗೊಳಿಸಿ, ಬಣ್ಣ ಬಳಿದು, ಗೋಡೆಗಳಲ್ಲಿ ಕೃಷಿಯ ಮಹತ್ವ ತಿಳಿಸುವ ಚಿತ್ರ ಮೂಡಿಸಲಾಗಿದೆ. ಶ್ರೇಷ್ಠ ಧಾನ್ಯ, ಕಾಳುಗಳ ರಾಶಿಯ ಸುತ್ತ ವಿವಿಧ ಕೃಷಿ ಉತ್ಪನ್ನಗಳನ್ನು ಜೋಡಿಸಿ ಪೂಜೆ ಮಾಡಲಾಗಿದೆ. ಇದರಿಂದ ಆಹಾರದ ಮಹತ್ವ ತಿಳಿಸಲಾಗುತ್ತಿದೆ. ಬಹುವಾರ್ಷಿಕ ಅಡಿಕೆ, ತೆಂಗು ಮಾವು ಮೊದಲಾದ ಹಣ್ಣಿನ ಬೆಳೆ ಮಾತ್ರವಲ್ಲದೇ, ತರಕಾರಿ ಬೆಳೆ ಬೆಳೆಯುವ ವಿಧಾನ, ತಳಿಗಳ ಆಯ್ಕೆ, ನಿರ್ವಹಣೆ ಹಾಗೂ ರೋಗ ಕೀಟ ನಿಯಂತ್ರಣದ ಕುರಿತು ಕೇಂದ್ರದಲ್ಲಿ ಮಾಹಿತಿ ನೀಡಲಾಗಿದೆ ಎಂದು ವಿದ್ಯಾರ್ಥಿನಿ ಅನ್ನಪೂರ್ಣ ತಿಳಿಸಿದರು.
ಅಜೋಲ ಮೊದಲಾದ ಜಲ ಕೃಷಿಯಿಂದಲೂ ಆದಾಯ ಕಾಣಬಹುದು. ಜಮೀನಿನಲ್ಲಿ ಕೆರೆ, ಕಟ್ಟೆ, ಬಾವಿ ಮಾಡಿಕೊಂಡು ನೀರು ನಿಲ್ಲಿಸಿ ಮೀನುಗಾರಿಕೆ ಸಹ ಮಾಡಬಹುದು. ಅಣಭೆ ಕೃಷಿ ವಿಧಾನ ಹಾಗೂ ಅನುಕೂಲವನ್ನು ಮಾಹಿತಿ ಕೇಂದ್ರದಲ್ಲಿ ತಿಳಿಸಲಾಗಿದೆ ಎಂದು ವಿದ್ಯಾರ್ಥಿ ಸುನಿಲ್ ಹೇಳಿದರು.
ಪ್ರಾಧ್ಯಾಪಕರಾದ ಡಾ.ಭರತ್ ಕುಮಾರ್ ಟಿ.ಪಿ., ಡಾ.ಕಿರಣ್ ಕುಮಾರ್ ಆರ್., ಡಾ.ರವಿ ಸಿ.ಎಸ್. ಮಾರ್ಗದರ್ಶನದಲ್ಲಿ ಮಾಹಿತಿ ಕೇಂದ್ರ ಆರಂಭಿಸಲಾಗಿದೆ ಎಂದು ವಿದ್ಯಾರ್ಥಿಗಳು ತಿಳಿಸಿದರು.
ಮಾಹಿತಿ ಕೇಂದ್ರದಲ್ಲಿ ರೈತರಿಗೆ ಉಪಯುಕ್ತ ವಿಷಯಗಳು ಲಭ್ಯವಾಗಿವೆ. ಕೇಂದ್ರದ ಒಳಹೊಕ್ಕು ಒಂದು ಸುತ್ತು ಹಾಕಿದರೆ ರೈತರ ಆರ್ಥಿಕ ಪರಿಸ್ಥಿತಿ ಸುಧಾರಿಸಿಕೊಳ್ಳುವ ಮಾಹಿತಿ ದೊರಕುತ್ತದೆ.–ಐಶ್ವರ್ಯ, ತೋಟಗಾರಿಕಾ ವಿದ್ಯಾರ್ಥಿನಿ
ತೋಟಗಾರಿಕಾ ವಿದ್ಯಾರ್ಥಿಗಳು ಕೃಷಿಗೆ ಪೂರಕವಾದ ಮಾಹಿತಿಯನ್ನು ಒಂದೇ ಕೋಣೆಯಲ್ಲಿ ಆಕರ್ಷಕವಾಗಿ ಸಂಗ್ರಹಿಸಿದ್ದಾರೆ. ಮಾಹಿತಿ ಕೇಂದ್ರ ಜ್ಞಾನ ಭಂಡಾರದ ನಿಧಿಯಾಗಿದೆ.–ದಿವಾಕರ, ಅಲೆಮಾಚೇನಹಳ್ಳಿ ರೈತ
ಡ್ರೋನ್ ಔಷಧ ಸಿಂಪಡಣೆ
ಡ್ರೋನ್ ಮೂಲಕ ತೋಟಗಳಿಗೆ ಔಷಧ ಸಿಂಪಡಣೆ ಮಾಡುವುದರಿಂದ ಸಮರ್ಪಕವಾಗಿ ಬೆಳೆಗಳಿಗೆ ಔಷಧ ದೊರಕುತ್ತದೆ. ರೋಗ ಕೀಟ ನಿಯಂತ್ರಣಕ್ಕೆ ಅನುಕೂಲವಾಗುತ್ತದೆ ಎಂಬುದು ಮಾಹಿತಿ ಕೇಂದ್ರದಲ್ಲಿ ತಿಳಿಸಲಾಗಿದೆ. ತೋಟದಲ್ಲಿಯೂ ವಿದ್ಯಾರ್ಥಿಗಳು ವಿಜ್ಞಾನಿಗಳ ಸಹಾಯದಿಂದ ಪ್ರಾತ್ಯಕ್ಷಿಕೆ ತೋರಿಸುತ್ತಿದ್ದಾರೆ. ಪುತ್ತೂರಿನಿಂದ ಬಂದಿರುವ ವಿಜ್ಞಾನಿಗಳು ಡ್ರೋನ್ ಚಾಲನೆ ಮಾಡುವುದು ನಿಯಂತ್ರಿಸುವುದು ಹಾಗೂ ಔಷಧ ಸಿಂಪಡಣೆ ಮಾಡುವ ಕುರಿತು ಪ್ರಾಯೋಗಿಕ ತರಬೇತಿ ನೀಡಿದರು. ತೋಟಗಳಲ್ಲಿ ಪುಟ್ಟ ವಿಮಾನ ಹಾರಾಡಿದ್ದನ್ನು ನೋಡಿ ರೈತರು ಹರ್ಷ ವ್ಯಕ್ತಪಡಿಸಿದರು ಎಂದು ವಿದ್ಯಾರ್ಥಿ ವಿನಯ್ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.