ADVERTISEMENT

ಅಗ್ರಿಗೋಲ್ಡ್‌ ಸಂಸ್ಥೆ: ಸಾವಿರ ಕೋಟಿ ವಂಚನೆ

ಪರಿಹಾರದ ಹಣಕ್ಕೆ ಆಗ್ರಹಿಸಿ ಫೆ.1ರಂದು ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 29 ಜನವರಿ 2019, 13:01 IST
Last Updated 29 ಜನವರಿ 2019, 13:01 IST
ಎಂ.ಸಿ.ಡೋಂಗ್ರೆ
ಎಂ.ಸಿ.ಡೋಂಗ್ರೆ   

ಹಾಸನ : ಅಗ್ರಿಗೋಲ್ಡ್ ಸಂಸ್ಥೆಯಿಂದ ವಂಚನೆ ಒಳಗಾಗಿರುವ ಗ್ರಾಹಕರು ಹಾಗೂ ಏಜೆಂಟರಿಗೆ ಪರಿಹಾರ ನೀಡುವಂತೆ ಆಗ್ರಹಿಸಿ ಫೆ. 1ರಂದು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಅಗ್ರಿಗೋಲ್ಡ್‌ ಕಸ್ಟಮರ್ ಮತ್ತು ಏಜೆಂಟ್ ವೆಲ್ ಫೇರ್ ಅಸೋಸಿಯೇಷನ್‌ ಜಿಲ್ಲಾ ಘಟಕದ ಗೌರವಾಧ್ಯಕ್ಷ ಎಂ.ಸಿ.ಡೋಂಗ್ರೆ ಹೇಳಿದರು.

‘1995ರಲ್ಲಿ ಆರಂಭವಾದ ಸಂಸ್ಥೆ ಅಂದಾಜು 8.50 ಲಕ್ಷ ಗ್ರಾಹಕರಿಂದ ಸುಮಾರು ₹ 2,500 ಕೋಟಿ ಹಣವನ್ನು ಠೇವಣಿಯಾಗಿ ಸಂಗ್ರಹಿಸಿತ್ತು. ದೇಶದ ಎಂಟು ರಾಜ್ಯಗಳಲ್ಲಿ ಸಂಸ್ಥೆಯ ಸುಮಾರು 32 ಲಕ್ಷ ಖಾತೆ ಹೊಂದಿದ್ದು, ಸುಮಾರು ₹ 7623 ಕೋಟಿ ಹಣವನ್ನು ಏಜೆಂಟರು ಹಾಗೂ ಗ್ರಾಹಕರಿಗೆ ಪಾವತಿಸಬೇಕಾಗಿದೆ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

‘ಸಂಸ್ಥೆಯು ದಿವಾಳಿಯಾಗಿರುವ ಹಿನ್ನೆಲೆಯಲ್ಲಿ ಏಜೆಂಟರು ಹಾಗೂ ಗ್ರಾಹಕರು ಲಕ್ಷಾಂತರ ರೂಪಾಯಿ ಹಣ ಕಳೆದುಕೊಂಡಿದ್ದಾರೆ. ಇದರಿಂದಾಗಿ 105 ಮಂದಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ರಾಜ್ಯ ಸರ್ಕಾರ ಸಂಸ್ಥೆಗೆ ಸೇರಿದ ಸ್ಥಿರಾಸ್ತಿಗಳನ್ನು ವಶಪಡಿಸಿಕೊಂಡಿದೆ. ಇದರ ಬೆಲೆ ಕೇವಲ ₹ 500 ಕೋಟಿಯಾಗಿದ್ದು, ಕರ್ನಾಟಕದ ಗ್ರಾಹಕರಿಗೆ ಸುಮಾರು ₹ 2,500 ಕೋಟಿ ಹಾಗೂ ಜಿಲ್ಲೆಯ ಸುಮಾರು 500 ಜನ ಏಜೆಂಟರಿಗೆ ಅಂದಾಜು ₹ 500 ಕೋಟಿಯಷ್ಟು ಹಣ ಸಂಸ್ಥೆಯಿಂದ ಸಿಗಬೇಕಾಗಿದೆ ಎಂದು ಮಾಹಿತಿ ನೀಡಿದರು.

ADVERTISEMENT

ಆಂಧ್ರ ಪ್ರದೇಶದಲ್ಲಿ ಕೇಂದ್ರ ಕಚೇರಿ ಹೊಂದಿರುವ ಸಂಸ್ಥೆಯ ಆಸ್ತಿಗಳನ್ನು ಅಲ್ಲಿನ ಸರ್ಕಾರ ಮುಟ್ಟುಗೋಲು ಹಾಕಿಕೊಂಡಿದೆ. ಈ ಆಸ್ತಿಗಳನ್ನು ಅಲ್ಲಿನ ಸರ್ಕಾರ ಮಾರಾಟ ಮಾಡಬೇಕು. ಆ ರೀತಿ ಬಂದ ಹಣದಿಂದ ಕರ್ನಾಟಕದಲ್ಲಿ ವಂಚನೆಗೆ ಒಳಗಾದವರಿಗೆ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು.

ಆಂಧ್ರಪ್ರದೇಶದಲ್ಲಿ ಭಾರತ ಕಮ್ಯುನಿಸ್ಟ್ ಪಕ್ಷದ ನೇತೃತ್ವದಲ್ಲಿ ತೀವ್ರ ಹೋರಾಟ ನಡೆಸಿದ್ದರ ಪರಿಣಾಮವಾಗಿ ಅಲ್ಲಿನ ಸರ್ಕಾರ ಈಗ ₹ 5000 ಕ್ಕಿಂತ ಕಡಿಮೆ ಮೊತ್ತದ ಠೇವಣಿದಾರರಿಗೆ ಪರಿಹಾರ ನೀಡಲು ₹ 300 ಕೋಟಿ ಮೀಸಲಿರಿಸಿದೆ ಹಾಗೂ ಆತ್ಮಹತ್ಯೆಗೊಳಗಾದ ಕುಟುಂಬಕ್ಕೆ ತಲಾ ₹ 5 ಲಕ್ಷ ಪರಿಹಾರ ಘೋಷಿಸಿದೆ. ರಾಜ್ಯದಲ್ಲೂ ಆಂಧ್ರಪ್ರದೇಶ ಮಾದರಿಯಲ್ಲೇ ಪರಿಹಾರ ಸಿಗಬೇಕೆಂದು ಒತ್ತಾಯಿಸಿ ಗ್ರಾಹಕರು ಹಾಗೂ ಏಜೆಂಟರು ಫೆ. 1ರಂದು ನಗರದ ಹೇಮಾವತಿ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿಗೆ ಮೆರವಣಿಗೆಯಲ್ಲಿ ತೆರಳಿ ಧರಣಿ ನಡೆಸುವರು. ಹೋರಾಟದಲ್ಲಿ ವಂಚನೆಗೊಳಗಾಗಿರುವ ಎಲ್ಲರೂ ಭಾಗವಹಿಸಬೇಕೆಂದು ಮನವಿ ಮಾಡಿದರು.

ವೆಲ್ ಫೇರ್‌ಅಸೋಸಿಯೇಷನ್ ಜಿಲ್ಲಾ ಅಧ್ಯಕ್ಷ ಯೋಗೀಶ್, ಖಜಾಂಚಿ ಗಣೇಶ್, ಉಪ ಕಾರ್ಯದರ್ಶಿ ಎಂ.ಸಿ.ಮಂಜೇಗೌಡ, ಸದಸ್ಯರಾದ ಮೋಹನ್ ಕುಮಾರ್, ಗಂಗಾಧರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.