ADVERTISEMENT

ಅಕ್ರಮ ಮರಳು ಸಂಗ್ರಹದಲ್ಲಿ ಪಾತ್ರವಿಲ್ಲ, ಆರೋಪ ಸಾಬೀತಾದರೆ ರಾಜೀನಾಮೆ: ಸುಪ್ರದೀಪ್

​ಪ್ರಜಾವಾಣಿ ವಾರ್ತೆ
Published 28 ಜನವರಿ 2019, 12:54 IST
Last Updated 28 ಜನವರಿ 2019, 12:54 IST
ಸುಪ್ರದೀಪ್ ಯಜಮಾನ್‌
ಸುಪ್ರದೀಪ್ ಯಜಮಾನ್‌   

ಹಾಸನ: ‘ಸಕಲೇಶಪುರ ತಾಲ್ಲೂಕಿನ ಅರೆಕೆರೆ ಗ್ರಾಮದಲ್ಲಿ ಓಷಿಯನ್ ಕನ್ ಸ್ಟ್ರಕ್ಷನ್ ಕಂಪನಿ ಅಕ್ರಮವಾಗಿ ಮರಳು ದಾಸ್ತಾನು ಮಾಡಿದ್ದ ವಿಚಾರದಲ್ಲಿ ನನ್ನ ಪಾತ್ರವಿಲ್ಲ. ಆರೋಪ ಸಾಬೀತಾದರೆ ಸದಸ್ಯ ಸ್ಥಾನಕ್ಕೆ ರಾಜೀನಾಮೆ ನೀಡಲು ಸಿದ್ಧ’ ಎಂದು ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷ ಸುಪ್ರದೀಪ್ ಯಜಮಾನ್ ಸವಾಲು ಹಾಕಿದರು.

‘ ಜ. 10ರಂದು ಅರೆಕೆರೆ ಗ್ರಾಮಕ್ಕೆ ಭೇಟಿ ನೀಡಿದ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ, ರಾಜಧನ ಕಟ್ಟದೆ ಅಕ್ರಮವಾಗಿ ದಾಸ್ತಾನು ಮಾಡಿದ್ದ ಮರಳನ್ನು ವಶಪಡಿಸಿಕೊಂಡಿದ್ದರು. ಮರಳು ಸಂಗ್ರಹಕ್ಕೆ ನಾನು ಶಿಫಾರಸ್ಸು ಮಾಡಿದ್ದೇನೆ ಎಂದು ಕಂಪನಿಯ ಭದ್ರತಾ ಸಿಬ್ಬಂದಿ ನೀಡಿದ ಮಾಹಿತಿ ಆಧರಿಸಿ ಡಿ.ಸಿ ನೋಟಿಸ್‌ ನೀಡಿದ್ದಾರೆ. ಆದರೆ, ಗ್ರಾಮದ ಜಮೀನು ಸೌಭಾಗ್ಯ ಎಂಬುವರಿಗೆ ಸೇರಿದ್ದು, ಅಲ್ಲಿ ದಾಸ್ತಾನು ಮಾಡಿದ್ದ ಮರಳಿಗೂ ನನಗೂ ಯಾವುದೇ ಸಬಂಧ ಇಲ್ಲ’ ಎಂದು ಸುದ್ದಿಗೋಷ್ಠಿಯಲ್ಲಿ ಸ್ಪಷ್ಟ ಪಡಿಸಿದರು.

‘ಆಧಾರ ರಹಿತವಾಗಿ ನೋಟಿಸ್‌ ನೀಡಿರುವುದು ಮನಸ್ಸಿಗೆ ನೋವುಂಟು ಮಾಡಿದೆ. ಅಕ್ರಮವಾಗಿ ಮರಳು ಸಂಗ್ರಹ ಮಾಡುವ ಅವಶ್ಯಕತೆ ನನಗಿಲ್ಲ. ನೋಟಿಸ್ ಗೆ ಉತ್ತರ ನೀಡಿದ್ದೇನೆ. ಪ್ರಾಮಾಣಿಕವಾಗಿ ಜಿಲ್ಲಾ ಪಂಚಾಯಿತಿ ಸದಸ್ಯನಾಗಿ ಕೆಲಸ ಮಾಡುತ್ತಿದ್ದೇನೆ. ಇಷ್ಟು ವರ್ಷದ ಸಾರ್ವಜನಿಕ ಜೀವನದಲ್ಲಿ ಯಾವುದೇ ಕಪ್ಪುಚುಕ್ಕೆಗಳಿಲ್ಲ’ ಎಂದು ಹೇಳಿದರು.

ADVERTISEMENT

‘ನನ್ನ ಮೇಲಿನ ಆರೋಪಕ್ಕೆ ಸಂಬಂಧಿಸಿದಂತೆ ಯಾವುದಾದರೂ ದಾಖಲೆಗಳಿದ್ದರೆ ಬಿಡುಗಡೆ ಮಾಡಲಿ. ಕೆಳ ಹಂತದ ಕೆಲ ಅಧಿಕಾರಿಗಳ ತಪ್ಪು ಮಾಹಿತಿಯಿಂದಾಗಿ ಈ ರೀತಿ ಆಗಿದೆ’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.