ADVERTISEMENT

ರಾಷ್ಟ್ರೀಯ ಪಕ್ಷಗಳ ಹುರುಳಿಲ್ಲದ ಆರೋಪ: ರಘು ಟೀಕಾ ಪ್ರಹಾರ

​ಪ್ರಜಾವಾಣಿ ವಾರ್ತೆ
Published 6 ಡಿಸೆಂಬರ್ 2021, 4:58 IST
Last Updated 6 ಡಿಸೆಂಬರ್ 2021, 4:58 IST
ಹೊಂಗೆರೆ ರಘು
ಹೊಂಗೆರೆ ರಘು   

ಹಾಸನ: ವಿಧಾನ ಪರಿಷತ್ ಚುನಾವಣೆಯಲ್ಲಿ ಸೋಲಿನ ಭೀತಿಯಿಂದ ಕಾಂಗ್ರೆಸ್ –ಬಿಜೆಪಿ, ಜೆಡಿಎಸ್ ವಿರುದ್ಧ ಇಲ್ಲ ಸಲ್ಲದ ಆರೋಪ ಮಾಡುತ್ತಿವೆ ಎಂದು ಜಿಲ್ಲಾ ಜೆಡಿಎಸ್ ವಕ್ತಾರ ರಘು ಹೊಂಗೆರೆ ಟೀಕಿಸಿದ್ದಾರೆ.

ಕಾಂಗ್ರೆಸ್ ಯುದ್ದಕ್ಕೆ ಮುಂಚೆಯೇ ಶಸ್ತ್ರ ತ್ಯಾಗ ಮಾಡಿದರೆ, ಬಿಜೆಪಿ ಪಟಾಲಂ ಮಿಮಿಕ್ರಿ ಮಾಡುವುದರಲ್ಲಿ ತಲ್ಲೀನವಾಗಿದೆ. ಸ್ಥಳೀಯ ಸಂಸ್ಥೆಗಳಿಂದ ಚುನಾಯಿತರಾಗಿರುವ ಶೇ. 80 ರಷ್ಟು ಮಂದಿ ಜೆಡಿಎಸ್ ಪರವಾಗಿದ್ದಾರೆ. ಒಟ್ಟು 3617 ಮತದಾರರಿದ್ದು, ಇವರಲ್ಲಿ 2400 ಹೆಚ್ಚು ಜೆಡಿಎಸ್ ಬೆಂಬಲಿತ ಸದಸ್ಯರಿದ್ದಾರೆ. ಎರಡೂ ರಾಷ್ಟ್ರೀಯ ಪಕ್ಷಗಳ ಒಟ್ಟು ಬೆಂಬಲಿತ ಸದಸ್ಯರಿರುವುದು 1217 ಮಂದಿ ಮಾತ್ರ ಎಂದು ಹೇಳಿದರು.

ಕುಟುಂಬ ರಾಜಕಾರಣದ ಬಗ್ಗೆ ಮಾತನಾಡುವ ಕಾಂಗ್ರೆಸ್ ನಾಯಕರ ಕುಟುಂಬದಲ್ಲಿ ಒಬ್ಬರೇ ರಾಜಕಾರಣ ಮಾಡುತ್ತಿದ್ದಾರೆಯೇ ಎಂದು ಪ್ರಶ್ನಿಸಿರುವ ಅವರು, ಜಿಲ್ಲೆಯ ಉಸ್ತುವಾರಿವಹಿಸಿಕೊಂಡಿರುವ ಸಂಸದ ಡಿ.ಕೆ.ಸುರೇಶ್ ಸಹೋದರರ ಪೈಕಿ ಒಬ್ಬರು ರಾಜೀನಾಮೆ ನೀಡಿನಂತರ ಮಾತನಾಡಲಿ ಎಂದು ತಿರುಗೇಟು ನೀಡಿದ್ದಾರೆ.

ADVERTISEMENT

ಅಂತೆಯೇ ವಿಪಕ್ಷ ನಾಯಕರಾದ ಸಿದ್ದರಾಮಯ್ಯ ಇಲ್ಲವೇ ಅವರ ಪುತ್ರ ಡಾ.ಯತೀಂದ್ರ, ಹಿರಿಯ ನಾಯಕರಾದ ಮಲ್ಲಿಕಾರ್ಜುನ ಖರ್ಗೆ ಪುತ್ರ ಪ್ರಿಯಾಂಕ ಖರ್ಗೆ ಹೀಗೆ ಕಾಂಗ್ರೆಸ್ ಕುಟುಂಬ ರಾಜಕಾರಣ ಹೇಳುತ್ತಾ ಹೋದರೆ ಪಟ್ಟಿ ದೊಡ್ಡದಾಗಿ ಬೆಳೆಯಲಿದೆ. ಅದೇ ರೀತಿ ಯಡಿಯೂರಪ್ಪ ಅಥವಾ ಅವರ ಪುತ್ರರು, ಜಾರಕಿಹೊಳಿ ಸಹೋದರರು‌, ಜಗದೀಶ್ ಶೆಟ್ಟರ್ ಕುಟುಂಬದಲ್ಲಿ ಅನೇಕರು ಸಕ್ರಿಯ ರಾಜಕೀಯದಲ್ಲಿದ್ದಾರೆ. ಇವರಲ್ಲಿ ಒಬ್ಬೊಬ್ಬರು ರಾಜಕಾರಣ ಮಾಡಲಿ. ಆ ನಂತರ ಜೆಡಿಎಸ್ ಬಗ್ಗೆ ಮಾತನಾಡಲಿ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.