
ಆಲೂರು: ತಾಲ್ಲೂಕಿಗೆ ವಿದ್ಯುತ್ ಸೌಲಭ್ಯಕ್ಕೆ ಹಲವು ದಶಕಗಳಿಂದ ಹಿಡಿದಿದ್ದ ಗ್ರಹಣ ನಿವಾರಣೆ ಆಗುವ ಸಂದರ್ಭ ಬಂದೊದಗಿದೆ. ತಾಲ್ಲೂಕಿನ ಪಾಳ್ಯ ಹೋಬಳಿ ದಾನಿಹಳ್ಳಿ ಗ್ರಾಮದಲ್ಲಿ 66/11 ಕೆ.ವಿ. ವಿದ್ಯುತ್ ವಿತರಣಾ ಉಪಕೇಂದ್ರ ನಿರ್ಮಾಣಕ್ಕೆ ಶಾಸಕ ಸಿಮೆಂಟ್ ಮಂಜು ಭೂಮಿಪೂಜೆ ನೆರವೇರಿಸಿದ್ದಾರೆ.
ಈ ಜಾಗದಲ್ಲಿ ವಿದ್ಯುತ್ ವಿತರಣಾ ಉಪ ಕೇಂದ್ರ ಸ್ಥಾಪಿಸುವುದರಿಂದ ಪಾಳ್ಯ ಹೋಬಳಿಯ ಎಲ್ಲ ಹಳ್ಳಿಗಳು ಸೇರಿದಂತೆ ಬೈರಾಪುರದವರೆಗೆ ಸುಮಾರು 60 ಕ್ಕೂ ಹೆಚ್ಚು ಹಳ್ಳಿಗಳಿಗೆ ವಿದ್ಯುತ್ ಸೌಲಭ್ಯ ನಿರಂತರವಾಗಿ ದೊರಕುತ್ತದೆ ಎಂದು ಅಂದಾಜಿಸಲಾಗಿದೆ.
ಈವರೆಗೆ ಈ ಹಳ್ಳಿಗಳಿಗೆ ಮಗ್ಗೆ ಉಪ ಕೇಂದ್ರದಿಂದ ಕೇಂದ್ರದಿಂದ ವಿದ್ಯುತ್ ಸರಬರಾಜಾಗುತ್ತಿದೆ. ಸಾಮರ್ಥ್ಯಕ್ಕಿಂತ ಹೆಚ್ಚು ಸಂಪರ್ಕ ಇರುವುದರಿಂದ, ದಿನದಲ್ಲಿ ಕನಿಷ್ಠ ಒಂದು ಗಂಟೆ ನಿರಂತರ ವಿದ್ಯುತ್ ಪಡೆಯುವುದು ಕಷ್ಟವಾಗಿದ್ದು, ಆಗಾಗ್ಗೆ ಅಡಚಣೆ ಎದುರಾಗುತ್ತಿದೆ. ಹೊಸ ಉಪ ಕೇಂದ್ರದಿಂದ ಹಳ್ಳಿಗಳಿಗೆ ಈ ಸಮಸ್ಯೆ ನಿವಾರಣೆ ಆಗುತ್ತೆ ಎಂಬ ಆಶಾಭಾವನೆ ರೈತರಲ್ಲಿ ಮೂಡಿದೆ.
ಸುಮಾರು 260ಕ್ಕೂ ಹೆಚ್ಚು ಹಳ್ಳಿಗಳಿರುವ ಆಲೂರು ತಾಲ್ಲೂಕಿನಲ್ಲಿ ಮಗ್ಗೆಯಲ್ಲಿ ಮಾತ್ರ ವಿದ್ಯುತ್ ವಿತರಣಾ ಕೇಂದ್ರವಿದೆ. ಆಲೂರು ಪಟ್ಟಣ ವ್ಯಾಪ್ತಿಯಲ್ಲಿ ಬರುವ ಸುಮಾರು 25ಕ್ಕೂ ಹೆಚ್ಚು ಹಳ್ಳಿಗಳಿಗೆ ಕಂದಲಿ ವಿತರಣಾ ಕೇಂದ್ರದಿಂದ ವಿದ್ಯುತ್ ಸರಬರಾಜು ಮಾಡಲಾಗುತ್ತಿದೆ.
ಆಲೂರು ತಾಲ್ಲೂಕು ಬಹುತೇಕ ರೈತರನ್ನು ಒಳಗೊಂಡಿದ್ದು, ಕೃಷಿಗಾಗಿ ಕೊಳವೆಬಾವಿ ಕೊರೆದಿದ್ದಾರೆ. ವಿದ್ಯುತ್ ಅನ್ನೇ ನಂಬಿದ್ದಾರೆ. ಆಗಾಗ ವಿದ್ಯುತ್ ಅಡಜಣೆ ಆಗುತ್ತಿರುವುದರಿಂದ ಕೃಷಿ ಕ್ಷೇತ್ರದಲ್ಲೂ ನಷ್ಟದ ಎದುರಿಸಬೇಕಾಗುತ್ತಿದೆ.
‘ತಾಲ್ಲೂಕಿಗೆ ಸದ್ಯ ಕಂದಲಿ, ಮಗ್ಗೆ ಕೇಂದ್ರಗಳಿಂದ ವಿದ್ಯುತ್ ಪಡೆಯಲಾಗುತ್ತಿತ್ತು. ದಾನಿಹಳ್ಳಿ ಕೇಂದ್ರದಿಂದ 12 ವಿತರಣೆ ಪಡೆಯಲಾಗುತ್ತದೆ. ಮುಂದಿನ ದಿನಗಳಲ್ಲಿ ವಿದ್ಯುತ್ ಸಮಸ್ಯೆ ನಿವಾರಣೆಯಾಗುತ್ತದೆ’ ಎನ್ನುತ್ತಾರೆ ಸೆಸ್ಕ್ ಕಾರ್ಯಪಾಲಕ ಎಂಜಿನಿಯರ್ ಶಿವಾನಂದ.
ದಾನಿಹಳ್ಳಿಯಲ್ಲಿ ವಿದ್ಯುತ್ ವಿತರಣಾ ಕೇಂದ್ರ ಆಗುತ್ತಿರುವುದರಿಂದ ಪಾಳ್ಯ ಹೋಬಳಿ ವ್ಯಾಪ್ತಿಯ 60ಕ್ಕೂ ಹೆಚ್ಚು ಹಳ್ಳಿಗಳ ರೈತರು ಮತ್ತು ಸೆಸ್ಕ್ ಸಿಬ್ಬಂದಿ ಮಧ್ಯೆ ಉಂಟಾಗುತ್ತಿರುವ ಘರ್ಷಣೆ ನಿಲ್ಲುತ್ತದೆ. ಶಾಸಕ ಸಿಮೆಂಟ್ ಮಂಜು ಸಹಕಾರಕ್ಕೆ ನಾವು ಚಿರ ಋಣಿ ಎಂದು ಪಾಳ್ಯದ ಸುದರ್ಶನ ಹಾಗೂ ವಿಜಯಕುಮಾರ್ ತಿಳಿಸಿದರು.
ಉಪ ಕೇಂದ್ರಕ್ಕೆ ಭೂಮಿಪೂಜೆ
7 ವರ್ಷಗಳ ಹಿಂದೆ ಶಾಸಕರಾಗಿದ್ದ ಎಚ್. ಕೆ. ಕುಮಾರಸ್ವಾಮಿ ವಿದ್ಯುತ್ ವಿತರಣಾ ಉಪ ಕೇಂದ್ರಗಳಿಗಾಗಿ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಿದ್ದರು. ಆದರೆ ಕೆಲವು ತಾಂತ್ರಿಕ ಅಡಚಣೆಯಿಂದ ಕಾಮಗಾರಿ ನನೆಗುದಿಗೆ ಬಿದ್ದಿತ್ತು. ಸದ್ಯ ಶಾಸಕ ಸಿಮೆಂಟ್ ಮಂಜು ಸಚಿವರು ಅಧಿಕಾರಿಗಳ ಸಹಕಾರದಿಂದ ದಾನಿಹಳ್ಳಿ ಗ್ರಾಮದಲ್ಲಿ ₹20 ಕೋಟಿ ವೆಚ್ಚದಲ್ಲಿ ಭೂಮಿಪೂಜೆ ನೆರವೇರಿಸಿರುವುದು ರೈತರ ಮೊಗದಲ್ಲಿ ಮಂದಹಾಸ ಮೂಡಿಸಿದೆ. ಭೂಮಿಪೂಜೆ ಸಮಾರಂಭದಲ್ಲಿ ಸೆಸ್ಕ್ ಕಾರ್ಯ ನಿರ್ವಾಹಕ ಎಂಜಿನಿಯರ್ ಶಿವಾನಂದ್ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ರವಿಕುಮಾರ್ ಪಾಳ್ಯ ಸೆಸ್ಕ್ ಜೆಇ ಶಶಿಕಿರಣ್ ತಾ. ಪಂ. ಕಾರ್ಯ ನಿರ್ವಹಣಾದಿಕಾರಿ ಸುಬ್ರಹ್ಮಣ್ಯ ಉಪ ತಹಶೀಲ್ದಾರ್ ಪ್ರಭಾಕರ್ ವಿಜಯಕುಮಾರ್ ನೇತ್ರಾವತಿ ಉಮಾ ರವಿಪ್ರಕಾಶ್ ಎ.ಎಚ್. ರಮೇಶ್ ರಘು ಪಾಳ್ಯ ಕೃಷ್ಣಮೂರ್ತಿ ಪಿಡಿಒ ದರ್ಶನ್ ಗುತ್ತಿಗೆದಾರ ಕಿರಣ್‍ಕುಮಾರ್ ಉಪಸ್ಥಿತರಿದ್ದರು.
ಅತಿ ಶೀಘ್ರದಲ್ಲಿ ಕೊಡಗೀಹಳ್ಳಿ ಬಳಿ ಮತ್ತೊಂದು ವಿದ್ಯುತ್ ವಿತರಣೆ ಕೇಂದ್ರ ಪ್ರಾರಂಭಿಸಲಾಗುವುದು. ಯೋಜನೆಗೆ ಸಹಕಾರ ನೀಡುತ್ತಿರುವ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಇಂಧನ ಸಚಿವ ಕೆ.ಜೆ. ಜಾರ್ಜ್ ಅವರಿಗೆ ಕೃತಜ್ಞತೆ ಸಲ್ಲಿಸುತ್ತೇನೆ.-ಸಿಮೆಂಟ್ ಮಂಜು, ಶಾಸಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.