ADVERTISEMENT

ಹಾಸನ | ಕಿರು ಉದ್ಯಮ ಸ್ಥಾಪಿಸಿ ಸ್ವಾವಲಂಬಿಗಳಾಗಿ: ಜಿಲ್ಲಾಧಿಕಾರಿ ಲತಾಕುಮಾರಿ

ಕಿರು ಆಹಾರ ಸಂಸ್ಕರಣಾ ಉದ್ಯಮಗಳ ನಿಯಮ ಬದ್ಧಗೊಳಿಸುವಿಕೆ: ಜಿಲ್ಲಾಧಿಕಾರಿ ಸಲಹೆ

​ಪ್ರಜಾವಾಣಿ ವಾರ್ತೆ
Published 10 ಸೆಪ್ಟೆಂಬರ್ 2025, 5:31 IST
Last Updated 10 ಸೆಪ್ಟೆಂಬರ್ 2025, 5:31 IST
ಹಾಸನದ ಜಿಲ್ಲಾ ಪಂಚಾಯಿತಿಯಲ್ಲಿ ಮಂಗಳವಾರ ಕಿರು ಉದ್ಯಮಿಗಳ ಮಳಿಗೆಗಳಿಗೆ ಭೇಟಿ ನೀಡಿದ ಜಿಲ್ಲಾಧಿಕಾರಿ ಕೆ.ಎಸ್‌. ಲತಾಕುಮಾರಿ ಮಾಹಿತಿ ಪಡೆದರು
ಹಾಸನದ ಜಿಲ್ಲಾ ಪಂಚಾಯಿತಿಯಲ್ಲಿ ಮಂಗಳವಾರ ಕಿರು ಉದ್ಯಮಿಗಳ ಮಳಿಗೆಗಳಿಗೆ ಭೇಟಿ ನೀಡಿದ ಜಿಲ್ಲಾಧಿಕಾರಿ ಕೆ.ಎಸ್‌. ಲತಾಕುಮಾರಿ ಮಾಹಿತಿ ಪಡೆದರು   

ಹಾಸನ: ರೈತ ಸಮುದಾಯ ಹಾಗೂ ಮಹಿಳೆಯರು ಸ್ವಾವಲಂಬಿಯಾಗಲು ಸರ್ಕಾರದಿಂದ ಸಬ್ಸಿಡಿ ಆಧಾರಿತ ಸಾಲ ಸೌಲಭ್ಯ ನೀಡಲಾಗುತ್ತಿದ್ದು, ಯೋಜನೆ ಲಾಭ ಪಡೆದು, ಶಿಸ್ತುಬದ್ಧವಾಗಿ ಉದ್ಯಮ ನಡೆಸಿಕೊಂಡು ಹೋದಲ್ಲಿ ಆರ್ಥಿಕ ಸಬಲೀಕರಣ ಆಗಲಿದೆ ಎಂದು ಜಿಲ್ಲಾಧಿಕಾರಿ ಕೆ.ಎಸ್. ಲತಾಕುಮಾರಿ ಹೇಳಿದರು.

ನಗರದ ಜಿಲ್ಲಾ ಪಂಚಾಯಿತಿ ಹೊಯ್ಸಳ ಸಭಾಂಗಣದಲ್ಲಿ ಮಂಗಳವಾರ ಆಯೋಜಿಸಿದ್ದ ಪ್ರಧಾನಮಂತ್ರಿಗಳ ಕಿರು ಆಹಾರ ಸಂಸ್ಕರಣಾ ಉದ್ಯಮಗಳ ನಿಯಮ ಬದ್ಧಗೊಳಿಸುವಿಕೆ (ಪಿಎಂಎಫ್ಎಂಇ) ಯೋಜನೆಯ ಜಿಲ್ಲಾ ಮಟ್ಟದ ಅರಿವು ಮೂಡಿಸುವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

‘ರಾಜ್ಯ ಸರ್ಕಾರ, ಕೆಪೆಕ್ ಸಹಯೋಗದೊಂದಿಗೆ ರೈತರು, ರೈತ ಮಹಿಳೆಯರು ಉದ್ಯಮ ಆರಂಭಿಸಲು ಜಾಗೃತಿ ಮೂಡಿಸುವ ಕಾರ್ಯಕ್ರಮವನ್ನು ನಡೆಸಲಾಗುತ್ತಿದೆ. ಇದು ಸರ್ಕಾರಿ ನೌಕರಿಯ ಕಾಲವಲ್ಲ. ಉದ್ಯಮ ಮಾಡುವವರಿಗೆ ಸೂಕ್ತ ಕಾಲ’ ಎಂದು ಅಭಿಪ್ರಾಯಪಟ್ಟರು.

ADVERTISEMENT

ರೈತರು ಕೇವಲ ಹೊಲ, ಗದ್ದೆ, ಬಿತ್ತನೆ ಮಾಡುವುದು, ಮಾರುಕಟ್ಟೆಯಲ್ಲಿ ಉತ್ಪನ್ನಗಳನ್ನು ಮಾರಾಟ ಮಾಡುವುದಷ್ಟೇ ಹಣ ಗಳಿಕೆ ಎಂದು ತಿಳಿಯಬಾರದು, ಎಷ್ಟೋ ಬಾರಿ ತಾವು ಬೆಳೆದ ಬೆಳೆ ರೋಗಕ್ಕೆ ತುತ್ತಾಗುತ್ತವೆ. ಬೆಳೆದ ಬೆಳೆಗೆ ಸೂಕ್ತ ಬೆಲೆ ಸಿಗುವುದಿಲ್ಲ, ಮತ್ತೊಂದೆಡೆ ಮಳೆ ಹಾಗೂ ನೀರಿನ ಕೊರತೆಯೂ ಎದುರಿಸಬೇಕಾಗುತ್ತದೆ. ಇಂತಹ ಸಂದರ್ಭದಲ್ಲಿ ಕಿರು ಸಾಲ ಪಡೆದು ರೈತರು ಆಹಾರ ಉತ್ಪನ್ನದಂತಹ ಉದ್ದಿಮೆ ಸ್ಥಾಪನೆ ಮಾಡಿದರೆ, ಪ್ರಗತಿ ಕಾಣಲು ಸಾಧ್ಯ. ಕೇವಲ ಕೃಷಿಯಲ್ಲಿಯೇ ಹೆಚ್ಚು ಲಾಭ ಪಡೆಯಲು ಆಗುವುದಿಲ್ಲ’ ಎಂದರು.

‘ಸಕಲೇಶಪುರ ತಾಲ್ಲೂಕಿನಲ್ಲಿ ಕಾಫಿ, ಕಾಳುಮೆಣಸು, ಏಲಕ್ಕಿ ಬೆಳೆದರೆ, ಅರಸೀಕೆರೆ, ಚನ್ನರಾಯಪಟ್ಟಣದಲ್ಲಿ ತೆಂಗಿನಕಾಯಿ ಬೆಳೆ ಹೆಚ್ಚು ಬೆಳೆಯಲಾಗುತ್ತದೆ. ಇಲ್ಲಿ ಎಣ್ಣೆ ಉತ್ಪನ್ನ, ಸಕಲೇಶಪುರ ಭಾಗದಲ್ಲಿ ಕಾಫಿ ಜೊತೆಗೆ ಚಿಕ್ಕಿ ಸೇರಿದಂತೆ ಕರಕುಶಲ ಉತ್ಪನ್ನಗಳ ಕೌಶಲವನ್ನು ಪ್ರಚಾರಪಡಿಸಿದರೆ ಹೆಚ್ಚಿನ ಲಾಭವಿದೆ. ಉದ್ಯಮ ಸ್ಥಾಪನೆಯಾದರೆ ಉದ್ಯೋಗ ಸಮಸ್ಯೆ ನೀಗಲಿದ್ದು, ಅರ್ಹ ಫಲಾನುಭವಿಗಳು ಇದರ ಸೌಲಭ್ಯ ಪಡೆಯಬೇಕು’ ಎಂದರು.

ಜಿಲ್ಲೆಯಲ್ಲಿ ಈ ಯೋಜನೆಯನ್ನು ಹೆಚ್ಚು ಪ್ರಚಾರಪಡಿಸಲು ಕೆಪೆಕ್ ಆಸಕ್ತವಾಗಿದೆ. ಪ್ರತಿ ಗ್ರಾಮದಲ್ಲೂ ಪ್ರಚಾರ ಮಾಡಲು ಕ್ಷೇತ್ರ ಅಧಿಕಾರಿ ನಿಯೋಜಿಸಬೇಕು. ಸಹಾಯ ಕೇಂದ್ರ ಸ್ಥಾಪನೆ ಮಾಡಬೇಕು. ಈ ಮೂಲಕ ಉದ್ಯಮ ಸ್ಥಾಪನೆಗೆ ಶಕ್ತಿ ತುಂಬ ಕೆಲಸ ಆಗಬೇಕಿದೆ ಎಂದರು.

ಕೃಷಿ ಇಲಾಖೆ ಜಂಟಿ ನಿರ್ದೇಶಕ ರಮೇಶ್ ಕುಮಾರ್, ತೋಟಗಾರಿಕೆ ಉಪ ನಿರ್ದೇಶಕ ಯೋಗೇಶ್, ಶಿವಕುಮಾರ್, ಲೀಡ್ ಬ್ಯಾಂಕ್ ನ ವ್ಯವಸ್ಥಾಪಕಿ ಲತಾ, ಕೃಷಿ ಇಲಾಖೆ ಉಪ ನಿರ್ದೇಶಕಿ ಕೋಕಿಲಾ, ಕೃಷಿ ಅಧಿಕಾರಿಗಳಾದ ಮಂಜುನಾಥ್,‌ ಶಿವಕುಮಾರ್, ನವೀನ್ ಕುಮಾರ್ ಸೇರಿದಂತೆ ಇತರೆ ಅಧಿಕಾರಿಗಳು ಭಾಗವಹಿಸಿದ್ದರು.

60: 40ರ ಅನುಪಾತದಲ್ಲಿ ₹ 15 ಲಕ್ಷದವರೆಗೂ ಸಾಲ ಉದ್ದಿಮೆ ಸ್ಥಾಪನೆಗೆ 560 ಮಂದಿ ನೋಂದಣಿ ಆಗಿದ್ದು, 150 ಮಂದಿ ಆಯ್ಕೆ 5 ಮಂದಿಗೆ ಸಾಲ ಮಂಜೂರು: 150ಕ್ಕೂ ಹೆಚ್ಚು ಮಂದಿಗೆ ಸೌಲಭ್ಯದ ಗುರಿ

ಈ ಯೋಜನೆಯಡಿ ಗ್ರಾಮದಲ್ಲಿಯೇ ಮಹಿಳೆಯರು ರೈತ ಮಹಿಳೆಯರು ಸ್ತ್ರೀಶಕ್ತಿ ಸಂಘ– ಸಂಸ್ಥೆಗಳು ಗುಂಪುಗಳು ಇಂತಹ ಉದ್ಯಮ ಸ್ಥಾಪಿಸಬಹುದಾಗಿದೆ.
ಕೆ.ಎಸ್. ಲತಾಕುಮಾರಿ ಜಿಲ್ಲಾಧಿಕಾರಿ

ವಿವಿಧ ಆಹಾರ ಮಳಿಗೆ ಪ್ರದರ್ಶನ ಪ್ರತಿಯೊಂದು ಆಹಾರ ಮಳಿಗೆಗಳಿಗೆ ತೆರಳಿದ ಜಿಲ್ಲಾಧಿಕಾರಿ ಲತಾಕುಮಾರಿ ಮಾಹಿತಿ ಪಡೆದರು. ಮತ್ತಷ್ಟು ಕ್ರಿಯಾಶೀಲವಾಗಿ ಉದ್ದಿಮೆ ಮುಂದುವರಿಸಲು ಸಲಹೆ ನೀಡಿದರು. ಜಿಲ್ಲಾ ಪಂಚಾಯಿತಿಯ ಮೂರು ಮಹಡಿಗಳ ಕಾರಿಡಾರ್‌ಗಳಲ್ಲಿ ವಿವಿಧ ಸಂಘ-ಸಂಸ್ಥೆಗಳು ಹಾಗೂ ಕಿರು ಉದ್ದಿಮೆದಾರರು ತಯಾರಿಸಿದ ಆಹಾರ ಉತ್ಪನ್ನಗಳಾದ ಉಪ್ಪಿನಕಾಯಿ ಹಪ್ಪಳ ಕಾಫಿ ಪುಡಿ ಜೇನುತುಪ್ಪ ಸಾಂಬಾರ್ ಪದಾರ್ಥ ವಿವಿಧ ಬಗೆಯ ಅಕ್ಕಿ ರಾಗಿ ಸಿರಿಧಾನ್ಯ ಸೇರಿದಂತೆ ಇತರೆ ಆಹಾರ ಸಂಸ್ಕರಣ ಪದಾರ್ಥಗಳನ್ನು ಪ್ರದರ್ಶನಕ್ಕೆ ಇಡಲಾಗಿತ್ತು. ಕಾರ್ಯಕ್ರಮದಲ್ಲಿ ಭಾಗವಹಿಸಿದ ಪ್ರತಿಯೊಬ್ಬರಿಗೂ ಸಕಲೇಶಪುರ ತಾಲ್ಲೂಕಿನ ಜಂಬರಡಿ ಕಾಫಿ ಪುಡಿ ಉದ್ದಿಮೆಯವರು ಉಚಿತವಾಗಿ ಕಾಫಿ ವಿತರಿಸಿದರು.

‘ಉದ್ಯಮ ಸ್ಥಾಪನೆ ಲಾಭಕರ’

ಕಿರು ಸಾಲ ಸೌಲಭ್ಯ ಪಡೆದು ಉದ್ಯಮ ಸ್ಥಾಪನೆಯಿಂದ ರೈತ ಸಮುದಾಯ ಹೆಚ್ಚು ಅನುಕೂಲವಾಗಲಿದೆ. ನಿಮ್ಮೊಂದಿಗೆ ಕೈಜೋಡಿಸಿ ಸಲಹೆ ಸಹಕಾರವನ್ನು ಕೆಪೆಕ್ ಮೂಲಕ ನೀಡಲಾಗುತ್ತದೆ ಎಂದು ಕರ್ನಾಟಕ ರಾಜ್ಯ ಕೃಷಿ ಉತ್ಪನ್ನಗಳ ಸಂಸ್ಕರಣೆ ಹಾಗೂ ರಫ್ತು ನಿಗಮ (ಕೆಪೆಕ್) ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಶಿವಪ್ರಕಾಶ್ ಹೇಳಿದರು. ಸಿರಿಧಾನ್ಯ ಬೆಲ್ಲದ ಗಾಣ ಹಣ್ಣು ಸಂಸ್ಕರಣೆ ಮಸಾಲೆ ಪುಡಿ ಸೇರಿದಂತೆ ಅನೇಕ ಆಹಾರ ಉತ್ಪನ್ನಗಳನ್ನು ತಯಾರಿಸಿ ಮಾರಾಟ ಮಾಡಬಹುದಾಗಿದ್ದು ಮಲೆನಾಡು ಅರೆ ಮಲೆನಾಡು ಬಯಲು ಸೀಮೆ ಹೊಂದಿರುವ ಜಿಲ್ಲೆಯಲ್ಲಿ ಈ ರೀತಿಯ ಉದ್ಯಮ ಸ್ಥಾಪನೆ ಮಾಡುವುದು ಹೆಚ್ಚು ಲಾಭಕರ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.