
ಹೊಳೆನರಸೀಪುರ: ಇಲ್ಲಿನ ಬಯಲು ರಂಗಮಂದಿರದಲ್ಲಿ ಭಾನುವಾರ ನಿರ್ಮಿಸಿದ್ದ ಭವ್ಯ ವೇದಿಕೆಯಲ್ಲಿ ಮೂಡುಬಿದಿರೆ ಆಳ್ವಾಸ್ ವಿದ್ಯಾಸಂಸ್ಥೆಯ 350ಕ್ಕೂ ಹೆಚ್ಚು ವಿದ್ಯಾರ್ಥಿಗಳು ನೀಡಿದ ಸಾಂಸ್ಕೃತಿಕ ಕಾರ್ಯಕ್ರಮ ಪ್ರೇಕ್ಷಕರನ್ನು ಬೆರಗಾಗಿಸಿತು.
ಕೊರೆಯುವ ಚಳಿಯಲ್ಲೂ ಬಯಲು ರಂಗಮಂದಿರದ ಆವರಣ ಕಿಕ್ಕಿರಿದು ತುಂಬಿತ್ತು. ಪ್ರತಿ ಕಾರ್ಯಕ್ರಮ ಮುಗಿಯುತ್ತಿದ್ದಂತೆ ಪ್ರೇಕ್ಷಕರು ಶಿಳ್ಳೆ, ಚಪ್ಪಾಳೆ ಹೊಡೆದು, ಸೂಪರ್, ಸೂಪರ್ ಎಂದು ಕೂಗುತ್ತಾ ಮೆಚ್ಚುಗೆ ವ್ಯಕ್ತಪಡಿಸಿದರು.
ಸಂಸದ ಶ್ರೇಯಶ್ ಪಟೇಲ್ 3 ಗಂಟೆ ಕುಳಿತು ಕಾರ್ಯಕ್ರಮ ನೋಡಿ ಚಪ್ಪಾಳೆ ಹೊಡೆದು ಸಂತಸಪಟ್ಟರು. ಮೊದಲಿಗೆ ಯೋಗಾಸನದಿಂದ ಪ್ರಾರಂಭವಾದ ಕಾರ್ಯಕ್ರಮ ಅಷ್ಟ ಲಕ್ಷ್ಮೀಯರ ಪೂಜಾ ನೃತ್ಯ, ಬಂಜಾರ ನೃತ್ಯ, ಯಕ್ಷಗಾನ ಮಾದರಿಯ ಶಿವ ಪಾರ್ವತಿ ವಿವಾಹ ನೃತ್ಯ, ಗುಜರಾತಿನ ದಾಂಡಿಯಾ ನೃತ್ಯ, ಮಣಿಪುರದ ಸ್ಟಿಕ್ ಡ್ಯಾನ್ಸ್, ಯುವಕರ ಮಲ್ಲಕಂಬ ಪ್ರೇಕ್ಷಕರನ್ನು ಸೆಳೆಯಿರು.
ಯುವತಿಯರ ಹಗ್ಗದ ಮೇಲಿನ ಕಸರತ್ತು, ಸೃಜನಾತ್ಮಕ ನೃತ್ಯ, ವರ್ಷದಾರೆ ನೃತ್ಯ, ಪುರಿಡಿಯಾ ಚಾಬ್ಲೆ ಸಿಂಹ ಬೇಟೆ, ಶ್ರೀರಾಮ ಪಟ್ಟಾಭಿಷೇಕ, ಬೊಂಬೆ ನೃತ್ಯ ರಂಜಿಸಿತು. ನೃತ್ಯದ ವಸ್ತ್ರ ವಿನ್ಯಾಸ, ಅಲಂಕಾರ, ಬೆಳಕಿನ ನಿರ್ವಹಣೆ, ಹಿನ್ನೆಲೆ ಸಂಗೀತ, ಹಾಡು ಜನಮನ ಗೆದ್ದಿತು. ಪ್ರೇಕ್ಷಕರು ಇಂತಹ ಕಾರ್ಯಕ್ರಮವನ್ನು ನಾವು ಹಿಂದೆಂದೂ ನೋಡಿರಲಿಲ್ಲ ಎಂದು ಸ್ಥಳದಲ್ಲಿದ್ದ ಸಂಸ್ಥೆಯ ಅಧ್ಯಕ್ಷ ಮೋಹನ್ ಆಳ್ವಾ ಅವರಿಗೆ ಧನ್ಯವಾದ ಹೇಳಿ ಸೆಲ್ಫಿ ತೆಗೆದುಕೊಂಡರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಸಂಸದ ಶ್ರೇಯಸ್ ಪಟೇಲ್, ಆಳ್ವಾಸ್ ಸಂಸ್ಥೆಯ ಕಾರ್ಯಕ್ರಮಗಳು ಅಂತರರಾಷ್ಟ್ರೀಯ ಮಟ್ಟದ ಖ್ಯಾತಿಗಳಿಸಿವೆ. ಇವರೆಲ್ಲರೂ ನಮ್ಮಲ್ಲಿ ಬಂದು ಕಾರ್ಯಕ್ರಮ ನಡೆಸುತ್ತಿರುವುದು ನಮ್ಮ ಅದೃಷ್ಟ ಎಂದರು.
ಸಂಸ್ಥೆಯ ಅಧ್ಯಕ್ಷ ಮೋಹನ್ ಆಳ್ವಾ ಮಾತನಾಡಿ, ನಾನು ಈ ಕಾರ್ಯಕ್ರಮವನ್ನು ಯಾವುದೇ ರಾಜಕೀಯ ಉದ್ದೇಶದಿಂದಾಗಲಿ ಅಥವಾ ವ್ಯಾಪಾರದ ದೃಷ್ಟಿಯಿಂದ ಮಾಡುತ್ತಿಲ್ಲ. 8 ವಿಧದ ಶಾಸ್ತ್ರೀಯ ನೃತ್ಯ, ಸಂಗೀತದ 35 ಸಾವಿರ ರಾಗ, ನೂರಾರು ಬಗೆಯ ಪಕ್ಕಾ ವಾದ್ಯಗಳು, ಜನಪದ ಕಲೆ ಸಂಸ್ಕೃತಿಯನ್ನು ನಾಡಿನ ಜನರಿಗೆ ತಲುಪಿಸುವ ಉದ್ದೇಶದಿಂದ ಇಂತಹ ಕಾರ್ಯಕ್ರಮಗಳನ್ನು ಮಾಡುತ್ತಿದ್ದೇವೆ ಎಂದರು.
ನಮ್ಮ ಸಂಸ್ಥೆಯ ಆವರಣದಲ್ಲಿ ಇದುವರೆವಿಗೂ 17 ನುಡಿಸಿರಿ, 30 ವಿರಾಸತ್‍ಗಳನ್ನು ಮಾಡಿ ಎಲ್ಲಾ ರಾಜ್ಯಗಳ ಮತ್ತು ಅಂತರರಾಷ್ಟ್ರೀಯ ಕಲೆಗಳನ್ನು ನಮ್ಮ ಜನರಿಗೆ ಪರಿಚಯಿಸಿದ್ದೇನೆ. 22 ಸಾವಿರ ವಿದ್ಯಾರ್ಥಿಗಳು ನಮ್ಮ ಶಾಲೆಯಲ್ಲಿದ್ದು ನಮ್ಮ ವಿದ್ಯಾರ್ಥಿನಿಲಯದಲ್ಲೇ 20 ಸಾವಿರ ವಿದ್ಯಾರ್ಥಿಗಳಿದ್ದಾರೆ. ನಾವು ದೇಶದ ಎಲ್ಲಾ ಧರ್ಮ, ಜಾತಿ, ಜನಾಂಗಗಳ ಮತ್ತು ಶೋಷಿತ ವರ್ಗಗಳ ವಿದ್ಯಾರ್ಥಿಗಳಿಗೂ ಅವಕಾಶ ಮಾಡಿಕೊಟ್ಟಿದ್ದೇವೆ ಎಂದು ತಿಳಿಸಿದರು.
ನಮ್ಮ ಸಂಸ್ಥೆಯಲ್ಲಿ ಎಲ್ಲ ಧರ್ಮಗಳ ಹಬ್ಬ ಹರಿ–ದಿನಗಳನ್ನು ಆಚರಿಸುತ್ತೇವೆ. 500 ಮಕ್ಕಳನ್ನು ದತ್ತು ತೆಗೆದುಕೊಂಡು ಅವರಿಗೆ ಉಚಿತ ಊಟ ವಸತಿಯೊಂದಿಗೆ ಅತ್ಯುತ್ತಮ ವಿದ್ಯಾಭ್ಯಾಸ, ಕ್ರೀಡಾ ತರಬೇತಿ ನೀಡುತ್ತಿದ್ದೇವೆ. ವಿದ್ಯಾರ್ಥಿಗಳು ರಾಜ್ಯ, ರಾಷ್ಟ್ರ, ಒಲಿಂಪಿಕ್ ಕ್ರೀಡೆಗಳಲ್ಲಿ ಬಹುಮಾನ ಗಳಿಸಿದ್ದಾರೆ. ನಾವೆಲ್ಲಾ ಸಾಮರಸ್ಯದಿಂದ ಬಾಳೋಣ, ಇಂತಹ ಕಲೆ ಸಂಸ್ಕೃತಿಯನ್ನು ಉಳಿಸಿ ಬೆಳೆಸೋಣ ಎಂದರು.
ಜಾವಗಲ್ ಪ್ರಸನ್ನ ಕಾರ್ಯಕ್ರಮ ನಿರೂಪಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.