ADVERTISEMENT

ಕೇಂದ್ರ ಸಚಿವರ ಬಗ್ಗೆ ಲಘು ಮಾತು ಸಲ್ಲ

ಅಮಿತ್ ಶಾ ವಿರುದ್ಧ ಪ್ರಿಯಾಂಕ ಖರ್ಗೆ ಟೀಕೆ: ಶಾಸಕ ಸಿಮೆಂಟ್ ಮಂಜು ಖಂಡನೆ

​ಪ್ರಜಾವಾಣಿ ವಾರ್ತೆ
Published 21 ಡಿಸೆಂಬರ್ 2025, 4:29 IST
Last Updated 21 ಡಿಸೆಂಬರ್ 2025, 4:29 IST
ಸಿಮೆಂಟ್ ಮಂಜು
ಸಿಮೆಂಟ್ ಮಂಜು   

ಹಾಸನ: ಬೆಳಗಾವಿಯಲ್ಲಿ ನಡೆದ ಚಳಿಗಾಲದ ಅಧಿವೇಶನದಲ್ಲಿ ಸಚಿವ ಪ್ರಿಯಾಂಕ್ ಖರ್ಗೆ ಅವರು ಕೇಂದ್ರ ಗೃಹ ಸಚಿವ ಅಮಿತ್ ಶಾ ವಿರುದ್ಧ ಲಘುವಾಗಿ ಮಾತನಾಡಿರುವುದನ್ನು ಬಿಜೆಪಿ ತೀವ್ರವಾಗಿ ಖಂಡಿಸುತ್ತದೆ ಎಂದು ಬಿಜೆಪಿ ಎಸ್ಸಿ ಮೋರ್ಚಾ ರಾಜ್ಯ ಘಟಕದ ಅಧ್ಯಕ್ಷ, ಶಾಸಕ ಸಿಮೆಂಟ್ ಮಂಜು ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಅಧಿವೇಶನದಲ್ಲಿ ದ್ವೇಷ ಭಾಷಣ ಮಸೂದೆಗೆ ಸಂಬಂಧಿಸಿದಂತೆ ವಿಧಾನ ಪರಿಷತ್ ನಲ್ಲಿ ಚರ್ಚೆ ನಡೆಯುತ್ತಿದ್ದ ಸಂದರ್ಭದಲ್ಲಿ ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ಅವರು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ನಾಲಾಯಕ್ ಗೃಹ ಸಚಿವ ಎಂದು ಟೀಕಿಸಿದ್ದಾರೆ. ಪ್ರಿಯಾಂಕ್ ಬಾಯಿ ಬಿಗಿ ಹಿಡಿದು ಮಾತನಾಡಬೇಕು. ಸಾಂವಿಧಾನಿಕ ಹುದ್ದೆಯಲ್ಲಿರುವ ವ್ಯಕ್ತಿ, ಕೇಂದ್ರ ಸಚಿವರ ಬಗ್ಗೆ ಅಧಿವೇಶನದಲ್ಲಿ ಲಘುವಾಗಿ ಮಾತನಾಡುವುದು ಸರಿಯಲ್ಲ ಎಂದರು.

ಕೇಂದ್ರ ಗೃಹ ಸಚಿವ ಅಮಿತ್ ಶಾ ದೇಶಕ್ಕೆ ತಮ್ಮದೇ ಆದ ಕೊಡುಗೆ ನೀಡಿದ್ದಾರೆ. ಅವರ ಬಗ್ಗೆ ಈ ರೀತಿಯ ಹೇಳಿಕೆ ನೀಡುವುದು ಸರಿಯಲ್ಲ. ಮುಂದೆ ಖರ್ಗೆ ಅವರು ಇಂತಹ ಹೇಳಿಕೆ ನೀಡಿದರೆ, ಅವರ ವಿರುದ್ದ ಬಿಜೆಪಿಯಿಂದ ರಾಜ್ಯದಾದ್ಯಂತ ಹೋರಾಟ ನಡೆಸುವುದಾಗಿ ಎಚ್ಚರಿಸಿದರು.

ADVERTISEMENT

ಮಲೆನಾಡು ಭಾಗದಲ್ಲಿ ಕಾಫಿ ಕಳ್ಳತನ ಕುರಿತು ಪ್ರತಿಕ್ರಿಯಿಸಿದ ಸಿಮೆಂಟ್ ಮಂಜು, ಈ ಬಾರಿ ವಿಪರೀತ ಮಳೆಯಿಂದ ಶೇ 50 ಕಾಫಿ ಉದುರಿ ಹೋಗಿದ್ದು, ಉಳಿದಿರುವ ಕಾಫಿಯನ್ನು ಕಳ್ಳರು ಕದಿಯುತ್ತಿರುವುದು ಬೆಳೆಗಾರರಲ್ಲಿ ಆತಂಕ ಸೃಷ್ಟಿಸಿದೆ. ಈ ಬಗ್ಗೆ ಪೊಲೀಸ್ ಇಲಾಖೆಗೆ ಅಗತ್ಯ ಕ್ರಮಕ್ಕೆ ಸೂಚನೆ ನೀಡಿದ್ದೇನೆ. ಕೂಡಲೇ ಕಠಿಣ ಕಾನೂ‌ನು ಕ್ರಮ ಕೈಗೊಂಡು ಕಾಫಿ ಕಳ್ಳತನಕ್ಕೆ ಕಡಿವಾಣ ಹಾಕಬೇಕು ಎಂದು ಒತ್ತಾಯಿಸಿದರು.

ಬಿಜೆಪಿ ಎಸ್ಸಿ ಮೊರ್ಚಾ ಜಿಲ್ಲಾ ಘಟಕದ ಅಧ್ಯಕ್ಷ ಚಂದ್ರು, ಆಲೂರು ತಾಲ್ಲೂಕು ಘಟಕದ ಅಧ್ಯಕ್ಷ ಅಬ್ಬನ ಕೃಷ್ಣಮೂರ್ತಿ, ಮತ್ತಿತರರು ಇದ್ದರು.

ಪ್ರಕರಣ ಹಿಂದಕ್ಕೆ: ಸಚಿವರ ಭರವಸೆ ಅರ್ಜುನ ಸ್ಮಾರಕದ ಕುರಿತಾದ ಹೋರಾಟಗಾರರ ವಿರುದ್ಧ ಪ್ರಕರಣ ದಾಖಲಿಸಿರುವ ಬಗ್ಗೆ ಗೃಹ ಸಚಿವ ಡಾ.ಜಿ. ಪರಮೇಶ್ವರ್ ಅರಣ್ಯ ಸಚಿವ ಈಶ್ವರ್ ಖಂಡ್ರೆ ಅವರನ್ನು ವೈಯಕ್ತಿಕವಾಗಿ ಭೇಟಿ ಮಾಡಿ ಚರ್ಚಿಸಿದ್ದು ಸಂಪುಟ ಸಭೆಯಲ್ಲಿಟ್ಟು ಪ್ರಕರಣ ಹಿಂಪಡೆಯುವುದಾಗಿ ಭರವಸೆ ನೀಡಿದ್ದಾರೆ. ಇನ್ನೆರಡು ದಿನಗಳಲ್ಲಿ ಸೂಕ್ತ ಉತ್ತರ ಬರಲಿದೆ ಎಂದರು. ಈ ಕುರಿತು ವಿಧಾನಸಭೆ ಅಧಿವೇಶನದಲ್ಲೂ ಪ್ರಶ್ನೆ ಮಾಡಿದ್ದೇನೆ. ಸಮಯಾವಕಾಶದ ಕೊರತೆಯಿಂದ ಗೃಹ ಸಚಿವರು ಉತ್ತರ ನೀಡಲು ಸಾಧ್ಯವಾಗಿಲ್ಲ. ಹೋರಾಟಗಾರರನ್ನು ಹತ್ತಿಕ್ಕುವುದು ಪ್ರಜಾಪ್ರಭುತ್ವದ ಕಗ್ಗೊಲೆ ಮಾಡಿದಂತೆ. ಕೇವಲ ಅರ್ಜುನ ಆನೆಯ ಅಂತ್ಯಸಂಸ್ಕಾರವನ್ನು ರಸ್ತೆ ಬದಿ ಮಾಡಿ ಎಂದು ಒತ್ತಾಯ ಮಾಡಿದ್ದಕ್ಕೆ 2 ವರ್ಷದ ನಂತರ ಪ್ರಕರಣ ದಾಖಲಿಸಿರುವುದು ದುರಂತ. ಸಚಿವರು ನೀಡಿರುವ ಭರವಸೆಯಂತೆ ಪ್ರಕರಣ ಹಿಂಪಡೆಯದಿದ್ದರೆ ಹೋರಾಟ ನಡೆಸುವುದಾಗಿ ಎಚ್ಚರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.