ADVERTISEMENT

ಹಿರೀಸಾವೆ: ಮೂರು ದಿನ ಅಂಗನವಾಡಿ ಬಂದ್‌

ಪ್ರತಿಭಟನೆಗೆ ತೆರಳಿದ ಕಾರ್ಯಕರ್ತೆಯರು, ಸಹಾಯಕಿಯರು

​ಪ್ರಜಾವಾಣಿ ವಾರ್ತೆ
Published 3 ಫೆಬ್ರುವರಿ 2025, 13:24 IST
Last Updated 3 ಫೆಬ್ರುವರಿ 2025, 13:24 IST
ಪ್ರತಿಭಟನೆಯಲ್ಲಿ ಭಾಗವಹಿಸಲು ಬಟ್ಟೆ, ಹೊದಿಕೆ ತುಂಬಿದ ಬ್ಯಾಗ್‌ನೊಂದಿಗೆ ಅಂಗನವಾಡಿ ಕಾರ್ಯಕರ್ತೆಯರು.
ಪ್ರತಿಭಟನೆಯಲ್ಲಿ ಭಾಗವಹಿಸಲು ಬಟ್ಟೆ, ಹೊದಿಕೆ ತುಂಬಿದ ಬ್ಯಾಗ್‌ನೊಂದಿಗೆ ಅಂಗನವಾಡಿ ಕಾರ್ಯಕರ್ತೆಯರು.   

ಹಿರೀಸಾವೆ: ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಹಿರೀಸಾವೆ ಹೋಬಳಿಯಿಂದ‌ ಅಂಗನವಾಡಿ ಶಿಕ್ಷಕಿಯರು, ಸಹಾಯಕಿಯರು ತಂಡೋಪತಂಡವಾಗಿ ಸೋಮವಾರ ಬೆಳಿಗ್ಗೆ ಇಲ್ಲಿಂದ ಬೆಂಗಳೂರು ಕಡೆಗೆ ಪ್ರಯಾಣಿಸಿದರು.

ಬೆಳಿಗ್ಗೆ 6 ಗಂಟೆಯಿಂದ ಬಸ್ ನಿಲ್ದಾಣದ ತುಂಬ ಅಂಗನವಾಡಿ ಕಾರ್ಯಕರ್ತೆಯರೇ ಇದ್ದು, ಮೂರು ದಿನ ಪ್ರತಿಭಟನೆಯಲ್ಲಿ‌ ಭಾಗವಹಿಸಲು ಹೊರಟಿದ್ದರು. ಬಟ್ಟೆ, ಹೊದಿಕೆ ಸೇರಿದಂತೆ ನಿತ್ಯ ಬಳಕೆ ವಸ್ತುಗಳನ್ನು ಬ್ಯಾಗ್‌ನಲ್ಲಿ ತುಂಬಿಕೊಂಡು, ತಮ್ಮ ಪುಟ್ಟ ಮಕ್ಕಳನ್ನು ಜೊತೆಯಲ್ಲಿ ಎತ್ತಿಕೊಂಡು ಬಸ್ ಹತ್ತಿದರು.

ಹಾಸನ ಕಡೆಯಿಂದ ಬೆಂಗಳೂರು ಕಡೆಗೆ ಬರುವ ಬಹುತೇಕ ಬಸ್‌ಗಳು ಪ್ರಯಾಣಿಕರಿಂದ ತುಂಬಿದ್ದರಿಂದ ಗಂಟೆಗಟ್ಟಲೆ ನಿಲ್ದಾಣದಲ್ಲಿ ಕೆಲವರು ಕಾಯ್ದುಕೊಂಡು, ಅಲ್ಲಿಯೇ ತಿಂಡಿ ತಿಂದರು. ಇನ್ನೂ ಕೆಲವರು ನಿಂತುಕೊಂಡೆ ಪ್ರಯಾಣ ಬೆಳೆಸಿದರು.

ADVERTISEMENT

‘ಅಂಗನವಾಡಿ ಕೇಂದ್ರಗಳು ಮೂರು ದಿನ ತೆರೆಯುವುದಿಲ್ಲ. ಎಲ್ಲರೂ ಪ್ರತಿಭಟನೆಯಲ್ಲಿ ಭಾಗವಹಿಸಲು ಮತ್ತು ಅಲ್ಲಿಯೇ ಉಳಿಯಲು ಸಿದ್ದರಾಗಿ ಹೋಗುತ್ತಿದ್ದೇವೆ’ ಎಂದು ಅಂಗನವಾಡಿ ಶಿಕ್ಷಕಿ ಹೇಮಾ ‘ಪ್ರಜಾವಾಣಿ’ಗೆ ತಿಳಿಸಿದರು.

ಸೋಮವಾರ ಬೆಂಗಳೂರು ಕಡೆಗೆ ಹೆಚ್ಚು ಜನರು ಪ್ರಯಾಣ ಮಾಡುತ್ತಾರೆ. ಜೊತೆಗೆ ಅಂಗನವಾಡಿ ಶಿಕ್ಷಕಿಯರು, ಸಹಾಯಕಿಯರು ಪ್ರತಿಭಟನೆಗೆ ತೆರಳುತ್ತಿದ್ದುದರಿಂದ ನಿತ್ಯ ಪ್ರಯಾಣಿಸುವ ಸಾರ್ವಜನಿಕರು ಮತ್ತು ವಿದ್ಯಾರ್ಥಿಗಳು ತೊಂದರೆ ಅನುಭವಿಸಿದರು.

ಬೆಂಗಳೂರಿನ ಬಸ್‌ಗಾಗಿ ಹಿರೀಸಾವೆ ಬಸ್ ನಿಲ್ದಾಣದಲ್ಲಿ ಕಾಯುತ್ತ ಕುಳಿತಿದ್ದ ಅಂಗನವಾಡಿ ಕಾರ್ಯಕರ್ತೆಯರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.