ಬೇಲೂರು: ‘ನ್ಯಾಯಬೆಲೆ ಅಂಗಡಿಗಳಲ್ಲಿ ವಿತರಿಸುತ್ತಿರುವ ಅಂತ್ಯೋದಯ ಮತ್ತು ಅನ್ನಭಾಗ್ಯ ಯೋಜನೆಗಳ ಅಕ್ಕಿ ತೂಕದಲ್ಲಿ ವಂಚನೆ ನಡೆಯುತ್ತಿದ್ದರೂ ಆಹಾರ ಶಿರಸ್ತೇದಾರ್ ಗೀತಾಂಜಲಿ ಮೌನವಹಿಸಿದ್ದು, ಇವರ ವಿರುದ್ಧ ಕ್ರಮ ಕೈ ಗೊಳ್ಳುವಂತೆ ಮುಖ್ಯಮಂತ್ರಿಗೆ ದೂರು ನೀಡಲಾಗುವುದು’ ಎಂದು ಗ್ಯಾರಂಟಿ ಅನುಷ್ಠಾನ ಸಮಿತಿ ತಾಲ್ಲೂಕು ಘಟಕದ ಅಧ್ಯಕ್ಷ ದೇಶಾಣಿ ಆನಂದ್ ತಿಳಿಸಿದರು.
ಇಲ್ಲಿನ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಸೋಮವಾರ ಆಯೋಜಿಸಿದ್ದ ಗ್ಯಾರಂಟಿ ಅನುಷ್ಠಾನ ಸಮಿತಿ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು.
ಕೆಲವು ನ್ಯಾಯ ಬೆಲೆ ಅಂಗಡಿಗಳು ನಿಗದಿತ ಪ್ರಮಾಣಕ್ಕಿಂತ ಕಡಿಮೆ ಅಕ್ಕಿ ನೀಡುತ್ತಿವೆ ಎಂಬ ಆರೋಪವಿದ್ದು, ಅಂತಹ ಅಂಗಡಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳವಂತೆ ಅನೇಕ ಬಾರಿ ಆಹಾರ ಇಲಾಖೆಯ ಅಧಿಕಾರಿಗಳಿಗೆ ತಿಳಿಸಿದ್ದರೂ ಕ್ರಮ ಕೈಗೊಳ್ಳುತ್ತಿಲ್ಲ ಎಂದು ದೂರಿದರು.
ಪಟ್ಟಣದ ಬಸ್ ನಿಲ್ದಾಣದಲ್ಲಿ ಪ್ರಯಾಣಿಕರಿಗೆ ಸ್ಪಷ್ಟವಾಗಿ ತಿಳಿಯುವಂತೆ ಮಾರ್ಗಸೂಚಿ ಫಲಕಗಳನ್ನು ಅಳವಡಿಸುವಂತೆ ಸಾರಿಗೆ ಘಟಕದ ವ್ಯವಸ್ಥಾಪಕ ಪರಮೇಶ್‌ಗೆ ಸೂಚಿಸಿದರು.
ಆಹಾರ ಇಲಾಖೆಯ ಶಿರಸ್ತೇದಾರ್ ಗೀತಾಂಜಲಿ ಮಾತನಾಡಿ, ‘ಪಡಿತರ ವಿತರಣೆ ಅಂಗಡಿಗಳಲ್ಲಿರುವ ಲೋಪದೋಷ ಸರಿಪಡಿಸಿ, ಸಮರ್ಪಕವಾಗಿ ವಿತರಣೆ ಮಾಡುವಂತೆ ಎಲ್ಲಾ ನ್ಯಾಯ ಬೆಲೆ ಅಂಗಡಿಗಳ ಮಾಲೀಕರಿಗೂ ಕಟ್ಟುನಿಟ್ಟಿನ ಸೂಚನೆ ನೀಡಲಾಗುವುದು, ತಪ್ಪು ಕಂಡುಬಂದಲ್ಲಿ ನಿರ್ದಾಕ್ಷಣ್ಯ ಕ್ರಮ ಕೈಕೊಳ್ಳಲಾಗುವುದು’ ಎಂದರು.
ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ವಸಂತ್ ಕುಮಾರ್, ಶಿಶು ಅಭಿವೃದ್ಧಿ ಇಲಾಖೆಯ ಅಧಿಕಾರಿ ರಮ್ಯಾ, ಆಹಾರ ನಿರೀಕ್ಷಕರಾದ ವೀಣಾ, ಪುರುಷೋತ್ತಮ್, ಸೆಸ್ಕ್ ಎಇ ಅಶೋಕ್ ಗ್ಯಾರಂಟಿ ಅನುಷ್ಠಾನ ಸಮಿತಿ ಸದಸ್ಯರಾದ ಅಶೋಕ್, ಸುರೇಶ್, ಪ್ರತಾಪ್, ಇಂದ್ರೇಶ್, ಮಹೇಶ್, ಸತೀಶ್, ನಿಶ್ಚಲ್, ಮನ್ಸೂರ್ ಆಹಮ್ಮದ್, ಮಹೇಶ್, ಅಬೀಬ್, ಚಂದ್ರಶೇಖರ್, ಧರ್ಮಬೋವಿ, ವಿಶಾಲಾಕ್ಷಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.