ADVERTISEMENT

ಹಾಸನ | ಬೆಳೆ ನಷ್ಟ ಪರಿಹಾರಕ್ಕೆ ಸೂಕ್ತ ಕ್ರಮ: ಡಿ.ಸಿ

ಚನ್ನರಾಯಪಟ್ಟಣ, ಅರಸೀಕೆರೆ ತಾಲ್ಲೂಕಿನಲ್ಲಿ ಹೆಚ್ಚು ಹಾನಿ

​ಪ್ರಜಾವಾಣಿ ವಾರ್ತೆ
Published 20 ನವೆಂಬರ್ 2021, 15:51 IST
Last Updated 20 ನವೆಂಬರ್ 2021, 15:51 IST
ಹಾಸನ ಜಿಲ್ಲಾಧಿಕಾರಿ ಆರ್.ಗಿರೀಶ್‌ ಅವರು ಅಧಿಕಾರಿಗಳ ಸಭೆ ನಡೆಸಿದರು. ಬಿ.ಎ.ಪರಮೇಶ್‌, ಕವಿತಾ ರಾಜಾರಾಂ, ನಟೇಶ್‌, ಬಿ.ಎ.ಜಗದೀಶ್ ಇದ್ದಾರೆ.
ಹಾಸನ ಜಿಲ್ಲಾಧಿಕಾರಿ ಆರ್.ಗಿರೀಶ್‌ ಅವರು ಅಧಿಕಾರಿಗಳ ಸಭೆ ನಡೆಸಿದರು. ಬಿ.ಎ.ಪರಮೇಶ್‌, ಕವಿತಾ ರಾಜಾರಾಂ, ನಟೇಶ್‌, ಬಿ.ಎ.ಜಗದೀಶ್ ಇದ್ದಾರೆ.   

ಹಾಸನ: ‘ಮಳೆಯಿಂದ ಹಾನಿಯಾಗಿರುವ ಬೆಳೆ ನಷ್ಟಕ್ಕೆ ಪರಿಹಾರ ನೀಡಲು ಸ್ಥಳಕ್ಕೆ ಭೇಟಿ ನೀಡಿ ನಿಖರವಾದ ಮಾಹಿತಿಯೊಂದಿಗೆ ಫೋಟೊ ಮತ್ತು ವಿಡಿಯೊಗಳನ್ನು ಪರಿಹಾರ ಪೋರ್ಟಲ್‍ಗೆ ಅಪ್‍ಲೋಡ್ ಮಾಡಬೇಕು’ ಎಂದು ಜಿಲ್ಲಾಧಿಕಾರಿ ಆರ್. ಗಿರೀಶ್ ಅವರು ಅಧಿಕಾರಿಗಳಿಗೆ ಸೂಚಿಸಿದರು.

ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಶನಿವಾರ ತಾಲ್ಲೂಕು ಮಟ್ಟದ ಅಧಿಕಾರಿಗಳು ಹಾಗೂ ಜಿಲ್ಲಾಮಟ್ಟದ ಅಧಿಕಾರಿಗಳೊಂದಿಗೆ ವಿಡಿಯೊ ಸಂವಾದ ನಡೆಸಿ ಮಾತನಾಡಿದ ಅವರು, ಗ್ರಾಮಪಂಚಾಯಿತಿ ವ್ಯಾಪ್ತಿಯಲ್ಲಿ ಬೆಳೆ ನಷ್ಟ, ಆಸ್ತಿ-ಪಾಸ್ತಿ ಹಾನಿ ವರದಿಯನ್ನುಹೋಬಳಿವಾರು ನೀಡಬೇಕು. ಬೆಳೆ ಪರಿಹಾರ ನೀಡಲು ದತ್ತಾಂಶ ನಮೂದು ಕಾರ್ಯವನ್ನು ಶೀಘ್ರ ಕೈಗೊಳ್ಳಬೇಕು ಎಂದು ತಿಳಿಸಿದರು.

ಜಿಲ್ಲೆಯಲ್ಲಿ ವಾರದಿಂದ ಸುರಿದ ಭಾರಿ ಮಳೆಯಿಂದ ಅರಸೀಕೆರೆ ಮತ್ತು ಚನ್ನರಾಯಪಟ್ಟಣತಾಲ್ಲೂಕುಗಳಲ್ಲಿ ಹೆಚ್ಚಿನ ಹಾನಿ ಸಂಭವಿಸಿದ್ದು, ಜಿಲ್ಲೆಯಲ್ಲಿ 35 ಸಾವಿರ ಹೆಕ್ಟೇರ್ ರಾಗಿ,7,600 ಹೆಕ್ಟೇರ್ ಮುಸುಕಿನ ಜೋಳ, 1,000 ಹೆಕ್ಟೇರ್‌ ಭತ್ತ, 17,000ಹೆಕ್ಟೇರ್‌ ಅರೇಬಿಕಾ ಕಾಫಿ ಬೆಳೆ ಹಾನಿಯಾಗಿದೆ. ಈವರೆಗೂ ಸುಮಾರು 65 ಮನೆಗಳಿಗೆ ಹಾನಿಯಾಗಿದೆ ಎಂದು ಮಾಹಿತಿ ನೀಡಿದರು. ‌

ADVERTISEMENT

‘ಉಪವಿಭಾಗಾಧಿಕಾರಿಗಳು, ತಹಶೀಲ್ದಾರ್‌ಗಳು ಬೆಳೆ ಹಾನಿಯಾಗಿರುವ ಸ್ಥಳಗಳಿಗೆ ಭೇಟಿ ನೀಡಬೇಕು.ನಿರ್ಜನ ಪ್ರದೇಶದಲ್ಲಿರುವ ಮನೆಗಳನ್ನು ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಗುರುತಿಸಿ, ಜನರ ಮನವೊಲಿಸಿ, ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸುವ ಕೆಲಸ ಆಗಬೇಕು’ ಎಂದರು.

‘ಕಾಫಿ ಮಂಡಳಿಯಿಂದ ನಷ್ಟದ ಅಂದಾಜು ಗುರುತಿಸಲು 8 ಜನರನ್ನು ನಿಯೋಜಿಸಿದ್ದು,ಕಂದಾಯ, ಕೃಷಿ ಹಾಗೂ ತೋಟಗಾರಿಕೆ ಇಲಾಖೆ ಜಂಟಿಯಾಗಿ ಸಮೀಕ್ಷೆ ಕಾರ್ಯನಡೆಸುವಂತೆ’ ಸೂಚಿಸಿದರು.

‘ಹಾರಂಗಿ ಜಲಾಶಯದಲ್ಲಿ ನೀರು ಬಿಡುವ ಸಾಧ್ಯತೆ ಇದ್ದು, ಶಾಲೆಗಳು, ಕಲ್ಯಾಣ ಮಂಟಪಗಳನ್ನು ಕಾಳಜಿ ಕೇಂದ್ರಗಳಾಗಿ ಮಾಡಿಕೊಂಡುಅಲ್ಲಿನ ಸುತ್ತ ಮುತ್ತಲಿನ ಜನರ ಆಶ್ರಯಕ್ಕೆ ವ್ಯವಸ್ಥೆ ಕಲ್ಪಿಸಬೇಕು’ ಎಂದರು.

‘ಅರಸೀಕೆರೆ ತಾಲ್ಲೂಕಿನಲ್ಲಿ 21 ಸಾವಿರ ಹೆಕ್ಟೇರ್, ಚನ್ನರಾಯಪಟ್ಟಣದಲ್ಲಿ 11 ಸಾವಿರ ಹೆಕ್ಟೇರ್ ಬೆಳೆ ನಷ್ಟವಾಗಿದೆ. ಕಳೆದ ವರ್ಷ ಮನೆಗಳಿಗೆ ಬಿಡುಗಡೆ ಆಗಿರುವ ಹಣವನ್ನು ಅರ್ಹಫಲಾನುಭವಿಗಳಿಗೆ ನೀಡಿ, ಮನೆ ನಿರ್ಮಾಣಕ್ಕೆ ಮುಂದಿನ ಹಂತ ಪೂರ್ಣಗೊಳಿಸಲುಸಾಧ್ಯವಾಗದಿದ್ದರೆ, ಅಂತಹ ಮನೆಗಳನ್ನು ತಿರಸ್ಕರಿಸುವಂತೆ’ ತಿಳಿಸಿದರು.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಬಿ.ಎ.ಪರಮೇಶ್ ಮಾತನಾಡಿ, ‘ಸರ್ಕಾರಿ ಶಾಲೆ ಕಟ್ಟಡಗಳು ಹಾನಿಯಾಗಿರುವ ಮಾಹಿತಿಯನ್ನು ಪಿಡಿಒಗಳಿಗೆ ಹಾಗೂ ಅಂಗನವಾಡಿ ಕಟ್ಟಡಗಳ ಮಾಹಿತಿಯನ್ನು ಸಿಡಿಪಿಒಗಳಿಗೆ ನೀಡುವಂತೆ’ ತಿಳಿಸಿದರು.

ಕೃಷಿ ಇಲಾಖೆ ಜಂಟಿ ನಿರ್ದೇಶಕ ರವಿ ಮಾತನಾಡಿ, ‘28 ಸಾವಿರ ರೈತರಿಂದ ವಿಮಾ ಅರ್ಜಿಗಳು ಬಂದಿದ್ದು, ತಾಲ್ಲೂಕುವಾರು ಮಾಹಿತಿಯನ್ನು ಕಚೇರಿಗೆ ನೀಡುವಂತೆ’ ತಿಳಿಸಿದರು.

ಸಭೆಯಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ ಕವಿತಾ ರಾಜಾರಾಂ, ಉಪವಿಭಾಗಾಧಿಕಾರಿ ಬಿ.ಎ. ಜಗದೀಶ್, ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಭಾನುಪ್ರಕಾಶ್, ತಹಶೀಲ್ದಾರ್ ನಟೇಶ್ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.