ಅರಕಲಗೂಡು: ‘ತಾಲ್ಲೂಕಿನ ಅಭಿವೃದ್ಧಿ ಕುರಿತು ಪ್ರಶ್ನಿಸಿದರೆ, ನನ್ನ ವೈಯುಕ್ತಿಕ ಬದುಕಿನ ಕುರಿತು ಸುಳ್ಳು ಆರೋಪ ಮಾಡುವ ಮೂಲಕ ಶಾಸಕ ಎ.ಮಂಜು, ಕೀಳುಮಟ್ಟದ ರಾಜಕೀಯ ಮೆರೆದಿದ್ದಾರೆ’ ಗ್ಯಾರಂಟಿ ಅನುಷ್ಠಾನ ಸಮಿತಿ ತಾಲ್ಲೂಕು ಘಟಕದ ಅಧ್ಯಕ್ಷ ಎಚ್.ಪಿ.ಶ್ರೀಧರ್ ಗೌಡ ಆಕ್ರೋಶ ವ್ಯಕ್ತಪಡಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಪಟ್ಟಣದ ಅಭಿವೃದ್ಧಿಗೆ ರೂಪಿಸಿರುವ ಮಾಸ್ಟರ್ ಪ್ಲಾನ್ 2041ರಲ್ಲಿ 200 ಎಕರೆ ಪ್ರದೇಶವನ್ನು ಕೈಗಾರಿಕೆ ಪ್ರದೇಶಕ್ಕೆ ಮೀಸಲಿರಿಸುವಂತೆ ಕೋರಿ ನಗರಾಭಿವೃದ್ಧಿ ಇಲಾಖೆ ಆಯುಕ್ತರನ್ನು ಭೇಟಿ ಮಾಡಿ ಮನವಿ ಮಾಡಿದ್ದೆ. ಇದನ್ನು ಸಹಿಸದೆ ಶಾಸಕರು ನನ್ನನ್ನೇ ಗುರಿಯಾಗಿಸಿಕೊಂಡು ಸಲ್ಲದ ಆರೋಪ ಮಾಡಿದ್ದರು’ ಎಂದರು.
‘ಇದರ ಕುರಿತು ಸುದ್ದಿಗೋಷ್ಠಿಯಲ್ಲಿ ಪ್ರಸ್ತಾಪಿಸಿದ್ದಲ್ಲದೇ, ತಾಲ್ಲೂಕಿನ ಅಭಿವೃದ್ದಿ ಕಾರ್ಯಗಳ ಬಗ್ಗೆ ಪ್ರಶ್ನಿಸಿದ್ದೆ. ಅವರ ವೈಯುಕ್ತಿಕ ಬದುಕಿನ ಕುರಿತು ಮಾತನಾಡಿಲ್ಲ. ಅಭಿವೃದ್ಧಿ ಕಾರ್ಯಗಳ ಕುರಿತು ಪ್ರಶ್ನಿಸಿದ್ದಕ್ಕೆ ವಿಚಲಿತಗೊಂಡ ಅವರು, ನನ್ನ ವೈಯುಕ್ತಿಕ ಬದುಕಿನ ಕುರಿತು ಸುಳ್ಳು ಆರೋಪ ಮಾಡುವ ಮೂಲಕ ನನ್ನ ತೇಜೋವಧೆಗೆ ಪ್ರಯತ್ನಿಸಿರುವುದು ಅವರಂಥ ಹಿರಿಯ ರಾಜಕಾರಣಿಗೆ ಶೋಭೆ ತರುವುದಿಲ್ಲ’ ಎಂದರು.
‘ಅವರ ವೈಯುಕ್ತಿಕ ಬದುಕಿನ ಕುರಿತು ಸಾಕಷ್ಟು ವಿಚಾರಗಳಿದ್ದು, ಅದರ ಬಗ್ಗೆ ನಾನೂ ಹೇಳಬಹುದು. ಆದರೆ ಅವರಂತೆ ಕೆಳಮಟ್ಟಕ್ಕೆ ಇಳಿಯಲಾರೆ. ಶಾಸಕರಾದ ಅವರು ಆಡಳಿತ ಪಕ್ಷವಿದ್ದಂತೆ. ಆಡಳಿತ ಪಕ್ಷದವರಾದರೂ ಇಲ್ಲಿ ನಾವು ವಿರೋಧ ಪಕ್ಷವಿದ್ದಂತೆ’ ಎಂದರು.
‘ಪ್ರಜಾಪ್ರಭುತ್ವದ ಕಾವಲುಗಾರನಂತೆ ಕ್ಷೇತ್ರದ ಅಭಿವೃದ್ದಿ ಕುರಿತು ಪ್ರಶ್ನಿಸುವುದು ನಮ್ಮ ಕರ್ತವ್ಯ. ಇದನ್ನು ಸಹಿಸದೇ ಎದುರಾಳಿಗಳ ವಿರುದ್ದ ಸಲ್ಲದ ಆರೋಪ ಮಾಡುವ ಮೂಲಕ ತಮ್ಮ ವೈಫಲ್ಯ ಮುಚ್ಚಿಕೊಳ್ಳುವ ಪ್ರಯತ್ನ ನಡೆಸುತ್ತಿದ್ದಾರೆ’ ಎಂದು ಆರೋಪಿಸಿದರು.
‘ತಮ್ಮನ್ನು ಪ್ರಶ್ನಿಸುವ ಎದುರಾಳಿಗಳನ್ನು ಮಣಿಸಲು ಈ ರೀತಿ ಕೀಳು ಮಟ್ಟಕ್ಕೆ ಇಳಿಯುತ್ತಾರೆ. ಅವರ ಬಾಯಿಂದ ಇಂತಹ ಪದಗಳನ್ನು ನಿರೀಕ್ಷಿಸಿರಲಿಲ್ಲ. ಅವರು ನಡೆದು ಬಂದ ದಾರಿಯ ಕುರಿತು ಹೇಳಿಕೊಂಡು ತಮ್ಮ ಬದುಕನ್ನು ತಾವೇ ತೆರೆದಿಟ್ಟಿದ್ದಾರೆ. ಮುಂದಿನ ದಿನಗಳಲ್ಲಿ ಕ್ಷೇತ್ರದ ಜನರೇ ಈ ಕುರಿತು ತೀರ್ಮಾನಿಸುತ್ತಾರೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.