ಅರಸೀಕೆರೆ: ರಾಜ್ಯದ ನಾನಾ ಜಿಲ್ಲೆಗಳಿಂದ ಲಕ್ಷಾಂತರ ಭಕ್ತರನ್ನು ಹೊಂದಿರುವ ತಾಲ್ಲೂಕಿನ ಗುರು ಜೇನುಕಲ್ಲು ಸಿದ್ದೇಶ್ವರ ಸ್ವಾಮಿಯ ಜಾತ್ರಾ ಮಹೋತ್ಸವ ಶನಿವಾರ ಹಾಗೂ ಭಾನುವಾರ ವಿಜೃಂಭಣೆಯಿಂದ ನಡೆಯಲಿದೆ.
ಜಾತ್ರೆ ಅಂಗವಾಗಿ ಶನಿವಾರ ರಾತ್ರಿಯಿಡಿ ವೈಭವದ ಉತ್ಸವಗಳು ನಡೆಯಲಿದ್ದು, ಭಾನುವಾರ ಬೆಳಿಗ್ಗೆ ಕೆಂಡೋತ್ಸವ ನಂತರ ಅದ್ಧೂರಿ ರಥೋತ್ಸವ ಜರುಗಲಿದೆ. ರಥೋತ್ಸವಕ್ಕೆ ಕ್ಷೇತ್ರಾಭಿವೃದ್ದಿ ಮಂಡಳಿ ಹಾಗೂ ಭಕ್ತ ಮಂಡಳಿ ಸಕಲ ಸಿದ್ದತೆ ಮಾಡಿಕೊಂಡಿದ್ದು, ವಿವಿಧ ಉತ್ಸವಗಳಲ್ಲಿ ಸಹಸ್ರಾರು ಭಕ್ತರು ಪಾಲ್ಗೊಳ್ಳುತ್ತಿದ್ದಾರೆ.
ಸಾಮ್ರಾಜ್ಯತ್ಸೋವ, ಹುಲಿವಾಹನ, ಸೂರ್ಯಮಂಡಲೋತ್ಸವ, ಬೆಳ್ಳಿ ಪಲ್ಲಕ್ಕಿ ಉತ್ಸವ, ಬಿಲ್ವ ವೃಕ್ಷೋತ್ಸವ, ಹರಕೆ ಹೊತ್ತ ಭಕ್ತಾದಿಗಳಿಗೆ ಬಾಯಿಬೀಗ ಧಾರಣೆ, ಚಂದ್ರಮಂಡಲೋತ್ಸವ, ಅಗ್ನಿಕುಂಡ ಸೇವೆ ಹಾಗೂ ಕೆಂಚಮ್ಮನವರ ದೇವಸ್ಥಾನದಲ್ಲಿ ಗುಗ್ಗಳ ಸೇವೆಗಳು ಶಾಸ್ತ್ರೋಕ್ತವಾಗಿ ಜರುಗಲಿವೆ. ನಂತರ ಯಳವಾರೆ ಚೆಲುವರಾಯ ಸ್ವಾಮಿ ಪೂಜೆಯೊಂದಿಗೆ ರಥೋತ್ಸವ ನಡೆಯಲಿದ್ದು, ತಾಲ್ಲೂಕಿನ ಹಲವು ಗ್ರಾಮೀಣ ಭಾಗದ ದೇವರ ಒಕ್ಕಲುಗಳು ದರ್ಶನ ಪಡೆದು ಪುನೀತರಾಗಲಿದ್ದಾರೆ.
ಇತಿಹಾಸ ಪ್ರಸಿದ್ಧ ಜೇನುಕಲ್ಲು ಬೆಟ್ಟಕ್ಕೆ ಪ್ರತಿ ಹುಣ್ಣಿಮೆ ದಿನ ಲಕ್ಷಾಂತರ ಭಕ್ತರು ಬರುತ್ತಾರೆ. 1,101 ಮೆಟ್ಟಿಲು ಹತ್ತಿ, ಪೂಜೆ ಸಲ್ಲಿಸಿ, ಆಶೀರ್ವಾದ ಪಡೆಯುತ್ತಾರೆ. ದೇವರ ಸನ್ನಿಧಾನದ ಪಕ್ಕದಲ್ಲಿ ಸದಾಕಾಲ ಜೇನುಗೂಡು ಕಟ್ಟಿರುವುದರಿಂದ, ಈ ಕ್ಷೇತ್ರಕ್ಕೆ ಜೇನುಕಲ್ಲು ಸಿದ್ದೇಶ್ವರ ಸ್ವಾಮಿ ಕ್ಷೇತ್ರ ಎಂದು ಹೆಸರು ಬಂದಿದೆ. ಭಕ್ತರು ಅಪವಿತ್ರವಾಗಿ ಬಂದರೆ ಜೇನುಗೂಡುಗಳು ಎದ್ದು ತೊಂದರೆ ಕೊಡುತ್ತವೆ ಎನ್ನುವುದು ಜನರ ನಂಬಿಕೆ. ಬೆಟ್ಟದ ಮೇಲೆ ಸಿದ್ದೇಶ್ವರ ಸ್ವಾಮಿಯ ಪಾದ ಕಾಣಬಹುದು. ಸುಂದರ ಗೋಪುರ ಅಥವಾ ಮಂಟಪ ನಿರ್ಮಿಸಲಾಗಿದೆ.
ಸ್ವಾಮಿಯ ಬೆಟ್ಟದಲ್ಲಿ ಗಂಗಮ್ಮನ ಕೊಳವಿದ್ದು, ಮಕ್ಕಳು ಇಲ್ಲದವರು ಗಂಗಮ್ಮನನ್ನು ಪೂಜೆ ಮಾಡಿ ಹರಕೆ ಹೊತ್ತರೆ ಮಕ್ಕಳಾಗುತ್ತದೆ ಎಂಬ ಪ್ರತೀತಿ ಇದೆ. ರೋಗರುಜಿನ, ಕುಟುಂಬದಲ್ಲಿ ನೆಮ್ಮದಿ, ಹಣಕಾಸಿನ ಕೊರತೆ, ನೂತನ ಮನೆ, ಮದುವೆ, ಸಂತಾನ ಸಮಸ್ಯೆ ಇನ್ನಿತರೆ ಹಲವು ಸಮಸ್ಯೆಗಳ ಸಂಬಂಧ ಸ್ವಾಮಿ ಹತ್ತಿರ ಹರಕೆ ಪ್ರಾರ್ಥನೆಯಿಂದ ಹತ್ತಾರು ಕಷ್ಟ ಕಾರ್ಪಣ್ಯಗಳು ಭಕ್ತರಿಂದ ದೂರವಾಗಿದೆ. 3 ಹುಣ್ಣಿಮೆಗೆ ಈ ಕ್ಷೇತ್ರಕ್ಕೆ ಬಂದು ಹರಕೆ ಮಾಡಿಕೊಂಡು ಹೋದರೆ, ಅವರ ಇಷ್ವಾರ್ಥಗಳು ಸಿದ್ಧಿಯಾಗುತ್ತವೆ ಎನ್ನುವ ನಂಬಿಕೆ ಭಕ್ತರಲ್ಲಿದೆ.
ಶನಿವಾರ ಮಧ್ಯಾಹ್ನ ಹಾರನಹಳ್ಳಿ ಗ್ರಾಮದಲ್ಲಿ ದೇವರಿಗೆ ಮದಲಿಂಗ ಶಾಸ್ತ್ರ ಅದ್ದೂರಿ ಕರ್ಪೂರ ಸೇವೆ; ನಂತರ ಯಾದಾಪುರ ಪ್ರವೇಶ
ಜೇನುಕಲ್ಲು ಸಿದ್ಧೇಶ್ವರ ಸ್ವಾಮಿಯ ಮಹಿಮೆ ಅಪಾರವಾಗಿದ್ದು ಕ್ಷೇತ್ರಕ್ಕೆ ಲಕ್ಷಾಂತರ ಭಕ್ತರು ಬರುತ್ತಾರೆ. ಕ್ಷೇತ್ರದ ಅಭಿವೃದ್ಧಿಗೆ ಶಾಸಕ ಶಿವಲಿಂಗೇಗೌಡ ಆದ್ಯತೆ ನೀಡಿದ್ದಾರೆ.ಗೀಜಿಹಳ್ಳಿ ಧರ್ಮಶೇಖರ್ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ
ಕ್ಷೇತ್ರಕ್ಕೆ ತನ್ನದೇ ಆದ ಮಹಿಮೆ ಇದ್ದು ಪ್ರತಿ ಹುಣ್ಣಿಮೆಗೆ ಸಹಸ್ರಾರು ಭಕ್ತರು ಬರುತ್ತಾರೆ. ನಿತ್ಯ ದಾಸೋಹ ನಡೆಯುತ್ತಿದೆ. ಜಾತ್ರೆಗೆ ಬರುವ ಭಕ್ತರಿಗೆ ಅಗತ್ಯ ಮೂಲಸೌಕರ್ಯ ಒದಗಿಸಲಾಗಿದೆ.ದರ್ಶನ್ ಅರಸೀಕೆರೆ ನಗರಸಭೆ ಸದಸ್ಯ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.