ಅರಸೀಕೆರೆ: ತೆಂಗಿನ ಮರಗಳಿಗೆ ರೋಗಬಾಧೆ ತಗುಲಿದ್ದು, ಅದನ್ನು ಉಳಿಸುವ ನಿಟ್ಟಿನಲ್ಲಿ ದೊಡ್ಡ ಮಟ್ಟದ ಆಂದೋಲನವನ್ನೇ ಮಾಡೋಣ. ಇಲ್ಲದಿದ್ದರೇ ನಮ್ಮ ವಾಣಿಜ್ಯ ಬೆಳೆಯೇ ಇಲ್ಲದಂತಾಗುತ್ತದೆ ಎಂದು ಶಾಸಕ, ಗೃಹ ಮಂಡಳಿ ಅಧ್ಯಕ್ಷ ಕೆ.ಎಂ. ಶಿವಲಿಂಗೇಗೌಡ ಹೇಳಿದರು.
ತೋಟಗಾರಿಕೆ ಇಲಾಖೆ ವತಿಯಿಂದ ತೆಂಗು ಅಭಿವೃದ್ಧಿ ಮಂಡಳಿಯ ಸಹಯೋಗದೊಂದಿಗೆ ಪ್ರಚಾರ ಮತ್ತು ಸಾಹಿತ್ಯ ಯೋಜನೆಯಡಿ ನಗರ ಸಮೀಪದ ಜಾಜೂರು ಗ್ರಾಮದಲ್ಲಿ ಆಯೋಜಿಸಿದ್ದ ತೆಂಗು ಬೆಳೆಗಾರರಿಗೆ ತಾಂತ್ರಿಕ ಕಾರ್ಯಾಗಾರ ಹಾಗೂ ತೋಟಗಾರಿಕೆ ಇಲಾಖೆಯ ವಿವಿಧ ಯೋಜನೆಯ ಸವಲತ್ತುಗಳ ಕಾರ್ಯಾದೇಶ ಮತ್ತು ಪರಿಕರಗಳ ವಿತರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ತೆಂಗಿನ ಕಾಯಿ, ಕೊಬ್ಬರಿ, ಎಳನೀರು ದರ ಹೆಚ್ಚಿ, ತೆಂಗು ಬೆಳೆಗಾರ ಮುಖದಲ್ಲಿ ಸಂತಸ ಕಾಣುವ ಹಂತದಲ್ಲೇ ತೆಂಗಿನ ಮರಗಳಿಗೆ ಕಾಂಡ ಸೋರುವ ರೋಗ, ಕಪ್ಪುಹುಳು ರೋಗ, ಬಿಳಿನೊಣ ರೋಗ, ಅಣಬೆ ರೋಗ, ಸುಳಿಕೊಳೆ ರೋಗಗಳು ಕಂಡು ಬಂದಿವೆ. ಜಿಲ್ಲೆಯಲ್ಲಿ 1.18 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ತೆಂಗಿನ ಬೆಳೆ ಇದ್ದು, ಅರಸೀಕೆರೆ ಮತ್ತು ಚನ್ನರಾಯಪಟ್ಟಣದಲ್ಲಿ ಅತಿ ಹೆಚ್ಚು ತೆಂಗು ಬೆಳೆಗಾರರು ಇದ್ದಾರೆ ಎಂದರು.
ವಿಜ್ಞಾನಿ ಡಾ. ನಾಗೇಂದ್ರ ಮಾತನಾಡಿ, ‘5 ರೋಗಗಳ ಉಲ್ಬಣದಿಂದ ವಾಣಿಜ್ಯ ಬೆಳೆ ನಾಶವಾಗುತ್ತಿದೆ. ಇದನ್ನು ಉಳಿಸುವಲ್ಲಿ ಪರಿಹಾರೋಪಾಯವನ್ನು ಕಂಡುಕೊಂಡಿದ್ದು, ಪ್ರತಿ ರೈತರು ತಮ್ಮ ತೋಟಗಳಿಗೆ ರೋಗಳ ಲಕ್ಷಣಗಳನ್ನು ಅರಿತು ಪೊಟ್ಯಾಸ್ ಬಳಸುವುದು, ಹುಳುಗಳ ನಾಶವನ್ನು ಮಾಡುವುದು, ಹಳದಿ ಬಣ್ಣದ ಬಲೆಗಳು, ಪರತಂತ್ರ ಜೀವಿಗಳನ್ನು ಮರಗಳಿಗೆ ಬಿಡುವುದು, ಬೇವಿನ ಎಣ್ಣೆ ಸಿಂಪಡೆ ಮಾಡಬೇಕು’ ಎಂದರು.
ತೋಟಗಾರಿಕಾ ಇಲಾಖೆ ಉಪ ನಿದೇಶಕ ಕೆ.ಎಸ್. ಯೋಗೀಶ್, ತೋಟಗಾರಿಕಾ ಸಹಾಯಕ ನಿರ್ದೇಶಕಿ ಸೀಮಾ, ಶಿವಕುಮಾರ್, ವಿಜ್ಞಾನಿಗಳಾದ ಡಾ. ಜಗದೀಶ್, ಡಾ. ನಾಗರಾಜ್, ಮುಖಂಡರಾದ ಗಂಜಿಗೆರೆ ಚಂದ್ರಶೇಖರ್, ಕಾಟೀಕೆರೆ ಉಮೇಶ್, ಸಂಕೋಡನಹಳ್ಳಿ ಮಂಜುನಾಥ್ ಉಪಸ್ಥಿತರಿದ್ದರು.
Quote - ರೋಗಗಳ ಉಲ್ಬಣದಿಂದ ತೆಂಗು ನಾಶವಾಗುತ್ತಿದ್ದು ಇದನ್ನು ಉಳಿಸುವಲ್ಲಿ ಸರ್ಕಾರ ಮುಂದಾಗಬೇಕಿದೆ. ಪರಿಹಾರ ಬಿಡುಗಡೆಗೂ ಯೋಚಿಸುವ ಅಗತ್ಯವಿದೆ. ಕೆ.ಎಂ. ಶಿವಲಿಂಗೇಗೌಡ ಶಾಸಕ
Cut-off box - ಹೋರಾಟಕ್ಕೂ ಸಿದ್ಧ ‘ತೆಂಗು ರೋಗಗಳ ನಿವಾರಣೆಗೆ ಯೋಜನೆ ರೂಪಿಸಿ ಔಷಧಿ ಸಿಂಪಡಣೆಗೆ ಸರ್ಕಾರ ಮುಂದಾಗಬೇಕು ವಿಜ್ಞಾನಿಗಳ ತಂಡ ರಚಿಸಿ ಕೀಟಗಳ ಪೂರ್ಣ ನಾಶಕ್ಕೆ ಯೋಜನೆ ರೂಪಿಸಬೇಕು. ಇಲ್ಲದಿದ್ದರೇ ತೆಂಗು ಬೆಳೆ ಸರ್ವನಾಶವಾಗಲಿದೆ. ಶಾಶ್ವತ ಪರಿಹಾರಕ್ಕಾಗಿ ನಾನು ರೈತರೊಡನೆ ಹೋರಾಟಕ್ಕೂ ಸಿದ್ಧನಿದ್ದೇನೆ’ ಎಂದು ಶಿವಲಿಂಗೇಗೌಡ ಹೇಳಿದರು. ‘ರಾಜ್ಯದಾದ್ಯಂತ ತೆಂಗಿಗೆ ರೋಗ ಹೆಚ್ಚಿದ್ದರೂ ಕೇಂದ್ರದ ತೆಂಗು ಅಭಿವೃದ್ಧಿ ಮಂಡಳಿ ಗಮನ ಹರಿಸಿಲ್ಲ. ಇದುವರೆವಿಗೂ ರೋಗ ನಿಯಂತ್ರಣಕ್ಕೆ ಮುಂದಾಗದೇ ಇರುವುದು ಸರಿಯಲ್ಲ. ಕೇಂದ್ರ ಸರ್ಕಾರ ಕೂಡಲೇ ₹ 500 ಕೋಟಿ ಬಿಡುಗಡೆ ಮಾಡಿ ರೈತರ ನೆರವಿಗೆ ಮುಂದಾಗಬೇಕಿದೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.