
ಅರಸೀಕೆರೆ: ತಾಲ್ಲೂಕಿನ ಇತಿಹಾಸ ಪ್ರಸಿದ್ಧ ಗುತ್ತಿನಕೆರೆ ಗ್ರಾಮದ ಲಕ್ಷ್ಮೀ ರಂಗನಾಥಸ್ವಾಮಿ ದೊಡ್ಡ ರಥೋತ್ಸವ ಶನಿವಾರ ಜರುಗಿತು.
ಮುಂಜಾನೆ ಉದ್ಭವ ಮೂರ್ತಿ ರಂಗನಾಥಸ್ವಾಮಿಗೆ ಪುರೋಹಿತರ ತಂಡಗಳೊಂದಿಗೆ ಪಂಚಾಮೃತ ಅಭಿಷೇಕ, ಸಹಸ್ರ ಕುಂಕುಮಾರ್ಚನೆ ಸೇರಿದಂತೆ ವಿಶೇಷ ಪೂಜಾ ಕೈಂಕರ್ಯಗಳನ್ನು ನೆರವೇರಿಸಲಾಯಿತು. ನಂತರ ರಂಗನಾಥ ಸ್ವಾಮಿಗೆ ತರಹೇವಾರಿ ಹೂಗಳಿಂದ ಮಾಡಿದ ಅಲಂಕಾರ ಎಲ್ಲರ ಗಮನ ಸೆಳೆಯಿತು.
ಶ್ರೀದೇವಿ ಮತ್ತು ಭೂದೇವಿ ಸಮೇತ ವಿರಾಜಮಾನನಾದ ರಂಗನಾಥಸ್ವಾಮಿ ಉತ್ಸವಮೂರ್ತಿಗೆ ಪುಷ್ಪಾಲಂಕಾರ ಮಾಡಲಾಯಿತು. ನಂತರ ದೊಡ್ಡರಥದಲ್ಲಿ ಕೂರಿಸಲಾಯಿತು. ಮಂಗಳಾರತಿ ಸಲ್ಲಿಸಿ ತೇರಿನ ಗಾಲಿಗಳಿಗೆ ತೆಂಗಿನಕಾಯಿ ಒಡೆಯುವ ಮೂಲಕ ದೊಡ್ಡ ರಥೋತ್ಸವಕ್ಕೆ ಚಾಲನೆ ನೀಡಲಾಯಿತು. ಭಕ್ತರು ಭಕ್ತಿಯಿಂದ ಗೋವಿಂದ ಗೋವಿಂದ ಎಂಬ ನಾಮಸ್ಮರಣೆಯೊಂದಿಗೆ ಬಾಳೆಹಣ್ಣನ್ನು ರಥಕ್ಕೆ ಎಸೆದು ನಮನ ಸಲ್ಲಿಸಿದರು.
ಗುತ್ತಿನಕೆರೆ ಗ್ರಾಮದ ಮೂಡಲಗಿರಿ ತಿಮ್ಮಪ್ಪಸ್ವಾಮಿ, ಬೇವಿನ ಮರದಮ್ಮ ದೇವಿ, ಹುಲ್ಲೇನಹಳ್ಳಿ, ಚಿಕ್ಕಮ್ಮ ದೇವಿ, ಹಾರನಹಳ್ಳಿ ಕೋಡಮ್ಮ ದೇವಿ, ಯಳವಾರೆ ದೇವಿ, ಹುಚ್ಚಮ್ಮದೇವಿ, ತಳಲೂರು ಬನ್ನಿಮಹಾಕಾಳಿ ದೇವರುಗಳು ಭಾಗವಹಿಸಿದ್ದವು.
ಚೆಲುವರಾಯ ಸ್ವಾಮಿ ಹಾಗೂ ಧೂತರಾಯ ಸ್ವಾಮಿ ಕುಣಿತವು ಜಾತ್ರಾ ಮೈದಾನದಲ್ಲಿ ಸೇರಿದ್ದ ಭಕ್ತರ ಮನಸೂರೆಗೊಂಡಿತು. ರಥೋತ್ಸವದ ನಂತರ ಶ್ರೀಲಕ್ಷ್ಮೀ ರಂಗನಾಥಸ್ವಾಮಿ ಉತ್ಸವಮೂರ್ತಿಗೆ ಉಯ್ಯಾಲೆ ಉತ್ಸವ, ವಸಂತೋತ್ಸವ, ಮಣೇವು ಸೇವಾ ಪೂಜಾ ಕಾರ್ಯವನ್ನು ಸಂಪ್ರದಾಯದಂತೆ ನೆರವೇರಿಸಲಾಯಿತು. ರಥೋತ್ಸವಕ್ಕೆ ಆಗಮಿಸಿದ ಭಕ್ತರಿಗೆ ಅನ್ನಸಂತರ್ಪಣೆ ನಡೆಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.