ADVERTISEMENT

ಬಾಕಿ ಕಾಮಗಾರಿ ತುರ್ತಾಗಿ ಪೂರ್ಣಗೊಳಿಸಿ: ಆಡಳಿತಾಧಿಕಾರಿ ಎಂ. ಬಾಬು ಸೂಚನೆ

ಅರಕಲಗೂಡು ತಾ.ಪಂ. ವಿಶೇಷ ಸಾಮಾನ್ಯ ಸಭೆ

​ಪ್ರಜಾವಾಣಿ ವಾರ್ತೆ
Published 24 ಫೆಬ್ರುವರಿ 2026, 7:31 IST
Last Updated 24 ಫೆಬ್ರುವರಿ 2026, 7:31 IST
ಅರಕಲಗೂಡು ತಾ.ಪಂ. ಸಾಮಾನ್ಯ ಸಭೆ ಆಡಳಿತಾಧಿಕಾರಿ ಎಂ. ಬಾಬು ಆದ್ಯಕ್ಷತೆಯಲ್ಲಿ ಸೋಮವಾರ ನಡೆಯಿತು. ಇಒ ಶ್ರೀನಿವಾಸ್ ಭಾಗವಹಿಸಿದ್ದರು 
ಅರಕಲಗೂಡು ತಾ.ಪಂ. ಸಾಮಾನ್ಯ ಸಭೆ ಆಡಳಿತಾಧಿಕಾರಿ ಎಂ. ಬಾಬು ಆದ್ಯಕ್ಷತೆಯಲ್ಲಿ ಸೋಮವಾರ ನಡೆಯಿತು. ಇಒ ಶ್ರೀನಿವಾಸ್ ಭಾಗವಹಿಸಿದ್ದರು    

ಅರಕಲಗೂಡು: ‘15ನೇ ಹಣಕಾಸು ಯೋಜನೆಯ ಬಾಕಿ ಕಾಮಗಾರಿಗಳನ್ನು ನಿಗದಿತ ಸಮಯದಲ್ಲಿ ಪೂರ್ಣಗೊಳಿಸದಿದ್ದರೆ 16 ನೇ ಹಣಕಾಸು ಯೋಜನೆಯ ಹಣ ಬಿಡುಗಡೆಯಾಗುವುದಿಲ್ಲ. ಗ್ರಾಮ ಪಂಚಾಯಿತಿ ಆಡಳಿತಾಧಿಕಾರಿಗಳು ವೈಯುಕ್ತಿಕ ಗಮನ ಹರಿಸಿ ಕಾಮಗಾರಿಗಳನ್ನು ಪೂರ್ಣಗೊಳಿಸಲು ಕ್ರಮ ಕೈಗೊಳ್ಳಿ’ ಎಂದು ಜಿ.ಪಂ. ಉಪಕಾರ್ಯದರ್ಶಿ ಹಾಗೂ ತಾಲ್ಲೂಕು ಪಂಚಾಯಿತಿ ಆಡಳಿತಾಧಿಕಾರಿ ಎಂ. ಬಾಬು ಸೂಚಸಿದರು.

ತಾ.ಪಂ. ಸಭಾಂಗಣದಲ್ಲಿ ಸೋಮವಾರ ನಡೆದ ವಿಶೇಷ ಸಾಮಾನ್ಯ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ‘15 ನೇ ಹಣಕಾಸು ಯೋಜನೆಯಲ್ಲಿ ₹21 ಕೋಟಿ ಹಣ ಬಾಕಿ ಉಳಿದಿದೆ. ನಿಯಮಾನುಸಾರ ಕಾಮಗಾರಿಗಳನ್ನು ಕೈಗೆತ್ತಿಕೊಂಡು ಪೂರ್ಣಗೊಳಿಸಲು ಕ್ರಮ ಕೈಗೊಳ್ಳಬೇಕು. ರಸ್ತೆ, ಕಟ್ಟಡ ಮುಂತಾದ ಶಾಶ್ವತ ಕಾಮಗಾರಿಗಳಿಗೆ ಆದ್ಯತೆ ನೀಡಬೇಕು’ ಎಂದರು.‘

ಮಾರ್ಚ್‌ 10ರೊಳಗೆ ಉಳಿಕೆ ಕಾಮಗಾರಿಗಳನ್ನು ಶೇ 100ರಷ್ಟು ಪೂರ್ಣಗೊಳಿಸಬೇಕು. ಮಾರ್ಚ್‌ 20ಕ್ಕೆ ಖಜಾನೆ ಲಾಕ್ ಆಗಲಿದೆ. ಗ್ರಾ.ಪಂ. ವ್ಯಾಪ್ತಿಯಲ್ಲಿ ಬಹಳಷ್ಟು ₹3ಲಕ್ಷದಿಂದ ₹5 ಲಕ್ಷ ಮೊತ್ತದ ಕಾಮಗಾರಿಗಳಿದ್ದು ಇವುಗಳನ್ನು ಒಂದು ವಾರದಲ್ಲಿ ಪೂರ್ಣಗೊಳಿಸಿ’ ಎಂದು ತಾಕೀತು ಮಾಡಿದರು.

ADVERTISEMENT

‘ಬರುವ ದಿನಗಳಲ್ಲಿ ಬಿಸಿಲಿನ ಬೇಗೆ ತೀವ್ರ ಹೆಚ್ಚಳವಾಗಲಿದೆ ಎಂದು ವರದಿಗಳು ಮಾಧ್ಯಮದಲ್ಲಿ ಪ್ರಕಟವಾಗಿದೆ. ಜನರ ಆರೋಗ್ಯದ ಮೇಲೆ ಬೀರುವ ಪರಿಣಾಮಗಳ ಕುರಿತು ಆರೋಗ್ಯ ಇಲಾಖೆ ಜನರಲ್ಲಿ ಅರಿವು ಮೂಡಿಸಬೇಕು. ಜಾತ್ರೆ, ಹಬ್ಬಗಳಲ್ಲಿ ಹೆಚ್ಚಿನ ಜನಸಂದಣಿ ಸೇರುತ್ತಿದ್ದು, ಕುಡಿಯುವ ನೀರಿನ ಬಗ್ಗೆ ಹೆಚ್ಚಿನ ಜಾಗ್ರತೆ ವಹಿಸಬೇಕು. ನೀರಿನ ಶುದ್ಧತೆ ಕುರಿತು ಕಡ್ಡಾಯವಾಗಿ ಪರೀಕ್ಷೆ ನಡೆಸಬೇಕು’ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.

‘ಶಾಲೆ, ವಸತಿಶಾಲೆ, ಹಾಸ್ಟೆಲ್‌ಗಳಲ್ಲಿ ಆಹಾರ ಮತ್ತು ನೀರಿನ ಶುದ್ಧತೆ ಕುರಿತು ಹೆಚ್ಚಿನ ನಿಗಾ ವಹಿಸಬೇಕು. ಪರೀಕ್ಷಾ ಸಮಯವಾಗಿದ್ದು ವಿದ್ಯಾರ್ಥಿಗಳ ಓದಿಗೆ ಅನುಕೂಲವಾಗುವಂತೆ ಹಾಸ್ಟೆಲ್‌ಗಳಲ್ಲಿ ಪಾಠಗಳನ್ನು ನಿಗದಿತವಾಗಿ ನಡೆಯುವಂತೆ ನೋಡಿಕೊಳ್ಳಬೇಕು’ ಎಂದರು.

ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶಕ್ಕೆ ಕೈಗೊಂಡಿರುವ ಕ್ರಮಗಳ ಕುರಿತು ಮಾಹಿತಿ ಶಿಕ್ಷಣ ಇಲಾಖೆ ಅಧಿಕಾರಿಗಳಿಂದ ಮಾಹಿತಿ ಪಡೆದು, ಕಳೆದ ಸಾಲಿನಲ್ಲಿ ಕಡಿಮೆ ಫಲಿತಾಂಶ ದಾಖಲಿಸಿರುವ ಶಾಲೆಗಳ ಬಗ್ಗೆ ಹೆಚ್ಚಿನ ನಿಗಾವಹಿಸುವಂತೆ ಸೂಚಿಸಿದರು.

20 ಗ್ರಾ.ಪಂ. ವ್ಯಾಪ್ತಿಯ 70 ಗ್ರಾಮಗಳಲ್ಲಿ ಕೊಳವೆ ಬಾವಿ ನಕೊರೆಸಿದ್ದರೂ ಮೋಟಾರ್ ಅಳವಡಿಸಿ, ವಿದ್ಯುತ್ ಸಂಪರ್ಕ ಕಲ್ಪಿಸಿಲ್ಲದ್ದರಿಂದ ಈ ಕುರಿತು ತುರ್ತು ಗಮನ ಹರಸಿ ಕ್ರಮ ಕೈಗೊಳ್ಳುವಂತೆ ಜೆಜೆಎಂ ಅಧಿಕಾರಿಗಳಿಗೆ ಸೂಚಿಸಿದರು.

ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ₹1 ಕೋಟಿ ವೆಚ್ಚದಲ್ಲಿ ಲ್ಯಾಬ್ ನಿರ್ಮಿಸಿದ್ದರೂ ತಂತ್ರಜ್ಞರು ಇಲ್ಲದೆ ಅದರ ಉಪಯೋಗ ರೋಗಿಗಳಿಗೆ ದೊರೆಯುತ್ತಿಲ್ಲ. ಕಾಯಂ ತಂತ್ರಜ್ಞರ ನೇಮಕಕ್ಕೆ ಆರೋಗ್ಯಇಲಾಖೆಯ ಹಿರಿಯ ಅಧಿಕಾರಿಗಳಿಗೆ ಪತ್ರ ಬರೆಯುವುದಾಗಿ ತಿಳಿಸಿದರು.

ತಾ.ಪಂ. ಇಒ ಶ್ರೀನಿವಾಸ್ ಹಾಗೂ ವಿವಿಧ ಇಲಾಖೆಗಳ ತಾಲ್ಲೂಕು ಮಟ್ಟದ ಅಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು.

ಅರಕಲಗೂಡಿನಲ್ಲಿ ಸೋಮವಾರ ನಡೆದ ತಾಪಂ ಸಾಮಾನ್ಯ ಸಭೆಯಲ್ಲಿ ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಪುಷ್ಪಲತಾ ಮಾಹಿತಿ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.