
ಅರಕಲಗೂಡು: ತಾಲ್ಲೂಕಿನಲ್ಲಿ ಮೊಡಮುಸುಕಿದ ವಾತಾವರಣ ಹಾಗೂ ತುಂತುರು ಮಳೆಯಾಗುತ್ತಿರುವ ಕಾರಣ ರೈತರು ಧಾನ್ಯ ಒಕ್ಕಣೆ ನಡೆಸಲು ಅಡ್ಡಿಯಾಗಿದೆ.
ಕಳದ ಎರಡು ದಿನಗಳಿಂದ ಮೋಡ ಮುಸುಕಿದ ವಾತಾವರಣ ಸೃಷ್ಟಿಯಾಗಿತ್ತು. ಭಾನುವಾರ ಅಲ್ಲಲ್ಲಿ ತುಂತುರು ಮಳೆಯಾಯಿತು. ಮೋಡಗಳು ದಟ್ಟೈಸಿ ಬೆಳಿಗ್ಗೆಯಿಂದಲೇ ಬಿಟ್ಟು ಬಿಟ್ಟು ಮಳೆ ಉದುರಿದ್ದು ರೈತರಿಗೆ ತಲೆನೋವಾಯಿತು. ಮಲ್ಲಿಪಟ್ಟಣ ಹೋಬಳಿ, ದೊಡ್ಡಬೆಮ್ಮತ್ತಿ ಭಾಗದಲ್ಲಿ ಈಗಾಗಲೇ ಭತ್ತದ ಕಟಾವು ನಡೆಸಿ ಬಣವೆ ಹಾಕಿರುವ ರೈತರು ಒಕ್ಕಣೆ ಕಾರ್ಯ ಕೈಗೊಂಡಿದ್ದಾರೆ. ದೊಡ್ಡಮಗ್ಗೆ, ಕೊಣನೂರು, ರಾಮನಾಥಪುರ ಹೋಬಳಿ ಭಾಗದಲ್ಲಿ ಕಟಾವು ಕಾರ್ಯ ಮುಕ್ತಾಯದ ಹಂತ ತಲುಪಿದೆ. ಕೆಲವು ಕಡೆ ಬಣವೆ ಹಾಕಿ ಒಕ್ಕಣೆ ನಡೆಸಲು ಮುಂದಾಗಿದ್ದ ರೈತರಿಗೆ ಇದ್ದಕ್ಕಿದ್ದಂತೆ ಆಕಾಲಿಕವಾಗಿ ಬೀಳುತ್ತಿರುವ ಮಳೆ ಬೆಚ್ಚಿ ಬೀಳುವಂತೆ ಮಾಡಿದೆ.
ರಾಜಮುಡಿ, ರಾಜಭೋಗ ತಳಿಯ ಭತ್ತದ ಬೆಳೆಗೆ ಹೆಸರಾದ ಕಟ್ಟೇಪುರ ಎಡ ಮತ್ತು ಬಲದಂಡೆ ನಾಲಾ ವ್ಯಾಪ್ತಿ ಹಾಗೂ ಹೇಮಾವತಿ ಮತ್ತು ಹಾರಂಗಿ ನಾಲಾ ಅಚ್ಚುಕಟ್ಟಿನಲ್ಲಿ ಸಾವಿರಾರು ಎಕರೆ ಪ್ರದೇಶದಲ್ಲಿ ಭತ್ತದ ಬೆಳೆ ಬೆಳೆಯಲಾಗಿದೆ. ಕಟಾವು ಮಾಡಿ ಒಕ್ಕಣೆ ಸಮಯದಲ್ಲಿ ಮಳೆ ಸುರಿದರೆ ಭತ್ತದ ಫಸಲು ಕರಗಿ ಹುಲ್ಲು ಹಾಳಾಗಲಿದ್ದು ಕೈಗೆ ಬಂದ ತುತ್ತು ಬಾಯಿಗೆ ಬಾರದಂತಾಗಿ ಅಪಾರ ನಷ್ಟ ಅನುಭವಿಸಬೇಕಾಗುತ್ತದೆ ಎನ್ನುವುದು ರೈತರ ಕೊರಗಾಗಿದೆ. ಭತ್ತವಲ್ಲದೆ ರಾಗಿ, ಮುಸುಕಿನ ಜೋಳದ ಒಕ್ಕಣೆ ಕಾರ್ಯವೂ ನಡೆದಿದ್ದು ಹವಾಮಾನ ವೈಪರೀತ್ಯ ರೈತರಿಗೆ ತಲೆನೋವಾಗಿ ಪರಿಣಮಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.