ADVERTISEMENT

ಮಟ್ಟನವಿಲೆ ಬಳಿ ಸುಟ್ಟ ಕಾರಿನ ಡಿಕ್ಕಿಯಲ್ಲಿ ಶವ ಪತ್ತೆ ಪ್ರಕರಣ: ಮೂವರ ಬಂಧನ

ಮಟ್ಟನವಿಲೆ ಬಳಿ ಸುಟ್ಟ ಕಾರಿನ ಡಿಕ್ಕಿಯಲ್ಲಿ ಶವ ಪತ್ತೆ ಪ್ರಕರಣ

​ಪ್ರಜಾವಾಣಿ ವಾರ್ತೆ
Published 29 ಅಕ್ಟೋಬರ್ 2020, 16:11 IST
Last Updated 29 ಅಕ್ಟೋಬರ್ 2020, 16:11 IST
ಕೊಲೆ ಪ್ರಕರಣದ ಬಂಧಿತ ಆರೋಪಿಗಳು
ಕೊಲೆ ಪ್ರಕರಣದ ಬಂಧಿತ ಆರೋಪಿಗಳು   

ಹಾಸನ: ಚನ್ನರಾಯಪಟ್ಟಣ ತಾಲ್ಲೂಕಿನ ಮಟ್ಟನವಿಲೆ ಗ್ರಾಮದ ಕಗ್ಗೆರೆ ರಸ್ತೆಯಲ್ಲಿ ಸುಟ್ಟು ಕರಕಲಾದ ಸ್ಥಿತಿಯಲ್ಲಿ ಕಾರು ಪತ್ತೆಯಾದ ಪ್ರಕರಣವನ್ನು 24 ಗಂಟೆಯೊಳಗೆ ಬೇಧಿಸಿರುವ ಪೊಲೀಸರು, ಕೊಲೆಯಾದ ಯುವಕನ ಪತ್ನಿ ಸೇರಿ ಮೂವರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಚನ್ನರಾಯಪಟ್ಟಣ ತಾಲ್ಲೂಕಿನ ಲಕ್ಷ್ಮೀಪುರದ ಗ್ರಾಮದ ದಿನೇಶ್‌ ಕೊಲೆಯಾದ ಯುವಕ. ಪ್ರಕರಣಕ್ಕೆ ಸಂಬಂಧಿಸಿದಂತೆ ತಾಲ್ಲೂಕಿನ ಸಾಣೇನಹಳ್ಳಿಯ ದಿನೇಶನ ಪತ್ನಿ ಅಭಿಲಾಷ (22), ಆಕೆಯ ತಂದೆ ಮಂಜುನಾಥ (55), ಸಹೋದರ ಬಸವರಾಜು (21) ಎಂಬುವವರನ್ನು ಬಂಧಿಸಲಾಗಿದೆ. ಸುಟ್ಟ ಕಾರಿನ ಎಂಜಿನ್‌ ನಂಬರ್‌ ಆಧರಿಸಿ ಪ್ರಕರಣ ಭೇದಿಸಲಾಗಿದೆ ಎಂದು ಪೊಲೀಸ್‌ ವರಿಷ್ಠಾಧಿಕಾರಿ ಆರ್‌.ಶ್ರೀನಿವಾಸ್‌ಗೌಡ ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

‘ದಿನೇಶ್ ಬೆಂಗಳೂರಿನಲ್ಲಿ ಕಾರು ಚಾಲಕನಾಗಿ ಕೆಲಸ ಮಾಡುತ್ತಿದ್ದ. ಈತನ ತಾತ ನಂಜುಂಡಯ್ಯನಿಗೆ ಪುಟ್ಟಸ್ವಾಮಿ ಮತ್ತು ಮಂಜಮ್ಮ ಎಂಬ ಮಕ್ಕಳು ಇದ್ದಾರೆ. ಇದರಲ್ಲಿ ಮಂಜಮ್ಮನ ಮಗಳು ಅಭಿಲಾಷಳನ್ನು ದಿನೇಶ್‌ ನಾಲ್ಕು ವರ್ಷದ ಹಿಂದೆ ವಿವಾಹವಾಗಿದ್ದ. ಇತ್ತೀಚೆಗೆ ದಿನೇಶ್‌ ಮತ್ತೊಂದು ವಿವಾಹವಾಗಿದ್ದ. ಈ ಕಾರಣಕ್ಕಾಗಿ ಇಬ್ಬರ ನಡುವೆ ಕೌಟುಂಬಿಕ ಕಲಹ ಏರ್ಪಟಿತ್ತು. ಈ ಸಂಬಂಧ ನುಗ್ಗೇಹಳ್ಳಿ ಮತ್ತು ಬೆಂಗಳೂರಿನ ಚಿಕ್ಕಜಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು’ ಎಂದು ತಿಳಿಸಿದರು.

ADVERTISEMENT

‘ಎರಡನೇ ಮದುವೆಯಾದ ಕಾರಣ ದಿನೇಶ್‌ನನ್ನು ಕೊಲೆ ಮಾಡುವ ಉದ್ದೇಶದಿಂದ ಅ. 10ರಂದು ಅಭಿಲಾಷ ಕರೆ ಮಾಡಿ ಮನೆಗೆ ಕರೆದಿದ್ದಾಳೆ. ಮನೆಗೆ ಬಂದ ದಿನೇಶನಿಗೆ ಮದ್ಯ ಕುಡಿಸಿದ್ದಾರೆ. ಬಳಿಕ ಅಭಿಲಾಷಳ ತಂದೆ ಮಂಜುನಾಥ ಮತ್ತು ಸಹೋದರ ಬಸವರಾಜು ಸೇರಿ ದಿನೇಶನನ್ನು ಹತ್ಯೆ ಮಾಡಿದ್ದಾರೆ. ನಂತರ ಶವವನ್ನು ಕಾರಿನ ಡಿಕ್ಕಿಯಲ್ಲಿ ಇರಿಸಿ, ಬೆಂಗಳೂರಿನಿಂದ ಮಟ್ಟನವಿಲೆ ಗ್ರಾಮಕ್ಕೆ ಕಾರಿನಲ್ಲಿ ಬಂದಿದ್ದಾರೆ. ಇದಕ್ಕಾಗಿ ಬಾಬು ಎಂಬ ಚಾಲಕನನ್ನು ಕರೆದುಕೊಂಡು ಬಂದಿದ್ದಾರೆ. ಬಳಿಕ ಆತನಿಗೆ ಹಣ ಕೊಟ್ಟು ವಾಪಸ್‌ ಹೇಳಿದ್ದಾರೆ. ಕೊಲೆಯ ಬಗ್ಗೆ ಆತನಿಗೆ ಮಾಹಿತಿ ಇಲ್ಲ. ಬಳಿಕ ಪೆಟ್ರೋಲ್‌ ಸುರಿದು ದಿನೇಶ್ ಮೃತದೇಹವನ್ನು ಕಾರು ಸಮೇತ ಸುಟ್ಟು ಹಾಕಲಾಗಿದೆ. ಕೃತ್ಯಕ್ಕೆ ಬಳಸಿದ ಕಾರು ಅನ್ನು ಪಿರಿಯಾಪಟ್ಟಣದ ವ್ಯಕ್ತಿಯೊಬ್ಬರಿಂದ ಬಹಳ ಹಿಂದೆಯೇ ಖರೀದಿಸಲಾಗಿದೆ. ಆದರೆ ತಮ್ಮ ಹೆಸರಿಗೆ ನೋಂದಣಿ ಮಾಡಿಕೊಂಡಿರಲಿಲ್ಲ’ ಎಂದು ಎಸ್ಪಿ ಮಾಹಿತಿ ನೀಡಿದರು.

‘ಆರೋಪಿ ಪತ್ತೆ ಕಾರ್ಯದಲ್ಲಿ ಡಿವೈಎಸ್‌ಪಿ ಬಿ.ಬಿ. ಲಕ್ಷ್ಮೇಗೌಡ, ಚನ್ನರಾಯಪಟ್ಟಣ ವೃತ್ತ ಸಿಪಿಐ ಬಿ.ಜಿ. ಕುಮಾರ, ಹಿರೀಸಾವೆ ಪಿಎಸ್‌ಐ ಶ್ರೀನಿವಾಸ, ಚನ್ನರಾಯಪಟ್ಟಣ ನಗರ ಠಾಣೆ ಪಿಎಸ್‌ಐ ವಿನೋದ್‌ ರಾಜ್‌, ಸಿಬ್ಬಂದಿ ಸುರೇಶ್‌, ಜಯಪ್ರಕಾಶ್‌, ಮಹೇಶ್‌, ಹರೀಶ್‌, ಚಂದ್ರೇಶ್‌, ಶಫೀ ಉರ್‌ ರೆಹಮಾನ್‌, ಜವರೇಗೌಡ, ಕುಮಾರಸ್ವಾಮಿ ಶ್ರಮಿಸಿದ್ದಾರೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.