ADVERTISEMENT

ಖಾರದ ಪುಡಿ ಎರಚಿ ಹಣ ದೋಚಿದ್ದವನ ಬಂಧನ

ಬಂಧಿತನಿಂದ ₹5 ಲಕ್ಷ ವಶ, ತಲೆ ಮರೆಸಿಕೊಂಡಿರುವ ಮೊತ್ತೊಬ್ಬ ಆರೋಪಿ

​ಪ್ರಜಾವಾಣಿ ವಾರ್ತೆ
Published 31 ಅಕ್ಟೋಬರ್ 2020, 13:53 IST
Last Updated 31 ಅಕ್ಟೋಬರ್ 2020, 13:53 IST
ಇರ್ಫಾನ್‌ ಅಹಮ್ಮದ್‌
ಇರ್ಫಾನ್‌ ಅಹಮ್ಮದ್‌   

ಹಾಸನ: ಅರಕಲಗೂಡು ತಾಲ್ಲೂಕಿನ ಮಲ್ಲಾಪುರ ಗ್ರಾಮದ ಜಮೀನಲ್ಲಿ ಮಲಗಿದ್ದ ಜಾನುವಾರು ಮಾರಾಟಗಾರನಿಂದ ಹಣ ದೋಚಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿ ₹ 5 ಲಕ್ಷ ನಗದು ವಶಪಡಿಸಿಕೊಂಡಿದ್ದು, ಮೊತ್ತೊಬ್ಬ ಆರೋಪಿ ತಲೆ ಮರೆಸಿಕೊಂಡಿದ್ದಾನೆ.

ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ ತಾಲ್ಲೂಕಿನ ಹಲಗನಹಳ್ಳಿ ಗ್ರಾಮದ ಇರ್ಫಾನ್‌ ಅಹಮ್ಮದ್‌ (40) ಬಂಧಿತ ಆರೋಪಿ. ಕೃತ್ಯದಲ್ಲಿ ಸಹಾಯ ಮಾಡಿದ್ದ ಸೈಯ್ಯದ್‌ ಮುಬೀನ್‌ ಎಂಬಾತ ₹99,980 ನಗದಿನೊಂದಿಗೆ ಪರಾರಿಯಾಗಿದ್ದು, ಆತನ ಬಂಧನಕ್ಕೆ ಬಲೆ ಬೀಸಲಾಗಿದೆ ಎಂದು ಪೊಲೀಸ್‌ ವರಿಷ್ಠಾಧಿಕಾರಿ ಆರ್‌.ಶ್ರೀನಿವಾಸ್‌ ಗೌಡ ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಹಲಗನಹಳ್ಳಿ ಗ್ರಾಮದ ಸೈಯ್ಯದ್‌ ಯಾಕೂಬ್‌ ಆಡು, ಕುರಿ, ದನದ ವ್ಯಾಪಾರವನ್ನು ವೃತ್ತಿಯಾಗಿಸಿಕೊಂಡಿದ್ದರು. ಹಾಗಾಗಿ ಅವರಳ ಬಳಿ ಲಕ್ಷಾಂತರ ರೂಪಾಯಿ ಹಣ ಇರಿಸಿಕೊಳ್ಳುತ್ತಿದ್ದರು. ಈ ವಿಷಯ ಅರಿತಿದ್ದ ಅದೇ ಗ್ರಾಮದ ಇರ್ಫಾನ್‌ ಅಹಮ್ಮದ್‌ ಮತ್ತು ಸೈಯ್ಯದ್‌ ಮುಬೀನ್‌ ಆತನಿಂದ ಹಣ ದೋಚುವ ಹುನ್ನಾರ ನಡೆಸಿದ್ದರು.

ADVERTISEMENT

ಸೆ. 28 ರಂದು ಸೈಯ್ಯದ್‌ ಯಾಕೂಬ್‌ ರಾಮನಾಥಪುರ ಹೋಬಳಿಯ ಮಲ್ಲಪುರ ಗ್ರಾಮದಲ್ಲಿ ಶುಂಠಿ ಬೆಳೆ ಕಾಯುವ ಸಲುವಾಗಿ ನಿರ್ಮಿಸಿದ್ದ ಜಮೀನ ಶೇಡ್‌ನಲ್ಲಿ ಉಳಿದುಕೊಂಡಿದ್ದರು. ರಾತ್ರಿ ಸುಮಾರು 1.30 ರ ವೇಳೆಯಲ್ಲಿ ಮುಖಕ್ಕೆ ಮುಸುಕು ಧರಿಸಿ ದಾಳಿ ಮಾಡಿದ್ದ ಇಬ್ಬರು ಆರೋಪಿಗಳು, ಯಾಕೂಬ್‌ ಕಣ್ಣಿಗೆ ಖಾರದಪುಡಿ ಎರಚಿ, ಹಲ್ಲೆ ನಡೆಸಿ, ಕೈ ಕಾಲುಗಳನ್ನು ಹಗ್ಗದಿಂದ ಕಟ್ಟಿ ಹಾಕಿದ ಬಳಿಕ ಅವರ ಬಳಿಯಿದ್ದ ₹5.99 ಲಕ್ಷ ಹಣ ದೋಚಿ ಪರಾರಿಯಾಗಿದ್ದರು ಎಂದು ವಿವರಿಸಿದರು.

ಆರೋಪಿಯ ಪತ್ತೆಗೆ ವಿಶೇಷ ತಂಡ ರಚಿಸಲಾಯಿತು. ದೂರದಾರ ನೀಡಿದ ಮಾಹಿತಿ ಆಧರಿಸಿ, ಇರ್ಫಾನ್‌ ಅಹಮ್ಮದ್‌
ಚಲನವಲನದ ಮೇಲೆ ನಿಗಾ ವಹಿಸಲಾಯಿತು. ಆತನ ಬಗ್ಗೆ ಮಾಹಿತಿ ಕಲೆ ಹಾಕಿದಾಗ ಆತ ಘಟನೆ ನಡೆದ ನಂತರ ಗ್ರಾಮಕ್ಕೆ ಹಿಂದಿರುಗಿಲ್ಲ ಎನ್ನುವುದು ಗೊತ್ತಾಯಿತು. ನಂತರ ಅ. 30ರ ರಾತ್ರಿ 7 ಗಂಟೆಗೆ ಇರ್ಫಾನ್‌ನನ್ನು ಹಲಗನಹಳ್ಳಿಯಲ್ಲಿ ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ, ಹಣ ದೋಚಿರುವುದಾಗಿ ಒಪ್ಪಿಕೊಂಡಿದ್ದಾನೆ ಎಂದರು.

ಪ್ರಕರಣ ಭೇದಿಸಲು ಶ್ರಮಿಸಿದ ಹೊಳೆನರಸೀಪುರ ಉಪ ವಿಭಾಗದ ಉಪ ಅಧೀಕ್ಷಕ ಲಕ್ಷ್ಮೇಗೌಡ, ಅರಕಲಗೂಡು ವೃತ್ತದ ಪಿಎಸ್‌ಐ ಸತ್ಯನಾರಾಯಣ್‌, ಪಿಎಸ್‌ಐ ಸಾಗರ್‌, ಸಿಬ್ಬಂದಿಗಳಾದ ಪ್ರಕಾಶ್‌, ರಾಜಶೆಟ್ಟಿ, ಸುರೇಶ್‌, ಸಣ್ಣೇಗೌಡ, ಶಿವಕುಮಾರ, ನಂದೀಶ, ನವೀನ್‌ ಕುಮಾರ, ಮಹೇಶ್‌, ಚೇತನ್‌ ಕುಮಾರ್‌, ತಾಂತ್ರಿಕ ವಿಭಾಗದ ಎಚ್‌.ಸಿ. ಪೀರ್‌ ಖಾನ್‌, ಚಾಲಕ ಜಗನ್ನಾಥ್‌, ಹೇಮಚಂದ್ರ ಅವರಿಗೆ ಎಸ್ಪಿ ಪ್ರಶಂಸಾ ಪತ್ರ ನೀಡಿ ಅಭಿನಂದಿಸಿದರು.

ಹೆಚ್ಚುವರಿ ಪೊಲೀಸ್‌ ವರಿಷ್ಠಾಧಿಕಾರಿ ಬಿ.ಎನ್‌. ನಂದಿನಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.