ADVERTISEMENT

ಆಯುಷ್ಮಾನ್‌ ಆರೋಗ್ಯ ಕಾರ್ಡ್‌ ವಿತರಣೆ ಸ್ಥಗಿತ

ರಾಜ್ಯದಾದ್ಯಂತ ಸರ್ವರ್‌ ಸಮಸ್ಯೆ; ರೋಗಿಗಳ ಪರದಾಟ

​ಪ್ರಜಾವಾಣಿ ವಾರ್ತೆ
Published 25 ನವೆಂಬರ್ 2019, 12:01 IST
Last Updated 25 ನವೆಂಬರ್ 2019, 12:01 IST
ಆಯುಷ್ಮಾನ್‌ ಭಾರತ್‌
ಆಯುಷ್ಮಾನ್‌ ಭಾರತ್‌   

ಹಾಸನ: ಆಯುಷ್ಮಾನ್‌ ಭಾರತ ಆರೋಗ್ಯ ಕರ್ನಾಟಕ ಯೋಜನೆಯ ಆರೋಗ್ಯ ಕಾರ್ಡ್‌ ವಿತರಣೆಯನ್ನು ಸರ್ವರ್‌ ಸಮಸ್ಯೆಯಿಂದಾಗಿ ಸ್ಥಗಿತಗೊಳಿಸಿರುವ ಕಾರಣ ರೋಗಿಗಳು ಪರದಾಡುವಂತಾಗಿದೆ.

ಕೇಂದ್ರ ಸರ್ಕಾರದ ಆಯುಷ್ಮಾನ್‌ ಜತೆಗೆ ಕರ್ನಾಟಕ ಆರೋಗ್ಯ ಯೋಜನೆಯನ್ನು ವೀಲಿನಗೊಳಿಸಿ ಆಯುಷ್ಮಾನ್‌ ಭಾರತ ಆರೋಗ್ಯ ಕರ್ನಾಟಕ ಎಂಬ ಹೆಸರಿನಡಿ ಸಾರ್ವಜನಿಕ ಸೇವೆ ಒದಗಿಸಲಾಗುತ್ತಿತ್ತು. ₹ 10 ಶುಲ್ಕ ಪಾವತಿಸಿ, ₹ 5 ಲಕ್ಷ ವರೆಗೆ ಚಿಕಿತ್ಸೆ ಪಡೆಯಬಹುದಾಗಿದ್ದ ಈ ಯೋಜನೆ ಹಲವು ದಿನಗಳಿಂದ ರಾಜ್ಯದಾದ್ಯಂತ ಸ್ಥಗಿತಗೊಂಡಿದೆ.

‌ಕಾರ್ಡ್‌ ವಿತರಣೆ ಸ್ಥಗಿತಗೊಂಡಿರುವ ಮಾಹಿತಿ ಇಲ್ಲದೇ ನಿತ್ಯ ನೂರಾರು ಜನರು ಸರ್ಕಾರಿ ಆಸ್ಪತ್ರೆಯಲ್ಲಿ ಸಾಲಿನಲ್ಲಿ ನಿಲ್ಲುತ್ತಿದ್ದಾರೆ. ಕಾರ್ಡ್‌ ವಿತರಣೆಗಾಗಿಯೇ ಆಸ್ಪತ್ರೆಯಲ್ಲಿ 15 ಸಿಬ್ಬಂದಿ ನೇಮಕ ಮಾಡಲಾಗಿದೆ.

ADVERTISEMENT

ಈ ಹಿಂದೆ ಜಾರಿಯಲ್ಲಿದ್ದ ಯಶಸ್ವಿನಿ, ವಾಜಪೇಯಿ ಆರೋಗ್ಯ ಶ್ರೀ, ರಾಜೀವ್‌ ಆರೋಗ್ಯ ಭಾಗ್ಯ, ಮುಖ್ಯಮಂತ್ರಿ ಹರೀಶ್‌ ಸಾಂತ್ವನ ಯೋಜನೆ ಸೇರಿ ಅನೇಕ ಯೋಜನೆಗಳನ್ನು ಒಂದುಗೂಡಿಸಿ ಆಯುಷ್ಮಾನ್‌ ಭಾರತ ಆರೋಗ್ಯ ಕರ್ನಾಟಕ ಯೋಜನೆ ಮಾಡಲಾಗಿದೆ.

‘ರಾಜ್ಯದಾದ್ಯಂತ ಸಮಸ್ಯೆ ಇರುವ ಕಾರಣ ಆರೋಗ್ಯ ಕಾರ್ಡ್ ವಿತರಿಸುತ್ತಿಲ್ಲ. ಸಾಫ್ಟ್‌ವೇರ್‌ ಅಪ್‌ಡೇಟ್‌ ಕಾರ್ಯಗಳು ನಡೆಯುತ್ತಿವೆ. ಕೆಲಸ ತ್ವರಿತವಾಗಿ ನಡೆಯುವ ಉದ್ದೇಶದಿಂದ ಕೆಲ ಬದಲಾವಣೆ ಆಗುತ್ತಿದೆ. ಎರಡು ದಿನದಲ್ಲಿ ಸಮಸ್ಯೆ ಬಗೆಹರಿಯಲಿದ್ದು, ನಂತರ ಕಾರ್ಡ್‌ ವಿತರಿಸಲಾಗುವುದು’ ಎಂದು ಹಿಮ್ಸ್‌ ನಿರ್ದೇಶಕ ಡಾ.ಬಿ.ಸಿ.ರವಿಕುಮಾರ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.