ADVERTISEMENT

ಬೇಬಿ ಟ್ಯಾಂಕ್‌ ಅಳವಡಿಕೆ: ಇಬ್ಬರ ಬಂಧನ

ಪಂಪ್‌ ಮಾಲೀಕರಿಗೆ ವಂಚನೆ: ಐವರ ವಿರುದ್ಧ ಎಫ್‌ಐಆರ್‌ ದಾಖಲು

​ಪ್ರಜಾವಾಣಿ ವಾರ್ತೆ
Published 17 ಜುಲೈ 2021, 15:09 IST
Last Updated 17 ಜುಲೈ 2021, 15:09 IST
ಆರ್‌.ಶ್ರೀನಿವಾಸ್‌ ಗೌಡ
ಆರ್‌.ಶ್ರೀನಿವಾಸ್‌ ಗೌಡ   

ಹಾಸನ: ಇಂಧನ ಸಾಗಣೆ ಟ್ಯಾಂಕರ್‌ಗಳ ಒಳಗೆ ಸಣ್ಣ ಟ್ಯಾಂಕರ್‌ (ಬೇಬಿ ಟ್ಯಾಂಕರ್‌) ಅಳವಡಿಸಿಕೊಂಡು ಪಂಪ್‌ ಮಾಲೀಕರನ್ನು ವಂಚಿಸುತ್ತಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಿಳೆ ಹಾಗೂ ಟ್ಯಾಂಕರ್‌ ಚಾಲಕನನ್ನು ಬಂಧಿಸಲಾಗಿದೆ ಎಂದು ಪೊಲೀಸ್‌ ವರಿಷ್ಠಾಧಿಕಾರಿ ಆರ್‌.ಶ್ರೀನಿವಾಸ್‌ ಗೌಡ ತಿಳಿಸಿದರು.

ನಗರದಲ್ಲಿ ಶನಿವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ಪೆಟ್ರೋಲ್, ಡೀಸೆಲ್‌ ವಿತರಕರ ಸಂಘದ ದೂರಿನ ಮೇರೆಗೆ ಏಳು ಟ್ಯಾಂಕರ್‌ಗಳನ್ನು ವಶಪಡಿಸಿಕೊಂಡು ಪರಿಶೀಲನೆ ನಡೆಸಿದಾಗ ಸಣ್ಣ ಟ್ಯಾಂಕರ್‌ ಅಳವಡಿಸಿರುವುದು ಪತ್ತೆಯಾಗಿದ್ದು, ಐವರ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಟ್ಯಾಂಕರ್‌ ಹಿಂದೆ ಅಥವಾ ಮುಂದೆ ಪ್ರತ್ಯೇಕ ಬೇಬಿ ಟ್ಯಾಂಕರ್ ಅಳವಡಿಸಿ, ಅದಕ್ಕಾಗಿಯೇ ತಯಾರಿಸಿಕೊಂಡಿದ್ದ ಕೀ ಬಳಸಿ ವಂಚನೆ ಮಾಡುತ್ತಿದ್ದುದು ಬಯಲಾಗಿದೆ ಎಂದು ಹೇಳಿದರು.

ಪ್ರಮುಖ ಆರೋಪಿಗಳು, ಏಜೆನ್ಸಿ ಮಾಲೀಕರು, ಇದಕ್ಕೆ ಸಹಕಾರ ಮಾಡಿರುವವರು ತಲೆ ಮರೆಸಿಕೊಂಡಿದ್ದಾರೆ.
ಪೊಲೀಸ್ ಕಾನ್‌ಸ್ಟೆಬಲ್‌ ಭಾಗಿಯಾಗಿರುವ ಗಂಭೀರ ಆರೋಪ ಕೇಳಿ ಬಂದಿದ್ದು, ಅವರು ಸೆರೆ ಸಿಕ್ಕ ನಂತರ ಅವರ ಪಾತ್ರ ಏನು ಎಂಬುದನ್ನು ಗೊತ್ತಾಗುತ್ತದೆ. ಇವರಲ್ಲದೆ ಕಂಪನಿಯವರೂ ಸಹಕಾರ ನೀಡಿದ್ದಾರೆಯೇ? ಮಧ್ಯವರ್ತಿಗಳು ಹಾಗೂ ಪೆಟ್ರೋಲ್ ಬಂಕ್ ನವರ ಪಾತ್ರ ಇದ್ದರೆ ಅವರನ್ನೂ ಬಂಧಿಸಲಾಗುವುದು. ದಂಧೆಯ ಸ್ಥಳ ಯಾವುದು? ಎಲ್ಲದರ ಬಗ್ಗೆ ತನಿಖೆ ನಡೆಯುತ್ತಿದೆ. ಮುಖ್ಯ ಆರೋಪಿಗಳು ಸಿಕ್ಕರೆ ಹೆಚ್ಚಿನ ವಿಷಯ ತಿಳಿಯಲಿದೆ ಎಂದು ವಿವರಿಸಿದರು.

ADVERTISEMENT

ಪ್ರತಿ ಟ್ಯಾಂಕರ್‌ನಲ್ಲಿ 120 ರಿಂದ 150 ಲೀಟರ್ ಪೆಟ್ರೋಲ್‌ ಅಥವಾ ಡೀಸೆಲ್ ಕಳ್ಳತನ ಮಾಡುವ ಕುತಂತ್ರ ಮಾಡಿಕೊಂಡಿದ್ದರು. ಮುಖ್ಯ ಟ್ಯಾಂಕ್ ನಿಂದ ಸಣ್ಣ ರಂಧ್ರ ಮಾಡಿ ಬೇಬಿ ಟ್ಯಾಂಕ್ ತುಂಬಿಸಲಾಗುತ್ತಿತ್ತು. ನಂತರಎಲ್ಲಿ ಬೇಕೋ ಅಲ್ಲಿ ಅನ್‍ಲೋಡ್ ಮಾಡುತ್ತಿದ್ದರು. ಆರಂಭಿಕ ತನಿಖೆಯಲ್ಲಿ ಮೂರು ಏಜೆನ್ಸಿಗಳು ಭಾಗಿಯಾಗಿದ್ದು, ಅವುಗಳನ್ನು ಕಪ್ಪುಪಟ್ಟಿಗೆ ಸೇರಿಸಲು ಎಚ್‌ಪಿಸಿಎಲ್‌ ಕಂಪನಿಗೆ ಪತ್ರ ಬರೆಯಲಾಗಿದೆ. ಒಟ್ಟಾರೆ 21 ಟ್ಯಾಂಕರ್‌ಗಳು ದಂಧೆಯಲ್ಲಿ ಭಾಗಿಯಾಗಿರುವುದು ಗೊತ್ತಾಗಿದ್ದು, ಇನ್ನೂ 14 ಟ್ಯಾಂಕರ್‌ಗಳು ಸಿಕ್ಕಿಲ್ಲ ಎಂದರು.

ನಗರದ ಎಚ್‍ಪಿಸಿಎಲ್‍ನಲ್ಲಿ ನೋಂದಣಿ ಮಾಡಿರುವ ಟ್ಯಾಂಕರ್‌ಗಳು 4 ಸಾವಿರಕ್ಕೂ ಅಧಿಕ ಇವೆ. ಇವುಗಳಲ್ಲಿ ಕೆಲವು ಚಾಲನೆಯಲ್ಲಿ ಇಲ್ಲ. ಹಾಗಾಗಿ ಪಟ್ಟಿ ನೀಡುವಂತೆ ಕಂಪನಿಗೆ ಕೇಳಿದ್ದೇವೆ. ಪ್ರತಿ ಏಜೆನ್ಸಿ ಟ್ಯಾಂಕರ್‌ಗಳನ್ನು ತಪಾಸಣೆಗೆ ಒಳಪಡಿಸುವ ನಿರ್ಧಾರ ಮಾಡಿದ್ದೇವೆ. ಇದರಲ್ಲಿ ಯಾರ ಕೈವಾಡ ಇದೆ ಎಂಬ ಬಗ್ಗೆ ಇಲಾಖೆವಾರು ತನಿಖೆ ಮಾಡಲಾಗುವುದು ಎಂದರು.

‘ಈ ದಂಧೆ ತುಂಬಾ ವರ್ಷದಿಂದ ನಡೆಯುತ್ತಿದ್ದು, ವಿತರಕರ ಸಂಘದಿಂದ ಸಂಬಂಧಪಟ್ಟ ಅಧಿಕಾರಿಗಳಿಗೆ ಹಲವು ಬಾರಿ ಮನವಿ ಮಾಡಿದ್ದರೂ ಸರಿಯಾದ ಕ್ರಮ ಕೈಗೊಂಡಿರಲಿಲ್ಲ. ಪಂಪ್‌ ಮಾಲೀಕರಿಗೆ ನಷ್ಟ ಮಾಡಿರುವವರಿಂದಲೇ ಅದನ್ನು ಭರಿಸಬೇಕು. ಇನ್ನಾದರೂ ಟ್ರಾನ್ಸ್‌ಪೋರ್ಟ್‌ದಾರರನ್ನು ರದ್ದುಪಡಿಸಿ ಮಾಲೀಕರೇ ಲಾರಿ ಓಡಿಸಲು ಅವಕಾಶ ಮಾಡಿಕೊಟ್ಟರೆ ದಂಧೆಗೆ ಕಡಿವಾಣ ಬೀಳಲಿದೆ. ತನಿಖೆ ನಡೆಸಿ ವಂಚಕರಿಗೆ ತಕ್ಕ ಶಿಕ್ಷೆ ವಿಧಿಸಬೇಕು’ ಎಂದು ಪೆಟ್ರೋಲ್, ಡೀಸೆಲ್‌ ವಿತರಕರ ಸಂಘದ ಕಾರ್ಯದರ್ಶಿ ಪ್ರದೀಪ್ ಕುಮಾರ್‌ ಆಗ್ರಹಿಸಿದರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.