ADVERTISEMENT

ಶ್ರದ್ಧಾ ಭಕ್ತಿಯಿಂದ ಬಕ್ರೀದ್‌ ಆಚರಣೆ

ಕೊರೊನಾ ಕಂಟಕ ದೂರವಾಗಲೆಂದು ಮಸೀದಿಗಳಲ್ಲಿ ಪ್ರಾರ್ಥನೆ

​ಪ್ರಜಾವಾಣಿ ವಾರ್ತೆ
Published 21 ಜುಲೈ 2021, 13:52 IST
Last Updated 21 ಜುಲೈ 2021, 13:52 IST
ಬಕ್ರೀದ್‌ ಪ್ರಯುಕ್ತ ಹಾಸನದಲ್ಲಿ ಮುಸ್ಲಿಂ ಸಮುದಾಯದ ಜನರು ಪರಸ್ಪರ ಅಂತರ ಕಾಯ್ದುಕೊಂಡು ಪ್ರಾರ್ಥನೆ ಸಲ್ಲಿಸಿದರು.
ಬಕ್ರೀದ್‌ ಪ್ರಯುಕ್ತ ಹಾಸನದಲ್ಲಿ ಮುಸ್ಲಿಂ ಸಮುದಾಯದ ಜನರು ಪರಸ್ಪರ ಅಂತರ ಕಾಯ್ದುಕೊಂಡು ಪ್ರಾರ್ಥನೆ ಸಲ್ಲಿಸಿದರು.   

ಹಾಸನ: ತ್ಯಾಗ ಮತ್ತು ಬಲಿದಾನದ ಪ್ರತೀಕವಾದ ಬಕ್ರೀದ್‌ ಹಬ್ಬವನ್ನು ಬುಧವಾರ ನಗರ ಸೇರಿದಂತೆ
ಜಿಲ್ಲೆಯಾದ್ಯಂತ ಮುಸ್ಲಿಮರು ಶ್ರದ್ಧಾ, ಭಕ್ತಿಯಿಂದ ಆಚರಿಸಿದರು.

ಕೋವಿಡ್‌ ನಿರ್ಬಂಧದ ಹಿನ್ನೆಲೆಯಲ್ಲಿ ಮಸೀದಿಗಳಲ್ಲಿ ಶೇಕಡಾ 50 ಜನರಿಗೆ ಮಾತ್ರ ಕೋವಿಡ್‌ ಮಾರ್ಗಸೂಚಿ ಪಾಲಿಸಿ ಪ್ರಾರ್ಥನೆ ಸಲ್ಲಿಸಲು ಅವಕಾಶ ನೀಡಲಾಗಿತ್ತು. ಪಾಳಿ ಪ್ರಕಾರ ಪ್ರತಿಯೊಬ್ಬರೂ ಮಾಸ್ಕ್‌ ಧರಿಸಿ, ಪರಸ್ಪರ ಅಂತರ ಕಾಯ್ದುಕೊಂಡುಪ್ರಾರ್ಥನೆ ಸಲ್ಲಿಸಿದರು. ನಂತರ ಮಸೀದಿ ಹೊರಗೆ ನಿಂತಿದ್ದ ಬಡವರಿಗೆ ಹಣ, ಆಹಾರ ಪದಾರ್ಥ ಗಳನ್ನು ದಾನ ಮಾಡಿದರು.

ಈದ್ಗಾ ಮೈದಾನದಲ್ಲಿ ಸಾಮೂಹಿಕ ಪ್ರಾರ್ಥನೆಗೆ ನಿರ್ಬಂಧ ವಿಧಿಸಲಾಗಿತ್ತು. ಶಾಂತಿ ಮತ್ತುಸುವ್ಯವಸ್ಥೆ ಕಾಪಾಡಲು ಈದ್ಗಾ, ಮಸೀದಿ ಮತ್ತು ದರ್ಗಾ ಬಳಿ ಪೊಲೀಸರನ್ನುನಿಯೋಜಿಸಲಾಗಿತ್ತು.

ADVERTISEMENT

ಮಕ್ಕಳು, ಹಿರಿಯರು ಹೊಸ ಬಟ್ಟೆ ಧರಿಸಿ, ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಂಡರು. ಮನೆಗಳಲ್ಲಿ ಮಹಿಳೆಯರು ಚಿಕನ್‌, ಮಟನ್‌ ಬಿರಿಯಾನಿ, ಸಿಹಿ ಖಾದ್ಯ ತರಯಾರಿಸಿ, ಕುಟುಂಬ ಹಾಗೂ ಬಂಧು ಬಳಗದವರ ಜತೆ ಸವಿದರು. ಕೊರೊನಾ ಸೋಂಕು ತಡೆಯಲು ಹೆಚ್ಚು ಜನಗುಂಪುಗೂಡಲು ಅವಕಾಶ ಇರಲಿಲ್ಲ.

ಪ್ರತಿ ವರ್ಷ ಹಬ್ಬದ ದಿನ ಸಾವಿರಾರು ಮಂದಿ ಏಕ ಕಾಲಕ್ಕೆ ಈದ್ಗಾ ಮೈದಾನದಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿ, ಸಡಗರದಿಂದ ಆಚರಿಸುತ್ತಿದ್ದರು. ಆದರೆ, ಕೋವಿಡ್ ಕಾರಣದಿಂದ ಕಳೆದಬಾರಿಯಂತೆ ಈ ಸಲವೂ ಸರಳವಾಗಿ ಹಬ್ಬ ಆಚರಿಸಲಾಯಿತು

‘ಕೋವಿಡ್‌ನಿಂದ ಬಡವರು, ಕೂಲಿ ಕಾರ್ಮಿಕರು, ಜನ ಸಾಮಾಜ್ಯರು, ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಕೊರೊನಾ ಕಂಟಕ ದೂರಾಗಲಿ ಎಂದು ಪ್ರಾರ್ಥನೆ ಮಾಡಲಾಯಿತು. ಆಡು ಮತ್ತು ಕುರಿ ಮಾಂಸವನ್ನು ಬಡವರಿಗೆ ದಾನ ನೀಡಲಾಯಿತು’ ಎಂದು ಈದ್ಗಾ ಮತ್ತು ದರ್ಗಾ ಕಮಿಟಿ ಅಧ್ಯಕ್ಷ ಸಮೀರ್‌ ಖಾನ್‌ ‘ಪ್ರಜಾವಾಣಿ’ಗೆ ತಿಳಿಸಿದರು.

‘ಪ್ರತಿವರ್ಷ ಈ ಸಂದರ್ಭದಲ್ಲಿ ಮೆಕ್ಕಾ, ಮದೀನಕ್ಕೆ ಹಜ್‌ ಯಾತ್ರೆ ಕೈಗೊಳ್ಳಲಾಗುತ್ತಿತ್ತು. ಆದರೆ, ಈ ಬಾರಿ ಕೋವಿಡ್‌ ಕಾರಣಕ್ಕೆ ಅನುಮತಿ ನೀಡಿಲ್ಲ. ಅಂದಾಜು 30 ರಿಂದ 40 ಲಕ್ಷ ಜನರು ಮೆಕ್ಕಾ, ಮದೀನಕ್ಕೆ ಭೇಟಿ ನೀಡುತ್ತಿದ್ದರು ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.