ಬೇಲೂರು: ಇಲ್ಲಿನ ಪುರಸಭೆ ಆವರಣದಲ್ಲಿರುವ ವರಸಿದ್ದಿ ವಿನಾಯಕ ಮೂರ್ತಿಗೆ ಚಪ್ಪಲಿ ಇಟ್ಟಿರುವ ಮಹಿಳೆಯ ಹಿಂದೆ ಯಾರಿದ್ದಾರೆ ಎಂಬುದನ್ನು ಬಹಿರಂಗಪಡಿಸುವಂತೆ ಆಗ್ರಹಿಸಿ ಬಜರಂಗದಳ, ವಿಶ್ವಹಿಂದೂ ವತಿಯಿಂದ ಸೋಮವಾರ ಚನ್ನಕೇಶವ ದೇಗುಲದ ಆವರಣದಿಂದ ಬಸವೇಶ್ವರ ವೃತ್ತದವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು.
ಪಟ್ಟಣದ ಅಂಗಡಿ, ಮುಗ್ಗಟ್ಟುಗಳನ್ನು ಮಧ್ಯಾಹ್ನದವರೆಗೂ ಬಂದ್ ಮಾಡಿದ ವರ್ತಕರು ಪ್ರತಿಭಟನೆಗೆ ಬೆಂಬಲ ವ್ಯಕ್ತಪಡಿಸಿದರು.
ಶಾಸಕ ಎಚ್.ಕೆ.ಸುರೇಶ್ ಮಾತನಾಡಿ, ‘ರಾಜ್ಯದ ಮುಖಂಡರು ಇಂದು ಪ್ರತಿಭಟನೆಗೆ ಬರುತ್ತೇವೆ ಎಂದು ಹೇಳಿದ್ದರು. ಆರೋಪಿಯನ್ನು ಪೊಲೀಸರು ಬಂಧಿಸಿರುವುದರಿಂದ ವಿಷಯ ದೊಡ್ಡದಾಗಬಾರದು ಎಂದು ನಾನು ಯಾರೂ ಬರಬೇಡಿ ಎಂದು ಮನವಿ ಮಾಡಿದ್ದೇನೆ. ಬೇಲೂರಿನ ಜನತೆ ಶಾಂತಿ, ಸೌಹಾರ್ದದಿಂದ ಬದುಕುತ್ತಿದ್ದೇವೆ. ಅದನ್ನು ಕೆಣಕಲು ಯಾರಿಗೂ ಬಿಡುವುದಿಲ್ಲ’ ಎಂದರು.
ಜೆಡಿಎಸ್ ಜಿಲ್ಲಾ ಘಟಕದ ಅಧ್ಯಕ್ಷ ಕೆ.ಎಸ್.ಲಿಂಗೇಶ್ ಮಾತನಾಡಿ, ‘ಹಿಂದೂಗಳು ಹೆಚ್ಚಿರುವ ಕಡೆಗಳಲ್ಲಿ, ಕಡಿಮೆ ಕುಟುಂಬಗಳಿರುವ ಅನ್ಯ ಧರ್ಮಿಯರನ್ನು ಸುರಕ್ಷಿತವಾಗಿ ನೋಡಿಕೊಳ್ಳುತ್ತಿದ್ದಾರೆ. ಆದರೆ ಹೊರಗಿನ ಶಕ್ತಿಗಳು, ಮೋದಿ ಸಾಧಿಸಿರುವ ಪ್ರಗತಿ ಹಾಗೂ ದೇಶದ ಏಕತೆ ಒಡೆಯಬೇಕು ಎಂದು ಪಾಕಿಸ್ತಾನ, ಚೀನಾ ಹಾಗೂ ಮಿತ್ರತ್ವದ ನಾಟಕವಾಡುವ ಅಮೆರಿಕ ಹವಣಿಸುತ್ತಿವೆ’ ಎಂದು ದೂರಿದರು.
‘ವಿನಾಯಕ ಮೂರ್ತಿಗೆ ಚಪ್ಪಲಿ ಇಟ್ಟಿರುವ ಮಹಿಳೆಯಯನ್ನು ಪೊಲೀಸರು ಬಂಧಿಸಿರುವುದು ಶ್ಲಾಘನೀಯ. ದೇಶದಲ್ಲಿರುವ ಜೈನ, ಬೌದ್ಧ, ಸಿಖ್, ವೀರಶೈವ, ಸೇರಿದಂತೆ ಇತರೆ ಧರ್ಮಗಳು ದೇಶದ ಸಂಸ್ಕಾರ, ಸಂಸ್ಕೃತಿ ಒಪ್ಪಿಕೊಂಡಿವೆ. ಹಿಂದೂ ಅಂದರೆ ಧರ್ಮ ಅಲ್ಲ, ಜಾತಿ ಅಲ್ಲ, ದೇಶದ ಜೀವನ ಶೈಲಿ ಹಾಗೂ ಜೀವನ ಪದ್ಧತಿ ಎಂದು ಇತರೆ ಧರ್ಮದವರು ಒಪ್ಪಿಕೊಂಡರೆ ನಾವು ಸೌಹಾರ್ದದಿಂದ ಇರುತ್ತೇವೆ’ ಎಂದು ಹೇಳಿದರು.
‘ಹೊರದೇಶದಿಂದ ಬಂದ ಧರ್ಮಗಳ ಕೆಲವರು ಇಂದು ದೇಶದಾದ್ಯಂತ ಬೆಂಕಿ ಹಚ್ಚುವ ಕೆಲಸ ಮಾಡುತ್ತಿದ್ದಾರೆ. ನಾವು ಈ ಬಗ್ಗೆ ಎಚ್ಚೆತ್ತುಕೊಳ್ಳಬೇಕು. ಪೆಹಲ್ಗಾಮ್‌ನಲ್ಲಿ ನಡೆದ ಘಟನೆಯಲ್ಲಿ ಉಗ್ರಗಾಮಿಗಳು ನೀನು ಒಕ್ಕಲಿಗನಾ, ಸಿಖ್‌ನಾ, ಲಿಂಗಾಯತನಾ ಎಂದು ಕೇಳಲಿಲ್ಲ. ಮುಸ್ಲಿಮರನ್ನು ಹೊರತುಪಡಿಸಿ ಮಿಕ್ಕವರಿಗೆ ಗುಂಡಿಕ್ಕಿ ಕೊಂದರು. ಕ್ರಿಶ್ಚಿಯನ್ನರಿಗೆ 121, ಮುಸ್ಲಿಮರಿಗೆ 65 ದೇಶಗಳಿವೆ. ಹಿಂದೂಗಳಿಗೆ ಇರುವುದು ಒಂದೇ ದೇಶ. ಪಕ್ಷ, ಜಾತಿಗಳನ್ನು ಮರೆತು ನಾವೆಲ್ಲರೂ ನಮ್ಮ ಸಂಸ್ಕೃತಿ ಉಳಿಸಿಕೊಳ್ಳಬೇಕು’ ಎಂದರು.
ಪ್ರತಿಭಟನೆಯಲ್ಲಿ ಹಿಂದೂ ಮುಖಂಡ ಸಕಲೇಶಪುರ ರಘು, ವಿಶ್ವಹಿಂದೂ ಪರಿಷತ್, ಬಜರಂಗದಳದ ಮಂಗಳೂರು ಪ್ರಾಂತ್ಯ ಗೋ ರಕ್ಷಾ ಪ್ರಮುಖ್ ಶರತ್, ಜಿಲ್ಲಾ ಘಟಕದ ಕಾರ್ಯದರ್ಶಿ ವಿಕಾಸ್, ಜಿಲ್ಲಾ ಘಟಕದ ಸಂಯೋಜಕ ಶಶಿ, ಬಿಜೆಪಿ ತಾಲ್ಲೂಕು ಘಟಕದ ಅಧ್ಯಕ್ಷ ಕೌರಿ ಸಂಜಯ್, ಮಹಿಳಾ ಘಟಕದ ಅಧ್ಯಕ್ಷೆ ಶೋಭಾ, ನಗರ ಘಟಕದ ಅಧ್ಯಕ್ಷ ವಿನಯ್, ಬಿಜೆಪಿ ಮುಖಂಡರಾದ ಸನ್ಯಾಸಿಹಳ್ಳಿ ನರೇಂದ್ರ, ಪರ್ವತಯ್ಯ, ಸಿ.ಎಸ್. ಪ್ರಕಾಶ್, ತೆಂಡೇಕೆರೆ ರಮೇಶ್ ಸೇರಿದಂತೆ ವಿಶ್ವಹಿಂದೂ ಪರಿಷತ್, ಬಜರಂಗದಳದ ಪ್ರಮುಖರು ಹಾಗೂ ಸಾರ್ವಜನಿಕರು ಭಾಗವಹಿಸಿದ್ದರು.
ಸಂಸ್ಕೃತಿ ಹಾಳು ಮಾಡುವವರಿಗೆ ಕಾಂಗ್ರೆಸ್ ಬೆಂಬಲ
‘ಕಾಂಗ್ರೆಸ್ ಸರ್ಕಾರ ಬೇಲೂರಿನಿಂದ ದೆಹಲಿಯವರೆಗೆ ಸಂಸ್ಕೃತಿ ಹಾಳು ಮಾಡುತ್ತಿರುವವರಿಗೆ ಬೆಂಬಲ ನೀಡುತ್ತಿದೆ. ಪಟ್ಟಣದಲ್ಲಿ ಬೈಕ್ ವೀಲಿಂಗ್ ಮಾಡುವವರು ಗಾಂಜಾ ಅಫೀಮು ಮಾಡುವವರನ್ನು ಪೊಲೀಸರು ತಡೆಗಟ್ಟಬೇಕಿದೆ’ ಎಂದು ಬಿಜೆಪಿ ಮುಖಂಡ ಬೆಣ್ಣೂರು ರೇಣುಕುಮಾರ್ ಒತ್ತಾಯಿಸಿದರು. ‘ನಮ್ಮ ಹಿಂದೂ ಮೀರ್ ಸಾದಿಕ್‌ರು ಅಲ್ಲಿ ಹೋಗಿ ಟೋಪಿ ಹಾಕಿಕೊಂಡು ಮುಂದಿನ ಜನ್ಮದಲ್ಲಿ ನಾನು ಅದಾಗಿ ಹುಟ್ಟುತ್ತೇನೆ ಇವನಾಗಿ ಹುಟ್ಟುತ್ತೇನೆ ಎಂದು ಹೇಳುವುದನ್ನು ಬಿಡಬೇಕು. ಕಾಂಗ್ರೆಸ್‌ನವರೇ ನೀವು ಹಿಂದೂಗಳೇ. ಬಾಂಬ್ ಹಾಕಿದರೆ ಅದು ಕಾಂಗ್ರೆಸ್ ಅಧ್ಯಕ್ಷನ ಮನೆಗೂ ತಗಲುತ್ತದೆ ಎಂಬ ಎಚ್ಚರಿಕೆ ಇರಲಿ. ಇಂದು ಗಣಪತಿ ಮೂರ್ತಿಗೆ ಚಪ್ಪಲಿ ಇಟ್ಟಿದ್ದಾರೆ. ಮುಂದೆ ನಮ್ಮ ಮನೆಗಳ ದೇವರ ಮನೆಗೆ ಬಂದು ಚಪ್ಪಲಿ ಹಾರ ಹಾಕುತ್ತಾರೆ’ ಎಂದರು.
ರಾಜ್ಯದಲ್ಲಿ ಲವ್ ಜಿಹಾದ್ ಹಿಂದೂಗಳ ಮತಾಂತರ ಹೆಚ್ಚಾಗುತ್ತಿದೆ. ಇವುಗಳಿಗೆ ಸರ್ಕಾರ ಕಡಿವಾಣ ಹಾಕಬೇಕು. ಇಲ್ಲದಿದ್ದಲ್ಲಿ ವಿಶ್ವಹಿಂದೂ ಪರಿಷತ್ ಬಜರಂಗದಳ ರಾಜ್ಯದಾದ್ಯಂತ ಉಗ್ರ ಪ್ರತಿಭಟನೆ ನಡೆಸುತ್ತದೆ.-ನಾಗೇಶ್ ವಿಎಚ್‌ಪಿ ತಾಲ್ಲೂಕು ಘಟಕದ ಕಾರ್ಯದರ್ಶಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.