ADVERTISEMENT

ಬಂಡವಾಳಶಾಹಿಗಳ ಹಿಡಿತದಲ್ಲಿ ವಿದ್ಯುತ್‌ ಉತ್ಪಾದನಾ ಕ್ಷೇತ್ರ

ಕಾರ್ಯ ಮತ್ತು ಪಾಲನಾ ವಲಯ ಕಚೇರಿ ಉದ್ಘಾಟನಾ ಸಮಾರಂಭದಲ್ಲಿ ಸಚಿವ ರೇವಣ್ಣ

​ಪ್ರಜಾವಾಣಿ ವಾರ್ತೆ
Published 19 ಜೂನ್ 2019, 14:38 IST
Last Updated 19 ಜೂನ್ 2019, 14:38 IST
ಹಾಸನದಲ್ಲಿ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮದ ಮುಖ್ಯ ಎಂಜಿನಿಯರ್ ಕಚೇರಿ ಹಾಗೂ ಕಾರ್ಯ ಮತ್ತು ಪಾಲನಾ ವಲಯ ಕಚೇರಿ ಉದ್ಘಾಟನಾ ಸಮಾರಂಭದಲ್ಲಿ ಸಚಿವ ಎಚ್.ಡಿ.ರೇವಣ್ಣ ಮಾತನಾಡಿದರು.
ಹಾಸನದಲ್ಲಿ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮದ ಮುಖ್ಯ ಎಂಜಿನಿಯರ್ ಕಚೇರಿ ಹಾಗೂ ಕಾರ್ಯ ಮತ್ತು ಪಾಲನಾ ವಲಯ ಕಚೇರಿ ಉದ್ಘಾಟನಾ ಸಮಾರಂಭದಲ್ಲಿ ಸಚಿವ ಎಚ್.ಡಿ.ರೇವಣ್ಣ ಮಾತನಾಡಿದರು.   

ಹಾಸನ: ‘ರಾಜ್ಯದ ವಿದ್ಯುತ್ ಉತ್ಪಾದನಾ ಕ್ಷೇತ್ರ ಪ್ರಭಾವಿ ಬಂಡವಾಳಶಾಹಿಗಳ ಹಿಡಿತದಲ್ಲಿದೆ. ಪರಿಸ್ಥಿತಿ ಇದೇ ರೀತಿ ಮುಂದುವರಿದರೆ ಜನಸಾಮಾನ್ಯರು ನೋವು ಅನುಭವಿಸಬೇಕಾಗುತ್ತದೆ’ ಎಂದು ಸಚಿವ ಎಚ್.ಡಿ.ರೇವಣ್ಣ ಆತಂಕ ವ್ಯಕ್ತಪಡಿಸಿದರು.

ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮದ ಮುಖ್ಯ ಎಂಜಿನಿಯರ್ ಕಚೇರಿ ಹಾಗೂ ಕಾರ್ಯ ಮತ್ತು ಪಾಲನಾ ವಲಯ ಕಚೇರಿ ಉದ್ಘಾಟಿಸಿ ಮಾತನಾಡಿದ ಅವರು, ‘ ಎಸ್.ಎಂ.ಕೃಷ್ಣ ಸರ್ಕಾರದಿಂದ ಖಾಸಗಿ ವಿದ್ಯುತ್ ಉತ್ಪಾದನಾ ಘಟಕವೊಂದರಿಂದ ಒಂದು ಯೂನಿಟ್ ವಿದ್ಯುತ್ ಖರೀದಿಗೆ ₹ 10.40 ಮತ್ತು ವಿದ್ಯುತ್ ಖರೀದಿಸದಿದ್ದರೆ ₹ 2.50 ಪಾವತಿಸಬೇಕೆಂಬ ಒಪ್ಪಂದ ಮಾಡಿಕೊಳ್ಳಲಾಗಿತ್ತು. ಆದರೆ, ಇಂಧನ ಸಚಿವನಾದ ನಂತರ ಆ ಖಾಸಗಿ ಘಟಕದಿಂದ ಒಂದು ಯೂನಿಟ್ ವಿದ್ಯುತ್‍ನ್ನೂ ಖರೀದಿಸಲಿಲ್ಲ. ಸಚಿವನಾಗಿದ್ದ 3 ವರ್ಷ 8 ತಿಂಗಳ ಅವಧಿಯಲ್ಲಿ ವಿದ್ಯುತ್ ದರ ಏರಿಕೆಯ ಪರಿಸ್ಥಿಯೇ ಬರಲಿಲ್ಲ’ ಎಂದು ವಿವರಿಸಿದರು.

‘ಇಂಧನ ಸಚಿವನಾಗುವ ಮೊದಲು ರಾಜ್ಯದಲ್ಲಿ ಇದ್ದದ್ದು 480 ವಿದ್ಯುತ್ ಉಪ ಕೇಂದ್ರಗಳು ಮಾತ್ರ. ಆದರೆ, ಇಂಧನ ಸಚಿವನಾಗಿದ್ದ ಅವಧಿಯಲ್ಲಿ ದಿನಕ್ಕೊಂದು ವಿದ್ಯುತ್ ಉಪ ಕೇಂದ್ರದಂತೆ 500 ವಿದ್ಯುತ್ ಉಪ ಕೇಂದ್ರ ಸ್ಥಾಪನೆ ಮಾಡಲಾಯಿತು. ಪ್ರಾಮಾಣಿಕವಾಗಿ ಇಂಧನ ಇಲಾಖೆ ನಿರ್ವಹಿಸಿದರೂ ಬಿಜೆಪಿ ಸರ್ಕಾರ ವಿರುದ್ಧ ತನಿಖೆಗೆ ಮುಂದಾಯಿತು. ಆ ಸಂದರ್ಭದಲ್ಲಿ ಸ್ವಯಂ ಪ್ರೇರಣೆಯಿಂದ ಲೋಕಾಯುಕ್ತ ಮತ್ತು ಸಿಒಡಿ ತನಿಖೆ ನಡೆಸುವಂತೆ ವಿಧಾನಸಭಾ ಅಧ್ಯಕ್ಷರಿಗೆ ಮನವಿ ಮಾಡಿದೆ. ತನಿಖೆ ನಡೆದರೂ ಏನೂ ಸಿಗಲಿಲ್ಲ. ಅಧಿಕಾರವಿದ್ದಾಗ ಸ್ವಚ್ಛವಾಗಿ ಆಡಳಿತ ನಡೆಸುತ್ತೇನೆ’ ಎಂದು ರೇವಣ್ಣ ಅವರು ಹೇಳಿದರು.

ADVERTISEMENT

ಚಾಮುಂಡೇಶ್ವರಿ ವಿದ್ಯುಚ್ಚಕ್ತಿ ಸರಬರಾಜು ನಿಗಮ (ಸೆಸ್ಕ್) ವನ್ನು ಇಂಧನ ಸಚಿವನಾಗಿದ್ದಾಗಲೇ ಸ್ಥಾಪನೆ ಮಾಡಿದ್ದೆ. ಇಲ್ಲದಿದ್ದರೆ ಮಂಗಳೂರು ವಿದ್ಯುಚ್ಛಕ್ತಿ ಸರಬರಾಜು ನಿಗಮಕ್ಕೆ ಮಂಡ್ಯ, ಚಾಮರಾಜನಗರ, ಮೈಸೂರು, ಹಾಸನ ಜಿಲ್ಲೆಗಳು ವಿದ್ಯುತ್ ಸಮಸ್ಯೆಗೆ ಮಂಗಳೂರಿಗೆ ಹೋಗಬೇಕಾಗಿತ್ತು ಎಂದು ನುಡಿದರು.

ಈಗ ಹಾಸನದಲ್ಲಿ ಸೆಸ್ಕ್ ಮುಖ್ಯ ಇಂಜಿಯರ್ ಪ್ರಾರಂಭವಾಗುವುದರಿಂದ ಹೆಚ್ಚಿನ ಆಡಳಿತಾತ್ಮಕ ಅನುಕೂಲಗಳು ಆಗಲಿವೆ. ಈಗಾಗಲೇ ಜಿಲ್ಲೆಯ ಅಗತ್ಯವಿರುವ ಅನೇಕ ಕಡೆಗಳಲ್ಲಿ ವಿದ್ಯುತ್ ವಿತರಣಾ ಉಪಕೇಂದ್ರ ತೆರೆಯಲಾಗಿದೆ. ಶೀಘ್ರದಲ್ಲಿ ಕೇಂದ್ರ ಪ್ರಾರಂಭಿಸುವ ಮೂಲಕ ಎಲ್ಲಾ ಗ್ರಾಮಗಳಿಗೆ ಗುಣಮಟ್ಟದ ವಿದ್ಯುತ್ ಪೂರೈಸಲು ಕ್ರಮ ಕೈಗೊಳ್ಳಲಾಗುವುದು ಎಂದು ರೇವಣ್ಣ ಹೇಳಿದರು.

ಕಾರ್ಯಕ್ರಮದಲ್ಲಿ ಚಾಮುಂಡೇಶ್ವರಿ ವಿದ್ಯುಚ್ಚಕ್ತಿ ಸರಬರಾಜು ನಿಗಮದ ವ್ಯವಸ್ಥಾಪಕ ನಿರ್ದೇಶಕ ಎಚ್.ಎನ್.ಗೋಪಾಲಕೃಷ್ಣ, ಚಾಮುಂಡೇಶ್ವರಿ ವಿದ್ಯುಚ್ಚಕ್ತಿ ಸರಬರಾಜು ನಿಗಮದ ನಿರ್ದೇಶಕ ಅಹಮದ್, ಮುಖ್ಯ ಅರ್ಥಿಕ ಅಧಿಕಾರಿ ಎ.ಶಿವಣ್ಣ, ಮೈಸೂರು ವಲಯದ ಮುಖ್ಯ ಎಂಜಿನಿಯರ್ ಎಂ.ಟಿ.ಮಂಜುನಾಥ್, ಮುಖ್ಯ ಎಂಜಿನಿಯರ್ ಆರ್.ಎಸ್.ನರೇಂದ್ರ, ಅಧೀಕ್ಷಕ ಎಂಜಿನಿಯರ್‌ ಬಿ.ಎಸ್. ಸುಚೇತನ, ಕರ್ನಾಟಕ ವಿದ್ಯುತ್ ಪ್ರಸರಣ ನಿಗಮದ ಮುಖ್ಯ ಎಂಜಿನಿಯರ್‌ ಕೊಟ್ರೇಶ್, ಜಿಲ್ಲಾಧಿಕಾರಿ ಅಕ್ರಂ ಪಾಷಾ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಕೆ.ಎನ್.ವಿಜಯ್ ಪ್ರಕಾಶ್, ಪೊಲೀಸ್‌ ವರಿಷ್ಠಾಧಿಕಾರಿ ಎ.ಎನ್. ಪ್ರಕಾಶ್‍ಗೌಡ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.