ADVERTISEMENT

ಹಾಸನ: ಸಾವಿರಾರು ಭಕ್ತರಿಂದ ಬಸವ ಮಾಲೆ ವಿಸರ್ಜನೆ

ಕಬ್ಬಳಿಯಲ್ಲಿ ಬಸವೇಶ್ವರಸ್ವಾಮಿ ಧನುರ್ಮಾಸ ಪೂಜಾ ಆಚರಣೆಯ ಇಂದು ಮುಕ್ತಾಯ

​ಪ್ರಜಾವಾಣಿ ವಾರ್ತೆ
Published 14 ಜನವರಿ 2026, 7:28 IST
Last Updated 14 ಜನವರಿ 2026, 7:28 IST
ಬೆಳಗ್ಗೆ ಭಜನೆಯ ನಂತರ ಬಸವ ಮಾಲಾಧಾರಿಗಳಿಗೆ ಆದಿಚುಂಚನಗಿರಿ ಮಠದ ವತಿಯಿಂದ ಪ್ರಸಾದ ವಿತರಣೆ ಮಾಡಲಾಯಿತು.
ಬೆಳಗ್ಗೆ ಭಜನೆಯ ನಂತರ ಬಸವ ಮಾಲಾಧಾರಿಗಳಿಗೆ ಆದಿಚುಂಚನಗಿರಿ ಮಠದ ವತಿಯಿಂದ ಪ್ರಸಾದ ವಿತರಣೆ ಮಾಡಲಾಯಿತು.   

ಹಿರೀಸಾವೆ: ಹೋಬಳಿಯ ಕಬ್ಬಳಿ ಬಸವೇಶ್ವರ ಸ್ವಾಮಿ ದೇವಸ್ಥಾನದ ಆವರಣದಲ್ಲಿ ಕಳೆದ ಒಂದು ತಿಂಗಳಿನಿಂದ ನಡೆಯುತ್ತಿರುವ ಧನುರ್ಮಾಸ ಪೂಜೆಯ ಮುಕ್ತಾಯ ಮತ್ತು ಸಾವಿರಾರು ಭಕ್ತರಿಂದ ಬಸವ ಮಾಲೆ ವಿಸರ್ಜನಾ ಮಹೋತ್ಸವವು ಬುಧವಾರ ರಾತ್ರಿ ನಡೆಯಲಿದೆ.

ಕಳೆದ ತಿಂಗಳ 16 ರಂದು ಧನುರ್ಮಾಸ ಪೂಜಾ ಆಚರಣೆಯು ಆದಿಚುಂಚನಗಿರಿ ಹಾಸನ ಶಾಖಾ ಮಠದ ಶಂಭುನಾಥ ಸ್ವಾಮೀಜಿ ಮತ್ತು ಕಬ್ಬಳಿಯ ಶಿವಪುತ್ರನಾಥ ಸ್ವಾಮೀಜಿ ನೇತೃತ್ವದಲ್ಲಿ ಪ್ರಾರಂಭವಾಗಿದೆ. ಬಸವೇಶ್ವರ ಸ್ವಾಮಿಯ ಸಾವಿರಾರು ಭಕ್ತರು ಹರಕೆ ಹೊತ್ತು ಬಸವ ಮಾಲೆಯನ್ನು ಧರಿಸಿದ್ದಾರೆ. ನಿತ್ಯ ಬೆಳಿಗ್ಗೆ ಮತ್ತು ರಾತ್ರಿ ಸಮಯದಲ್ಲಿ ದೇವಸ್ಥಾನದ ಆವರಣದಲ್ಲಿ ವಿಶೇಷ ಪೂಜೆ ಮತ್ತು ಭಜನೆ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆದಿವೆ.

ದೂರದ ಹಳ್ಳಿಯವರು ದೇವಾಲಯದ ಬಳಿ ಇರುವ ಕಲ್ಯಾಣಿಯಿಂದ ಕಳಸವನ್ನು ತಮ್ಮ ಹಳ್ಳಿಗೆ ತೆಗೆದುಕೊಂಡು ಹೋಗಿ, ಗ್ರಾಮ ದೇವತೆಯ ಗುಡಿಯಲ್ಲಿ ಪ್ರತಿಷ್ಠಾಪಿಸಿ, ಪೂಜೆ ಸಲ್ಲಿಸುತ್ತಾರೆ. ಮಕರ ಸಂಕ್ರಾಂತಿ ಹಬ್ಬದ ಹಿಂದಿನ ರಾತ್ರಿ ಬಸವ ಮಾಲಾಧಾರಿಗಳು ತಮ್ಮ ಗ್ರಾಮ ದೇವತೆಗಳನ್ನು ಅಲಂಕರಿಸಿ, ಮೆರವಣಿಗೆಯಲ್ಲಿ ಇಲ್ಲಿಗೆ ಕರೆತರುವುದು ವಿಶೇಷ. ಸುಮಾರು 50ಕ್ಕೂ ಹೆಚ್ಚು ಹಳ್ಳಿಗಳ ದೇವರು ಈ ಕಾರ್ಯಕ್ರಮದಲ್ಲಿ ಭಾಗವಹಿಸುತ್ತವೆ.

ADVERTISEMENT

ತುಮಕೂರು ಜಿಲ್ಲೆಯ ತುರುವೇಕೆರೆ, ತಿಪಟೂರು, ಮಂಡ್ಯ ಜಿಲ್ಲೆಯ ನಾಗಮಂಗಲ ಹಾಗೂ ಹಾಸನ ಜಿಲ್ಲೆಯ ವಿವಿಧ ತಾಲ್ಲೂಕಿನ ಹಲವು ಗ್ರಾಮ ದೇವತೆಗಳು ಇಲ್ಲಿಗೆ ಮೆರವಣಿಗೆಯಲ್ಲಿ ಬರಲಿವೆ. ಸಂಕ್ರಾಂತಿ ಹಬ್ಬದ ದಿನದಂದು ಬಂದ ಎಲ್ಲ ದೇವರಿಗೂ ಮಡ್ಲಕ್ಕಿಯನ್ನು ನೀಡಿ ಗೌರವಿಸಲಾಗುತ್ತದೆ ಎಂದು ಆದಿಚುಂಚನಗಿರಿ ಹಾಸನ ಮಠದ ಶಂಭುನಾಥ ಸ್ವಾಮೀಜಿ ಹೇಳಿದ್ದಾರೆ.

ಬಹುತೇಕ ದೇವರು ದಿಡಗ ಗ್ರಾಮದ ಮೂಲಕ ಕಬ್ಬಳಿಗೆ ಬರುತ್ತವೆ. ಇಲ್ಲಿನ ಡಾ.ರಾಜ್‌ ವೃತ್ತದಲ್ಲಿ ಬಸವ ಮಾಲಾಧಾರಿಗಳಿಗೆ ಮತ್ತು ಭಕ್ತರಿಗೆ ಫಲಾಹಾರವನ್ನು ವಿತರಿಸಲು ದಿಡಗ ಗ್ರಾಮಸ್ಥರು ಸಿದ್ದತೆ ಮಾಡಿದ್ದಾರೆ.

ಹಿರೀಸಾವೆ ಹೋಬಳಿಯ ಕಬ್ಬಳಿಯ ದೇವಸ್ಥಾನದಲ್ಲಿ ಬಸವ ಮಾಲಾಧಾರಿಗಳು ಭಕ್ತಿ ಭಾವದಿಂದ ಬಸವೇಶ್ವರ ಸ್ವಾಮಿಯ ಭಜನೆ ಮಾಡಿದರು.
ಸಾವಿರಾರು ಬಸವ ಮಾಲಾಧಾರಿಗಳು ಕ್ಷೇತ್ರಕ್ಕೆ ಬಂದು ಮಾಲೆ ವಿಸರ್ಜನೆ ಮಾಡಲಿದ್ದಾರೆ. ಎಲ್ಲ ಭಕ್ತರಿಗೆ ಉಪಾಹಾರ ಸೇರಿದಂತೆ ಮೂಲಸೌಲಭ್ಯಗಳನ್ನು ಒದಗಿಸಲಾಗುವುದು.
– ಶಂಭುನಾಥ ಸ್ವಾಮೀಜಿ, ಆದಿಚುಂಚನಗಿರಿ ಹಾಸನ ಮಠದ ಕಾರ್ಯದರ್ಶಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.