ಚನ್ನರಾಯಪಟ್ಟಣ: ‘ಡೆಂಗಿ ಹರಡುವ ಸೊಳ್ಳೆಗಳ ನಿಯಂತ್ರಣ ಮಾಡಬೇಕು’ ಎಂದು ಜಿಲ್ಲಾ ರೋಗವಾಹಕ ಆಶ್ರಿತ ರೋಗ ನಿಯಂತ್ರಣಾಧಿಕಾರಿ ಡಾ.ಜಿ.ಎಸ್.ನಾಗಪ್ಪ ಹೇಳಿದರು.
ಪಟ್ಟಣದಲ್ಲಿ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ನಿಲ್ದಾಣದಲ್ಲಿ ಈಚೆಗೆ ತಾಲ್ಲೂಕು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣ ಕಚೇರಿ ಸಹಯೋಗದಲ್ಲಿ ಏರ್ಪಡಿಸಿದ್ದ ಡೆಂಗಿ ನಿಯಂತ್ರಣ ಕುರಿತು ಅರಿವು ಕಾರ್ಯಕ್ರಮದಲ್ಲಿ ಮಾತನಾಡಿದರು.
‘ಮಳೆಗಾಲದಲ್ಲಿ ಪ್ರಕರಣ ಹೆಚ್ಚಾಗುವ ಸಾಧ್ಯತೆ ಇದೆ. ಜ್ವರ, ತಲೆನೋವು, ವಾಂತಿ, ಕೈ, ಕಾಲುಗಳಲ್ಲಿ ಸೆಳೆತ ಮತ್ತು ನೋವು ಕಂಡು ಬರುವುದು ಇದರ ಲಕ್ಷಣ. ಹಾಗಾಗಿ ಸೊಳ್ಳೆ ನಿಯಂತ್ರಿಸಬೇಕಿದೆ. ನೀರು ಶೇಖರಣೆ ಮಾಡುವ ಪರಿಕರ ಶುಚಿಗೊಳಿಸಬೇಕು. ಜೊತೆಗೆ ಮನೆ ಸುತ್ತಲಿನ ಪ್ರದೇಶಗಳಲ್ಲಿ ಸ್ವಚ್ಛತೆ ಕಾಪಾಡುವುದು ಮುಖ್ಯ’ಎಂದರು.
ತಾಲ್ಲೂಕು ಆರೋಗ್ಯ ಶಿಕ್ಷಣಾಧಿಕಾರಿ ಎ.ಆರ್.ಅನಿತಾ ಮಾತನಾಡಿ, ‘ಡೆಂಗಿ ನಿಯಂತ್ರಿಸುವುದು ಪ್ರತಿಯೊಬ್ಬರ ಜವಾಬ್ದಾರಿ. ಮಳೆಗಾಲ ಪ್ರಾರಂಭವಾಗಿದ್ದು, ಶುದ್ಧ ನೀರಿನಲ್ಲಿ ಈಡಿಸ್ ಸೊಳ್ಳೆಗಳು ಮೊಟ್ಟೆಗಳನ್ನಿಟ್ಟು ಸಂತಾನಾಭಿವೃದ್ದಿ ಮಾಡುತ್ತವೆ. ನಂತರ ಅವು ಮನುಷ್ಯನಿಗೆ ಕಚ್ಚುವುದರಿಂದ ಡೆಂಗಿ ಹರಡುತ್ತದೆ. ರೋಗದ ಲಕ್ಷಣ ಕಂಡು ಬಂದರೆ ಸಮೀಪದ ಸರ್ಕಾರಿ ಆಸ್ಪತ್ರೆಗಳಲ್ಲಿ ತಪಾಸಣೆಗೊಳಗಾಗಬೇಕು. ರಕ್ತಪರೀಕ್ಷೆ ಮಾಡಿಸಬೇಕು. ರೋಗ ಇರುವುದು ಖಚಿತವಾದಲ್ಲಿ ಸೂಕ್ತ ಚಿಕಿತ್ಸೆ ಪಡೆದುಕೊಳ್ಳಬೇಕು. ಯಾವುದೇ ಕಾರಣಕ್ಕೂ ಜ್ವರ ಬಂದರೆ ನಿರ್ಲಕ್ಷ್ಯ ಮಾಡಬಾರದು’ ಎಂದು ತಿಳಿಸಿದರು.
‘ಮನೆಗಳಲ್ಲಿ ನೀರು ಶೇಖರಿಸುವ ಡ್ರಮ್, ಬ್ಯಾರಲ್‍ಗಳು, ಸಿಮೆಂಟ್ ತೊಟ್ಟಿಗಳನ್ನು ವಾರಕ್ಕೊಮ್ಮೆ ಸ್ವಚ್ಛಗೊಳಿಸಿ ಒಣಗಿಸಿ ಪುನಃ ನೀರು ತುಂಬಬೇಕು. ಸಂಜೆ ವೇಳೆ ಮನೆ ಮುಂದೆ ಬೇವಿನಸೊಪ್ಪಿನ ಹೊಗೆ ಹಾಕಬೇಕು. ಸೊಳ್ಳೆ ಕಡಿತದಿಂದ ದೂರ ಇರಬೇಕಾದರೆ ವೈಯಕ್ತಿಕ ರಕ್ಷಣೆ ಮುಖ್ಯ. ಮನೆಯ ಸುತ್ತ ನೀರು ನಿಲ್ಲದಂತೆ ನಿಗಾ ವಹಿಸಬೇಕು. ಆರೋಗ್ಯ ಇಲಾಖೆ ಸಿಬ್ಬಂದಿ ಮತ್ತು ಆಶಾ ಕಾರ್ಯಕರ್ತೆಯರು ಮನೆಗಳಿಗೆ ಭೇಟಿ ನೀಡಿ ಡೆಂಗಿ ಹರಡದಂತೆ ಕೈಗೊಳ್ಳಬೇಕಾದ ಮುಂಜಾಗ್ರತಾ ಕ್ರಮದ ಬಗ್ಗೆ ಮಾಹಿತಿ ನೀಡುತ್ತಾರೆ’ ಎಂದರು.
‘ಮನೆ ಸುತ್ತ ಟೈರ್, ಒರಳುಕಲ್ಲು, ತೆಂಗಿನಚಿಪ್ಪು, ಹೊಡೆದ ಪ್ಲಾಸ್ಟಿಕ್ ಬಕೆಟ್ ಇತ್ಯಾದಿ ಬಿಸಾಡಬಾರದು. ಏಕೆಂದರೆ ಇದರಲ್ಲಿ ಮಳೆ ನೀರು ಶೇಖರಣೆಯಾಗಿ ಸೊಳ್ಳೆಗಳ ವಾಸಸ್ಥಳವಾಗುತ್ತದೆ’ ಎಂದು ತಿಳಿಸಿದರು.
ರಾಜ್ಯರಸ್ತೆ ಸಾರಿಗೆ ಸಂಸ್ಥೆ ಚನ್ನರಾಯಪಟ್ಟಣ ಘಟಕದ ಪ್ರಭಾರ ವ್ಯವಸ್ಥಾಪಕ ಬಸವರಾಜು, ಸಂಚಾರಿ ನಿಯಂತ್ರಣಾಧಿಕಾರಿ ಕೆ.ಎನ್. ನಾಗೇಶ್, ಜಿಲ್ಲಾ ಹಿರಿಯ ಆರೋಗ್ಯ ನಿರೀಕ್ಷಕ ನಿಂಗೇಗೌಡ, ತಾಲ್ಲೂಕು ಆರೋಗ್ಯ ಶಿಕ್ಞಣಾಧಿಕಾರಿ ಪುಷ್ಪಾವತಿ, ತಾಲ್ಲೂಕು ಹಿರಿಯ ಹೆಲ್ತ್ ಶಿವಲಿಂಗಯ್ಯ, ಉಮೇಶ್, ಅರುಣ್ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.