ADVERTISEMENT

ಹುಮ್ಮಸ್ಸಿನಿಂದ ಕೃಷಿ ಚಟುವಟಿಕೆ ಆರಂಭ

ಮುಂಗಾರು ಪ್ರವೇಶಕ್ಕೂ ಮೊದಲೇ ಜಿಲ್ಲೆಯಾದ್ಯಂತ ವಾಡಿಕೆಗಿಂತ ಅಧಿಕ ಮಳೆ; ಕೃಷಿಕರ ಮೊಗದಲ್ಲಿ ಮಂದಹಾಸ

​ಪ್ರಜಾವಾಣಿ ವಾರ್ತೆ
Published 6 ಜೂನ್ 2022, 2:18 IST
Last Updated 6 ಜೂನ್ 2022, 2:18 IST
ಸಕಲೇಶಪುರ ತಾಲ್ಲೂಕಿನ ಜಾನೇಕೆರೆ ಗ್ರಾಮದ ಗದ್ದೆಬೈಲಿನಲ್ಲಿ ಭತ್ತದ ಬಿತ್ತನೆ ಸಸಿ ಮಡಿಗೆ ರೈತರು ಭೂಮಿ ಉಳುಮೆಯಲ್ಲಿ ತೊಡಗಿರುವುದು
ಸಕಲೇಶಪುರ ತಾಲ್ಲೂಕಿನ ಜಾನೇಕೆರೆ ಗ್ರಾಮದ ಗದ್ದೆಬೈಲಿನಲ್ಲಿ ಭತ್ತದ ಬಿತ್ತನೆ ಸಸಿ ಮಡಿಗೆ ರೈತರು ಭೂಮಿ ಉಳುಮೆಯಲ್ಲಿ ತೊಡಗಿರುವುದು   

ಹಾಸನ: ಈ ಬಾರಿ ಮುಂಗಾರು ರಾಜ್ಯವನ್ನು ಪ್ರವೇಶಿಸುವ ಮೊದಲೇ ಮಳೆ ಶುರುವಾಗಿದೆ. ಆಗಾಗ್ಗೆ ಸುರಿಯುತ್ತಲೇ ಇರುವ ಮಳೆಯಿಂದಾಗಿ ರೈತಾಪಿ ಜನರು ಕೃಷಿ ಚಟುವಟಿಕೆಗೆ ಸಿದ್ಧರಾಗಿದ್ದಾರೆ. ಈಗಾಗಲೇ ಗದ್ದೆಯನ್ನು ಹದ ಮಾಡುವ ಕಾರ್ಯ ಆರಂಭಿಸಿದ್ದಾರೆ.

ಬಿತ್ತನೆ ಬೀಜ, ರಸಗೊಬ್ಬರಗಳ ಮಾಹಿತಿಯನ್ನು ಕಲೆ ಹಾಕಿದ್ದು, ಕೊರತೆ ಆಗದಂತೆ ಕೃಷಿ ಇಲಾಖೆಯ ಅಧಿಕಾರಿಗಳೂ ಸಿದ್ಧತೆ ಮಾಡಿಕೊಂಡಿದ್ದಾರೆ.

ಸಕಲೇಶಪುರ ತಾಲ್ಲೂಕಿನಲ್ಲಿ ಈ ವರ್ಷ ಸೈಕ್ಲೋನ್‌ ಪರಿಣಾಮದಿಂದ ಪದೇ ಪದೇ ಮಳೆಯಾಗುತ್ತಿದ್ದು, ಭೂಮಿಯ ತೇವಾಂಶ ಹೆಚ್ಚಾಗಿದೆ. ಗದ್ದೆ ಬೈಲುಗಳಲ್ಲಿ ಭತ್ತದ ಬಿತ್ತನೆ ಮಾಡಲು ಸಸಿ ಮಡಿ ಸಿದ್ದತೆಯಲ್ಲಿ ತೊಡಗಿರುವುದು ಕಂಡು ಬಂದಿದೆ.

ADVERTISEMENT

‘ತಾಲ್ಲೂಕಿಗೆ ಒಟ್ಟು 1290 ಕ್ವಿಂಟಲ್‌ ಭತ್ತದ ಬೀಜ ಸರಬರಾಜು ಆಗಿದ್ದು, 778 ಕ್ವಿಂಟಲ್‌ ಈಗಾಗಲೆ ರೈತರಿಗೆ ರಿಯಾಯಿತಿ ದರದಲ್ಲಿ ವಿತರಣೆ ಮಾಡಲಾಗಿದೆ. ಕಸಬಾ, ಹಾನುಬಾಳು, ಹೆತ್ತೂರು, ಯಸಳೂರು ಹಾಗೂ ಬೆಳಗೋಡು ಹೋಬಳಿ ರೈತ ಸಂಪರ್ಕ ಕೇಂದ್ರಗಳಲ್ಲಿ ಬಿತ್ತನೆ ಬೀಜ ದಾಸ್ತಾನು ಲಭ್ಯವಿದೆ’ ಎಂದು ಸಹಾಯಕ ಕೃಷಿ ನಿರ್ದೇಶಕ ಜನಾರ್ದನ ತಿಳಿಸಿದ್ದಾರೆ.

‘ಏಪ್ರಿಲ್‌ ಕೊನೆಯಿಂದ ಜೂನ್‌ 2ರ ವರೆಗೆ 6,205 ಟನ್‌ನಷ್ಟು ಯೂರಿಯಾ, ಎಂಒಪಿ, ಡಿಎಪಿ, ಕಾಂಪ್ಲೆಕ್ಸ್‌ ರಸಗೊಬ್ಬರ ಸರಬರಾಜು ಆಗಿದೆ. ಇದರಲ್ಲಿ ಈಗಾಗಲೆ 4,690 ಟನ್‌ ರಸಗೊಬ್ಬರ ರೈತರಿಗೆ ಮಾರಾಟವಾಗಿದೆ. 1,515 ಟನ್‌ ರಸಗೊಬ್ಬರ ಖಾಸಗಿ ಹಾಗೂ ಸಹಕಾರ ಸಂಘಗಳಲ್ಲಿ ದಾಸ್ತಾನಿದೆ’ ಎನ್ನುತ್ತಾರೆ ಅವರು.

‘ಬೇಲೂರು ತಾಲ್ಲೂಕಿನಾದ್ಯಂತ ವಾಡಿಕೆಗಿಂತ ಶೇ 49ರಷ್ಟು ಹೆಚ್ಚಿನ ಮಳೆಯಾಗಿದ್ದು, 26,072 ಹೆಕ್ಟೇರ್ ಬಿತ್ತನೆ ಗುರಿ ಹೊಂದಲಾಗಿದೆ. 821 ಹೆಕ್ಟೇರ್ ಬಿತ್ತನೆಯಾಗಿದೆ. 529 ಕ್ವಿಂಟಲ್ ಬಿತ್ತನೆ ಬೀಜಗಳನ್ನು ದಾಸ್ತಾನು ಮಾಡಲಾಗಿದ್ದು, ರೈತರ ಬೇಡಿಕೆಗೆ ಅನುಗುಣವಾಗಿ ಬೀಜಗಳನ್ನು ಸರಬರಾಜು ಮಾಡಿಕೊಂಡು ವಿತರಿಸ ಲಾಗುವುದು. ಬೆಳೆಗಳಿಗೆ ಬೇಕಾಗುವ ರಸಗೊಬ್ಬರಗಳ ದಾಸ್ತಾನು ಲಭ್ಯವಿರು
ವಂತೆ ಕ್ರಮ ವಹಿಸಲಾಗಿದೆ. ರಸಗೊಬ್ಬರಗಳ ಕೃತಕ ಅಭಾವ ಸೃಷ್ಟಿಸುವವರ ಮೇಲೆ ಸೂಕ್ತ ಕ್ರಮ ಕೈಗೊಳ್ಳುವ ಎಚ್ಚರಿಕೆ ನೀಡಲಾಗಿದೆ’ ಎಂದು ಸಹಾಯಕ ಕೃಷಿ ನಿರ್ದೇಶಕ ಶಶಿಧರ್ ತಿಳಿಸಿದ್ದಾರೆ.

‘ಎಲ್ಲಾ ಕಂಪನಿಗಳ ಮೆಕ್ಕೆಜೋಳದ ಬಿತ್ತನೆ ಬೀಜವನ್ನು ಕೃಷಿ ಇಲಾಖೆಯಲ್ಲಿ ವಿತರಿಸುತ್ತಿಲ್ಲ, ಆದ್ದರಿಂದ ಹೈಟೆಕ್ ಮುಂತಾದ ಕಂಪನಿಗಳ ಬಿತ್ತನೆ ಬೀಜವನ್ನು ಅಂಗಡಿಗಳಲ್ಲಿ ಹೆಚ್ಚಿನ ದರ ನೀಡಿ ಖರೀದಿಸಬೇಕಾದ ಅನಿವಾರ್ಯತೆ ಇದೆ’ ಎಂದು ರೈತ ಸನ್ಯಾಸಿಹಳ್ಳಿ ಗಿರೀಶ್ ತಿಳಿಸಿದರು. ‌

ಹಿರೀಸಾವೆ, ಮತಿಘಟ್ಟ ಪಂಚಾಯಿತಿ ಭಾಗಕ್ಕೆ ಮೇ ತಿಂಗಳಲ್ಲಿ ವಾಡಿಕೆಗಿಂತ ಹೆಚ್ಚು ಮಳೆಯಾಗಿದ್ದು, ತೇವಾಂಸ ಹೆಚ್ಚಾಗಿ ಉಳುಮೆ ಮಾಡಲಾಗುತ್ತಿಲ್ಲ. ದಿಡಗ, ಜಿನ್ನೇಹಳ್ಳಿ, ಕಬ್ಬಳಿ ಭಾಗದಲ್ಲಿ ಹದವಾದ ಮಳೆ ಆಗಿರುವುದರಿಂದ ರೈತರು ಪೂರ್ವ ಮುಂಗಾರು ಬೆಳೆಗಳಾದ ಎಳ್ಳು, ಬಿಳಿ ಜೋಳ, ಅಲಸಂದೆ, ಹೆಸರು ಕಾಳು, ಉದ್ದು, ಅಪ್ಪ ಸೆಣಬು ಬಿತ್ತನೆ ಮಾಡಿದ್ದಾರೆ. ಹೆಚ್ಚು ಮಳೆಯಿಂದ ಕೆಲವು ಗ್ರಾಮಗಳಲ್ಲಿ ಬೀಜಗಳು ಕೊಳೆತು ಹೋಗಿವೆ.

‘ಹೋಬಳಿಯಲ್ಲಿ ಜುಲೈ ತಿಂಗಳಲ್ಲಿ ಮುಂಗಾರು ಬಿತ್ತನೆ ಪ್ರಾರಂಭ. ಬಿತ್ತನೆ ಬೀಜದ ಕೊರತೆ ಇಲ್ಲ, ಅಪ್ಪ ಸೆಣಬು, ಬದಲಾಗಿ ಡಯಾಂಚ ತಳಿಯ ಬಿತ್ತನೆ ಬೀಜವನ್ನು ಹಸಿರು ಎಳೆ ಗೊಬ್ಬರವಾಗಿ ಹಾಕಬಹುದು, ಮುಂದಿನ ದಿನಗಳಲ್ಲಿ ರೈತರಿಗೆ ನೀಡಲಾಗುವುದು’ ಎಂದು ಕೃಷಿ ಅಧಿಕಾರಿ ಜಾನ್ ತಾಜ್ ಹೇಳಿದರು.

‘ರಸಗೊಬ್ಬರದ ಸಮಸ್ಯೆಯಾಗದಂತೆ ಕೃಷಿ ಇಲಾಖೆಯ ಅಧಿಕಾರಿಗಳು ನಿತ್ಯ ಗಮನಹರಿಸುತ್ತಿದ್ದಾರೆ. ಹೋಬಳಿಯಲ್ಲಿ ಇನ್ನೂ ರಸಗೊಬ್ಬರದ ಬೇಡಿಕೆ ಅಷ್ಟಾಗಿಲ್ಲ’ ಎನ್ನುತ್ತಾರೆ ಹಿರೀಸಾವೆ ಕೃಷಿ ಪತ್ತಿನ ಸಹಕಾರ ಸಂಘದ ಸಿಇಒ ಹರೀಶ್.

ಅರಸೀಕೆರೆ ತಾಲ್ಲೂಕಿನ ಪೂರ್ವ ಮುಂಗಾರು ಹಂಗಾಮಿನಲ್ಲಿ ಪ್ರತಿ ವರ್ಷ 16 ಸೆಂ.ಮೀ. ಮಳೆ ಬರಬೇಕಿತ್ತು, ಆದರೆ ಈ ಬಾರಿ 21.6 ಸೆಂ.ಮೀ.ನಷ್ಟು ಮಳೆ ಬಂದಿದ್ದು, ವಾಡಿಕೆಗಿಂತ ಶೇ 35 ರಷ್ಟು ಹೆಚ್ಚು ಮಳೆಯಾಗಿದೆ.

ಹೆಸರುಕಾಳು, ಉದ್ದು, ಅಲಸಂದೆ, ಸೂರ್ಯಕಾಂತಿ, ಹತ್ತಿ, ತೊಗರಿ, ಹರಳು, ಸೇರಿದಂತೆ ವಿವಿಧ ಮುಂಗಾರು ಬೆಳೆಗಳ ಬಿತ್ತನೆ ಕಾರ್ಯ ಮುಗಿದಿದ್ದು, ಒಂದರಿಂದ ಒಂದೂವರೆ ತಿಂಗಳ ಬೆಳೆ ಬೆಳೆದಿದೆ. ಮುಂಗಾರು ಕೃಷಿಗೆ ಸಂಬಂಧಿಸಿದ ಪೂರಕ ವಾತಾವರಣ ಸೃಷ್ಟಿಯಾಗಿದೆ, 1,400 ಹೆಕ್ಟೇರ್ ಪ್ರದೇಶ ದಲ್ಲಿ ವಿವಿಧ ಮುಂಗಾರು ಬೆಳೆಗಳು ಬೆಳೆ ದಿವೆ. ತಾಲ್ಲೂಕಿನ ಒಟ್ಟು ಕೃಷಿ ಭೂ ಪ್ರದೇಶದಲ್ಲಿ ಶೇ 23 ರಷ್ಟು ಬೆಳೆ ಆವರಿಸಿದೆ.

ರೈತರ ಬೇಡಿಕೆಗೆ ಅನುಗುಣವಾಗಿ ಸುಮಾರು 1 ಸಾವಿರ ಕ್ವಿಂಟಲ್‌ಗೂ ಅಧಿಕ ವಿವಿಧ ಬಿತ್ತನೆ ಬೀಜಗಳು ದಾಸ್ತಾನು ಇದೆ, ಸುಮಾರು 550 ಕ್ವಿಂಟಲ್ ಗುಣಮಟ್ಟದ ಬಿತ್ತನೆ ಬೀಜವನ್ನು ಸಬ್ಸಿಡಿ ದರದಲ್ಲಿ ವಿತರಿಸಲಾಗಿದೆ. ರಸಗೊಬ್ಬರ ದಾಸ್ತಾನು ಸಮರ್ಪಕವಾಗಿದ್ದು, ಯೂರಿಯಾ 480, ಡಿಎಪಿ 180, ಎನ್.ಪಿ. ಕಾಂಪ್ಲೆಕ್ಸ್ 700, ಎನ್‌ಪಿಕೆ 160, ಪೊಟ್ಯಾಷ್ 155, ರಂಜಕ 30 ಟನ್ ರಸಗೊಬ್ಬರ ದಾಸ್ತಾನು ಇದ್ದು, ಈ ನಿಟ್ಟಿನಲ್ಲಿ ಈಗಾಗಲೇ ತಾಲ್ಲೂಕು ಮತ್ತು ಹೋಬಳಿ ಮಟ್ಟದಲ್ಲಿ ಸಭೆ ನಡೆಸಿ ರೈತರಿಗೆ ಮಾಹಿತಿ ನೀಡಲಾಗಿದೆ ಎಂದು ತಾಲ್ಲೂಕಿನ ಸಹಾಯಕ ಕೃಷಿ ನಿರ್ದೇಶಕ ಶಿವಕುಮಾರ್‌ ತಿಳಿಸಿದ್ದಾರೆ.

ಹಳೇಬೀಡು ಭಾಗದಲ್ಲಿ ಮುಂಗಾರು ಹಂಗಾಮಿನಲ್ಲಿ ಸೂರ್ಯಕಾಂತಿ, ಹತ್ತಿ, ಹಾಗೂ ಮುಸುಕಿನ ಜೋಳವನ್ನು ರೈತರು ಬಿತ್ತನೆ ಮಾಡಿದ್ದಾರೆ. ರಸಗೊಬ್ಬರ, ಕೀಟನಾಶಕ ಹಾಗೂ ಕಾರ್ಮಿಕರ ಕೂಲಿ ಬೆಲೆ ಹೆಚ್ಚಳ ಆಗಿರುವುದರಿಂದ, ಕೃಷಿ ವೆಚ್ಚ ಅಧಿಕವಾಗಿದೆ ಎಂಬ ಮಾತು ಹಳೇಬೀಡು ಭಾಗದ ರೈತರಿಂದ ಕೇಳಿ ಬರುತ್ತಿದೆ.

ಒಂದು ಚೀಲಕ್ಕೆ ₹2ಸಾವಿರ ಇಲ್ಲದೆ ಯಾವ ರಸಗೊಬ್ಬರವೂ ದೊರಕುತ್ತಿಲ್ಲ. ಕೀಟ, ರೋಗ ಬಾಧೆ ನಿಯಂತ್ರಣಕ್ಕೆ ಒಂದು ಎಕರೆ ಬೆಳೆಗೆ ಔಷಧ ಖರೀದಿಸಲು ₹2ಸಾವಿರದಿಂದ ₹5ಸಾವಿರ ಖರ್ಚು ಬರುತ್ತಿದೆ. ಒಮ್ಮೊಮ್ಮೆ ಪದೇ ಪದೇ ಔಷಧ ಸಿಂಪಡಣೆ ಮಾಡುವ ಪರಿಸ್ಥಿತಿ ಬರುತ್ತದೆ. ಪುರುಷರಿಗೆ ದಿನಕ್ಕೆ ₹500 ಇದ್ದ ಕೂಲಿ ಈಗ ₹600 ಕ್ಕೆ ಏರಿದೆ.

ಮಹಿಳೆಯರಿಗೆ ಕೂಲಿ ₹250ರಿಂದ ₹350ಕ್ಕೆ ಹೆಚ್ಚಳವಾಗಿದೆ. ಒಂದು ಎಕರೆ ಸೂರ್ಯಕಾಂತಿ ಬೆಳೆಯಲು ₹20ಸಾವಿರ, ಮುಸುಕಿನ ಜೋಳ, ಹತ್ತಿಗೆ ₹25ಸಾವಿರ ಬಂಡವಾಳವನ್ನು ರೈತರು ತೊಡಗಿಸಿದ್ದಾರೆ. ಸಾಕಷ್ಟು ರೈತರು ಮೇ ತಿಂಗಳಿನ ಮಳೆ ನಂಬಿಕೊಂಡು ಬಿತ್ತನೆ ಮಾಡಿದ ಬೀಜಗಳು ಮೊಳಕೆ ಒಡೆ ಯಲೇ ಇಲ್ಲ. ಈಗ ಬೆಳೆಯ ಬೆಳವಣಿಗೆ ಚೆನ್ನಾಗಿದೆ. ಮಳೆ ಕೈಕೊಟ್ಟರೆ ಅಥವಾ ಹೆಚ್ಚಾದರೂ ಬೆಳೆಗೆ ಹೊಡೆತ ಬೀಳಲಿದೆ. ವಾಡಿಕೆ ಪ್ರಕಾರ ಮಳೆ ಬಿದ್ದರೆ ಮಾತ್ರ ಬದುಕಲು ಸಾಧ್ಯ ಎನ್ನುತ್ತಾರೆ ರೈತರು.

ಚನ್ನರಾಯಪಟ್ಟಣ ತಾಲ್ಲೂಕಿನಲ್ಲಿ 41,224 ಹೆಕ್ಟೇರ್ ಪ್ರದೇಶದಲ್ಲಿ ರಾಗಿ, ಮುಸುಕಿನಜೋಳ, ಭತ್ತ, ದ್ವಿದಳ ಧಾನ್ಯ, ಕಬ್ಬು, ಎಣ್ಣೆಕಾಳುಗಳು ಬಿತ್ತನೆ ಮಾಡುವ ಗುರಿ ಹೊಂದಲಾಗಿದೆ. ಈ ಪೈಕಿ 1,028 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಆಗಿದೆ.

ಜನವರಿ 1 ರಿಂದ ಜೂನ್1 ರವರೆಗೆ ವಾಡಿಕೆಯತೆ 16.2 ಸೆಂ.ಮೀ. ಮಳೆಯಾಗಬೇಕಿತ್ತು. ಆದರೆ 29.6 ಸೆಂ.ಮೀ. ಮಳೆಯಾಗಿದೆ. ಮುಂಗಾರು ಪೂರ್ವ ಮಳೆಯಿಂದ ರೈತ ಮೊಗದಲ್ಲಿ ಮಂದಹಾಸ ಮೂಡಿದೆ. 488 ಕ್ವಿಂಟಲ್ ಬಿತ್ತನೆ ಬೀಜ ರೈತ ಸಂಪರ್ಕ ಕೇಂದ್ರಗಳಲ್ಲಿ ದಾಸ್ತಾನಿದೆ. ಸೆಣಬು ಬಿತ್ತನೆ ಬೀಜಕ್ಕೆ ಬೇಡಿಕೆ ಇದೆ. ಇದುವರೆಗೆ 107.8 ಕ್ವಿಂಟಲ್ ಬಿತ್ತನೆ ಬೀಜವನ್ನು ರೈತರಿಗೆ ವಿತರಣೆ ಮಾಡಲಾಗಿದ್ದು, 250 ಕ್ವಿಂಟಲ್ ಬಿತ್ತನೆ ಬೀಜಕ್ಕೆ ಬೇಡಿಕೆ ಸಲ್ಲಿಸಲಾಗಿದೆ. ರಸಗೊಬ್ಬರದ ಕೊರತೆ ಇಲ್ಲ. 22,55 ಟನ್ ರಸಗೊಬ್ಬರ ದಾಸ್ತಾನು ಇದೆ ಎಂದು ಕೃಷಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ನಿರ್ವಹಣೆ: ಚಿದಂಬರಪ್ರಸಾದ
ಪೂರಕ ಮಾಹಿತಿ: ಜಾನಕೇರೆ ಪರಮೇಶ್‌, ಮಲ್ಲೇಶ್‌, ಎಚ್‌.ಕೆ. ಚಂದ್ರು, ರಂಗನಾಥ, ಅನಿಲ್‌ಕುಮಾರ್‌, ಸಿದ್ಧರಾಜು, ಚಂದ್ರಶೇಖರ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.