
ಬೇಲೂರು: ಬ್ಯಾಂಕಿನ ಪ್ರತಿಯೊಬ್ಬ ಖಾತೆದಾರರು ತಮ್ಮ ಗುರುತಿನ ಹಾಗೂ ವಿಳಾಸದ ದಾಖಲೆಗಳನ್ನು ನವೀಕರಿಸಬೇಕಾಗಿದ್ದು, ಇದನ್ನು ನಿರ್ಲಕ್ಷಿಸಿದರೆ ಖಾತೆ ತಾತ್ಕಾಲಿಕವಾಗಿ ಸ್ಥಗಿತಗೊಳ್ಳುವ ಸಾಧ್ಯತೆ ಇದೆ ಎಂದು ಜಿಲ್ಲಾ ಲೀಡ್ ಬ್ಯಾಂಕ್ ವ್ಯವಸ್ಥಾಪಕಿ ಲತಾ ಕುಮಾರಿ ತಿಳಿಸಿದರು.
ಇಲ್ಲಿನ ಚನ್ನಕೇಶವಸ್ವಾಮಿ ದೇವಾಲಯದ ಬಳಿ ಜಿಲ್ಲಾ ಲೀಡ್ ಬ್ಯಾಂಕ್ ವತಿಯಿಂದ ಬುಧವಾರ ಸಂಜೆ ಆಯೋಜಿಸಿದ್ದ, ಕೆವೈಸಿ ಜಾಗೃತಿ ಜಾಥಾದಲ್ಲಿ ಅವರು ಮಾತನಾಡಿದರು, ರಿಸರ್ವ್ ಬ್ಯಾಂಕ್ ಮಾರ್ಗಸೂಚಿಗಳ ಪ್ರಕಾರ ಇತ್ತೀಚಿನ ದಿನಗಳಲ್ಲಿ ಸೈಬರ್ ವಂಚನೆ, ನಕಲಿ ಖಾತೆಗಳು ಮತ್ತು ಹಣಕಾಸು ಅಕ್ರಮಗಳನ್ನು ತಡೆಯಲು ಕೆವೈಸಿ ಅತ್ಯಂತ ಪ್ರಮುಖವಾಗಿದೆ.
ಆಧಾರ್ ಕಾರ್ಡ್, ಪ್ಯಾನ್ ಕಾರ್ಡ್, ಮತದಾರ ಗುರುತಿನ ಚೀಟಿ, ಪಾಸ್‌ಪೋರ್ಟ್ ಸೇರಿದಂತೆ ದಾಖಲೆಗಳನ್ನು ಬ್ಯಾಂಕ್ ಶಾಖೆಗೆ ಭೇಟಿ ನೀಡಿ ಕೆವೈಸಿ ನವೀಕರಣ ಮಾಡಿಸಬೇಕು. ಕೆಲವು ಬ್ಯಾಂಕುಗಳಲ್ಲಿ ಆನ್‌ಲೈನ್ ಮೂಲಕವೂ ಕೆವೈಸಿ ಪ್ರಕ್ರಿಯೆ ಪೂರ್ಣಗೊಳಿಸುವ ವ್ಯವಸ್ಥೆ ಇದೆ, ವಿಶೇಷವಾಗಿ ಹಿರಿಯ ನಾಗರಿಕರು, ಪಿಂಚಣಿ ಪಡೆಯುವವರು ಹಾಗೂ ಗ್ರಾಮೀಣ ಭಾಗದ ಖಾತೆದಾರರು ಕೆವೈಸಿ ನವೀಕರಣ ಮಾಡಿಸಿಕೊಳ್ಳುವುದರಿಂದ ಸರಕಾರದ ಸೌಲಭ್ಯಗಳು ನಿರಂತರವಾಗಿ ಲಭ್ಯವಾಗುತ್ತವೆ ಎಂದು ತಿಳಿಸಿದರು.
ತಾಲ್ಲೂಕಿನ 38 ಬ್ಯಾಂಕ್‌ಗಳ ಅಧಿಕಾರಿಗಳು, ರಾಷ್ಟೀಯ ಗ್ರಾಮೀಣ ಜೀವಾನೋಪಾಯ ಸಂಸ್ಥೆಯ ತಾಲ್ಲೂಕು ವ್ಯವಸ್ಥಾಪಕ ದೇವರಾಜು, ತಾಲ್ಲೂಕು ಆರ್ಥಿಕ ಸಾಕ್ಷರತಾ ಸಂಯೋಜಕ ಬಿ.ಎ.ವಿರೂಪಾಕ್ಷ, ಲೀಡ್ ಬ್ಯಾಂಕ್ ಹಿರಿಯ ವ್ಯವಸ್ಥಾಪಕ ಕಿಶೋರ್ ಕುಮಾರ್, ಕೆನರಾ ಬ್ಯಾಂಕ್ ತರಬೇತಿ ಸಂಸ್ಥೆಯ ಸುಜಿತ್ ಕುಮಾರ್, ಮಾನಸ, ಪ್ರದೀಪ್ ಕುಮಾರ್, ಅಭಿಲಾಷ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.