ADVERTISEMENT

ಬಜೆಟ್‌ ಪೂರ್ವಭಾವಿ ಸಭೆ: ಶಾಸಕರೆದುರು ಪುರಸಭೆ ಸದಸ್ಯರು ಸಮಸ್ಯೆಗಳ ಪಟ್ಟಿ

​ಪ್ರಜಾವಾಣಿ ವಾರ್ತೆ
Published 4 ಫೆಬ್ರುವರಿ 2026, 6:29 IST
Last Updated 4 ಫೆಬ್ರುವರಿ 2026, 6:29 IST
ಬೇಲೂರಿನ ಪುರಸಭೆಯಲ್ಲಿ ಆಯೋಜಿಸಿದ್ದ ಬಜೆಟ್ ಪೂರ್ವಭಾವಿ, ಸಾರ್ವಜನಿಕ ಸಮಾಲೋಚನಾ ಸಭೆಯಲ್ಲಿ ಶಾಸಕ ಎಚ್.ಕೆ.ಸುರೇಶ್ ಮಾತನಾಡಿದರು.
ಬೇಲೂರಿನ ಪುರಸಭೆಯಲ್ಲಿ ಆಯೋಜಿಸಿದ್ದ ಬಜೆಟ್ ಪೂರ್ವಭಾವಿ, ಸಾರ್ವಜನಿಕ ಸಮಾಲೋಚನಾ ಸಭೆಯಲ್ಲಿ ಶಾಸಕ ಎಚ್.ಕೆ.ಸುರೇಶ್ ಮಾತನಾಡಿದರು.   

ಬೇಲೂರು: ಇಲ್ಲಿನ ಪುರಸಭೆಯಲ್ಲಿ ಸೋಮವಾರ ಆಯೋಜಿಸಿದ್ದ ಬಜೆಟ್ ಪೂರ್ವಭಾವಿ ಸಭೆಯು ಸದಸ್ಯರ ಅಹವಾಲುಗಳಿಂದ ತುಂಬಿಹೋಯಿತು. ಬೇಡಿಕೆ ಆಲಿಸಿದ ಶಾಸಕ ಎಚ್.ಕೆ. ಸುರೇಶ್ ಪುರಸಭೆ ಸದಸ್ಯರು ಮತ್ತು ಅಧಿಕಾರಿಗಳ ಸಭೆ ನಡೆಸಿ, ಚರ್ಚಿಸೋಣ’ ಎಂದು ಹೇಳಿದರು.

ಪುರಸಭೆ ಅಧ್ಯಕ್ಷೆ ಉಷಾ ಸತೀಶ್ ಅಧ್ಯಕ್ಷತೆಯಲ್ಲಿ ಆಯೋಜಿಸಿದ್ದ ಸಭೆ‌ಯಲ್ಲಿ ಶಾಸಕ ಎಚ್.ಕೆ.ಸುರೇಶ್ ಎದುರು ಪುರಸಭೆಯ ಸದಸ್ಯರು ತಮ್ಮ ವಾರ್ಡ್‌ಗಳ ಬವಣೆ ಹೇಳಲು ಆರಂಭಿಸಿದರು. ‘ನಮ್ಮ ವಾರ್ಡ್‌ಗಳಲ್ಲಿ ಕೆಲಸಗಳಾಗಿಲ್ಲ. ನಗರೋತ್ಥಾನ ಯೋಜನೆಯ ಅನುದಾನದಲ್ಲಿ ನಮ್ಮ ವಾರ್ಡ್‌ಗಳಿಗೆ ಹಂಚಿದ ಕಾಮಗಾರಿಗಳನ್ನು ನಮ್ಮ ಗಮನಕ್ಕೆ ತರದೇ, ಇಷ್ಟ ಬಂದ ರೀತಿಯಲ್ಲಿ ಹಾಕಿಕೊಳ್ಳಲಾಗಿದೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಶಾಸಕ ಎಚ್.ಕೆ. ಸುರೇಶ್ ಮಾತನಾಡಿ, ‘ಸುಳ್ಳುಗಳು ಜಾಸ್ತಿಯಾದಾಗ ಸತ್ಯ ಹೊರಗೆ ಬರುತ್ತದೆ. ಸಾರ್ವಜನಿಕರಿಗಾಗಿ ಕೆಲಸ ಮಾಡುವುದೇ ನನ್ನ ಸರದಿ.  ಬಿಕ್ಕೋಡು ರಸ್ತೆ ಕಾಮಗಾರಿಯನ್ನು ರಸ್ತೆ ಮಧ್ಯೆಯಿಂದ 28 ಅಡಿ ತೆಗೆದುಕೊಳ್ಳಬೇಕು. ಇದರಲ್ಲಿ ತಾರತಮ್ಯ ಇಲ್ಲ’ ಎಂದರು.

ADVERTISEMENT

‘ನಗರೋತ್ಥಾನ ಯೋಜನೆಯ ₹7.30 ಕೋಟಿ ಅನುದಾನ ಸ್ಥಗಿತವಾಗಿತ್ತು. ಅದಕ್ಕೆ ನಾನು ಮರುಜೀವ ನೀಡಿದ್ದೇನೆ.  ಎಲ್ಲ ವಾರ್ಡ್‌ಗಳಿಗೂ ಕೆಲಸ ಹಾಕಲಾಗಿದೆ.  ಸದ್ಯದಲ್ಲೇ ಪುರಸಭೆ ಸದಸ್ಯರು ಮತ್ತು ಅಧಿಕಾರಿಗಳ ಸಭೆ ನಡೆಸಿ, ಚರ್ಚಿಸೋಣ’ ಎಂದರು.

ಪುರಸಭೆ ಸದಸ್ಯ ಜಿ.ಶಾಂತಕುಮಾರ್ ಮಾತನಾಡಿ, ‘ಕೆ.ಎಸ್.ಲಿಂಗೇಶ್ ಅವರು ಶಾಸಕರಾಗಿದ್ದಾಗ ಬಂದ ₹7.5 ಕೋಟಿ ಅನುದಾನದಲ್ಲಿ ಕ್ರಿಯಾ ಯೋಜನೆಯಾಗಿತ್ತು. ಆಗ ಹಣ ಬಂದಿರಲಿಲ್ಲ. ಹೊಸ ಶಾಸಕರು ಬಂದ ನಂತರ ಹೊಸ ಕ್ರಿಯಾಯೋಜನೆ ಮಾಡಲಾಗಿದೆ’ ಎಂದರು. ಸದಸ್ಯ ಬಿ.ಗಿರೀಶ್ ಮಾತನಾಡಿ, ನಮಗೆ ಉಳಿದಿರುವ ಅವಧಿ ಕೇವಲ 6 ತಿಂಗಳು. 17ನೇ ವಾರ್ಡ್‌ನ ರಸ್ತೆಗಳಲ್ಲಿ ತಿರುಗಾಡಲು ಆಗುತ್ತಿಲ್ಲ. ರಸ್ತೆ ಮಾಡಿಕೊಡಿ’ ಎಂದು ಮನವಿ ಮಾಡಿದರು.ಸದಸ್ಯ ಬಿ.ಎ.ಜಮಾಲುದ್ದೀನ್ ಮಾತನಾಡಿ, ಪುರಸಭೆಯವರಿಗೆ ಯುಜಿಡಿ ಮತ್ತು ನೀರು ಸರಬರಾಜು ನಿರ್ವಹಣೆ ಮಾಡಲು ಆಗುವುದಿಲ್ಲ, ಹೊಳೆಬೀದಿಯ ಭಸ್ಮೀಕರಣ ಹೊಂಡದ ₹ 16ಕೋಟಿ ಅನುದಾನದಲ್ಲಿ ₹9 ಕೋಟಿ ಕೆಲಸ ಮಾಡಲಾಗಿದ್ದು, ಉಳಿದ ಕೆಲಸ ಮಾಡಿಲ್ಲ’ ಎಂದರು. ಸದಸ್ಯ ಭರತ್, ಕರ್ನಾಟಕ ರಕ್ಷಣಾ ವೇದಿಕೆ (ಪ್ರವೀಣ್ ಶೆಟ್ಟಿ ಬಣ) ತಾಲ್ಲೂಕು ಘಟಕದ ಅಧ್ಯಕ್ಷ ವಿ.ಎಸ್.ಭೋಜೇಗೌಡ ಮಾತನಾಡಿದರು.

 ಪುರಸಭೆ ಸದಸ್ಯರಾದ ಅಕ್ರಂ ಷರೀಫ್‌, ಜಮೀಲಾ, ಪ್ರಭಾಕರ್, ಪುಟ್ಟಸ್ವಾಮಿ, ತೀರ್ಥಕುಮಾರಿ ವೆಂಕಟೇಶ್, ಸಿ.ಎನ್.ದಾನಿ, ಮುಖ್ಯಾಧಿಕಾರಿ ಬಸವರಾಜು ಟಾಕಪ್ಪ ಶಿಗ್ಗಾಂವಿ ಇದ್ದರು.

ಹೊಸ ದೊಡ್ಡ ಶಾಂತಿ ವಾಹನ ಖರೀದಿಸಲಾಗುವುದು. 23 ವಾರ್ಡ್‌ಗಳ ಸಮಗ್ರ ಅಭಿವೃದಿಗೆ ಬಜೆಟ್ ರೂಪಿಸಲಾಗುವುದು.
ಉಷಾ ಸತೀಶ್, ಪುರಸಭೆ ಅಧ್ಯಕ್ಷೆ
ಯಾರೋ ಬಂದು ನನ್ನ ವಿರುದ್ಧ ಆರೋಪ ಮಾಡಿದರೂ ಎದೆ ಕೊಟ್ಟು ನಿಲ್ಲುವವ ನಾನು. ಸುಳ್ಳು ಹೇಳಿ ಅದಕ್ಕೆ ನೂರು ಸುಳ್ಳು ಹೇಳಲ್ಲ. ಸತ್ಯದ ಜೊತೆ ನಿಲ್ಲುವೆ.
ಎಚ್‌.ಕೆ. ಸುರೇಶ್‌, ಶಾಸಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.