
ಬೇಲೂರು: ತಾಲ್ಲೂಕಿನ ಮಲೆನಾಡು ಭಾಗಗಳಲ್ಲಿ ಕಾಡಾನೆಗಳ ಉಪಟಳ ಮಿತಿಮೀರಿದ್ದು, ಶಾಶ್ವತ ಪರಿಹಾರ ನೀಡಬೇಕೆಂದು ಒತ್ತಾಯಿಸಿ ರೈತಪರ ಸಂಘಟನೆಗಳ ಸದಸ್ಯರು ತಾಲ್ಲೂಕಿನ ಬಿಕ್ಕೋಡು ಗ್ರಾಮದಲ್ಲಿ ಸೋಮವಾರ ರಾಜ್ಯ ಹೆದ್ದಾರಿ ತಡೆಗಟ್ಟಿ ಪ್ರತಿಭಟಿಸಿದರು.
ಅರಣ್ಯ ಇಲಾಖೆಯ ಮುಖ್ಯ ಸಂರಕ್ಷಣಾಧಿಕಾರಿ ಸ್ಥಳಕ್ಕೆ ಬರಬೇಕು ಎಂದು ಆಗ್ರಹಿಸಿದ ಪ್ರತಿಭಟನಕಾರರು, ಪ್ರಧಾನಮಂತ್ರಿ, ಮುಖ್ಯಮಂತ್ರಿ, ಅರಣ್ಯ ಸಚಿವರು ಹಾಗೂ ಅರಣ್ಯ ಇಲಾಖೆಗೆ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಕಾಫಿ ಬೆಳೆಗಾರರ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಅದ್ದೂರಿ ಕುಮಾರ್ ಮಾತನಾಡಿ, ‘ಜಿಲ್ಲೆಯಲ್ಲಿ ಕಾಡಾನೆಗಳ ದಾಳಿಯಿಂದ ಸಾಕಷ್ಟು ಸಾವು, ನೋವುಗಳು ಸಂಭವಿಸಿದರೂ ಸಹ ಸರ್ಕಾರ ಶಾಶ್ವತ ಪರಿಹಾರ ನೀಡದಿರುವುದು ದುರದೃಷ್ಟಕರ. ಈಗ ಬೆಳಗಾವಿಯಲ್ಲಿ ಅಧಿವೇಶನ ನಡೆಯುತ್ತಿದೆ. ಈ ಸಂದರ್ಭದಲ್ಲಿ ಅರಣ್ಯ ಸಚಿವರು ಚರ್ಚಿಸಬೇಕು. ವಾರದಲ್ಲಿ ತಾಲ್ಲೂಕಿನಲ್ಲಿರುವ ಕಾಡಾನೆಗಳನ್ನು ಸ್ಥಳಾಂತರ ಮಾಡಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಉಗ್ರ ಪ್ರತಿಭಟನೆ ನಡೆಸುವುದರ ಜೊತೆಗೆ ಜಿಲ್ಲಾ ಅರಣ್ಯ ಇಲಾಖೆ ಕಚೇರಿ ಎದುರು ಧರಣಿ ನಡೆಸಲಾಗುವುದು’ ಎಂದು ಎಚ್ಚರಿಸಿದರು.
ರೈತ ಸಂಘದ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಬಳ್ಳೂರು ಸ್ವಾಮಿಗೌಡ ಮಾತನಾಡಿ, ‘ಪ್ರತಿ ಬಾರಿ ಹೋರಾಟ ನಡೆಸಿದಾಗಲೂ ಅರಣ್ಯ ಇಲಾಖೆಯವರು ಕಾರ್ಯಾಚರಣೆ ನಡೆಸಿ ಕಣ್ಣೊರೆಸುವ ತಂತ್ರ ಮಾಡುತ್ತಾರೆ. ಆದರೆ ಪೂರ್ಣ ಆನೆಗಳನ್ನು ಸ್ಥಳಾಂತರ ಮಾಡುತ್ತಿಲ್ಲ. ಕಾಡಾನೆಗಳನ್ನು ಓಡಿಸುವುದೋ ಇಲ್ಲ ಹಿಡಿದು ಸ್ಥಳಾಂತರ ಮಾಡುವುದೋ ಗೊತ್ತಿಲ್ಲ. ಆದರೆ ತಾಲ್ಲೂಕಿನಲ್ಲಿರುವ ಎಲ್ಲ ಆನೆಗಳನ್ನು ಕರೆದುಕೊಂಡಿ ಹೋಗಿ’ ಎಂದರು.
ಡಿಎಫ್‌ಒ ಸೌರಭ್ ಕುಮಾರ್ ಮಾತನಾಡಿ, ‘ಕಾಡಾನೆಗಳನ್ನು ಸ್ಥಳಾಂತರ ಮಾಡಲು ಸರ್ಕಾರ ಮುಂದಾಗಿದ್ದು, ಕ್ರಮ ಕೈಗೊಳ್ಳಲಾಗುತ್ತಿದೆ. ಈಗ ಕಾಡಾನೆಗಳನ್ನು ಮುತ್ತೋಡಿ ಅರಣ್ಯಕ್ಕೆ ಓಡಿಸಲು ಕೆಲ ತಾಂತ್ರಿಕ ಸಮಸ್ಯೆಗಳಿದ್ದು, ಅವು್ಗಳನ್ನು ಪರಿಹರಿಸಲು ವಿಧಾನಸಭೆ ಅಧಿವೇಶನ ಮುಗಿದ ತಕ್ಷಣ ಉನ್ನತ ಅಧಿಕಾರಿಗಳು ಸಭೆ ನಡೆಸಿ, ವಾರದೊಳಗೆ ಆನೆಗಳನ್ನು ಓಡಿಸಲಾಗುವುದು’ ಎಂದು ಭರವಸೆ ನೀಡಿದರು.
ರೈತ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಭೋಗ ಮಲ್ಲೇಶ್ ಮಾತನಾಡಿ, ‘ಅರಣ್ಯ ಇಲಾಖೆಯವರು ಸುಳ್ಳು ಭರವಸೆ ಕೊಟ್ಟು ರೈತರ ಜೀವ, ಜೀವನದ ಜೊತೆ ಚೆಲ್ಲಾಟ ಆಡುತ್ತಿದ್ದಾರೆ. ನಮ್ಮ ಸಹನೆ ಕಳೆದು ಹೋಗಿದ್ದು, ಆಕ್ರೋಶದ ಜ್ವಾಲೆ ಉಂಟಾಗಿದೆ. ಸರ್ಕಾರ ಈ ವಿಷಯವನ್ನು ಗಂಭಿರವಾಗಿ ಪರಿಗಣಿಸಬೇಕು’ ಎಂದು ಆಗ್ರಹಿಸಿದರು.
ಸರ್ಕಲ್ ಇನ್‌ಸ್ಪೆಕ್ಟರ್ ಜಗದೀಶ್, ಇನ್‌ಸ್ಪೆಕ್ಟರ್ ರೇವಣ್ಣ ನೇತೃತ್ವದಲ್ಲಿ ಬಂದೋಬಸ್ತ್ ಮಾಡಲಾಗಿತ್ತು. ಬಿಜೆಪಿ ತಾಲ್ಲೂಕು ಘಟಕದ ಅಧ್ಯಕ್ಷ ಕೌರಿ ಸಂಜಯ್, ಅರಣ್ಯ ಇಲಾಖೆ ಎಸಿಎಫ್ ಮೋಹನ್ ಕುಮಾರ್, ವಲಯ ಅರಣ್ಯಾಧಿಕಾರಿ ಬಿ.ಜಿ. ಯತೀಶ್, ರೈತ ಮುಖಂಡರಾದ ರೇಣುಕಾನಂದ, ಬಸವರಾಜು, ಗೋವಿಂದ ಶೆಟ್ಟಿ, ಶಿವಶಂಕರ್, ಕಮಲಾ ಚೆನ್ನಪ್ಪ, ಬಿರಟೆಮನೆ ಸುರೇಶ್, ಕುಶಾವರ ನರೇಂದ್ರ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.