ADVERTISEMENT

ಕೆರೆ ಏರಿ ರಸ್ತೆ ಗುಂಡಿಮಯ: ಬೇಲೂರು ಜಯ ಕರ್ನಾಟಕ ಸಂಘಟನೆಯಿಂದ ರಸ್ತೆ ತಡೆ

​ಪ್ರಜಾವಾಣಿ ವಾರ್ತೆ
Published 4 ನವೆಂಬರ್ 2025, 5:04 IST
Last Updated 4 ನವೆಂಬರ್ 2025, 5:04 IST
ಬೇಲೂರಿನ ಕಳಸಿನ ಕೆರೆ ಏರಿ ರಸ್ತೆಯಲ್ಲಿ ಜಯಕರ್ನಾಟಕ ಸಂಘಟನೆ ಕಾರ್ಯಕರ್ತರು ಸೋಮವಾರ ಪ್ರತಿಭಟನೆ ನಡೆಸಿದರು
ಬೇಲೂರಿನ ಕಳಸಿನ ಕೆರೆ ಏರಿ ರಸ್ತೆಯಲ್ಲಿ ಜಯಕರ್ನಾಟಕ ಸಂಘಟನೆ ಕಾರ್ಯಕರ್ತರು ಸೋಮವಾರ ಪ್ರತಿಭಟನೆ ನಡೆಸಿದರು   

ಬೇಲೂರು: ತಾಲ್ಲೂಕಿನ ಗೆಂಡೇಹಳ್ಳಿ ಭಾಗದ ವಿವಿಧ ಗ್ರಾಮಗಳಿಗೆ ತೆರಳುವ ಪಟ್ಟಣ ಸಮೀಪದ ಕಳಸಿನ ಕೆರೆ ಏರಿ ರಸ್ತೆ ಗುಂಡಿ ಬಿದ್ದು ವಾಹನಗಳು ಓಡಾಡಲು ಪರದಾಡುವಂತಾಗಿದ್ದು, ಸಂಬಂಧಿಸಿದ ಅಧಿಕಾರಿಗಳು ರಸ್ತೆ ದುರಸ್ತಿ ಮಾಡುವಂತೆ ಒತ್ತಾಯಿಸಿ ತಾಲ್ಲೂಕು ಜಯ ಕರ್ನಾಟಕ ಸಂಘಟನೆ ಪದಾಧಿಕಾರಿಗಳು ಕಳಸಿನ ಕೆರೆ ಏರಿ ಮೇಲೆ ಸೋಮವಾರ ರಸ್ತೆ ತಡೆದು ಪ್ರತಿಭಟಿಸಿದರು.

ಜಯ ಕರ್ನಾಟಕ ಸಂಘಟನೆ ಜಿಲ್ಲಾ ಘಟಕದ ಅಧ್ಯಕ್ಷ ಎಂ.ಕೆ.ಆರ್. ಸೋಮೇಶ್ ಮಾತನಾಡಿ, ಪ್ರವಾಸಿ ತಾಣ ಬೇಲೂರು ದೇಗುಲ ನೋಡಿದವರು, ಕಳಸ, ಹೊರನಾಡು, ಶೃಂಗೇರಿ ಹಾಗೂ ಇತರೆ ಭಾಗಗಳಿಗೆ ಪಟ್ಟಣದಿಂದ ಅಂಬೇಡ್ಕರ್ ವೃತ್ತದ ಮೂಲಕ ಕಳಸಿನ ಕೆರೆ ಏರಿ ಮೇಲೆಯೇ ತೆರಳಬೇಕು. ಆದರೆ ಕೆರೆ ಏರಿ ರಸ್ತೆ ಸಂಪೂರ್ಣ ಗುಂಡಿ ಬಿದ್ದು ಹಾಳಾಗಿದ್ದು, ಏಕೆ ಅಧಿಕಾರಿಗಳು ಕ್ರಮ ಕೈಗೊಳ್ಳುತ್ತಿಲ್ಲ ಎಂದು ಪ್ರಶ್ನಿಸಿದರು.

ಜಯ ಕರ್ನಾಟಕ ಸಂಘಟನೆ ತಾಲ್ಲೂಕು ಅಧ್ಯಕ್ಷ ಎಸ್.ಎಂ. ರಾಜು ಮಾತನಾಡಿ, ಮೂಡಿಗೆರೆ-ಗೆಂಡೇಹಳ್ಳಿಗೆ ತೆರಳುವ ಕಳಸಿನ ಕೆರೆ ಏರಿ ಮೇಲಿನ ರಸ್ತೆ ಹೆಜ್ಜೆ ಹೆಜ್ಜೆಗೂ ಗುಂಡಿ ಬಿದ್ದಿದೆ. ಇದರಿಂದ ವಾಹನಗಳು ಓಡಾಡಿದಂತಾಗಿದೆ. ಈ ರಸ್ತೆಯಲ್ಲಿ ಬೈಕ್ ಸವಾರರು ಬಿದ್ದು, ಗಾಯಗೊಂಡಿರುವ ಘಟನೆಗಳು ಸಾಕಷ್ಟು ನಡೆದಿವೆ. ಈ ರಸ್ತೆ ಅಭಿವೃದ್ಧಿಗೆ ಈಗಾಗಲೇ ಶಾಸಕರು ಅನುದಾನ ತಂದು ಟೆಂಡರ್ ಪ್ರಕ್ರಿಯೆ ಮುಗಿಸಿದ್ದರೂ, ಅಧಿಕಾರಿಗಳ ಮತ್ತು ಗುತ್ತಿಗೆದಾರನ ನಿರ್ಲಕ್ಷ್ಯ್ಯದಿಂದ ಕೆಲಸವಾಗುತ್ತಿಲ್ಲ. ತಕ್ಷಣವೇ ರಸ್ತೆ ನಿರ್ಮಿಸಲು ಅಧಿಕಾರಿಗಳು, ಗುತ್ತಿಗೆದಾರರು ಮುಂದಾಗಬೇಕು. ಇಲ್ಲದಿದ್ದಲ್ಲಿ ಸಂಘಟನೆಯಿಂದ ಸಂಬಂಧಿಸಿದ ಕಚೇರಿಗೆ ಮುತ್ತಿಗೆ ಹಾಕಬೇಕಾಗುತ್ತದೆ ಎಂದು ಎಚ್ಚರಿಸಿದರು.

ADVERTISEMENT

ಜಯ ಕರ್ನಾಟಕ ತಾಲ್ಲೂಕು ಘಟಕದ ಕಾರ್ಯಾಧ್ಯಕ್ಷ ಲಕ್ಷ್ಮಣ್, ಪ್ರಧಾನ ಕಾರ್ಯದರ್ಶಿ ಮಂಜುನಾಥ್, ಯುವ ಘಟಕದ ಅಧ್ಯಕ್ಷ ಹೇಮಂತ್, ಉಪಾಧ್ಯಕ್ಷ ಕುಮಾರ್, ಮುಖಂಡರಾದ ಮೀಸೆ ವಸಂತಕುಮಾರ್, ಜಯರಾಮ್, ಆಟೋ ಘಟಕದ ಲಕ್ಷ್ಮಣ, ಉಮೇಶ್, ಮುಖಂಡರಾದ ರಮೇಶ್, ವಿನಯ್, ಚಂದ್ರು ಇದ್ದರು.

ಮಳೆ ಬಂದರಂತೂ ಗುಂಡಿ ಯಾವುದು ರಸ್ತೆ ಯಾವುದು ತಿಳಿಯದಂತಾಗಿದೆ. ಕಲ್ಲುಗಳು ಮೇಲೆದ್ದು ಗುಂಡಿಗಳಿಂದ ದೂಳು ಏಳುತ್ತಿದ್ದು ಓಡಾಡುವವರಿಗೆ ಸಮಸ್ಯೆ ಆಗುತ್ತಿದೆ. ಆದ್ದರಿಂದ ಸಂಬಂಧಿಸಿದ ಅಧಿಕಾರಿಗಳು ಎಚ್ಚೆತ್ತು ರಸ್ತೆ ದುರಸ್ತಿಗೆ ಮುಂದಾಗಬೇಕು
ಎಂ.ಕೆ.ಆರ್. ಸೋಮೇಶ್ ಜಯ ಕರ್ನಾಟಕ ಸಂಘಟನೆ ಜಿಲ್ಲಾ ಘಟಕದ ಅಧ್ಯಕ್ಷ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.