ಬೇಲೂರು: ವಿಶ್ವ ಪ್ರಸಿದ್ಧ ಬೇಲೂರು ಕಲೆ, ಸಾಹಿತ್ಯ, ನೃತ್ಯ ಸಾಂಸ್ಕೃತಿಗೆ ವಿಶೇಷ ತಾಣವಾಗಿದ್ದು, ಇಲ್ಲಿನ ವೈಡಿಡಿ ಪ್ರಥಮ ದರ್ಜೆ ಕಾಲೇಜಿನ ಆವರಣದಲ್ಲಿ ಅಗತ್ಯವಿರುವ ಕಲಾಮಂದಿರವನ್ನು ₹ 4.20 ಕೋಟಿ ವೆಚ್ಚದಲ್ಲಿ ನಿರ್ಮಾಣ ಮಾಡಲಾಗುತ್ತದೆ ಎಂದು ಶಾಸಕ ಎಚ್.ಕೆ. ಸುರೇಶ್ ಹೇಳಿದರು.
ಪಟ್ಟಣದ ವೈಡಿಡಿ ಪ್ರಥಮ ದರ್ಜೆ ಕಾಲೇಜು ಆವರಣದಲ್ಲಿ ₹ 15 ಲಕ್ಷದಲ್ಲಿ ನಿರ್ಮಾಣ ಆಗುತ್ತಿರುವ ಆಡಿಟೋರಿಯಂಗೆ ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು.
ಬೇಲೂರು ಪಟ್ಟಣದಲ್ಲಿ ಪ್ರತಿಷ್ಠಿತ ಕಾಲೇಜು ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ವೈಡಿಡಿ ಪ್ರಥಮ ಕಾಲೇಜು, ವಿಶಾಲವಾದ ಆವರಣ ಹಾಗೂ ಸುಂದರ ಪರಿಸರ ಹೊಂದಿದೆ. ಈ ಹಿಂದೆ ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು ಇಲ್ಲಿ ವ್ಯಾಸಂಗ ಮಾಡಿದ ನಿರ್ದೇಶನವಿದೆ. ವಿಶೇಷವಾಗಿ ಸ್ನಾತಕೋತ್ತರ ಪದವಿಗಳನ್ನು ಹೆಚ್ಚು ತೆರೆಯಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದರು.
ವಿದ್ಯಾರ್ಥಿಗಳ ಪಠ್ಯದ ಜೊತೆಗೆ ಕ್ರೀಡೆ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಿಗೂ ಉತ್ತೇಜನ ನೀಡಲಾಗುತ್ತಿದೆ. ಕಲಾಮಂದಿರದ ಕೇವಲ ಕಾಲೇಜಿಗೆ ಸೀಮಿತವಾಗದೆ ಸಾರ್ವಜನಿಕರ ಉಪಯೋಗಕ್ಕೆ ಅವಕಾಶ ಕಲ್ಪಿಸಲಾಗುತ್ತದೆ. ಪ್ರತಿ ವಿದ್ಯಾರ್ಥಿ ಯಾವುದೇ ಸಮಸ್ಯೆ ಇದ್ದರೆ ನೇರವಾಗಿ ನಮ್ಮನ್ನು ಅಥವಾ ಕಾಲೇಜು ಸಮಿತಿ ಸದಸ್ಯರನ್ನು ಸಂಪರ್ಕಿಸಬಹುದು ಎಂದರು.
ವೈಡಿಡಿ ಪ್ರಥಮ ದರ್ಜೆ ಕಾಲೇಜು ಸಮಿತಿ ಸದಸ್ಯ ಹೆಬ್ಬಾಳು ಹಾಲಪ್ಪ ಮಾತನಾಡಿದರು. ಕಾಲೇಜು ಪ್ರಾಂಶುಪಾಲ ಡಾ.ಮಹೇಶ, ಕಾಲೇಜು ಸಮಿತಿ ಸದಸ್ಯರಾದ ವೈ.ಎಸ್.ಸಿದ್ದೇಗೌಡ, ಅಜಿತ್, ಲೋಕೋಪಯೋಗಿ ಇಲಾಖೆ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಕೃಷ್ಣೇಗೌಡ, ಕಾಲೇಜು ಪ್ರಾಧ್ಯಾಪಕರಾದ ವೀರಭದ್ರಪ್ಪ, ಬಾಬು, ಪ್ರಾಧ್ಯಾಪಕರು, ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರು ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.