ADVERTISEMENT

ದೋಣಿಗಾಲ್‌ ಬಳಿ ನಿಲ್ಲುವ ವಾಹನಗಳು: ರಾಷ್ಟ್ರೀಯ ಹೆದ್ದಾರಿಯಲ್ಲಿ ನಿತ್ಯ ನರಕಯಾತನೆ

​ಪ್ರಜಾವಾಣಿ ವಾರ್ತೆ
Published 7 ಅಕ್ಟೋಬರ್ 2025, 5:15 IST
Last Updated 7 ಅಕ್ಟೋಬರ್ 2025, 5:15 IST
ಸಕಲೇಶಪುರದ ದೋಣಿಗಾಲ್‌ ಬಳಿ ಭಾನುವಾರ ರಾತ್ರಿ ಬೆಂಗಳೂರು–ಮಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನಗಳು ಸಾಲುಗಟ್ಟಿ ನಿಂತಿರುವುದು :ಪ್ರಜಾವಾಣಿ ಚಿತ್ರ/ ಜಾನೇಕೆರೆ ಆರ್.ಪರಮೇಶ್‌
ಸಕಲೇಶಪುರದ ದೋಣಿಗಾಲ್‌ ಬಳಿ ಭಾನುವಾರ ರಾತ್ರಿ ಬೆಂಗಳೂರು–ಮಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನಗಳು ಸಾಲುಗಟ್ಟಿ ನಿಂತಿರುವುದು :ಪ್ರಜಾವಾಣಿ ಚಿತ್ರ/ ಜಾನೇಕೆರೆ ಆರ್.ಪರಮೇಶ್‌    

ಸಕಲೇಶಪುರ: ತಾಲ್ಲೂಕಿನ ದೋಣಿಗಾಲ್ ಬಳಿ ಬೆಂಗಳೂರು–ಮಂಗಳೂರು ರಾಷ್ಟ್ರೀಯ ಹೆದ್ದಾರಿ ಚತುಷ್ಪಥ ಕಾಮಗಾರಿ ನನೆಗುದಿಗೆ ಬಿದ್ದಿರುವುದರಿಂದ ಈ ಮಾರ್ಗದಲ್ಲಿ ವಾಹನಗಳ ಸಂಚಾರಕ್ಕೆ ಸಮಸ್ಯೆ ಉಂಟಾಗುತ್ತಿದೆ.

ಬೆಂಗಳೂರು–ಮಂಗಳೂರು ನಡುವಿನ ಹೆದ್ದಾರಿ 416 ಕಿ.ಮೀ ಇದ್ದು, ಈ ಮಾರ್ಗದಲ್ಲಿ ದೋಣಿಗಾಲ್‌ನ ಮಂಜರಾಬಾದ್ ಕೋಟೆ ಪಕ್ಕದ ಒಂದು ಕಿ.ಮೀ ಕಾಮಗಾರಿ ನನೆಗುದಿಗೆ ಬಿದ್ದಿದೆ. 2017ರಿಂದ ಈ ಕಾಮಗಾರಿ ಮಾಡದೆ ನಿರ್ಲಕ್ಷಿಸಿರುವ ಪರಿಣಾಮ ದೋಣಿಗಾಲ್‌ನಲ್ಲಿ ಎರಡೂ ಕಡೆ ನಿರಂತರ ವಾಹನ ದಟ್ಟಣೆ ಉಂಟಾಗುತ್ತಿದೆ. ಪ್ರಯಾಣಿಕರು ಗಂಟೆಗಟ್ಟಲೆ ಮಾರ್ಗ ಮಧ್ಯದಲ್ಲಿಯೇ ನಿಲ್ಲಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.

ಹಾಸನದಿಂದ ಮಾರನಹಳ್ಳಿವರೆಗೆ ಕೇವಲ 45 ಕಿ.ಮೀ. ಚತುಷ್ಪಥ ಕಾಮಗಾರಿ 2017 ಮಾರ್ಚ್‌ನಿಂದಲೂ ಆಮೆ ಗತಿಯಲ್ಲಿ ನಡೆದಿದ್ದು, ಒಂದೇ ಮಳೆಗೆ ಕುಸಿದು ಬೀಳುತ್ತಿವೆ. ಮತ್ತೆ ಅದನ್ನೇ ಕುಟ್ಟುವುದು, ಮತ್ತೆ ಬೀಳುವುದು ನಡೆಯುತ್ತಲೇ ಇದ್ದರೂ, ಕಠಿಣ ಕ್ರಮ ಆಗುತ್ತಿಲ್ಲ ಎನ್ನುವ ಆಕ್ರೋಶ ಇಲ್ಲಿನ ಜನರದ್ದಾಗಿದೆ.

ADVERTISEMENT

ಪ್ರಯಾಣಿಕರ ನರಕ ಯಾತನೆ: ದಸರಾ, ವಿಜಯದಶಮಿ ನಂತರ ಶನಿವಾರ ಹಾಗೂ ಭಾನುವಾರದ ರಜೆ ದಿನಗಳನ್ನು ಮುಗಿಸಿ ಭಾನುವಾರ ಬೆಂಗಳೂರಿನತ್ತ ಹೋಗುತ್ತಿದ್ದ ಸಾವಿರಾರು ವಾಹನಗಳು ದೋಣಿಗಾಲ್‌ ಬಳಿ ಹೆದ್ದಾರಿಯಲ್ಲಿ ಸಿಲುಕಿಕೊಂಡಿದ್ದವು.

‘ದೋಣಿಗಾಲ್‌ನಿಂದ ಮಾರನಹಳ್ಳಿವರೆಗೆ 10 ಕಿ.ಮೀ ಉದ್ದಕ್ಕೂ ಕನಿಷ್ಠ 5 –6ಗಂಟೆಗಳ ಕಾಲ ಹೆದ್ದಾರಿಯ ಮಧ್ಯದಲ್ಲಿಯೇ ನಿಲ್ಲಬೇಕಾಯಿತು. ಈ ಪ್ರದೇಶದಲ್ಲಿ ಒಂದೇ ಒಂದು ಹೋಟೆಲ್‌, ಶೌಚಾಲಯ ವ್ಯವಸ್ಥೆ ಇಲ್ಲ. ಜೇನುಗೂಡಿನಂತೆ ಒಂದರ ಹಿಂದೆ ಒಂದು ವಾಹನಗಳು ಸಾಲಾಗಿ ನಿಂತಿದ್ದವು. ಒಂದೆಡೆ ಹಸಿವು, ಮತ್ತೊಂದೆಡೆ ಶೌಚಾಲಯಕ್ಕೆ ಹೋಗಬೇಕಾದ ಅನಿವಾರ್ಯತೆ. ಈ ಸಮಸ್ಯೆ ಅನುಭವಿಸಿದವರಿಗೆ ಗೊತ್ತು’ ಎಂದು ಬೆಂಗಳೂರಿನ ಹರೀಶ್‌ ಅಲವತ್ತುಕೊಂಡರು.

ಸಕಲೇಶಪುರದ ದೋಣಿಗಾಲ್‌ ಬಳಿ ಬೆಂಗಳೂರು–ಮಂಗಳೂರು ರಾಷ್ಟ್ರೀಯ ಹೆದ್ದಾರಿ ತಡೆಗೋಡೆ ಕುಸಿದು ಬಿದ್ದಿರುವುದು :ಪ್ರಜಾವಾಣಿ ಚಿತ್ರ/ ಜಾನೇಕೆರೆ ಆರ್.ಪರಮೇಶ್‌

ದೋಣಿಗಾಲ್‌ ಬಳಿ 1 ಕಿ.ಮೀ ರಸ್ತೆ ನಿರ್ಮಾಣ ನನೆಗುದಿಗೆ 8 ವರ್ಷಗಳಿಂದ ಪೂರ್ಣಗೊಳ್ಳದ 45 ಕಿ.ಮೀ ಹೆದ್ದಾರಿ ಕಾಮಗಾರಿ ಭಾನುವಾರವಿಡೀ ಹೆದ್ದಾರಿಯಲ್ಲಿ ಸಿಲುಕಿದ ಸಾವಿರಾರು ವಾಹನಗಳು

ದೋಣಿಗಾಲ್‌ನಲ್ಲಿ ಹೊಸ ಮೇಲ್ಸೇತುವೆ ಮಾಡಲು ಪ್ರಸ್ತಾವ ಸಲ್ಲಿಸಲಾಗಿದೆ. ಅದಕ್ಕೆ ಅನುಮೋದನೆ ಸಿಕ್ಕರೆ ಕಾಮಗಾರಿ ಶುರುವಾಗಲಿದೆ. ಈ ಕುರಿತು ಪ್ರಾಧಿಕಾರದ ಅಧಿಕಾರಿಗಳ ಜೊತೆ ಚರ್ಚಿಸಲಾಗಿದೆ.
ಸಿಮೆಂಟ್‌ ಮಂಜು ಶಾಸಕ
ನಮಗೆ ಏನು ಗ್ರಹಚಾರವೋ ಗೊತ್ತಿಲ್ಲ. ದೋಣಿಗಾಲ್‌–ಮಾರನಹಳ್ಳಿ ನಡುವೆ ನಮ್ಮ ಮನೆ ಇದೆ. ಮಕ್ಕಳನ್ನು ಸಕಲೇಶಪುರದ ಶಾಲೆಗೆ ಬಿಟ್ಟು ಕರೆದುಕೊಂಡು ಬರಲು ಇನ್ನಿತರ ಕೆಲಸ ಕಾರ್ಯಗಳಿಗೆ ಹೋಗಿ ಬರಲು ಕಷ್ಟವಾಗಿದೆ
ಶಿವಶಂಕರ್ ಕಪ್ಪಳ್ಳಿ ನಿವಾಸಿ

ಹೆದ್ದಾರಿ ತುಂಬೆಲ್ಲಾ ಗುಂಡಿ ರಾಜಧಾನಿ ಹಾಗೂ ಬಂದರು ನಗರಗಳ ನಡುವೆ ಸಂಪರ್ಕ ಕಲ್ಪಿಸುವ ಈ ಹೆದ್ದಾರಿಯಲ್ಲಿ ದಿನ 24 ಗಂಟೆಯೂ ಸುಮಾರು 40 ಸಾವಿರಕ್ಕೂ ಹೆಚ್ಚು ವಾಹನಗಳು ಸಂಚರಿಸುತ್ತವೆ. ‘ಪ್ರಯಾಣಿಕರು ಸರಕು ಸಾಗಣೆ ಹೊತ್ತು ಸಾಗುವ ಲಾರಿಗಳು ಅಗತ್ಯ ವಸ್ತುಗಳ ಸಾಗಣೆ ಮಾಡುವ ವಾಹನಗಳಿಗೆ ಇದೊಂದೇ ಹೆದ್ದಾರಿಯಾಗಿದೆ. ವ್ಯಾಪಾರ ವಹಿವಾಟು ಹಾಗೂ ಪ್ರಯಾಣಿಕರ ಪ್ರಯಾಣಕ್ಕೆ ರಾಜ್ಯದ ಜೀವನಾಡಿ ಆಗಿದೆ. ಆದರೆ ಹಾಸನದಿಂದ ಮಾರನಹಳ್ಳವರೆಗೆ ಬಹುತೇಕ ಕಡೆ ಚತುಷ್ಪಥ ಕಾಮಗಾರಿ ಮಾಡಲಾಗಿದ್ದು ಕಾಂಕ್ರೀಟ್ ರಸ್ತೆ ಉದ್ದಕ್ಕೂ ಗುಂಡಿ ಉಬ್ಬು ತಗ್ಗುಗಳಿಂದ ಕೂಡಿದೆ’ ಎಂದು ಜನರು ದೂರುತ್ತಿದ್ದಾರೆ. ‘ದೋಣಿಗಾಲ್‌ನಲ್ಲಿ ಒಂದು ಕಿ.ಮೀ. ಸಂಪೂರ್ಣ ಕಚ್ಚಾ ರಸ್ತೆಯಾಗಿದೆ. ಹೊಸ ಹೆದ್ದಾರಿ ಮಾಡುವವವರೆಗೂ ವಾಹನಗಳ ಸುಗಮ ಸಂಚಾಕ್ಕೆ ಕನಿಷ್ಠ ಡಾಂಬರೀಕರಣವನ್ನೂ ಮಾಡಿಲ್ಲ. ಗುಂಡಿ ದೂಳು ಒಟ್ಟಾರೆ ಈ ಮಾರ್ಗದ ಸಂಚಾರ ಪ್ರಯಾಣಿಕರಿಗೆ ಹಾಗೂ ಚಾಲಕರಿಗೆ ರೋಗ ಒತ್ತಡ ತರಿಸುತ್ತದೆ. ಅಲ್ಲದೇ ವಾಹನಗಳ ಕೆಟ್ಟು ಹೋಗುತ್ತವೆ’ ಎಂದು ಚಾಲಕರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.