ಹಾಸನ: ಎಐಡಿಎಸ್‌ಒ ವತಿಯಿಂದ ಭಗತ್ ಸಿಂಗ್ ಅವರ ಜನ್ಮ ದಿನವನ್ನು ಭಾನುವಾರ ನಗರದ ಜಿಲ್ಲಾ ಕ್ರೀಡಾಂಗಣ, ಎಐಡಿಎಸ್‌ಒ ಕಚೇರಿಯಲ್ಲಿ ವಿದ್ಯಾರ್ಥಿಗಳು, ಸಾರ್ವಜನಿಕರ ನಡುವೆ ಆಚರಿಸಲಾಯಿತು.
ಎಐಡಿಎಸ್ಒ ರಾಜ್ಯ ಘಟಕದ ಉಪಾಧ್ಯಕ್ಷೆ ಚಂದ್ರಕಲಾ ಮಾತನಾಡಿ, ‘ಭಗತ್ ಸಿಂಗ್ ಮಾನವನ ಜೀವನ ಪ್ರೀತಿಸಿದರು. ಮಾನವನ ಘನತೆ ಎತ್ತಿಹಿಡಿದರು. ಇಂದಿಗೂ ನಿತ್ಯ ಮಾನವರ ಘನತೆಯ ಹರಣವಾಗುತ್ತಿದೆ. ಯಾವುದೇ ವಯಸ್ಸಿನ ಮಿತಿ ಇಲ್ಲದೇ ಹೆಣ್ಣು ಮಕ್ಕಳ ಮೇಲೆ ಅವ್ಯಾಹತವಾಗಿ ದೌರ್ಜನ್ಯ ನಡೆಯುತ್ತಿದೆ. ಹಸಿವು, ಬಡತನ, ನಿರುದ್ಯೋಗ ಮುಂತಾದ ಸಮಸ್ಯೆಗಳು ಸಮಾಜದಲ್ಲಿ ತಾಂಡವವಾಡುತ್ತಿದೆ’ ಎಂದರು.
‘ಬೆರಳೆಣಿಕೆಯ ಕಾರ್ಪೊರೇಟ್ ಮನೆತನಗಳ ಹಿಡಿತದಲ್ಲಿರುವ ದೇಶದ ಬಂಡವಾಳಶಾಹಿ ವ್ಯವಸ್ಥೆಯು, ಅವಿಶ್ರಾಂತವಾಗಿ ದುಡಿಯುವ ರೈತ, ಕಾರ್ಮಿಕರು ಹಾಗೂ ಜನಸಾಮಾನ್ಯರ ಬದುಕನ್ನು ಅಸಹನೀಯಗೊಳಿಸಿದೆ. ಕೆಲವು ಜನರ ಸಂಪತ್ತು ಸಹಸ್ರ ಕೋಟಿಗಳಲ್ಲಿ ಹೆಚ್ಚುತ್ತಿದ್ದರೆ ಬಹುಪಾಲು ಜನರು ತೀವ್ರ ಬಡತನಕ್ಕೆ ಸಿಲುಕುತ್ತಿದ್ದಾರೆ. ಕಾಂಗ್ರೆಸ್, ಬಿಜೆಪಿ ಸೇರಿದಂತೆ ದೇಶದ ಎಲ್ಲ ಬಂಡವಾಳಶಾಹಿ ಪಕ್ಷಗಳು ಭಗತ್ ಸಿಂಗ್ ಸೇರಿದಂತೆ ಸ್ವಾತಂತ್ರ್ಯ ಸಂಗ್ರಾಮದ ಕ್ರಾಂತಿಕಾರಿಗಳು ಹಾಗೂ ಹೋರಾಟಗಾರರ ಕನಸುಗಳಿಗೆ ದ್ರೋಹ ಎಸಗಿವೆ’ ಎಂದು ದೂರಿದರು.
ತೀವ್ರ ಅಸಮಾನತೆಯು ತುಂಬಿರುವ ಪ್ರಸಕ್ತ ಸಾಮಾಜಿಕ ವ್ಯವಸ್ಥೆಯ ವಿರುದ್ಧ ದೇಶದ ವಿದ್ಯಾರ್ಥಿ, ಯುವಕರು ಸಂಘಟಿತರಾಗಿ ಹೋರಾಡುವುದನ್ನು ತಡೆಯಲು, ಜಾತಿ, ಧರ್ಮ, ಭಾಷೆ ಮುಂತಾದ ಭಾವನಾತ್ಮಕ ವಿಷಯಗಳನ್ನು ಮುನ್ನೆಲೆಗೆ ತಂದು ಸಮಾಜ ಒಡೆಯಲಾಗುತ್ತಿದೆ ಎಂದು ಆರೋಪಿಸಿದರು.
ಆಳುವವರ ಷಡ್ಯಂತ್ರ ಸೋಲಿಸಿ, ಭಗತ್ ಸಿಂಗರ ಚಿಂತನೆಗಳನ್ನು ಅರಿತು ಕೊಳ್ಳಬೇಕಿದೆ. ತಾವು ಎದುರಿಸುತ್ತಿರುವ ಸಮಸ್ಯೆಗಳ ವಿರುದ್ಧ ವಿದ್ಯಾರ್ಥಿ, ಯುವಜನರು ಬೀದಿಗಿಳಿಯುತ್ತಿರುವುದು ಸ್ಫೂರ್ತಿದಾಯಕ ವಿಷಯ. ಎರಡು ತಿಂಗಳಿಂದ ಕಾಲೇಜಿಗೆ ಬಂದು ಪಾಠಗಳಿಂದ ವಂಚಿತರಾಗಿರುವ ಸರ್ಕಾರಿ ಪದವಿ ವಿದ್ಯಾರ್ಥಿಗಳು, ರಾಜ್ಯವಾಪಿ ತರಗತಿ ಬಹಿಷ್ಕಾರ ನಡೆಸಿ ಹೋರಾಟ ಮಾಡಿದ್ದಾರೆ ಎಂದರು.
ಶಿಕ್ಷಣದ ವ್ಯಾಪಾರೀಕರಣ, ನಿರುದ್ಯೋಗ, ಹಸಿವು, ಬಡತನ, ಹೆಣ್ಣು ಮಕ್ಕಳ ಮೇಲಿನ ದೌರ್ಜನ್ಯ ಮುಂತಾದ ಸಮಸ್ಯೆಗಳನ್ನು ತಡೆಯಲು ಹಾಗೂ ಶಿಕ್ಷಣ, ಮಾನವತೆ, ಸಂಸ್ಕೃತಿ ಉಳಿಸಲು, ಅನ್ಯಾಯದ ವಿರುದ್ಧ ಧ್ವನಿ ಎತ್ತಲು ಭಗತ್ ಸಿಂಗ್ ಅವರ ವಿಚಾರಗಳಿಂದ ಸ್ಫೂರ್ತಿ ಪಡೆದು ಸಾರ್ವಜನಿಕ ಶಿಕ್ಷಣವನ್ನು ಉಳಿಸಲು ವಿದ್ಯಾರ್ಥಿಗಳು ಮುಂದೆ ಬರಬೇಕು ಎಂದು ಹೇಳಿದರು.
ಜಿಲ್ಲಾ ಸಂಚಾಲಕಿ ಚೈತ್ರಾ, ಕಾರ್ಯಕರ್ತರಾದ ಮಮತಾ, ಪುರುಷೋತ್ತಮ್, ತಿಲಕ್, ನಂದಶ್ರೀ, ಪಲ್ಲವಿ, ಅನನ್ಯ ಹಾಗೂ ವಿವಿಧ ಕಾಲೇಜಿನ ವಿದ್ಯಾರ್ಥಿಗಳು, ಸಾರ್ವಜನಿಕರು ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.