ADVERTISEMENT

ಆರೋಗ್ಯಪೂರ್ಣ ಸಮಾಜ ನಿರ್ಮಾಣದ ಗುರಿ: ಕಾ.ತ. ಚಿಕ್ಕಣ್ಣ

​ಪ್ರಜಾವಾಣಿ ವಾರ್ತೆ
Published 4 ಸೆಪ್ಟೆಂಬರ್ 2025, 2:01 IST
Last Updated 4 ಸೆಪ್ಟೆಂಬರ್ 2025, 2:01 IST
ಹಾಸನದ ಎವಿಕೆ ಕಾಲೇಜಿನಲ್ಲಿ ಮಂಗಳವಾರ ಆಯೋಜಿಸಿದ್ದ ವಿಚಾರ ಸಂಕಿರಣವನ್ನು ಕಾ.ತ.ಚಿಕ್ಕಣ್ಣ ಉದ್ಘಾಟಿಸಿದರು.
ಹಾಸನದ ಎವಿಕೆ ಕಾಲೇಜಿನಲ್ಲಿ ಮಂಗಳವಾರ ಆಯೋಜಿಸಿದ್ದ ವಿಚಾರ ಸಂಕಿರಣವನ್ನು ಕಾ.ತ.ಚಿಕ್ಕಣ್ಣ ಉದ್ಘಾಟಿಸಿದರು.   

ಹಾಸನ: ಮನುಷ್ಯರ ನಡುವೆ ಪರಸ್ಪರ ಪ್ರೀತಿ, ಸಾಮರಸ್ಯ, ಸೌಹಾರ್ದ ಬೆಳೆಸುವುದೇ ಭಕ್ತಿ ಪರಂಪರೆಗಳ ಪ್ರಮುಖ ವಿಚಾರವಾಗಿತ್ತು. ಮಾನವೀಯ ನೆಲೆಗಳನ್ನು ವಿಸ್ತರಿಸಿ, ಆರೋಗ್ಯ ಪೂರ್ಣ ಸಮಾಜವನ್ನು ನಿರ್ಮಿಸುವ ಗುರಿ ಹೊಂದಿದ್ದವರು ಭಕ್ತಿ ಪರಂಪರೆಯ ಕವಿಗಳು ಎಂದು ಸಂತಕವಿ ಕನಕದಾಸ ಮತ್ತು ತತ್ವಪದಕಾರರ ಅಧ್ಯಯನ ಕೇಂದ್ರದ ಅಧ್ಯಕ್ಷ ಕಾ.ತ ಚಿಕ್ಕಣ್ಣ ಹೇಳಿದರು.

ನಗರದ ಎ.ವಿ.ಕಾಂತಮ್ಮ ಮಹಿಳಾ ಕಾಲೇಜಿನ ಕನ್ನಡ ವಿಭಾಗ ಮತ್ತು ಕನ್ನಡ ಸಂಸ್ಕೃತಿ ಇಲಾಖೆಯ, ಸಂತಕವಿ ಕನಕದಾಸ ಮತ್ತು ತತ್ವಪದಕಾರರ ಅಧ್ಯಯನ ಕೇಂದ್ರದ ಸಹಯೋಗದಲ್ಲಿ ಮಂಗಳವಾರ ಆಯೋಜಿಸಿದ್ದ ‘ಕರ್ನಾಟಕದ ಭಕ್ತಿ ಪರಂಪರೆ’ ಕುರಿತಾದ ವಿಚಾರ ಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು.

ಅಧ್ಯಕ್ಷತೆ ವಹಿಸಿದ್ದ ಮಲೆನಾಡು ತಾಂತ್ರಿಕ ಶಿಕ್ಷಣ ಸಮಿತಿಯ ಕಾರ್ಯದರ್ಶಿ ಜಗದೀಶ್ ಚೌಡುವಳ್ಳಿ ಮಾತನಾಡಿ, ‘ಹಾಸನ ಜಿಲ್ಲೆ ಅನೇಕ ಸಾಂಸ್ಕೃತಿ ವೈಶಿಷ್ಟ್ಯಗಳ ತವರೂರು. ಅನೇಕ ಜನ ಹಿರಿಯ ಲೇಖಕರು ಕನ್ನಡ ಸಾಹಿತ್ಯವನ್ನು ಸಮೃದ್ದಗೊಳಿಸಿದ್ದಾರೆ. ಶಾಂತಿದೂತ ಗೊಮ್ಮಟೇಶ್ವರ, ವಿಶ್ವ ಪರಂಪರೆಯ ವಾಸ್ತುಶಿಲ್ಪಕ್ಕೆ ಹೆಸರಾದ ಬೇಲೂರು, ಹಳೇಬಿಡು ಇವೆಲ್ಲವುಗಳಿಂದ ಹಾಸನ ಜಿಲ್ಲೆ ಶ್ರೀಮಂತವಾಗಿದೆ. ಬಸವಣ್ಣ ಮತ್ತು ಕನಕದಾಸರು ಸಾಹಿತ್ಯಕ್ಕೆ ನೀಡಿದ ಕೊಡುಗೆ ಸ್ಮರಣೀಯ’ ಎಂದರು.

ADVERTISEMENT

ಕರ್ನಾಟಕದ ಭಕ್ತಿ ಪರಂಪರೆಯನ್ನು ಕುರಿತು ವಿಮರ್ಶಕ ಎಚ್.ದಂಡಪ್ಪ ಮಾತನಾಡಿದರು. ‘ಮಾನವ ಸಮಾಜ ಮತ್ತು ಭಕ್ತಿಯ ನೆಲೆಗಳು’ ವಿಷಯದ ಕುರಿತು ಜೆ.ಎಸ್.ಎಸ್ ಕಾಲೇಜಿನ ಕನ್ನಡ ಉಪನ್ಯಾಸಕಿ ಡಾ.ಜೆ.ಪುಷ್ಪಲತಾ, ‘ಭಾರತೀಯ ಭಕ್ತಿ ಪರಂಪರೆಯ ಚಾರಿತ್ರಿಕ’ ನೋಟದ ಕುರಿತು ಡಾ.ಶಾಂತರಾಜು ವಿಚಾರ ಮಂಡಿಸಿದರು.

ಪ್ರಾಸ್ತಾವಿಕ ಮಾತನಾಡಿದ ಪ್ರಾಂಶುಪಾಲ ಡಾ.ಸೀ.ಚ.ಯತೀಶ್ವರ್, ಕರ್ನಾಟಕದ ಭಕ್ತಿ ಪರಂಪರೆ, ಸಾಂಸ್ಕೃತಿಕ ಇತಿಹಾಸದಲ್ಲಿ ಮಹತ್ವದ ಅಧ್ಯಾಯ. ಹರಿದಾಸರು ಭಕ್ತಿ ಪರಂಪರೆಗೆ ಮಹತ್ವದ ಕೊಡುಗೆ ಕೊಟ್ಟಿದ್ದಾರೆ. ಸಮಾನತೆ, ಜಾತಿಯ ನಿರಾಕರಣೆ, ವೈಚಾರಿಕ ಚಿಂತನೆಯ ಮೂಲಕ ಜನ ಸಮಾನತೆಯನ್ನು ರೂಪಿಸಿದ ಹೆಗ್ಗಳಿಕೆ ಕರ್ನಾಟಕ ಭಕ್ತಿ ಪರಂಪರೆಯದ್ದು ಎಂದರು.

ನಂತರ ವಿದ್ಯಾರ್ಥಿನಿಯರು ಸಂವಾದ ಮಾಡಿದರು. ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ವಿತರಿಸಲಾಯಿತು. ಸಾಹಿತಿಗಳಾದ ಅಪ್ಪಾಜಿಗೌಡರು, ತಿರುಪತಿಹಳ್ಳಿ  ಶಿವಶಂಕರಪ್ಪ, ಮಾಧ್ಯಮ ಸಂಯೋಜಕ ಕಟ್ಟಾಯ ಶಿವಕುಮಾರ್, ಕುಮಾರಕಟ್ಟೆ ಬೆಳಗುಲಿ, ಕಾಲೇಜಿನ ಅಧ್ಯಾಪಕರು, ಅಧ್ಯಾಪಕೇತರ ವರ್ಗದವರು, ವಿದ್ಯಾರ್ಥಿನಿಯರು ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.