
ಆಲೂರು: ದೇಶದ ಇತಿಹಾಸದಲ್ಲಿ ಭೀಮಾ ಕೋರೆಗಾಂವ್ ಯುದ್ಧವು ವಿಶಿಷ್ಟ ಯುದ್ಧವಾಗಿದ್ದು, ದಲಿತ ಸಮುದಾಯಕ್ಕೆ ಈ ಯುದ್ಧವು ಕೇವಲ ಬ್ರಿಟಿಷರ ಪರವಾಗಿ ಹೋರಾಡಿದ್ದಲ್ಲ. ಬದಲಿಗೆ ಅಂದಿನ ಕಾಲದ ಜಾತಿ ಪದ್ಧತಿ ಮತ್ತು ಅಸ್ಪೃಶ್ಯತೆಯ ವಿರುದ್ಧದ ವಿಜಯ ಹಾಗೂ ಸಮಾನತೆಗಾಗಿ ನಡೆದ ಯುದ್ಧವಾಗಿ ಪರಿಗಣಿಸಲಾಗುತ್ತದೆ ಎಂದು ಮಾನವ ಪರಿವರ್ತನಾ ಸಮಾಜದ ರಾಜ್ಯ ಘಟಕದ ಅಧ್ಯಕ್ಷ ಬಿ.ಗೋಪಾಲ್ ತಿಳಿಸಿದರು.
ಪಟ್ಟಣದ ತಾಲ್ಲೂಕು ಆಡಳಿತ ಸೌಧದ ಆವರಣದಲ್ಲಿ ಭೀಮಾ ಕೋರೆಗಾಂವ್ ವಿಜಯೋತ್ಸವ ಆಚರಣಾ ಸಮಿತಿ ಮತ್ತು ದಲಿತಪರ ಸಂಘಟನೆಗಳ ಒಕ್ಕೂಟದ ಸಹಯೋಗದಲ್ಲಿ ಬುಧವಾರ ನಡೆದ ಭೀಮಾ ಕೋರೆಗಾಂವ್ ವಿಜಯೋತ್ಸವದಲ್ಲಿ ಮುಖ್ಯ ಭಾಷಣಕಾರರಾಗಿ ಅವರು ಮಾತನಾಡಿದರು.
ಭೀಮಾ ಕೋರೆಗಾಂವ್ ಎನ್ನುವುದು ಮಹಾರಾಷ್ಟ್ರದ ಪುಣೆ ಜಿಲ್ಲೆಯ ಒಂದು ಸಣ್ಣ ಗ್ರಾಮ. ಇದು ಭಾರತದ ಇತಿಹಾಸದಲ್ಲಿ, ವಿಶೇಷವಾಗಿ ದಲಿತ ಸಮುದಾಯದ ಆತ್ಮಗೌರವ ಮತ್ತು ಹೋರಾಟದ ಸಂಕೇತವಾಗಿ ಮುಖ್ಯ ಸ್ಥಾನ ಹೊಂದಿದೆ. 1818 ರ ಜನವರಿ 1 ರಂದು ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪನಿ ಮತ್ತು ಮರಾಠಾ ಸಾಮ್ರಾಜ್ಯದ ಪೇಶ್ವೆ ಸೈನ್ಯದ ನಡುವೆ ಯುದ್ಧ ನಡೆಯಿತು. ಈ ಯುದ್ಧವೇ ಕೋರೆಗಾಂವ್ ಕದನವಾಗಿದೆ. ಬ್ರಿಟಿಷ್ ಸೈನ್ಯದಲ್ಲಿ ಸುಮಾರು 800 ಸೈನಿಕರಿದ್ದರು. ಅದರಲ್ಲಿ ಹೆಚ್ಚಿನವರು ದಲಿತ ಮಹಾರ್ ಸಮುದಾಯಕ್ಕೆ ಸೇರಿದವರಾಗಿದ್ದು, ಪೇಶ್ವೆ ಎರಡನೇ ಬಾಜಿರಾಯನ ಸೈನ್ಯದಲ್ಲಿ ಸುಮಾರು 28 ಸಾವಿರ ಸೈನಿಕರಿದ್ದರು. ಸಂಖ್ಯೆಯಲ್ಲಿ ಕಡಿಮೆ ಇದ್ದರೂ ಮಹಾರ್ ಸೈನಿಕರು ಅದ್ಭುತ ಶೌರ್ಯದಿಂದ ಹೋರಾಡಿ ಪೇಶ್ವೆ ಸೈನ್ಯವನ್ನು ಹಿಮ್ಮೆಟ್ಟಿಸಿದರು.
ಪೇಶ್ವೆ ಆಡಳಿತದಲ್ಲಿ ಅಸ್ಪೃಶ್ಯರು ತೀವ್ರವಾದ ಸಾಮಾಜಿಕ ಶೋಷಣೆ ಅನುಭವಿಸುತ್ತಿದ್ದರು. ಹಾಗಾಗಿ ಈ ಗೆಲುವು ಅವರಲ್ಲಿ ಆತ್ಮಗೌರವವನ್ನು ತುಂಬಿತು. ಯುದ್ಧದಲ್ಲಿ ಮಡಿದ ಸೈನಿಕರ ಸ್ಮರಣಾರ್ಥವಾಗಿ ಬ್ರಿಟಿಷರು ಅಲ್ಲಿ ಒಂದು ವಿಜಯ ಸ್ತಂಭವನ್ನು ನಿರ್ಮಿಸಿದರು. ಈ ಸ್ತಂಭದ ಮೇಲೆ ಮಡಿದ ಮಹಾರ್ ಸೈನಿಕರ ಹೆಸರು ಕೆತ್ತಲಾಗಿದೆ ಎಂದು ವಿವರಿಸಿದರು.
1927ರ ಜನವರಿ 1 ರಂದು ಡಾ. ಅಂಬೇಡ್ಕರ್ ಅವರು ಭೀಮಾ ಕೋರೆಗಾಂವ್‌ಗೆ ಭೇಟಿ ನೀಡಿದರು. ಅವರು ಈ ಸ್ಥಳವನ್ನು ಶೋಷಿತರ ಶೌರ್ಯದ ಸಂಕೇತವೆಂದು ಬಣ್ಣಿಸಿದರು. ಅಂದಿನಿಂದ ಪ್ರತಿ ವರ್ಷ ಜನವರಿ 1ರಂದು ಲಕ್ಷಾಂತರ ಜನರು ಈ ಸ್ಥಳಕ್ಕೆ ಭೇಟಿ ನೀಡಿ ಗೌರವ ಸಲ್ಲಿಸುತ್ತಾರೆ ಎಂದರು.
ಶಾಸಕ ಸಿಮೆಂಟ್ ಮಂಜು ಮಾತನಾಡಿ, ಬ್ರಿಟಿಷರು ನಿರ್ಮಿಸಿದ ವಿಜಯ ಸ್ತಂಭದ ಮೇಲಿದ್ದ ಮಹಾರ್ ಸೈನಿಕರ ಹೆಸರುಗಳನ್ನು ಅಂಬೇಡ್ಕರ್ ಗಮನಿಸಿದರು. ಅಲ್ಲಿಯವರೆಗೆ ಅಜ್ಞಾತವಾಗಿದ್ದ ಅಥವಾ ಮರೆತುಹೋಗಿದ್ದ ಈ ಶೌರ್ಯದ ಇತಿಹಾಸವನ್ನು ಅವರು ಜಗತ್ತಿಗೆ ಪರಿಚಯಿಸಿದರು. ಈ ಯುದ್ಧವು ಕೇವಲ ಬ್ರಿಟಿಷರ ಗೆಲುವಲ್ಲ, ಬದಲಿಗೆ ಅಸ್ಪೃಶ್ಯತೆಯ ವಿರುದ್ಧದ ಗೆಲುವು ಎಂದರು.
ಮಾಜಿ ಸಚಿವ ಎಚ್.ಕೆ. ಕುಮಾರಸ್ವಾಮಿ ಮಾತನಾಡಿ, ಭೀಮಾ ಕೋರೆಗಾಂವ್ ಎನ್ನುವುದು ಅಸ್ಪೃಶ್ಯರ ವಿಮೋಚನೆಯ ಇತಿಹಾಸದ ಮೊದಲ ಪುಟವಾಗಿದೆ. ಪೇಶ್ವೆ ಆಡಳಿತದ ಅವಧಿಯಲ್ಲಿ ದಲಿತರು ಅನುಭವಿಸಿದ ಅತ್ಯಂತ ಕಠಿಣ ಮತ್ತು ಅಮಾನವೀಯ ಪದ್ಧತಿಗಳನ್ನು ವಿರೋಧಿಸಲು ಈ ಗೆಲುವು ಒಂದು ಪ್ರೇರಣೆಯಾಗಿದೆ ಎಂದರು.
ಕಾಂಗ್ರೆಸ್ ಮುಖಂಡ ಮುರಳಿ ಮೋಹನ್, ಎಚ್.ಡಿ.ಸಿ.ಸಿ. ಬ್ಯಾಂಕ್ ನಿರ್ದೇಶಕ ಕೆ.ಎಸ್. ಮಂಜೇಗೌಡ, ಕೋರೆಗಾಂವ್ ವಿಜಯೋತ್ಸವ ಆಚರಣ ಸಮಿತಿ ಅಧ್ಯಕ್ಷ ಗೇಕರವಳ್ಳಿ ಬಸವರಾಜು, ಜಿ.ಪಂ. ಮಾಜಿ ಸದಸ್ಯ ಡಿ.ಸಿ. ಸಣ್ಣಸ್ವಾಮಿ, ದಲಿತ ಮುಖಂಡ ಸಂದೇಶ್ ಸೇರಿದಂತೆ ಆಲೂರು ತಾಲ್ಲೂಕಿನ ದಲಿತಪರ ಸಂಘಟನೆಗಳ ಒಕ್ಕೂಟದ ಪದಾಧಿಕಾರಿಗಳು ಹಾಗೂ ದಲಿತ ಮುಖಂಡರು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.