ಶ್ರವಣಬೆಳಗೊಳ: ಹೋಬಳಿಯ ಸುಂಡಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೋರೇನಹಳ್ಳಿ ಗ್ರಾಮದ ಬಳಿ ಚಾಮುಂಡೇಶ್ವರಿ ವಿದ್ಯುತ್ ಪ್ರಸರಣ ನಿಗಮದ ವತಿಯಿಂದ ನೂತನ ಸೋಲಾರ್ ವಿದ್ಯುತ್ ಉತ್ಪಾದನಾ ಕೇಂದ್ರಕ್ಕೆ ಶಾಸಕ ಸಿ.ಎನ್.ಬಾಲಕೃಷ್ಣ ಸೋಮವಾರ ಭೂಮಿ ಪೂಜೆ ನೆರವೇರಿಸಿದರು.
ಕೋರೇನಹಳ್ಳಿ ಗ್ರಾಮ ವ್ಯಾಪ್ತಿಯಲ್ಲಿ ಬರುವ 16 ಎಕರೆಯ ವಿಸ್ತೀರ್ಣ ಭೂಮಿಯನ್ನು ಆಯ್ಕೆ ಮಾಡಿದ್ದು, ಕುಸುಂ ಯೋಜನೆಯಡಿಯಲ್ಲಿ 3.2 ಮೆಗಾವಾಟ್ ಸೋಲಾರ್ ವಿದ್ಯುತ್ ಉತ್ಪಾದಿಸಲಾಗುತ್ತದೆ. ಇಲ್ಲಿ ಉತ್ಪಾದಿಸುವ ಸೋಲಾರ್ ವಿದ್ಯುತ್‌ಅನ್ನು ಈಗಾಗಲೇ 2018ರ ಮಹಾಮಸ್ತಕಾಭಿಷೇಕ ಸಂದರ್ಭದಲ್ಲಿ ಮಂಜುನಾಥಪುರ ಬಳಿ ಸ್ಥಾಪಿಸಿದ್ದ 66/11 ಕೆ.ವಿ. ಸಾಮರ್ಥ್ಯದ ವಿತರಣಾ ಕೇಂದ್ರಕ್ಕೆ ಸರಬರಾಜು (ಲಿಂಕ್) ಆಗಲಿದ್ದು, ಇದರಿಂದ ನಿರಂತರ ತ್ರಿಫೇಸ್ ವಿದ್ಯುತ್ ಸರಬರಾಜು ರೈತರಿಗೆ ಹೆಚ್ಚಿನ ಅನುಕೂಲವಾಗುತ್ತದೆ ಎಂದು ಹೇಳಿದರು.
ಜಿಲ್ಲೆಯಲ್ಲಿಯೇ ಅತಿ ಹೆಚ್ಚು ಚನ್ನರಾಯಪಟ್ಟಣ ತಾಲ್ಲೂಕಿನ ಎಲ್ಲಾ ಹೋಬಳಿ ಕೇಂದ್ರಗಳಲ್ಲಿ ವಿದ್ಯುತ್ ಉಪ ವಿತರಣಾ ಕೇಂದ್ರಗಳನ್ನು ನಿರ್ಮಿಸಿರುವುದರಿಂದ ಗುಣ ಮಟ್ಟದ ವಿದ್ಯುತ್ ಸಿಗಲಿದೆ ಎಂದರು.
ಕೆಪಿಟಿಸಿಎಲ್‌ನಲ್ಲಿ ಈಗ ಕಾರ್ಯ ನಿರ್ವಹಿಸುವ ಸಾಮರ್ಥ್ಯ ಬದಲಾವಣೆಯಾಗಿದ್ದರಿಂದ 7000 ಟಿ.ಸಿ. ಅಳವಡಿಸಿದ್ದು, ಇದರಿಂದ 15 ಸಾವಿರ ಕೊಳವೆ ಬಾವಿಗಳಿಗೆ ಅನುಕೂಲವಾಗಿದೆ ಎಂದರು. ನೂತನ ಸೋಲಾರ್ ಕೇಂದ್ರದ ಕಾಮಗಾರಿಯು 6 ತಿಂಗಳಲ್ಲಿ ಮುಗಿಯಲಿದ್ದು, ಈ ಭಾಗದ ರೈತರ ಐಪಿ ಸೆಟ್‌ಗಳಿಗೆ ನಿರಂತರ ವಿದ್ಯುತ್ ಲಭ್ಯವಾಗಲಿದೆ ಎಂದು ಹೇಳಿದರು. ಬೆಳೆಗಳನ್ನು ಬೆಳೆಯದೇ ಇರುವ ಪ್ರದೇಶವನ್ನು ಇಲಾಖೆ ನಿಗದಿ ಪಡಿಸುವ ನೆಲ ಬಾಡಿಗೆಯ ಆಧಾರದ ಮೇಲೆ ರೈತರು ಇಲಾಖೆಗೆ ನೀಡಿದರೆ ಅಲ್ಲಿಯೂ ಸೋಲಾರ್ ವಿದ್ಯುತ್ ಉತ್ಪಾದಿಸಲು ಸಹಾಯಕವಾಗುತ್ತದೆ ಎಂದು ಹೇಳಿದರು.
ಚಾಮುಂಡೇಶ್ವರಿ ವಿದ್ಯುತ್ ಪ್ರಸರಣ ನಿಗಮದ ಕಾರ್ಯಪಾಲಕ ಎಂಜಿನಿಯರ್ ರತ್ನ, ಸಹಾಯಕ ಕಾರ್ಯಪಾಲಕ ಎಂಜಿನಿಯರ್‌ಗಳಾದ ಕೃಷ್ಣ, ಹರೀಶ, ಎಸ್‌ಒ ಗಳಾದ ಚಂದ್ರಶೇಖರ್ ಚಂದ್ರೇಗೌಡ, ಗ್ರಾ.ಪಂ.ಅಧ್ಯಕ್ಷೆ ಶಿಲ್ಪಾ ದಿವಾಕರ್, ಆರ್‌ಐ ಲೋಕೇಶ್, ಮುಖಂಡರಾದ ದೇವರಾಜೇಗೌಡ, ಕೃಷ್ಣೇಗೌಡ, ಎಸ್.ಬಿ.ಜಗದೀಶ್, ರಾಮಸ್ವಾಮಿ, ಮಂಜಣ್ಣ, ಶ್ರೀನಿವಾಸ್, ನವೀನ್ ಕುಮಾರ್, ಲಕ್ಷ್ಮಣ್, ರವಿ ನಂಜಪ್ಪ, ಕಿರಣ್, ಪಾಲ್ಗೊಂಡಿದ್ದರು.
ಶ್ರವಣಬೆಳಗೊಳ ಹೋಬಳಿಯ ಕೋರೇನಹಳ್ಳಿ ಬಳಿ ನೂತನ ಸೋಲಾರ್ ವಿದ್ಯುತ್ ಉತ್ಪಾದಿಸುವ ಘಟಕಕ್ಕೆ ಭೂಮಿ ಪೂಜೆ ನೆರವೇರಿಸಿ ಶಾಸಕರು ಮಾತನಾಡಿದ ಸಂದರ್ಭದಲ್ಲಿ ರತ್ನ ಕೃಷ್ಣ.ಹರೀಶ ದೇವರಾಜೇಗೌಡ ಕೃಷ್ಣೇಗೌಡ ರಾಮಸ್ವಾಮಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.