ADVERTISEMENT

'ಬಿಜೆಪಿ- ಕಾಂಗ್ರೆಸ್ ಎರಡೂ ಕಡೆ ರಾಜಕೀಯ’: ಎ.ಮಂಜು ವಿರುದ್ಧ ಯೋಗಾ ರಮೇಶ್ ಕಿಡಿ

ಮಾಜಿ ಸಚಿವ ಎ.ಮಂಜು ವಿರುದ್ಧ ಯೋಗಾ ರಮೇಶ್ ಕಿಡಿ

​ಪ್ರಜಾವಾಣಿ ವಾರ್ತೆ
Published 24 ನವೆಂಬರ್ 2021, 2:10 IST
Last Updated 24 ನವೆಂಬರ್ 2021, 2:10 IST
ಯೋಗಾ ರಮೇಶ್‌
ಯೋಗಾ ರಮೇಶ್‌   

ಹಾಸನ: ಬಿಜೆಪಿಯಲ್ಲಿದ್ದುಕೊಂಡು ಕೊಡಗಿನಲ್ಲಿ ಮಗನಿಗೆ ಕಾಂಗ್ರೆಸ್ ಟಿಕೆಟ್ ಕೊಡಿಸಿರುವ ಮಾಜಿ ಸಚಿವ ಎ.ಮಂಜು ಅವರಿಗೆ ಕುಟುಂಬ ರಾಜಕಾರಣದ ಬಗ್ಗೆ ಮಾತನಾಡುವ ಯಾವುದೇ ನೈತಿಕತೆ ಇಲ್ಲ ಎಂದು ಪೊಟ್ಯಾಟೋ ಕ್ಲಬ್ ಅಧ್ಯಕ್ಷ ಯೋಗಾ ರಮೇಶ್ ಕಿಡಿಕಾರಿದರು.

ಮಂಗಳವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಮಾಜಿ ಪ್ರಧಾನಿ ದೇವೇಗೌಡರ ಕುಟುಂಬ ರಾಜಕೀಯದ ಬಗ್ಗೆ ಮಾತನಾಡುವವರು, ಈಗ ಏನು ಮಾಡಿದ್ದಾರೆ ಎಂದು ಪ್ರಶ್ನಿಸಿದರು.

ಸುದೀರ್ಘ ರಾಜಕೀಯ ಮಾಡಿರುವ ದೇವೇಗೌಡರು ಈಗ ಒಂದು ಕುಟುಂಬಕ್ಕೆ ಸೀಮಿತವಾಗಿರುವವರಲ್ಲ. ಅದರ ಹೊರತಾಗಿ ಅವರು ಮೇಲ್ಪಂಕ್ತಿಯಲ್ಲಿದ್ದಾರೆ. ಅಂಥವರನ್ನು ಟೀಕೆ ಮಾಡುವುದರಿಂದಲೇ ದೊಡ್ಡ ನಾಯಕನಾಗುತ್ತೇನೆ ಅಂದು ಕೊಂಡಿರುವುದು ಮೂರ್ಖತನದ ಪರಮಾವಧಿ. ಹಿಂದೆಲ್ಲಾ ದೇವೇಗೌಡರ ಕುಟುಂಬ ಸ್ಪರ್ಧೆ ಮಾಡಿದರೆ ಅಲ್ಲಿ ನಾನೇ ನಿಲ್ಲುವೆ ಎನ್ನುತ್ತಿದ್ದವರು ಈಗ ಪಲಾಯನ ಮಾಡಿ ಮಗನಿಗೆ ಬೇರೆ ಜಿಲ್ಲೆಯಿಂದ ಕೊಡಿಸಿರುವುದೇಕೆ’ ಎಂದು ಪ್ರಶ್ನಿಸಿದರು.

ADVERTISEMENT

‘ಮಂಜು ಅನುಮತಿ ಇಲ್ಲದೆ ಮಗನಿಗೆ ಟಿಕೆಟ್ ಕೊಡುವಷ್ಟು ದಡ್ಡರು ಕಾಂಗ್ರೆಸ್‍ನಲ್ಲಿಲ್ಲ. ಆದರೆ, ಅವರಿಗೆ ಬಿಜೆಪಿಯೂ ಬೇಕು, ಕಾಂಗ್ರೆಸ್ ಕೂಡ ಬೇಕು. ಬಿಜೆಪಿ ಬಗ್ಗೆ ನಿಷ್ಠೆ ಇದ್ದರೆ ದ್ವಂದ್ವ ನಿಲುವು ಬಿಟ್ಟು ಮಡಿಕೇರಿಯಲ್ಲಿ ಬಿಜೆಪಿ ಪರ ಪ್ರಚಾರ ಮಾಡಿ’ ಎಂದು ಸವಾಲು ಹಾಕಿದರು.

ಕುಟುಂಬ ರಾಜಕಾರಣ ಇಂದು ಸರ್ವ ವ್ಯಾಪಿಯಾಗಿದೆ. ಇದಕ್ಕೆ ಜನರೇ ಮನ್ನಣೆ ನೀಡಿದ್ದಾರೆ. ಹೀಗಾಗಿ ಆ ಚರ್ಚೆ ಈಗ ಅಪ್ರಸ್ತುತ ಎಂದ ಅವರು, ಎಲ್ಲಾ ಪಕ್ಷಗಳವರು ಕೇವಲ ಟೀಕೆ ಟಿಪ್ಪಣಿಯಲ್ಲೇ ತೊಡಗುವುದನ್ನು ಬಿಟ್ಟು ಜಿಲ್ಲೆಯ ಮೂಲಭೂತ ಸಮಸ್ಯೆಗಳಾದ ಕಾಡಾನೆ ಸಮಸ್ಯೆ, ನೀರಾವರಿ,ಬೆಳೆ ಹಾನಿ ಬಗ್ಗೆ ದನಿ ಎತ್ತಲಿ, ತಮ್ಮ ಭವಿಷ್ಯ ಕಾರ್ಯಕ್ರಮ ಏನೆಂದು ಹೇಳಲಿ ಎಂದು ಒತ್ತಾಯಿಸಿದರು.

ಸುದ್ದಿಗೋಷ್ಟಿಯಲ್ಲಿ ಶಿವಲಿಂಗಶಾಸ್ತಿ, ಲೋಕೇಶ್ ಇದ್ದರು.


ನಾನು ಮುಕ್ತವಾಗಿದ್ದೇನೆ: ರಮೇಶ್

ಹಾಲಿ ನಾನು ಯಾವುದೇ ಪಕ್ಷದಲ್ಲಿ ಇಲ್ಲ. ನಾನೂ ಶಾಸಕನಾಗಬೇಕು ಅಂದುಕೊಂಡೇ ರಾಜಕೀಯಕ್ಕೆ ಬಂದವನು. ಮುಂದಿನ ಚುನಾವಣೆಯಲ್ಲಿ ನನಗೆ ಯಾವ ಪಕ್ಷ ಟಿಕೆಟ್ ನೀಡುತ್ತೋ ಆ ಪಕ್ಷಕ್ಕೆ ಹೋಗಲು ಮುಕ್ತವಾಗಿದ್ದೇನೆ. ಪರಿಷತ್ ಚುನಾವಣೆಯಲ್ಲಿ ಈವರೆಗೂ ಯಾರೂ ನನ್ನನ್ನು ಸಂಪರ್ಕಿಸಿಲ್ಲ. ಮುಂದೆ ಕೇಳಿದರೆ ಬೆಂಬಲಿಗರೊಂದಿಗೆ ಚರ್ಚಿಸಿ ತೀರ್ಮಾನ ಮಾಡುವೆ ಎಂದು ಯೋಗಾ ರಮೇಶ್ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.