ADVERTISEMENT

ವಿಧಾನ ಪರಿಷತ್‌ ಚುನಾವಣೆ: ಪ್ರಬಲ ಅಭ್ಯರ್ಥಿಗೆ ಬಿಜೆಪಿ ಶೋಧ‌

ಬೆಂಗಳೂರು ಸಭೆಯಲ್ಲೂ ಅಂತಿಮವಾಗದ ಹೆಸರು

ಕೆ.ಎಸ್.ಸುನಿಲ್
Published 16 ನವೆಂಬರ್ 2021, 16:30 IST
Last Updated 16 ನವೆಂಬರ್ 2021, 16:30 IST
ವೇಣುಗೋಪಾಲ್‌
ವೇಣುಗೋಪಾಲ್‌   

ಹಾಸನ: ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್‌ಗೆ ನಡೆಯುವ ಚುನಾವಣೆಗೆ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಆರಂಭ ವಾದರೂ ಬಿಜೆಪಿ ಅಭ್ಯರ್ಥಿ ಹುಡುಕಾಟದಲ್ಲಿ ತೊಡಗಿದೆ.

ನಗರ ಘಟಕದ ಅಧ್ಯಕ್ಷ ಎಸ್‌.ಕೆ.ವೇಣುಗೋಪಾಲ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ವಿಜಯ್‌ ವಿಕ್ರಂ, ಮಾಜಿ ಶಾಸಕ ಎಚ್.ಎಂ.ವಿಶ್ವನಾಥ್ ಹೆಸರನ್ನು ಬಿಜೆಪಿ ಜಿಲ್ಲಾ ಕೋರ್‌ ಕಮಿಟಿ ಶಿಫಾರಸು ಮಾಡಿದೆ. ಯಾರನ್ನು ನಿಲ್ಲಿಸಿದರೆ ಜೆಡಿಎಸ್‌, ಕಾಂಗ್ರೆಸ್ ಅಭ್ಯರ್ಥಿಗೆ ಪ್ರಬಲ ಪೈಪೋಟಿ ನೀಡುವರು ಎಂಬ ಲೆಕ್ಕಾಚಾರ ನಡೆದಿದೆ.

ಸಕಲೇಶಪುರ ಭಾಗದ ಬಿಜೆಪಿ ಮುಖಂಡ ಉದಯ್‌ ಗೌಡ ಹೆಸರು ಸಹ ಕೇಳಿ ಬಂದಿದೆ. ಬೆಂಗಳೂರಿನಲ್ಲಿ ನಡೆದ
ಪಕ್ಷದ ಮುಖಂಡರ ಸಭೆಯಲ್ಲೂ ಹೆಸರು ಅಂತಿಮವಾಗಿಲ್ಲ. ಅಭ್ಯರ್ಥಿ ಆಯ್ಕೆ ವಿಚಾರದಲ್ಲಿ ಬಿಜೆಪಿ ಇನ್ನೂ ಗೊಂದಲದಿಂದ ಹೊರ ಬಂದಿಲ್ಲ. ಈ ಮೂವರನ್ನು ಹೊರತುಪಡಿಸಿ ಹೊಸ ಮುಖಕ್ಕೆ ಟಿಕೆಟ್‌ ನೀಡಿದರೂ ಅಚ್ಚರಿಯಿಲ್ಲ.

ADVERTISEMENT

ಸ್ಥಳೀಯ ಸಂಸ್ಥೆಗಳಲ್ಲಿ ಬಿಜೆಪಿ ಬೆಂಬಲಿತ ಸದಸ್ಯರು ಕಡಿಮೆ ಇರುವುದು ಹಾಗೂ ಹಾಸನ ಕ್ಷೇತ್ರದಲ್ಲಿ ಮಾತ್ರವೇ ಪಕ್ಷದ ಶಾಸಕರಿರುವುದು ಪಕ್ಷದ ಪಾಲಿಗೆ ಆರಂಭಿಕ ಹಂತದ ತೊಡಕಾಗಿದೆ.

ಕಾರ್ಯಕರ್ತರಿಗೆ ಅವಕಾಶ ನೀಡಬೇಕೆಂಬ ವಾದ ಮುಂದಿಟ್ಟಿರುವ ವೇಣುಗೋಪಾಲ್‌ ಅವರು ಸ್ಪರ್ಧೆಗೆ ಸಿದ್ಧರಾಗಿದ್ದಾರೆ. ಬ್ರಾಹ್ಮಣ ಸಮುದಾಯಕ್ಕೆ ಸೇರಿರುವ ಅವರು ಆರ್ಥಿಕವಾಗಿ ಬಲಿಶಾಲಿಯಲ್ಲ. ಇದರಿಂದ ಕಾಂಗ್ರೆಸ್, ಜೆಡಿಎಸ್ ಗೆ ಪ್ರಬಲ ಪೈಪೋಟಿಯೊಡ್ಡಲು ಕಷ್ಟವಾಗುತ್ತದೆ ಎನ್ನುವ ಲೆಕ್ಕಚಾರವೂ ಇದೆ.ಸಂಘ ಪರಿವಾರ ಮೂಲದ ಅವರಿಗೆ ಟಿಕೆಟ್ ನೀಡುವುದಕ್ಕೆ ಪಕ್ಷದ ಮೂಲ ಕಾರ್ಯಕರ್ತರ ಬೆಂಬಲವೂ ವ್ಯಕ್ತವಾಗಿದೆ.

ಒಕ್ಕಲಿಗ ಸಮುದಾಯದ ಸಕಲೇಶಪುರ ಕ್ಷೇತ್ರದ ಮಾಜಿ ಶಾಸಕ ಎಚ್‌.ಎಂ.ವಿಶ್ವನಾಥ್‌ ಸಹ ಟಿಕೆಟ್‌ ಆಕಾಂಕ್ಷಿಯಾಗಿದ್ದಾರೆ. ಬಿ.ಎಸ್‌.ಯಡಿಯೂರಪ್ಪ ಜತೆ ನಿಕಟ ಸಂಪರ್ಕ ಹೊಂದಿರುವುದರಿಂದ ಟಿಕೆಟ್‌ಗೆ ಪ್ರಯತ್ನಿಸುತ್ತಿದ್ದಾರೆ.

2004ರಲ್ಲಿಸಕಲೇಶಪುರ ಕ್ಷೇತ್ರದಿಂದ ವಿಧಾನಸಭೆ ಪ್ರವೇಶಿಸಿದ್ದರು. ವಿಶ್ವನಾಥ್‌ಅವರು ಜೆಡಿಎಸ್‌ ತೊರೆದ ಮೇಲೆ ಬಿಎಸ್‌ವೈ ನೇತೃತ್ವದಲ್ಲಿ ಕೆಜೆಪಿ ಸೇರ್ಪಡೆಗೊಂಡು ವಿಧಾನಸಭಾಚುನಾವಣೆಯಲ್ಲಿ ಬೇಲೂರು ಕ್ಷೇತ್ರದಿಂದ ಸ್ಪರ್ಧಿಸಿ ಪರಾಭವಗೊಂಡಿದ್ದರು. ನಂತರ ಬದಲಾದರಾಜಕೀಯದಲ್ಲಿ ಕಾಂಗ್ರೆಸ್‌ ಗೆ ಸೇರ್ಪಡೆಯಾಗಿದ್ದರು. ನಂತರ ಬಿಜೆಪಿಗೆ ಪಕ್ಷಾಂತರಗೊಂಡಿದ್ದರು.

ಮೂರು ದಶಕಗಳಿಂದ ಪಕ್ಷಕ್ಕಾಗಿ ದುಡಿಯುತ್ತಿರುವ ಒಕ್ಕಲಿಗ ಸಮುದಾಯದ ಅರಸೀಕೆರೆಯ ವಿಜಯ್‌ವಿಕ್ರಮ್ ಅವರು ಟಿಕೆಟ್‌ ನೀಡುವಂತೆ ಹೈಕಮಾಂಡ್‌ ಗೆ ಮನವಿ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.